ಕಂಪೆನಿಗಳ ಕಪಿಮುಷ್ಟಿಯಲ್ಲಿ ಭಾರತ

Update: 2016-10-24 18:08 GMT

ಬ್ರಿಟಿಷರ ಈಸ್ಟ್ ಇಂಡಿಯಾ ಕಂಪೆನಿ ಅಂದು ಜಾಗತಿಕವಾಗಿ ಅನೇಕ ಕಡೆ ವ್ಯಾಪಾರಕ್ಕಾಗಿ ಹೋಗಿ ಆ ದೇಶಗಳನ್ನೇ ಆಳಿಬಿಟ್ಟಿತು. ಕಟ್ಟಕಡೆಯದಾಗಿ ಚೀನಾದ ಹಾಂಗ್‌ಕಾಂಗ್‌ನಲ್ಲಿ ಆಡಳಿತ ಮಾಡಿ ಇತ್ತೀಚೆಗೆ ಹಾಂಗ್‌ಕಾಂಗ್ ಸ್ವಾತಂತ್ರ್ಯವಾಗಿದ್ದು ನಾವು ನೋಡಿದ್ದೇವೆ. ಇವತ್ತು ಜಗತ್ತನ್ನೇ ಕಂಪೆನಿಗಳು ಆಳುತ್ತಿವೆ. ಒಂದೊಂದು ಕಂಪೆನಿಯಲ್ಲಿಯೂ ನೂರಾರು ಫ್ಯಾಕ್ಟರಿಗಳು, ಈ ನೂರಾರು ಫ್ಯಾಕ್ಟರಿಗಳಿಗೆ ಹೊಟ್ಟೆ ತುಂಬಿಸುವುದು ಯಾವುದು ? ನಮ್ಮ ಸುಂದರ ಭೂಮಿ. ಅದು ಹೇಗೆ? ಬಹುಪಾಲು ಗಣಿಗಾರಿಕೆಯಿಂದ.

ನಮಗೆ ಇಂದು ಸುಖಕೊಡುತ್ತಿರುವ ಒಂದೊಂದು ವಸ್ತುಗಳೂ ತಯಾ ರಾಗಲು ಈ ಭೂಮಿಯ ಗಣಿಗಾರಿಕೆಯ ಪಾಲು ಸಾಕಷ್ಟಿದೆ. ಲೋಹಗಳು, ಪೆಟ್ರೋಲ್‌ನಂತಹ ಇಂಧನಗಳು, ಅಣು ವಿದ್ಯುತ್, ಭಯಾನಕವಾದ ಅಸ್ತ್ರಗಳ ತಯಾರಿಕೆಗೆ ಬೇಕಾದ ಯುರೇನಿಯಂ, ಥೋರಿಯಂ ಮುಂತಾದ ವಸ್ತುಗಳು ಇದೇ ಸುಂದರ ಭೂಮಿಯಿಂದಲೇ ಬರುತ್ತದೆ.

 ಈಗ ಎಲ್ಲಿ ನೋಡಿದರೂ ‘ಭೂಮಿಯಲ್ಲಿ ಜನಸಂಖ್ಯಾ ಸ್ಫೋಟದಿಂದಾಗಿ ಮುಂದಿನ ದಿನಗಳಲ್ಲಿ ಹಸಿವಿನಿಂದ ಕೋಟಿಗಟ್ಟಲೆ ಜನ ಸಾಯುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಅದಕ್ಕೆ ಎಲ್ಲಾ ಆಹಾರವನ್ನು ಬಕಬಕನೆ ನುಂಗಿ ಹಾಕುತ್ತಿರುವ ಸರ್ವ ಭಕ್ಷಕ ಅಮೆರಿಕ ಎಂಬ ದೇಶವೆಂದು ನಮ್ಮವರಲ್ಲಿ ಹೆೆಚ್ಚಿನವರಿಗೆ ಅರಿವಿಲ್ಲ. ಈ ಸಾಲಲ್ಲಿ ಎರಡನೆಯ ಸ್ಥಾನದಲ್ಲಿರುವುದು ಚೀನಾ. ಆದರೆ ಹಸಿವಿನಿಂದ ಸಾಯುತ್ತಿರುವುದು ಆಫ್ರಿಕಾ ಖಂಡದ ದೇಶಗಳು. ನಮ್ಮ ದೇಶದಲ್ಲ್ಲೂ ಉತ್ತರ ಭಾರತದ ಕೆಲವೆಡೆ ಆಹಾರದ ಕೊರತೆಯ ಸಮಸ್ಯೆ ಅನುಭವಿಸುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಇದಕ್ಕೆ ಕಾರಣವೆಂದರೆ ಯೋಜನೆಯ ಅನುಷ್ಠಾನ ಸರಿಯಾದ ದಾರಿಯಲ್ಲಿ ಇಲ್ಲದೇ ಇರುವುದು ಮತ್ತು ಭ್ರಷ್ಟಾಚಾರ. ಇವೆರಡನ್ನೂ ಸರಿಪಡಿಸಿದರೆ ಹಸಿವಿನಿಂದ ಬಳಲುವವರಿಗೆ ಆಹಾರ ಖಂಡಿತವಾಗಿಯೂ ಸಿಗುತ್ತದೆ. ಅದರ ಕೊರತೆ ಖಂಡಿತವಾಗಿಯೂ ಇಲ್ಲ. ಅದಕ್ಕೆ ಕುಲಾಂತರಿಗಳ ಅಗತ್ಯವೂ ಇಲ್ಲ. ಆಸೆಗಳು ನಮ್ಮನ್ನು ಬದುಕಿಸುತ್ತವೆ. ಆದರೆ ದುರಾಸೆ...? ದುರಾಸೆಯನ್ನು ನಾವೇ ಗಟ್ಟಿಯಾಗಿ ಹಿಡಿದುಕೊಂಡು ಅವುಗಳಿಂದ ಬಿಡಿಸಿಕೊಳ್ಳಲಾಗುತ್ತಿಲ್ಲ ಎಂದು ಗೋಳಾಡುತ್ತಿದ್ದೇವೆ. ಮಾನವನ ಇತ್ತೀಚಿನ ದುರಾಸೆಗಳಿಗೆ ಕಾರಣ ಜಾಗತೀಕರಣ. ಜಾಗತೀಕರಣಕ್ಕೆ ಎಲ್ಲಾ ದೇಶಗಳು ಸಹಿ ಹಾಕಬೇಕಾದರೆ ಯೋಚನೆ ಮಾಡಬೇಕಿತ್ತು. ಇಂದು ಕೈಮೀರಿ ಹೋಗಿದೆ. ಕೈಗಾರಿಕೀಕರಣಗಳು, ಅದಕ್ಕೆ ಸಂಬಂಧಪಟ್ಟ ವಿಜ್ಞಾನ, ತಂತ್ರಜ್ಞಾನಗಳು ನಮ್ಮ ನೆಮ್ಮದಿ ಹಾಳು ಮಾಡಿವೆ. ಯಾವುದೋ ಮೂಲೆಯಲ್ಲಿನ ದೇಶದಿಂದ ನಮ್ಮಲ್ಲಿಗೆ ಬಂದು ನಮ್ಮ ಕಲೆ-ಸಂಸ್ಕೃತಿಯನ್ನು ಕೂಡ ಹಾಳು ಮಾಡಿ ನಮ್ಮ ಕಾಲಬುಡದ ನೆಲವನ್ನೇ ಅಲ್ಲಾಡಿಸುತ್ತಿದೆ. ಈ ಬಂಡವಾಳಶಾಹಿಗಳ ಕಂಪೆನಿಗಳಲ್ಲಿ ಸಾವಿರಾರು ಫ್ಯಾಕ್ಟರಿಗಳಿವೆ. ಇವುಗಳ ಹಿಡಿತದಲ್ಲಿ ಸರಕಾರಗಳು. ಈ ಕಂಪೆನಿಗಳೇ ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳಿಗೆ ಬಂಡವಾಳವನ್ನು ಕೊಡುತ್ತಿವೆ. ನಾವು ಮನಸ್ಸು ಮಾಡಿದರೆ ಯಾವ ಕಂಪೆನಿಗಳೂ ನಮ್ಮನ್ನೇನು ಮಾಡಲಾರವು. ಕಂಪೆನಿಗಳನ್ನು ಅವುಗಳ ಕಾರ್ಯತಂತ್ರಗಳನ್ನು ಅರ್ಥಮಾಡಿಕೊಳ್ಳದೆ ಅವುಗಳನ್ನು ತಬ್ಬಿಕೊಂಡಿರುವುದು ನಾವೇ. ಅವು ಯಾವ ಮಟ್ಟದಲ್ಲಿರಬೇಕೆಂಬುದು ನಿರ್ಧಾರ ಮಾಡುವುದು ನಾವೇ. ಏಕೆಂದರೆ, ಭೂಮಿಯನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ಅವಕಾಶ ಮಾಡಿಕೊಟ್ಟು ಬದುಕುವವರೂ ನಾವು ಅಲ್ಲವೇ ?

ಹಸಿವು ಎಂದಾಗ ಆಹಾರ ಬೇಕು ಎನಿಸುತ್ತದೆ. ಆದರೆ ಇಂದು ಆಹಾರ ವನ್ನು ಕುಲಗೆಡಿಸುತ್ತಿರುವುದು ಯಾವುದು ? ಅದೇ ತಂತ್ರಜ್ಞಾನ. ಜ್ಞಾನದ ಅಂಗ ವಿಜ್ಞಾನ. ವಿಜ್ಞಾನದಿಂದ ಹುಟ್ಟಿದ್ದು ತಂತ್ರಜ್ಞಾನ. ಸಂಶೋಧನೆ ಇದರ ಅಂಗ. ಆದರೆ ಇಂದು ಈ ಸಂಶೋಧನೆಗಳ ಫಲ ವಿಪರೀತವಾಗಿದೆ. ಉದಾಹರಣೆಗೆ ಹೊರ ದೇಶದಲ್ಲಿ ಅನೇಕ ಸಲ ಬ್ಯಾನ್ ಆಗಿ ಏನೇನೋ ಅನಾಹುತಗಳನ್ನು ಮಾಡಿ ದಂಡ ತೆತ್ತ ಕಂಪೆನಿ ಮನ್ಸೆಂಟೋ. ಇದು ಒಂದು ಬೀಜ ತಯಾರುಮಾಡಿದರೆ ರೈತ ಅದನ್ನು ಕೊಂಡುತಂದು ಹಾಕುತ್ತಾನೆ. ಅದೇ ರೈತ ಅದೇ ತರಕಾರಿಯ ಬೀಜವನ್ನು ಮತ್ತೆ ತಯಾರು ಮಾಡಿ ಆ ಬೀಜದಿಂದ ಮತ್ತೆ ಗಿಡ ಪಡೆಯಲು ಸಾಧ್ಯವಿಲ್ಲ. ಮತ್ತೆ ಹೋಗಿ ಆ ಕಂಪೆನಿಗೆ ಶರಣಾಗತನಾಗಬೇಕು. ಹೇಗಿದೆ ನಮ್ಮ ರೈತನ ಪರಿಸ್ಥಿತಿ. ಇದೇ ಮನ್ಸೆಂಟೋ ಕಂಪೆನಿ ‘ಕಳೆನಾಶಕ’ ಎಂಬ ರಾಸಾಯನಿಕವನ್ನು ತಯಾರು ಮಾಡಿದೆ ನೆನಪಿರಲಿ. ನಮ್ಮ ರೈತರು ಇದನ್ನು ಭೂಮಿಗೆ ಸುರಿಯುತ್ತಾರೆ. ಇದು ಲಕ್ಷಗಟ್ಟಲೆ ಜೀವಜಂತುಗಳನ್ನು ನಾಶ ಮಾಡು ತ್ತದೆ. ಇದು ನಮಗೆ ಬೇಕಾ? ನಮ್ಮ ದೇಶದ ಮೂಲ ತಳಿಗಳ ಬೀಜಗಳನ್ನೆಲ್ಲಾ ಕಳೆದುಕೊಂಡುಬಿಟ್ಟಿದ್ದೇವೆ. ಅವೆಲ್ಲಾ ಹೋಗಿ ನಾರ್ವೆ ದೇಶದ ನೆಲದಡಿಯಲ್ಲಿ ಬಲವಾದ ವ್ಯವಸ್ಥೆಯಲ್ಲಿ ಇಟ್ಟುಕೊಂಡಿದ್ದಾರೆ. ಭತ್ತದ ತಳಿಗಳು ನೋಡಿ. ಮುಸೊಳ್ಳಿ, ಕರೆದಡಿ, ಸಣ್ಣವಾಳ್ಯ, ರತ್ನಚೂಡಿ, ಗೌರಿ, ಕೊಯಂಬತ್ತೂರು ಸಣ್ಣ, ಬೆಟ್ಟುಸಣ್ಣ ಇವೆಲ್ಲಾ ಮಲೆನಾಡಿನ ಮೂಲತಳಿಗಳು. ಮನ್ಸೆಂಟೋ ಕಂಪೆನಿಯ ಇನ್ನೊಂದು ಕಂಪೆನಿ ಡೆಲ್ಟಾ. ಇದನ್ನು ಮನ್ಸೆಂಟೋ ಕಂಪೆನಿ ಕೊಂಡುಕೊಂಡಿತು. ಇಂತಹ ನೂರಾರು ಕಂಪೆನಿಗಳು ದೇಶದಲ್ಲಿ ಬೇರೂರಿವೆ. ಲಕ್ಷಗಟ್ಟಲೆ ಜನರಿಗೆ ಕೆಲಸ ಕೊಡುತ್ತೇವೆ. ದೇಶದ ಎಲ್ಲ ಜನರನ್ನು ಆರ್ಥಿಕವಾಗಿ ಮೇಲೆ ತರುತ್ತೇವೆ ಎಂದು ಈ ಕಂಪೆನಿಗಳು ಬೊಗಳೆ ಬಿಡುತ್ತಿವೆ. ಆದರೆ ಇವುಗಳಿಂದ ಹಾಳಾಗುತ್ತಿರುವುದು ವಾತಾವರಣ ಮತ್ತು ನಾವು ತಿನ್ನುವ ಆಹಾರ, ನಮ್ಮ ಜೊತೆಗಿರುವ ಪಶುಪಕ್ಷಿಗಳು ಮತ್ತು ನಮ್ಮ ಸಾಂಸ್ಕೃತಿಕ ಮೌಲ್ಯಗಳು.
ಈಗ ನಾವೇ ಯಾವುದು ಬೇಕೆಂದು ಯೋಚಿಸಿ ಮುಂದಡಿಯಿಡ ಬೇಕಾಗಿದೆ.

Writer - ನಾಗೇಶ್ ನಾಯಕ್, ಇಂದಾವರ

contributor

Editor - ನಾಗೇಶ್ ನಾಯಕ್, ಇಂದಾವರ

contributor

Similar News