ಆಂಧ್ರ , ಒಡಿಶಾ ಕರಾವಳಿಯತ್ತ ಕ್ಯಾಂಟ್ ಚಂಡಮಾರುತ ?

Update: 2016-10-26 18:31 GMT

ವಿಶಾಖಪಟ್ಟಣ, ಅ.26: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತ ಆಂಧ್ರ ಮತ್ತು ಒಡಿಶಾದ ಕರಾವಳಿಯತ್ತ ಸಾಗುವ ಲಕ್ಷಣವಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಎರಡೂ ರಾಜ್ಯಗಳ ಮೀನುಗಾರರಿಗೆ ಈ ವಾರ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದ್ದು ಗುಡುಗು ಸಹಿತ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ವಿಶಾಖಪಟ್ಟಣದಿಂದ 620 ಕಿ.ಮೀ ಆಗ್ನೇಯದಲ್ಲಿ ಬಂಗಾಳ ಕೊಲ್ಲಿಯಲ್ಲಿ ಇದು ಕೇಂದ್ರೀಕರಿಸಲ್ಪಟ್ಟಿದೆ. ಕ್ಯಾಂಟ್‌ನ ಚಲನೆ ಇದೀಗ ವಿಲಕ್ಷಣವಾಗಿದ್ದು ಮುಂದಿನ 24 ಗಂಟೆಯ ಬಳಿಕ ಇದು ಸಾಗುವ ದಿಕ್ಕಿನ ಬಗ್ಗೆ ಸ್ಪಷ್ಟ ಚಿತ್ರಣ ದೊರಕಬಹುದು ಎಂದು ಹವಾಮಾನ ಇಲಾಖೆಯ ಹಿರಿಯ ಅಧಿಕಾರಿಯಾಗಿರುವ ಸುಧಾ ವಲ್ಲಿ ತಿಳಿಸಿದ್ದಾರೆ.

ಚಂಡಮಾರುತದ ಪರಿಣಾಮ ಆಂಧ್ರ ಕರಾವಳಿಯಲ್ಲಿ ಗಂಟೆಗೆ 45ರಿಂದ 50 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಂಭವವಿದೆ . ಒಡಿಶಾ ಸರಕಾರ 14 ಜಿಲ್ಲೆಗಳಲ್ಲಿ ‘ಹೈ ಅಲರ್ಟ್’ ಸ್ಥಿತಿ ಘೋಷಿಸಿದೆ. ರಾಜ್ಯದ ಕರಾವಳಿ ಜಿಲ್ಲೆಗಳು, ಉತ್ತರ ಮತ್ತು ದಕ್ಷಿಣ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಮುಖ್ಯಮಂತ್ರಿ ನವೀನ್ ಪಟ್ಣಾಯಕ್ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದರು. ಪ್ರಸ್ತುತ ಚಂಡಮಾರುತ ಪಶ್ಚಿಮ- ವಾಯುವ್ಯ ದಿಕ್ಕಿನತ್ತ ಚಲಿಸುತ್ತಿದ್ದು ಕ್ರಮೇಣ ದಿಕ್ಕು ಬದಲಿಸಿ ಪಶ್ಚಿಮದತ್ತ ಸಾಗಿ, ಬುಧವಾರ ರಾತ್ರಿ ಅಥವಾ ಗುರುವಾರ ಬೆಳಗ್ಗೆ ಪಶ್ಚಿಮ- ನೈಋತ್ಯ ದಿಕ್ಕಿನತ್ತ ಚಲಿಸುವ ನಿರೀಕ್ಷೆಯಿದೆ. 70ರಿಂದ 80 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉಭಯ ರಾಜ್ಯಗಳ ವಿಶಾಖಪಟ್ಟಣ, ಶ್ರೀಕಾಕುಳಂ, ಪುರಿ, ಗಜಪತಿ, ಗಂಜಾಂ, ಗೋಪಾಲಪುರ ಮತ್ತು ಪೂರ್ವ ಗೋದಾವರಿ ಜಿಲ್ಲೆಗಳಿಗೆ ಕ್ಯಾಂಟ್ ಚಂಡಮಾರುತದ ಪ್ರಭಾವಕ್ಕೆ ಒಳಗಾಗಲಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News