ತನ್ನ ನೆಲದಲ್ಲಿರುವ ಉಗ್ರರ ವಿರುದ್ಧ ಪಾಕ್ ಕ್ರಮ ತೆಗೆದುಕೊಳ್ಳಬೇಕು: ಅಮೆರಿಕ
Update: 2016-10-26 23:15 IST
ವಾಶಿಂಗ್ಟನ್, ಅ. 26: ನೆರೆಯ ದೇಶಗಳ ಮೇಲೆ ದಾಳಿ ನಡೆಸಲು ತನ್ನ ನೆಲವನ್ನು ಬಳಸುವ ಭಯೋತ್ಪಾದಕರ ವಿರುದ್ಧ ಕ್ರಮ ತೆಗೆದುಕೊಳ್ಳುವ ಮೂಲಕ ಪಾಕಿಸ್ತಾನ ಪ್ರಾದೇಶಿಕ ಸ್ಥಿರತೆಗೆ ದೇಣಿಗೆ ನೀಡಬಹುದಾಗಿದೆ ಎಂದು ಅಮೆರಿಕ ಹೇಳಿದೆ.
ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ಜಾನ್ ಕಿರ್ಬಿ ತನ್ನ ದೈನಂದಿನ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
‘‘ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿರುವ ಪಾಕಿಸ್ತಾನದ ಸರಕಾರವನ್ನು ನಾವು ಬೆಂಬಲಿಸುತ್ತೇವೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ಹಕ್ಕನ್ನೂ ನಾವು ಬೆಂಬಲಿಸುತ್ತೇವೆ. ಆದರೆ, ಇದು ಪಾಕಿಸ್ತಾನ ಸರಕಾರ ಮತ್ತು ಪಾಕಿಸ್ತಾನಿ ಅಧಿಕಾರಿಗಳ ಆಂತರಿಕ ವ್ಯವಹಾರವಾಗಿದೆ’’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಹೇಳಿದರು.