×
Ad

ಎಫ್‌ಎಸಿಟಿ ಉನ್ನತಾಧಿಕಾರಿಗಳ ನಿವಾಸಗಳಿಗೆ ಸಿಬಿಐ ದಾಳಿ

Update: 2016-10-22 23:50 IST

ಕೊಚ್ಚಿ, ಅ.22: ಜಿಪ್ಸಂ ಗುತ್ತಿಗೆ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐಯ ಭ್ರಷ್ಟಾಚಾರ ನಿಗ್ರಹ ಶಾಖೆಯು ಇಂದು ಎಫ್‌ಎಸಿಟಿ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಜೈವೀರ ಶ್ರೀವಾಸ್ತವ ಹಾಗೂ ಕಂಪೆನಿಯ ಇತರ ಉನ್ನತಾಧಿಕಾರಿಗಳ ನಿವಾಸಗಳು ಸೇರಿದಂತೆ 18 ಕಡೆಗಳಲ್ಲಿ ದಾಳಿ ನಡೆಸಿದೆ.

ಅಧಿಕಾರಿಗಳ ವಿರುದ್ಧ ಪ್ರಕರಣವೊಂದನ್ನು ದಾಖಲಿಸಿದ ಬಳಿಕ ಈ ದಾಳಿಗಳನ್ನು ನಡೆಸಲಾಯಿತೆಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀವಾಸ್ತವರಲ್ಲದೆ, ಜಂಟಿ ಮಹಾಪ್ರಬಂಧಕಿ (ಮಾರುಕಟ್ಟೆ) ಐ.ಎಸ್.ಅಂಬಿಕಾ, ಉಪಮಹಾಪ್ರಬಂಧಕ (ಸಾಂಸ್ಥಿಕ ಹೂಡಿಕೆ) ಶ್ರೀನಾಥ್ ಕಾಮತ್, ಮುಖ್ಯ ಮಾರಾಟ ಪ್ರಬಂಧಕ (ಕ್ಯಾಪ್ರೊಲ್ಯಾಕ್ಟಂ) ಡೇನಿಯಲ್ ಮಧುಕರ್ ಹಾಗೂ ಉಪಮುಖ್ಯ ಮಾರಾಟ ಪ್ರಬಂಧಕ (ಮಾರುಕಟ್ಟೆ ಕಾರ್ಯಾಚರಣೆ) ಪಂಚಾನ ಪೋದ್ದಾರ್‌ರ ನಿವಾಸಗಳ ಮೇಲೂ ದಾಳಿ ನಡೆದಿದೆ.
ಮುಂಬೈಯ ಎನ್‌ಎಸ್‌ಎಸ್ ಟ್ರೇಡ್ ಇಂಡಿಯಾ ಪ್ರೈ. ಲಿಯ ಪ್ರೊಪ್ರಾಯ್ಟರ್ ಸಂತೋಷ್ ಶೆಟ್ಟಿ ಹಾಗೂ ಹೈದರಾಬಾದ್‌ನ ನಾಗಾರ್ಜುನ ಆಗ್ರೊ ಕೆಮಿಕಲ್ಸ್ ಪ್ರೈ.ಲಿ.ಯ ಆಡಳಿತ ನಿರ್ದೇಶಕ ಮುಕುಂದ ಮಾಹೇಶ್ವರಿ ಸಹಿತ ವ್ಯಾಪಾರಿಗಳ ವಿರುದ್ಧವೂ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.
ಪ್ರಕರಣದ ಸಂಬಂಧ ಎಫ್‌ಐಆರ್ ಒಂದನ್ನು ಎರ್ನಾಕುಲಂನ ಸಿಬಿಐ ನ್ಯಾಯಾಲಯದ 2ನೆ ವಿಶೇಷ ನ್ಯಾಯಾಧೀಶರ ಮುಂದೆ 2 ವಾರಗಳ ಹಿಂದೆಯೇ ದಾಖಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News