ಒಂದೇ ದಿನ ತೆಂಡುಲ್ಕರ್‌ರ ಎರಡು ದಾಖಲೆ ಮುರಿದ ಕೊಹ್ಲಿ!

Update: 2016-10-24 04:26 GMT

ಮೊಹಾಲಿ, ಅ.24: ಭಾರತದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಬ್ಯಾಟಿಂಗ್ ದಂತಕತೆ ಸಚಿನ್ ತೆಂಡುಲ್ಕರ್ ಏಕದಿನ ಕ್ರಿಕೆಟ್‌ನಲ್ಲಿ ದಾಖಲಿಸಿರುವ ಗರಿಷ್ಠ ರನ್ ಹಾಗೂ ಶತಕಗಳ ದಾಖಲೆ ಮುರಿಯುತ್ತಾರೆ ಎಂದು ಸುನಿಲ್ ಗವಾಸ್ಕರ್ ಸಹಿತ ಹಿರಿಯ ಆಟಗಾರರು ಈಗಾಗಲೇ ಘಂಟಾಷೋಷವಾಗಿ ಹೇಳಿದ್ದಾರೆ.

  ಲೆಜಂಡ್ ಆಟಗಾರರ ಅಭಿಪ್ರಾಯಕ್ಕೆ ಪೂರಕವಾಗಿ ದಿಲ್ಲಿಯ ಬ್ಯಾಟ್ಸ್‌ಮನ್ ಕೊಹ್ಲಿ ಏಕದಿನದಲ್ಲಿ ‘ಲಿಟ್ಲ್‌ಮಾಸ್ಟರ್’ ತೆಂಡುಲ್ಕರ್ ನಿರ್ಮಿಸಿದ್ದ ಎರಡು ದಾಖಲೆಯನ್ನು ಒಂದೇ ದಿನದಲ್ಲಿ ಮುರಿದು ಮುನ್ನುಗ್ಗಿದ್ದಾರೆ. ನ್ಯೂಝಿಲೆಂಡ್ ವಿರುದ್ಧ ರವಿವಾರ ನಡೆದ ಎರಡನೆ ಏಕದಿನದಲ್ಲಿ ಕೊಹ್ಲಿ ಈ ಸಾಧನೆ ಮಾಡಿದ್ದಾರೆ.

 ಅಜೇಯ 154 ರನ್ ಗಳಿಸಿದ ಕೊಹ್ಲಿ ಯಶಸ್ವಿ ರನ್ ಚೇಸಿಂಗ್‌ನ ವೇಳೆ 14ನೆ ಶತಕ ಬಾರಿಸಿದರು. ಕೊಹ್ಲಿ 59ನೆ ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದರು.

ಮತ್ತೊಂದೆಡೆ, ಸಚಿನ್ ತೆಂಡುಲ್ಕರ್ ಭಾರತ ರನ್ ಬೆನ್ನಟ್ಟುವ ವೇಳೆ 14 ಮ್ಯಾಚ್ ವಿನ್ನಿಂಗ್ ಶತಕಗಳನ್ನು ಬಾರಿಸಿದ್ದರು. ಆದರೆ, ಮುಂಬೈ ಬ್ಯಾಟಿಂಗ್ ಮಾಂತ್ರಿಕ ತೆಂಡುಲ್ಕರ್ ಆ 14 ಶತಕಗಳನ್ನು ಬಾರಿಸಲು 124 ಇನಿಂಗ್ಸ್‌ಗಳಲ್ಲಿ ಆಡಿದ್ದರು.

ಕೊಹ್ಲಿ 166ನೆ ಇನಿಂಗ್ಸ್‌ನಲ್ಲಿ 26ನೆ ಶತಕ ಪೂರೈಸಿದ್ದರು. ತೆಂಡುಲ್ಕರ್ 247 ನೆ ಇನಿಂಗ್ಸ್‌ನಲ್ಲಿ 26ನೆ ಶತಕ ಪೂರೈಸಿದ್ದರು. ಶತಕ ಬಾರಿಸಿ, ಪಂದ್ಯಗಳನ್ನು ಗೆಲ್ಲಿಸಿಕೊಡುವ ಕೊಹ್ಲಿಯ ಅದ್ಭುತ ಸಾಮರ್ಥ್ಯ ಕ್ರಿಕೆಟ್ ಪಂಡಿತರ ಶ್ಲಾಘನೆಗೆ ಒಳಗಾಗಿದೆ.

ಕೊಹ್ಲಿಗೆ ಏಕದಿನ ಕ್ರಿಕೆಟ್‌ನ ಎಲ್ಲ ಬ್ಯಾಟಿಂಗ್ ದಾಖಲೆ ಮುರಿಯುವ ಸಾಮರ್ಥ್ಯವಿದೆ ಎಂದು ಸುನೀಲ್ ಗವಾಸ್ಕರ್ ಸಹಿತ ಮಾಜಿ ಆಟಗಾರರು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News