ನಿಷ್ಪ್ರಯೋಜಕ ಚಿಕಿತ್ಸೆಗಳ ಪಟ್ಟಿ ಬಿಡುಗಡೆ ಮಾಡಿದ ಅಕಾಡೆಮಿ ಆಫ್ ಮೆಡಿಕಲ್ ರಾಯಲ್ ಕಾಲೇಜಸ್

Update: 2016-10-25 09:21 GMT

ತಮ್ಮ ಪರೀಕ್ಷೆ,ಚಿಕಿತ್ಸೆಗೆ ಮೊದಲು ರೋಗಿಗಳು ಪ್ರಶ್ನಿಸಬೇಕು

ಯಾವ ಚಿಕಿತ್ಸೆ ಅನಗತ್ಯ?

ನೀವು ಕೇಳಬೇಕಾದ ಪ್ರಶ್ನೆಗಳೇನು?

45 ವರ್ಷಕ್ಕಿಂತ ಹೆಚ್ಚಿನ ವಯೋಮಾನದ ಮಹಿಳೆಯರಲ್ಲಿ ಋತುಚಕ್ರ ನಿಂತಿದೆಯೇ ಎನ್ನುವುದನ್ನು ನಿರ್ಧರಿಸಲು ಅವರನ್ನು ರಕ್ತಪರೀಕ್ಷೆಗೊಳಪಡಿಸುವ ಅಗತ್ಯವಿಲ್ಲ ಮತ್ತು ಕೆಳಬೆನ್ನಿನ ನೋವಿರುವ ರೋಗಿಗಳಿಗೆ ಎಕ್ಸರೇಗಳಿಂದ ಯಾವುದೇ ಹೇಳಿಕೊಳ್ಳುವಂತಹ ಪ್ರಯೋಜನವಿಲ್ಲ ಎನ್ನುವುದು ನಿಮಗೆ ಗೊತ್ತೇ? ಇದನ್ನು ನೀವು ನಂಬಬೇಕು...ಏಕೆಂದರೆ ಇದು ವೈದ್ಯರೇ ಹೇಳಿರುವ ಸತ್ಯ.

ಅಕಾಡೆಮಿ ಆಫ್ ಮೆಡಿಕಲ್ ರಾಯಲ್ ಕಾಲೇಜಸ್ ಅನಗತ್ಯ ವೈದ್ಯಕೀಯ ಚಿಕಿತ್ಸೆಗಳ ಸಂಖ್ಯೆಯನ್ನು ತಗ್ಗಿಸುವ ತನ್ನ ಅಭಿಯಾನದ ಅಂಗವಾಗಿ ಇಂತಹ 40 ವೈದ್ಯಕೀಯ ಚಿಕಿತ್ಸೆಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಈ ಚಿಕಿತ್ಸೆಗಳಿಂದ ರೋಗಿಗಳಿಗೆ ಯಾವುದೇ ಲಾಭವಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.

ತಮಗೆ ನಡೆಸಲಾಗುವ ಚಿಕಿತ್ಸಾ ವಿಧಾನಗಳನ್ನು ವೈದ್ಯರಲ್ಲಿ ಪ್ರಶ್ನಿಸುವ ಪರಿಪಾಠವನ್ನು ರೋಗಿಗಳು ಬೆಳೆಸಿಕೊಳ್ಳಬೇಕು ಎಂದು ಅದು ಹೇಳಿದೆ.

  ಅಕಾಡೆಮಿ ಆಫ್ ಮೆಡಿಕಲ್ ರಾಯಲ್ ಕಾಲೇಜಸ್ ತಮ್ಮ ಕ್ಷೇತ್ರದಲ್ಲಿ ಸಾಮಾನ್ಯವಾಗಿ ಬಳಕೆಯಾಗುವ, ಯಾವಾಗಲೂ ಅಗತ್ಯವಲ್ಲದ ಮತ್ತು ವೌಲಿಕವಲ್ಲದ ಐದು ಚಿಕಿತ್ಸೆಗಳನ್ನು ಗುರುತಿಸುವಂತೆ 11 ವಿಭಿನ್ನ ರೋಗಗಳ ತಜ್ಞವೈದ್ಯರಿಗೆ ಸೂಚಿಸಿತ್ತು. ಈ ತಜ್ಞವೈದ್ಯರು ಸಲ್ಲಿಸಿದ ವಿಶ್ಲೇಷಣಾ ವರದಿಯ ಆಧಾರದಲ್ಲಿ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

►ಗಾಯಗಳು ಮತ್ತು ತರಚುಗಾಯಗಳನ್ನು ತೊಳೆಯುವಲ್ಲಿ ನಲ್ಲಿಯ ನೀರು ಸಲೈನ್ ದ್ರಾವಣದಷ್ಟೇ ಉತ್ತಮವಾಗಿದೆ.

►ಮಕ್ಕಳಲ್ಲಿ ಮಣಿಗಂಟಿನ ಸಣ್ಣಪುಟ್ಟ ಮೂಳೆಮುರಿತಗಳಿಗೆ ಪ್ಲಾಸ್ಟರ್ ಸಾಮಾನ್ಯವಾಗಿ ಅಗತ್ಯವಿಲ್ಲ, ಬಿದಿರಿನ ತುಂಡನ್ನು ಬಿಗಿಯಾಗಿ ಕಟ್ಟಿದರೂ ಮೂಳೆ ಸೇರಿಕೊಳ್ಳುತ್ತದೆ.

►ಬ್ರಾಂಕಿಯೊಲಿಟಿಸ್‌ಅಥವಾ ಉಸಿರಾಟದ ತೊಂದರೆಗಳಿಂದ ಬಳಲುವ ಮಕ್ಕಳು ಸಾಮಾನ್ಯವಾಗಿ ಯಾವುದೇ ಚಿಕಿತ್ಸೆಯಿಲ್ಲದೆ ಗುಣಮುಖರಾಗುತ್ತಾರೆ.

►ಹೆರಿಗೆಯ ಸಮಯದಲ್ಲಿ ತಾಯಿಯಲ್ಲಿ ಸಾಮಾನ್ಯಕಿಂತ ಹೆಚ್ಚಿನ ಆರೋಗ್ಯ ಸಮಸ್ಯೆಗಳಿದ್ದರೆ ಮಾತ್ರ ಶಿಶುವಿನ ಹೃದಯದ ಇಲೆಕ್ಟ್ರಾನಿಕ್ ಮಾನಿಟರಿಂಗ್ ಅಗತ್ಯವಾಗುತ್ತದೆ.

►ಕೊನೆಯ ಹಂತದ ಕ್ಯಾನ್ಸರ್‌ನ ಲಕ್ಷಣಗಳನ್ನು ಹಗುರಗೊಳಿಸಲು ಕೆಮೊಥೆರಪಿಯನ್ನು ಬಳಸಬಹುದು,ಆದರೆ ಅದು ಜೀವನದ ಕೊನೆಯ ತಿಂಗಳುಗಳಲ್ಲಿ ರೋಗಿಯ ಸಂಕಷ್ಟವನ್ನು ಇನ್ನಷ್ಟು ಹೆಚ್ಚಿಸಬಹುದು.

 ►ಪ್ರಾಸ್ಟೇಟ್ ಸ್ಪೆಸಿಫಿಕ್ ಆ್ಯಂಟಿಜೆನ್(ಪಿಎಸ್‌ಎ) ಎಂಬ ಪರೀಕ್ಷೆಯನ್ನು ಬಳಸಿ ಪ್ರಾಸ್ಟೇಟ್ ಗ್ರಂಥಿಯ ಮಾಮೂಲು ತಪಾಸಣೆ ಆಯಸ್ಸನ್ನು ಹೆಚ್ಚಿಸುವುದಿಲ್ಲ ಮತ್ತು ಅನಗತ್ಯ ತಳಮಳಕ್ಕೆ ಕಾರಣವಾಗಬಲ್ಲುದು.

ಪ್ರತಿ ವರ್ಷ ಈ ಪಟ್ಟಿಗೆ ಇನ್ನಷ್ಟು ಅನಗತ್ಯ ಚಿಕಿತ್ಸೆಗಳು ಸೇರ್ಪಡೆಯಾಗಲಿವೆ.

ವೈದ್ಯರು ಬೇಡವೆಂದರೂ ರೋಗಿಗಳೇ ತಮಗೆ ಅನಗತ್ಯ ಚಿಕಿತ್ಸೆಗಳಿಗೆ ಒಳಪಡಿಸುವಂತೆ ಒತ್ತಡ ಹೇರುವ ನಿದರ್ಶನಗಳೂ ಹೇರಳವಾಗಿವೆ ಎಂದು ಅಕಾಡಮಿ ಹೇಳಿದೆ. ಎನ್‌ಎಚ್‌ಎಸ್(ರಾಷ್ಟ್ರೀಯ ಆರೋಗ್ಯ ಸೇವೆ) ಕೂಡ ರೋಗಿಗಳು ಅನಗತ್ಯ ಔಷಧಿಗಳನ್ನು ಸೇವಿಸುವುದನ್ನು ತಗ್ಗಿಸುವ ಒತ್ತಡಕ್ಕೆ ಗುರಿಯಾಗಿದೆ. ರೋಗಿಗಳಿಗೆ ಆ್ಯಂಟಿ ಬಯಾಟಿಕ್‌ಗಳನ್ನು ಶಿಫಾರಸು ಮಾಡುವುದನ್ನು ಕಡಿಮೆಗೊಳಿಸುವಂತೆ ಜನರಲ್ ಪ್ರಾಕ್ಟಿಷನರ್‌ಗಳಿಗೆ ಇತ್ತೀಚಿಗೆ ಸೂಚಿಸಲಾಗಿದೆ.

ರೋಗಿಗಳು ಯಾವುದೇ ಚಿಕಿತ್ಸೆಯನ್ನು ಪಡೆಯುವ ಮುನ್ನ ಸದಾ ಈ ಐದು ಪ್ರಶ್ನೆಗಳನ್ನು ಕೇಳಬೇಕೆಂದು ಅಕಾಡಮಿಯು ಸೂಚಿಸಿದೆ.

►ಈ ಪರೀಕ್ಷೆ,ಚಿಕಿತ್ಸೆ ಅಥವಾ ವಿಧಾನ ನಿಜಕ್ಕೂ ನನಗೆ ಅಗತ್ಯವಿದೆಯೇ?

►ಈ ಚಿಕಿತ್ಸೆಯ ಸಂಭಾವ್ಯ ಅಪಾಯಗಳೇನು?

►ಸಂಭಾವ್ಯ ಅಡ್ಡ ಪರಿಣಾಮಗಳೇನು?

►ಇದಕ್ಕಿಂತಲೂ ಸರಳ ಮತ್ತು ಸುರಕ್ಷಿತ ಪರ್ಯಾಯವೇನಾದರೂ ಇದೆಯೇ?

►ನಾನು ಯಾವುದೇ ಚಿಕಿತ್ಸೆ ಪಡೆಯದಿದ್ದರೆ ಏನಾಗುತ್ತದೆ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News