×
Ad

ಅಮ್ಮನಿಗಾಗಿ ಚೆನ್ನೈನ ಮುರುಗನ್ ದೇವಾಲಯದಲ್ಲಿ ವಿಶೇಷ ವೇಲ್ ಹರಕೆ ...!

Update: 2016-10-22 10:51 IST

ಚೆನ್ನೈ,ಅ. 22: ಚೆನ್ನೈನ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಆರೋಗ್ಯಕ್ಕಾಗಿ ಚೆನ್ನೈನ ಮುರುಗನ್‌ ದೇವಾಲಯದಲ್ಲಿ ಅವರ ಅಭಿಮಾನಿಗಳು ಕೆನ್ನೆಗೆ ಕಬ್ಬಿಣದ ಸಲಾಕೆ (ವೇಲಾಯುಧ) ಚುಚ್ಚಿಕೊಂಡು ದಿನನಿತ್ಯ ವಿಶೇಷ ವೇಲ್‌ ಹರಕೆ ಅರ್ಪಿಸುತ್ತಿದ್ದಾರೆ.
ಚೆನ್ನೈನಲ್ಲಿ ಅಮ್ಮನ ಆರೋಗ್ಯಕ್ಕಾಗಿ ಮೃತ್ಯುಂಜಯ ಹೋಮ ನಡೆಯುತ್ತಿದೆ. 30 ಶಿವಚಾರ್ಯರಿಂದ ಎರಡು ದಿನಗಳ ವಿಶೇಷ ಪೂಜೆ ನಡೆಯುತ್ತಿದೆ.1 ಲಕ್ಷ 25 ಸಾವಿರ ಬಾರಿ  ಮೃತ್ಯುಂಜಯ ಜಪ, ಸುಬ್ರಹ್ಮಣ್ಯನಿಗೆ 25 ಸಾವಿರ ಕಳಶಗಳಿಂದ ಹಾಲಿನ ಅಭಿಷೇಕ, ಮಧುರೈನಲ್ಲಿ 25ಸಾವಿರ ಅಭಿಮಾನಿಗಳಿಂದ ಪಾದಯಾತ್ರೆ ಕೈಗೊಂಡಿದ್ದಾರೆ. ತಮಿಳುನಾಡು ಚಿತ್ರರಂಗದಿಂದ ವಿಶೇಷ ಪೂಜೆ ನಡೆಯುತ್ತಿದೆ.

ತಮಿಳುನಾಡಿನ ಜಯಲಲಿತಾ ಅಭಿಮಾನಿಗಳ ತಂಡವೊಂದು ಮೈಸೂರಿನ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಾಲಯಕ್ಕೆ ಶುಕ್ರವಾರ ಭೇಟಿ  ನೀಡಿ ಆರೋಗ್ಯಕ್ಕಾಗಿ  ಗಣೇಶ ಮತ್ತು ಆಂಜನೇಯನಿಗೆ   1.61 ಕೋಟಿ ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಕಾಣಿಕೆಯನ್ನು ಅರ್ಪಿಸಿದ್ದಾರೆ. ಚೆನ್ನೈನ ಶ್ರೀ ಜಯಾ ಪಬ್ಲೀಕೇಷನ್ಸ್‌, ಕೊಡ್ನಾಡ್‌  ಎಸ್ಟೇಟ್‌ ನೀಲಗಿರೀಸ್‌ ಹೆಸರಲ್ಲಿ ದೇವಾಲಯಕ್ಕೆ ಕಾಣಿಕೆ ಸಂದಾಯವಾಗಿದೆ.

ಇದೇ ವೇಳೆ  ಮುಖ್ಯಮಂತ್ರಿ ಜಯಲಲಿತಾ ಅವರ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿದ್ದು ಅವರು ಮಾತನಾಡುತ್ತಿದ್ದಾರೆ ಎಂದು  ಅಪೋಲೊ ಆಸ್ಪತ್ರೆಯ ಮೂಲಗಳು  ತಿಳಿಸಿದೆ.
ಸೆ.22ರಿಂದ ಚೆನ್ನೈನ ಅಪೋಲೊ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಮ್ಮನಿಗೆ  ಹೃದಯ, ಮಧುಮೇಹ ಹಾಗೂ ಫಿಜಿಯೋಥೆರಪಿ ಚಿಕಿತ್ಸೆಯನ್ನು ಮುಂದುವರಿಸಲಾಗಿದೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ.ಎನ್.ಸತ್ಯಭಾಮಾ  ತಿಳಿಸಿದ್ದಾರೆ..


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News