×
Ad

ಕೋಣೆ ತುಂಬ ಬೆಳ್ಳಿಬಂಗಾರ, 14 ಮನೆಗಳ ಒಡೆಯ ಆಂಧ್ರಪ್ರದೇಶದ ಈ ಅಧಿಕಾರಿ!

Update: 2016-10-25 23:37 IST

ಹೈದರಾಬಾದ್,ಅ.25: ಕನಿಷ್ಠ 14 ಮನೆಗಳ ಒಡೆತನದ ದಾಖಲೆಗಳು, 60ಕೆ.ಜಿ. ತೂಕದ ಬೆಳ್ಳಿಯ ವಸ್ತುಗಳಿಂದ ತುಂಬಿದ್ದ ಕೋಣೆ, ಒಂದು ಕೆ.ಜಿ. ಚಿನ್ನಾಭರಣಗಳು ಮತ್ತು 20 ಲಕ್ಷ ರೂ. ನೋಟಿನ ಕಟ್ಟುಗಳು... ಇವು ಆಂಧ್ರಪ್ರದೇಶದ ಗುಂಟೂರಿನ ರಸ್ತೆ ಸಾರಿಗೆ ಪ್ರಾಧಿಕಾರ(ಆರ್‌ಟಿಎ)ದ ಅಧಿಕಾರಿಯ ನಿವಾಸದ ಮೇಲೆ ಸೋಮವಾರ ದಾಳಿ ನಡೆಸಿದ್ದ ಭ್ರಷ್ಟಾಚಾರ ನಿಗ್ರಹ ಘಟಕ(ಎಸಿಬಿ)ವು ವಶಪಡಿಸಿಕೊಂಡಿರುವ ಸಂಪತ್ತು. ತನ್ನ 34 ವರ್ಷಗಳ ಸೇವೆಯಲ್ಲಿ ಇಷ್ಟೆಲ್ಲ ಸಂಪತ್ತುಗಳನ್ನು ಗುಡ್ಡೆ ಹಾಕಿರುವ ಈ ಅಧಿಕಾರಿಯ ಮನೆಗಳ ಪೈಕಿ ಒಂದರ ಮೇಲೆ ಮಾತ್ರ ನಡೆದ ದಾಳಿ ಇಷ್ಟೊಂದು ಅಕ್ರಮ ಸಂಪತ್ತನ್ನು ಬಹಿರಂಗಗೊಳಿಸಿದೆ. ಇದು ಕೇವಲ ಸ್ಯಾಂಪಲ್ ಮಾತ್ರ, ಅವರ ಬಳಿ ಇನ್ನೂ ಬಹಳಷ್ಟು ಅಕ್ರಮ ಸಂಪತ್ತು ಇರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

1981ರಲ್ಲಿ ಮೋಟಾರು ವಾಹನಗಳ ನಿರೀಕ್ಷಕರಾಗಿ ವೃತ್ತಿಜೀವನ ಆರಂಭಿಸಿದ್ದ ಪೂರ್ಣಚಂದ್ರ ರಾವ್(55) ಗುಂಟೂರು, ಒಂಗೋಲ್ ಮತ್ತು ನೆಲ್ಲೂರು ಆರ್‌ಟಿಎ ಕಚೇರಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಆದರೆ ಅವರ ಆಸ್ತಿಯನ್ನು ನೋಡಿದರೆ ಈ ಎಲ್ಲ ವರ್ಷಗಳಲ್ಲಿ ಸರಕಾರಿ ಸೇವೆಗಿಂತ ಆಸ್ತಿ ಗಳಿಕೆ ‘ಕರ್ತವ್ಯ’ವನ್ನು ಹೆಚ್ಚಿನ ನಿಷ್ಠೆಯಿಂದ ಮಾಡಿರುವಂತಿದೆ.
ವಿನುಕೊಂಡದಲ್ಲಿ ಏಳು ಅಪಾರ್ಟ್‌ಮೆಂಟ್‌ಗಳು ಮತ್ತು ಎರಡು ಮನೆಗಳು, ಗುಂಟೂರಿನಲ್ಲಿ ಒಂದು ಮನೆ, ಹೈದರಾಬಾದ್ ಮತ್ತು ವಿಜಯವಾಡಾಗಳಲ್ಲಿ ತಲಾ ಎರಡು ಫ್ಲಾಟ್‌ಗಳು ಮತ್ತು ವಿನುಕೊಂಡದಲ್ಲಿ ಬೇಳೆಕಾಳುಗಳನ್ನು ಸಂಸ್ಕರಿಸುವ ಒಂದು ಮಿಲ್ ರಾವ್ ಆಸ್ತಿಗಳಲ್ಲಿ ಸೇರಿವೆ.
ಇವುಗಳ ವೌಲ್ಯ ಮೂರು ಕೋ.ರೂ. ಎಂದು ರಾವ್ ಹೇಳಿಕೊಂಡಿದ್ದಾರೆ. ಆದರೆ ಎಸಿಬಿ ಅಧಿಕಾರಿಗಳ ಅಂದಾಜಿನಂತೆ ಇವುಗಳ ಮಾರುಕಟ್ಟೆ ವೌಲ್ಯ 25ಕೋ. ರೂ.ಗೂ ಅಧಿಕ.
ರಾವ್ ವಿರುದ್ಧ ಭ್ರಷ್ಟಾಚಾರದ ದೂರೊಂದು ದಾಖಲಾದ ಬಳಿಕ ಎಸಿಬಿ ಅಧಿಕಾರಿಗಳು ಅವರ ಮೇಲೆ ಕಣ್ಣಿಟ್ಟಿದ್ದರು.
ಗುಂಟೂರು ಜಿಲ್ಲೆಯ ವಿನುಕೊಂಡದವರಾಗಿರುವ ರಾವ್ ಕುಟುಂಬದೊಂದಿಗೆ ಕೋಥಾಪೇಟ್‌ನಲ್ಲಿ ವಾಸವಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News