×
Ad

ಕರ್ನಾಟಕದ ಬರಪೀಡಿತ ಘೋಷಣೆಗೆ ತಮಿಳುನಾಡಿನ ಆಕ್ಷೇಪ

Update: 2016-10-25 23:37 IST

ಚೆನ್ನೈ,ಅ.25: ಕಾವೇರಿ ಜಲಾನಯನ ಪ್ರದೇಶದಲ್ಲಿಯ ತನ್ನ 48 ತಾಲೂಕುಗಳ ಪೈಕಿ 42 ತಾಲೂಕುಗಳು ಬರಪೀಡಿತವಾಗಿವೆ ಎಂಬ ಕರ್ನಾಟಕ ಸರಕಾರದ ಘೋಷಣೆಯನ್ನು ತಮಿಳುನಾಡು ಮಂಗಳವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದೆ.

ಕರ್ನಾಟಕದ ಹೇಳಿಕೆಯನ್ನು ತಮಿಳುನಾಡು ಒಪ್ಪಿಕೊಳ್ಳುವುದಿಲ್ಲ. ಮುಂಗಾರು ಬೆಳೆಯ ಅವಧಿಯಲ್ಲಿ 193 ಟಿಎಂಸಿ ಅಡಿ ನೀರನ್ನು ನೀರಾವರಿಗೆ ಬಳಸಿಕೊಳ್ಳಲು ಕರ್ನಾಟಕಕ್ಕೆ ಅನುಮತಿಯಿದೆ. ಆದರೆ ಅ.13ಕ್ಕೆ ಇದ್ದಂತೆ ಅದು ಈಗಾಗಲೇ ನೀರಾವರಿಗೆ 112 ಟಿಎಂಸಿ ಅಡಿ ಮತ್ತು ಕುಡಿಯುವ ಉದ್ದೇಶಕ್ಕಾಗಿ 9 ಟಿಎಂಸಿ ಅಡಿ ನೀರನ್ನು ಬಳಸಿ ಕೊಂಡಿದೆ. ನೀರಾವರಿಗಾಗಿ ಇನ್ನೂ 36.38 ಟಿಎಂಸಿ ಅಡಿ ನೀರನ್ನು ಬಳಸಲು ಅದು ಉದ್ದೇಶಿಸಿದೆ. ಇದರೊಂದಿಗೆ ನೀರಾವರಿಗೆ ನೀರಿನ ಒಟ್ಟು ಪ್ರಮಾಣ 149 ಟಿಎಂಸಿ ಅಡಿಗಳಷ್ಟಾಗುತ್ತದೆ. ಕರ್ನಾಟಕದ ಹೇಳಿಕೆ ಸರಿಯಲ್ಲ ಎನ್ನುವುದಕ್ಕೆ ಇದು ನಿದರ್ಶನವಾಗಿದೆ ಎಂದು ತಮಿಳುನಾಡು ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ತಕರಾರು ಅರ್ಜಿಯಲ್ಲಿ ಹೇಳಿದೆ.
ಉಭಯ ರಾಜ್ಯಗಳ ಕಾವೇರಿ ಕೊಳ್ಳ ಪ್ರದೇಶಗಳಲ್ಲಿಯ ವಸ್ತುಸ್ಥಿತಿಯ ಅಧ್ಯಯನಕ್ಕಾಗಿ ನೇಮಿಸಲಾಗಿದ್ದ ಉನ್ನತ ಮಟ್ಟದ ತಾಂತ್ರಿಕ ತಂಡವು ಅ.17ರಂದು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ತನ್ನ ವರದಿಯಲ್ಲಿ ಕರ್ನಾಟಕವು ತನ್ನ 42 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿರುವುದನ್ನು ಬೆಟ್ಟು ಮಾಡಿತ್ತು.
ತಮಿಳುನಾಡು, ಪುದುಚೇರಿ ಮತ್ತು ಕರ್ನಾಟಕಗಳಲ್ಲಿಯ ಸ್ಥಾಪಿತ ನೀರಾವರಿ ಸೌಲಭ್ಯಗಳನ್ನು ರಕ್ಷಿಸಬೇಕು ಮತ್ತು ಮತ್ತು ಕರ್ನಾಟಕದಲ್ಲಿಯ ಅಭಿವೃದ್ಧಿಗಳನ್ನು ಮೆಚ್ಚಬೇಕಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಆದರೆ ಕರ್ನಾಟಕದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕಾವೇರಿ ನ್ಯಾಯಾಧಿಕರಣದ ಅಂತಿಮ ಆದೇಶಕ್ಕೆ ಅನುಗುಣವಾಗಿ ಕೈಗೊಳ್ಳಬೇಕು ಎನ್ನುವುದನ್ನು ತಂಡವು ಎತ್ತಿ ತೋರಿಸಿಲ್ಲ. ಕರ್ನಾಟಕವು ಮಾಡಿರುವ ಉಲ್ಲಂಘನೆಗಳನ್ನು ವರದಿಯಲ್ಲಿ ಪ್ರಸ್ತಾಪಿಸಲೂ ಇಲ್ಲ ಎಂದು ಅರ್ಜಿಯು ಹೇಳಿದೆ.
 ನ್ಯಾಯಾಧಿಕರಣದ ಅಂತಿಮ ಆದೇಶದಂತೆ ಅ.13ಕ್ಕೆ ಇದ್ದಂತೆ ಕೊರತೆಯಾಗಿರುವ ನೀರನ್ನು ಬಿಡುಗಡೆ ಮಾಡುವಂತೆ ಮತ್ತು ತನ್ನ ಸಾಂಬಾ ಬೆಳೆಯನ್ನು ರಕ್ಷಿಸಲು 2017, ಜನವರಿಯವರೆಗೆ ನೀರನ್ನು ಹರಿಸುವಂತೆ ಕರ್ನಾಟಕಕ್ಕೆ ನಿರ್ದೇಶ ನೀಡುವಂತೆ ತಮಿಳುನಾಡು ಅರ್ಜಿಯಲ್ಲಿ ಕೋರಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News