ಸಮರ್ಥ ರಾಜ್ಯಧ್ಯಕ್ಷನ ನಿರೀಕ್ಷೆಯಲ್ಲಿ ಕಾಂಗ್ರೆಸ್

Update: 2016-10-26 03:44 GMT

ಸದ್ಯಕ್ಕೆ ರಾಜ್ಯ ಕಾಂಗ್ರೆಸ್ ಪಕ್ಷದೊಳಗಿರುವ ಭಿನ್ನಮತಕ್ಕೆ ನೇರವಾಗಿ ಪಕ್ಷದ ಜೊತೆಗೆ ಸಂಬಂಧವಿಲ್ಲ. ಇದು ಒಂದು ರೀತಿಯಲ್ಲಿ ಸಿದ್ದರಾಮಯ್ಯ ಮತ್ತು ಅವರ ಮಾಜಿ ಗೆಳೆಯರ ನಡುವಿನ ಜಂಗೀಕುಸ್ತಿಯಾಗಿದೆ. ಒಂದು ಕಾಲದಲ್ಲಿ ಸಿದ್ದರಾಮಯ್ಯ ಅವರು ಏಕಾಂಗಿಯಾಗಿದ್ದಾಗ ಅವರ ಜೊತೆಗೆ ನಿಂತಿದ್ದ ಕೆಲವು ಹಿರಿಯ ನಾಯಕರು ಈ ಸಂದರ್ಭದಲ್ಲಿ ಅವರಿಂದ ಕಪ್ಪವನ್ನು ವಸೂಲು ಮಾಡಲು ನೋಡುತ್ತಿದ್ದಾರೆ. ಆದರೆ ಸದ್ಯದ ಸ್ಥಿತಿಯಲ್ಲಿ ಕಾಂಗ್ರೆಸ್ ಅಹಿಂದದ ಹಿಡಿತದಲ್ಲೇನೂ ಇಲ್ಲ. ಇಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಹಿಡಿದಿದ್ದರೆ ಅದರ ಹಿಂದೆ ಅವರ ವೈಯಕ್ತಿಕ ವರ್ಚಸ್ಸೂ ಕೆಲಸ ಮಾಡಿದೆ. ಅವರನ್ನು ಅಧಿಕಾರಕ್ಕೇರದಂತೆ ತಡೆಯುವ ಕೆಲವು ಪ್ರಯತ್ನಗಳು ಅವರ ವೈಯಕ್ತಿಕ ವರ್ಚಸ್ಸಿನ ಕಾರಣದಿಂದಲೇ ವಿಫಲಗೊಂಡಿದ್ದವು. ಹಾಗೆಂದು ಈಗಲೂ ಕಾಂಗ್ರೆಸ್ ಸಂಪೂರ್ಣವಾಗಿ ಸಿದ್ದರಾಮಯ್ಯ ಅವರ ಹಿಡಿತಕ್ಕೆ ಸಿಕ್ಕಿದೆ ಎಂದರ್ಥವಲ್ಲ. ಸಿದ್ದರಾಮಯ್ಯ ಹಳ್ಳಕ್ಕೆ ಬಿದ್ದರೆ ಆಳಿಗೊಂದರಂತೆ ಕಲ್ಲು ಹಾಕಲು ಕಾಯುವ ತಲೆಗಳು ಬಹಳಷ್ಟು ಇವೆ.

ಈ ಕಾರಣದಿಂದಲೇ, ಶ್ರೀನಿವಾಸ್ ಪ್ರಸಾದ್‌ರಂತಹ ಹಿರಿಯರು ತಾವು ಅಧಿಕಾರ ಕಳೆದುಕೊಂಡಿರುವುದಕ್ಕೆ ಕೇವಲ ಸಿದ್ದರಾಮಯ್ಯನವರನ್ನೇ ಹೊಣೆ ಮಾಡುವುದು ಅವಿವೇಕವಾಗುತ್ತದೆ. ಸಿದ್ದರಾಮಯ್ಯರನ್ನೇ ‘ದಲಿತ ಮುಖ್ಯಮಂತ್ರಿ’ ಹೆಸರಲ್ಲಿ ಕೆಳಗಿಳಿಸುವ ಪ್ರಯತ್ನಗಳನ್ನು ಕೆಲವರು ಮಾಡುತ್ತಿರುವಾಗ ಇನ್ನು ಸಿದ್ದರಾಮಯ್ಯ ಉಳಿದವರನ್ನು ಉಳಿಸುವ ಮಾತೆಲ್ಲಿ ಬಂತು? ಅದೇನೇ ಇರಲಿ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ತನ್ನ ಕೆಲಸವನ್ನು ಜವಾಬ್ದಾರಿಯುತವಾಗಿ ನಿರ್ವಹಿಸುತ್ತಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಒಂದು ವೇಳೆ ಅವರ ಆಡಳಿತದಲ್ಲಿ ವೈಫಲ್ಯಗಳಿದ್ದರೆ ಅದರ ಹೊಣೆಗಾರಿಕೆಯನ್ನು ಅವರ ಸಹೋದ್ಯೋಗಿಗಳೇ ಹೊರಬೇಕಾಗುತ್ತದೆ. ಸಾಧಾರಣವಾಗಿ ಸಮಾವೇಶಗಳನ್ನು ಮಾಡುವುದು ವಿರೋಧ ಪಕ್ಷಗಳ ಟೀಕೆಗಳಿಗೆ ಉತ್ತರಿಸುವುದಕ್ಕಾಗಿ. ಆದರೆ ಸದ್ಯಕ್ಕೆ ಕಾಂಗ್ರೆಸ್‌ನ್ನು ವಿರೋಧ ಪಕ್ಷವಾಗಿರುವ ಬಿಜೆಪಿ ಕಾಡಿರುವುದು ಕಡಿಮೆ. ಅಭಿವೃದ್ಧಿಯ ವಿಷಯಗಳಲ್ಲಂತೂ ಬಿಜೆಪಿ ಬಾಯಿ ಮುಚ್ಚಿ ಕೂತಿದೆ. ಯಾರಾದರೂ ಆತ್ಮಹತ್ಯೆ ಮಾಡಿಕೊಂಡಾಗಲಷ್ಟೇ ಎಚ್ಚೆತ್ತುಕೊಂಡು ‘ನಾವಿನ್ನೂ ಆತ್ಮಹತ್ಯೆ ಮಾಡಿಕೊಂಡಿಲ್ಲ’ ಎನ್ನುವುದನ್ನು ಬಿಜೆಪಿಯ ನಾಯಕರು ನಾಡಿಗೆ ಸಾಬೀತು ಪಡಿಸುತ್ತಿದ್ದಾರೆ.

ವಿಪರ್ಯಾಸವೆಂದರೆ ಇಂದು ಕಾಂಗ್ರೆಸ್ ಪಕ್ಷ ತನ್ನದೇ ಪಕ್ಷದೊಳಗಿರುವ ಭಿನ್ನಮತೀಯರಿಗಾಗಿ ಸಮಾವೇಶ ನಡೆಸಬೇಕಾಗಿ ಬಂದಿರುವುದು. ನಂಜನಗೂಡಿನಲ್ಲಿ ಎರಡು ದಿನಗಳ ಹಿಂದೆ ನಡೆದ ಕಾಂಗ್ರೆಸ್ ಪಕ್ಷದ ಸಮಾವೇಶ ತನ್ನದೇ ಜನರಿಗೆ ಸ್ಪಷ್ಟೀಕರಣ ನೀಡುವ ಉದ್ದೇಶ ಹೊಂದಿತ್ತು. ಬರೀ ಒಂದು ಪತ್ರಿಕಾಗೋಷ್ಠಿಯಲ್ಲಿ ವಿವರಿಸಬಹುದಾದುದನ್ನು ಒಂದು ಸಮಾವೇಶ ಮಾಡಿ ವಿವರಿಸುವಂತಹ ಸನ್ನಿವೇಶ ಇಂದು ಸಿದ್ದರಾಮಯ್ಯ ಅವರಿಗೆ ನಿರ್ಮಾಣವಾಗಿದೆ. ತನ್ನ ಹಳೆಯ ಅಹಿಂದ ಹೆಣವನ್ನು ಹೊತ್ತುಕೊಂಡು ತಿರುಗುವುದು ಅವರಿಗೆ ತೀರಾ ಕಷ್ಟವೆನಿಸಿದೆ. ಆದರೆ ಅದನ್ನು ಕೆಳಗಿಳಿಸುವಂತೆಯೂ ಇಲ್ಲ. ಇಂತಹ ಸನ್ನಿವೇಶದಲ್ಲಿ ಅವರು ನಂಜನಗೂಡಿನಲ್ಲಿ ಸಮಾವೇಶ ನಡೆಸಿ, ತನ್ನ ಅಭಿಪ್ರಾಯಗಳನ್ನು ಜನರೊಂದಿಗೆ ಹಂಚಿಕೊಂಡಿದ್ದಾರೆ. ತಮಾಷೆಯೆಂದರೆ, ಶ್ರೀನಿವಾಸ್ ಪ್ರಸಾದ್ ಇದೀಗ ತನ್ನ ಹೋರಾಟವನ್ನು ಬರೀ ಸಿದ್ದರಾಮಯ್ಯ ಅವರಿಗೇ ಸೀಮಿತವಾಗಿಸಿಕೊಂಡಿರುವುದು. ಈ ಹಿಂದೆ ಸಿದ್ದರಾಮಯ್ಯ ಅವರು ‘ದೇವೇಗೌಡರ’ ವಿರುದ್ಧ ಹಟ ಸಾಧಿಸಿದಂತೆ ಇದೀಗ ಸಿದ್ದರಾಮಯ್ಯ ವಿರುದ್ಧ ಶ್ರೀನಿವಾಸ್ ಪ್ರಸಾದ್ ಹಟ ಸಾಧಿಸುತ್ತಿದ್ದಾರೆ.

ಆದರೆ ಅದಕ್ಕೆ ಬೇಕಾಗಿರುವ ಶಕ್ತಿ, ಚೈತನ್ಯ ಶ್ರೀನಿವಾಸ್ ಪ್ರಸಾದ್ ಅವರಲ್ಲಿ ಇಲ್ಲ. ಅಂತಹದೊಂದು ಚೈತನ್ಯ ಅವರಲ್ಲಿ ಇದ್ದಿದ್ದರೆ ಕಂದಾಯ ಖಾತೆಯಿಂದ ಅವರನ್ನು ಹೊರಹಾಕುವ ಪರಿಸ್ಥಿತಿಯೇ ನಿರ್ಮಾಣವಾಗುತ್ತಿರಲಿಲ್ಲ. ಇನ್ನು ಸಿ.ಎಂ. ಇಬ್ರಾಹಿಂರಂತಹ ನಾಯಕರ ಭಿನ್ನಮತಕ್ಕೆ ಯಾವ ರೀತಿಯಲ್ಲೂ ಗೌರವಗಳಿಲ್ಲ. ಸ್ವತಃ ಒಂದು ವ್ಯಕ್ತಿತ್ವವಿಲ್ಲದ ಇಬ್ರಾಹಿಂ, ನಾಳೆ ಸಣ್ಣದರಕ್ಕೆ ತನ್ನನ್ನು ತಾನು ಬಿಜೆಪಿಗೆ ಮಾರಿಕೊಂಡರೆ ಅದರಲ್ಲಿ ಅಚ್ಚರಿಯಿಲ್ಲ. ಬರೇ ಮಾತುಗಾರಿಕೆಯಿಂದ ಜನರನ್ನು ಸೆಳೆಯುವ ಕಾಲ ಮುಗಿದಿದೆ. ನಾಯಕನ ವ್ಯಕ್ತಿತ್ವ, ವರ್ಚಸ್ಸನ್ನು ಸೂಕ್ಷ್ಮವಾಗಿ ಗಮನಿಸುವ ಕಾಲ ಇದು. ಈ ಕಾರಣದಿಂದಲೇ ಇಬ್ರಾಹಿಂ ಅವರು ತನ್ನ ಸಮುದಾಯದ ಜನರಿಂದಲೇ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಇಬ್ರಾಹಿಂ ಅವರ ಬಂಡಾಯದಿಂದ ನಷ್ಟವಾಗುವುದಿದ್ದರೆ ಅದು ಅವರಿಗೆ ಮಾತ್ರ. ಈ ಕಾರಣದಿಂದ, ಸದ್ಯದ ಅಹಿಂದದ ವಿರುದ್ಧ ಅಹಿಂದ ತಾಕಲಾಟಗಳು ಸರಕಾರದ ಮೇಲೆ ವಿಶೇಷ ಪರಿಣಾಮವನ್ನು ಬೀರಲಾರವು. ಆದರೆ ಕಾಂಗ್ರೆಸ್‌ನ ಸದ್ಯದ ದೊಡ್ಡ ದುರಂತವೆಂದರೆ ಇಡೀ ಪಕ್ಷವನ್ನು ಒಂದಾಗಿ ಮುಂದೆ ಕೊಂಡೊಯ್ಯುವಂತಹ ನಾಯಕ ರಾಜ್ಯದಲ್ಲಿ ಇಲ್ಲದಿರುವುದು. ಪಕ್ಷ ಸಂಘಟನೆಗೂ ಅದು ಸಿದ್ದರಾಮಯ್ಯ ಅವರನ್ನೇ ಬಳಸಿಕೊಳ್ಳುತ್ತಿದೆ. ಕೆಪಿಸಿಸಿ ಅಧ್ಯಕ್ಷರಾಗಿಯೂ, ಗೃಹ ಸಚಿವರಾಗಿಯೂ ಈವರೆಗೆ ಪರಮೇಶ್ವರ್ ಅವರು ಮುಂದುವರಿದುಕೊಂಡು ಬಂದಿದ್ದಾರೆ. ಆದರೆ ಪರಮೇಶ್ವರ್ ಅವರೇ ಹಲವು ಬಾರಿ ಸರಕಾರಕ್ಕೆ ಸಮಸ್ಯೆಯಾಗಿ ಪರಿಣಮಿಸಿದರು. ಉಪಮುಖ್ಯಮಂತ್ರಿಯಾಗುವ ಅವರ ಒಳಗಿನ ಆಸೆ ಸರಕಾರದ ಮೇಲೆ ಪರಿಣಾಮ ಬೀರದೇ ಇದ್ದರೂ, ಪಕ್ಷದ ಮೇಲೆ ತನ್ನ ಪರಿಣಾಮವನ್ನು ಬೀರಿದೆ.

ಅಂತಿಮವಾಗಿ ಗೃಹಖಾತೆಯಂತಹ ಮಹತ್ವದ ಖಾತೆಯನ್ನು ಅವರಿಗೆ ವಹಿಸಲಾಯಿತಾದರೂ ಅದನ್ನು ಜವಾಬ್ದಾರಿಯುತವಾಗಿ ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. ಅವರು ಅಧಿಕಾರ ಹಿಡಿದ ಮೇಲೆ ಗೃಹ ಇಲಾಖೆಯೊಳಗೆ ನಡೆದ ಆಂತರಿಕ ಸಂಘರ್ಷವನ್ನು ನಾವು ನೋಡಿದ್ದೇವೆ. ಕಳೆದ ವರ್ಷ ಟಿಪ್ಪು ಜಯಂತಿಯ ಸಂದರ್ಭದಲ್ಲಿ ಎದುರಾದ ಬಿಕ್ಕಟ್ಟು, ಪೊಲೀಸರ ಪ್ರತಿಭಟನೆ, ಪೊಲೀಸ್ ಅಧಿಕಾರಿಗಳ ಆತ್ಮಹತ್ಯೆ ಇವೆಲ್ಲವನ್ನು ಬಿಜೆಪಿ ಮತ್ತು ಸಂಘಪರಿವಾರ ತಮ್ಮ ಮೂಗಿನ ನೇರಕ್ಕೆ ಬಳಸಿಕೊಳ್ಳುತ್ತಿರುವಾಗ ಪರಮೇಶ್ವರ್ ಅಸಹಾಯಕರಂತೆ ವರ್ತಿಸಿದ್ದರು. ಪದೇಪದೇ ಗೃಹಖಾತೆಯ ಪರವಾಗಿ ಸಿದ್ದರಾಮಯ್ಯ ಅವರೇ ಮಾತನಾಡಬೇಕಾದಂತಹ ಸನ್ನಿವೇಶ ನಿರ್ಮಾಣವಾಗಿತ್ತು. ಇನ್ನು ಪಕ್ಷ ಸಂಘಟನೆಯಲ್ಲಂತೂ ಪರಮೇಶ್ವರ್ ಸಂಪೂರ್ಣ ವಿಫಲವಾಗಿದ್ದರು. ಸ್ವತಃ ತಾನೆೇ ಚುನಾವಣೆಯಲ್ಲಿ ಹೀನಾಯವಾಗಿ ಸೋತಿರುವುದ್ದರಿಂದ ಕೆಪಿಸಿಸಿ ಅಧ್ಯಕ್ಷರಾಗಿ ಅವರು ಮುಂದುವರಿದಿದ್ದೇ ಬಹುದೊಡ್ಡ ತಪ್ಪಾಗಿತ್ತು. ವಿಪರ್ಯಾಸದ ಸಂಗತಿಯೆಂದರೆ, ದಲಿತ ನಾಯಕನಾಗಿಯೂ ಅವರು ದಲಿತರ ನಂಬಿಕೆಯನ್ನು ಪೂರ್ಣ ಪ್ರಮಾಣದಲ್ಲಿ ತನ್ನದಾಗಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.

ಇದೀಗ ಕಾಂಗ್ರೆಸ್‌ನಲ್ಲಿರುವ ಕೆಲವು ಅಸಮಾಧಾನಗಳನ್ನು ನಿವಾರಿಸಲು ನಿಗಮ, ಮಂಡಳಿಯಂತಹ ಗಂಜಿಕೇಂದ್ರಗಳನ್ನು ಭರ್ತಿ ಮಾಡುವ ಯೋಚನೆಯಲ್ಲಿದ್ದಾರೆ ಸಿದ್ದರಾಮಯ್ಯ. ಆದರೆ ಸದ್ಯಕ್ಕೆ ಕಾಂಗ್ರೆಸ್‌ಗೆ ಒಬ್ಬ ಸಮರ್ಥ ಪಕ್ಷಾಧ್ಯಕ್ಷನ ಅಗತ್ಯವಿದೆ. ಬಿಜೆಪಿ ಮತ್ತು ಸಂಘಪರಿವಾರಗಳ ಸುಳ್ಳುಗಳನ್ನು ನಾಡಿಗೆ ತೋರಿಸಿಕೊಡಬಲ್ಲ, ಸರಕಾರದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನರ ಮುಂದಿಟ್ಟು ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ತುಂಬಬಲ್ಲ ನಾಯಕನ ಅಗತ್ಯ ಕಾಂಗ್ರೆಸ್‌ಗಿದೆ. ಎಲ್ಲ ಜವಾಬ್ದಾರಿಗಳನ್ನೂ ಸಿದ್ದರಾಮಯ್ಯ ಅವರ ಮೇಲೆಯೇ ಹೊಣೆ ಹೊರಿಸುವ ಪ್ರವೃತ್ತಿ ನಿಲ್ಲಬೇಕಾಗಿದೆ ಮತ್ತು ಉಳಿದ ನಾಯಕರೂ ಸರಕಾರಕ್ಕೆ ಹೆಗಲು ಕೊಡುವ ಕೆಲಸ ಮಾಡಬೇಕಾಗಿದೆ. ಹಾಗಾದಲ್ಲಿ ಮಾತ್ರ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಭವಿಷ್ಯವಿದೆ. ಇಲ್ಲವಾದರೆ ಕಾಂಗ್ರೆಸ್‌ನ ಅಸಹಾಯಕತೆಯನ್ನು ಜೆಡಿಎಸ್ ಬಳಸಿಕೊಳ್ಳುವ ಎಲ್ಲ ಸಾಧ್ಯತೆಗಳೂ ಕಾಣುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News