ಗೋ ರಕ್ಷಕ ಸಂಘಟನೆಗಳನ್ನು ನಿಷೇಧಿಸಬಾರದೇಕೆ ? ಸುಪ್ರೀಂ ಕೋರ್ಟ್ ಪ್ರಶ್ನೆ
ಹೊಸದಿಲ್ಲಿ, ಅ.22: ದೇಶದ ಹಲವೆಡೆ ಕಾನೂನನ್ನು ಕೈಗೆತ್ತಿಕೊಳ್ಳುತ್ತಿರುವ ಗೋ ರಕ್ಷಕ ಗುಂಪುಗಳನ್ನು ನಿಷೇಧಿಸಬಾರದೇಕೆ ಎಂದು ಸುಪ್ರೀಂ ಕೋರ್ಟ್ ಕೇಂದ್ರ, ರಾಜ್ಯ ಸರಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ಪ್ರಶ್ನಿಸಿದೆ.
ಕಾಂಗ್ರೆಸ್ ನಾಯಕ ತೆಹ್ಸೀನ್ ಎಸ್. ಪೂನಾವಾಲ ಅವರು ಆಗಸ್ಟ್ ತಿಂಗಳಲ್ಲಿ ದಾಖಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಯ ವಿಚಾರಣೆ ಸಂದರ್ಭ ಸುಪ್ರೀಂ ಕೋರ್ಟ್ ಮೇಲಿನಂತೆ ಹೇಳಿದೆ. ಪೂನಾವಾಲ ಅವರ ವಕೀಲ ಸಂಜಯ್ ಹೆಗ್ಡೆ ಅವರ ವಾದವನ್ನು ಆಲಿಸಿದ ಜಸ್ಟಿಸ್ ದೀಪಕ್ ಮಿಶ್ರಾ ಹಾಗೂ ಜಸ್ಟಿಸ್ ಅಮಿತಾವ್ ರಾಯ್ ಅವರನ್ನೊಳಗೊಂಡ ಪೀಠ ಸರಕಾರಗಳಿಗೆ ನೋಟಿಸ್ ಜಾರಿಗೊಳಿಸಿದೆ.
ಇತ್ತೀಚೆಗೆ ದಲಿತರ ಹಾಗೂ ಅಲ್ಪಸಂಖ್ಯಾತರ ಮೇಲಿನ ಹಲ್ಲೆಗಳಿಗೆ ಕಾರಣವಾಗಿದ್ದ ಗೋ ರಕ್ಷಕ ಸಂಘಟನೆಗಳನ್ನು ನಿಷೇಧಿಸಬೇಕೆಂದು ಕೋರಿ ಪೂನಾವಾಲ ದಾವೆಯನ್ನು ದಾಖಲಿಸಿದ್ದರು. ಈ ಸಂಘಟನೆಗಳು ಕಾನೂನನ್ನು ಕೈಗೆತ್ತಿಕೊಂಡು ಸಮಸ್ಯೆಯೊಡ್ಡುತ್ತಿವೆಯೆಂದು ಪ್ರಧಾನಿ ಕೂಡ ಹೇಳಿದ್ದರು ಎಂದು ಅವರು ಹೇಳಿಕೊಂಡಿದ್ದರು.
ಸಲ್ವಾ ಜುದುಂ ಸಂಘಟನೆಯನ್ನು ನಿಷೇಧಿಸಿದಂತೆ ಗೋ ರಕ್ಷಕ ಗುಂಪುಗಳನ್ನೂ ನಿಷೇಧಿಸಬೇಕೆಂದುಅವರು ಮನವಿ ಮಾಡಿದ್ದರು. ಗೋ ರಕ್ಷಕ ಸಂಘಟನೆಗಳ ಹಾವಳಿ ದೇಶದ ಉದ್ದಗಲಕ್ಕೆ ವೇಗವಾಗಿ ಹರಡುತ್ತಿದ್ದು ವಿವಿಧ ಜಾತಿ, ಧರ್ಮಗಳ ಜನರ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಸುತ್ತಿದೆ’’ ಎಂದು ಅರ್ಜಿದಾರರು ದೂರಿದ್ದರು.