ರಾಜ್ಯ ಮಾಹಿತಿ ಆಯುಕ್ತರನ್ನು ವರ್ಗಾಯಿಸುವ ಅಧಿಕಾರ ಮುಖ್ಯ ಮಾಹಿತಿ ಆಯುಕ್ತರಿಗಿದೆ: ಬಾಂಬೆ ಹೈಕೋರ್ಟ್
ಮುಂಬೈ, ಅ.25: ರಾಜ್ಯದ ಮುಖ್ಯ ಮಾಹಿತಿ ಆಯುಕ್ತನಿಗೆ ರಾಜ್ಯದ ಮಾಹಿತಿ ಆಯುಕ್ತನನ್ನು ವರ್ಗಾಯಿಸಲು ಮಾಹಿತಿ ಹಕ್ಕು ಕಾಯ್ದೆಯನ್ವಯ ಅಧಿಕಾರವಿದೆ. ಆಯೋಗದ ಸುಗಮ ಕಾರ್ಯಾಚರಣೆಗಾಗಿ ಒಂದು ವಲಯದಿಂದ ಮತ್ತೊಂದು ವಲಯಕ್ಕೆ ಮಾಹಿತಿ ಆಯುಕ್ತರನ್ನು ವರ್ಗಾವಣೆ ಮಾಡಬಹುದೆಂದು ಬಾಂಬೆ ಹೈಕೋರ್ಟ್ ತೀರ್ಪು ನೀಡಿದೆ.
ನ್ಯಾಯಮೂರ್ತಿ ವಿ.ಎಂ. ಕಾನಡೆ ನೇತೃತ್ವದ ಪೀಠವೊಂದು ಈ ಮಹತ್ವದ ಆದೇಶ ನೀಡಿದೆ. ರಾಜ್ಯದ ಚುನಾವಣಾ ಆಯುಕ್ತರನ್ನು ಒಂದು ವಲಯದಿಂದ ಇನ್ನೊಂದು ವಲಯಕ್ಕೆ ವರ್ಗಾವಣೆ ಮಾಡಲು ಆರ್‌ಟಿಐ ಕಾಯ್ದೆಯ ಸೆ.15(4) ರನ್ವಯ ರಾಜ್ಯದ ಮುಖ್ಯ ಮಾಹಿತಿ ಆಯುಕ್ತರಿಗೆ ಅಧಿಕಾರವಿದೆಯೆಂಬುದನ್ನು ಅವರು ಇತ್ತೀಚೆಗೆ ಎತ್ತಿ ಹಿಡಿದಿದ್ದರು.
ಅಮರಾವತಿಯಲ್ಲಿ ನಿಯೋಜಿಸಲ್ಪಟ್ಟಿದ್ದ ರಾಜ್ಯ ಮಾಹಿತಿ ಆಯುಕ್ತ ರವೀಂದ್ರ ಜಾಧವ್‌ರನ್ನು ಬೇರೆ ಸ್ಥಳಕ್ಕೆ ವರ್ಗಾಯಿಸಿದ್ದುದನ್ನು ಪ್ರಶ್ನಿಸಿ ಪುಣೆಯ ಪತ್ರಕರ್ತ ವಿಜಯ ಕುಂಭಾರ್ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸುತ್ತಿತ್ತು.
ಜಾಧವ್ ತನ್ನ ವರ್ಗಾವಣೆಯನ್ನು ಪ್ರಶ್ನಿಸಿರಲಿಲ್ಲವಾದರೂ, ಕುಂಭಾರ್ ಈ ಬಗ್ಗೆ ಮೇಲ್ಮನವಿ ಸಲ್ಲಿಸಿದ್ದರು. ಆರ್‌ಟಿಐ ಕಾಯ್ದೆಯನ್ವಯ ರಾಜ್ಯ ಮಾಹಿತಿ ಆಯುಕ್ತರೊಬ್ಬರನ್ನು ವರ್ಗಾಯಿಸುವ ಅಧಿಕಾರ ರಾಜ್ಯ ಮುಖ್ಯ ಮಾಹಿತಿ ಆಯುಕ್ತರಿಗಿಲ್ಲವೆಂದು ಅವರು ವಾದಿಸಿದ್ದರು.