ತಾಲಿಬಾನ್ ಮಾದರಿಯಲ್ಲಿ ಶಾಲೆಗಳನ್ನು ಧ್ವಂಸಗೈದ ಭಯೋತ್ಪಾದಕ ಗುಂಪುಗಳು

Update: 2016-10-27 09:02 GMT

ಶ್ರೀನಗರ,ಅ.27: ಪಾಕಿಸ್ತಾನ ಮತ್ತು ಅಫಘಾನಿಸ್ತಾನಗಳಲ್ಲಿ ತಾಲಿಬಾನಿಗಳು ಶಿಕ್ಷಣದ ವಿರುದ್ಧ ನಡೆಸಿದ ದಾಳಿಗಳ ಮಾದರಿಯಲ್ಲೇ ಕಾಶ್ಮೀರದಲ್ಲಿ ಶಾಲೆಗಳನ್ನು ನಾಶ ಗೊಳಿಸುತ್ತಿರುವ ಭಯೋತ್ಪಾದಕ ಗುಂಪುಗಳು ಅವುಗಳನ್ನು ಬಂದ್ ಮಾಡಿಸುವುದನ್ನು ಮುಂದುವರಿಸಿವೆ. ಪ್ರಕ್ಷುಬ್ಧತೆ ನೆಲೆಸಿರುವ ಕಳೆದ ಮೂರು ತಿಂಗಳಲ್ಲಿ 20 ಶಾಲೆಗಳ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಲಾಗಿದೆ.

ಜ.8ರಂದು ಭದ್ರತಾ ಪಡೆಗಳಿಂದ ಹುಝ್ಬುಲ್ ಮುಜಾಹಿದೀನ್ ಉಗ್ರ ಬುರ್ಹಾನ್ ವಾನಿಯ ಹತ್ಯೆಯಾದಾಗಿನಿಂಂದ ಕಾಶ್ಮೀರ ಕಣಿವೆಯಲ್ಲಿನ ಶಾಲಾಕಾಲೇಜುಗಳು ಬಾಗಿಲೆಳೆದುಕೊಂಡಿವೆ.

ಕಣಿವೆಯಾದ್ಯಂತ ಸುಮಾರು ಇಪ್ಪತ್ತು ಲಕ್ಷ ಕಾಶ್ಮೀರಿ ವಿದ್ಯಾರ್ಥಿಗಳು ಶಾಲೆಗಳಿಗೆ ಹೋಗದಂತೆ ತಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಗುರೆಝ್,ತಂಗಧಾರ್ ಮತ್ತು ಉರಿಯಂತಹ ಕಾಶ್ಮೀರದ ಗಡಿಪ್ರದೇಶಗಳು,ಜಮ್ಮು ಮತ್ತು ಲಡಾಖ್‌ಗಳಲ್ಲಿ ಯಾವುದೇ ಅಡೆತಡೆಯಿಲ್ಲದೆ ಮಕ್ಕಳು ಶಾಲೆಗಳಿಗೆ ಹಾಜರಾಗುತ್ತಿದ್ದಾರೆ. ಭಯೋತ್ಪಾದಕರ ಪ್ರಭಾವ ಕಣಿವೆಗೆ ಮಾತ್ರ ಸೀಮಿತವಾಗಿರುವುದು ಇದಕ್ಕೆ ಕಾರಣ.

ಅಶಾಂತಿಯ ದಿನಗಳಲ್ಲಿ 17 ಸರಕಾರಿ ಮತ್ತು ಮೂರು ಖಾಸಗಿ ಶಾಲೆಗಳು ಬೆಂಕಿಯಿಂದ ಸಂಪೂರ್ಣ ಹಾನಿಗೀಡಾಗಿವೆ.

ಪಾಕಿಸ್ತಾನ ಪ್ರಯೋಜಿತ ಕಲ್ಲು ತೂರಾಟ ಗುಂಪುಗಳು ಮಂಗಳವಾರ ಶ್ರೀನಗರದ ನೂರ್‌ಬಾಗ್ ಪ್ರದೇಶದಲ್ಲಿ ಮತ್ತು ಅನಂತನಾಗ್ ಜಿಲ್ಲೆಯ ಐಷ್‌ಮುಕಾಮ್‌ನಲ್ಲಿ ಎರಡು ಶಾಲೆಗಳಿಗೆ ಬೆಂಕಿ ಹಚ್ಚಿ ಹಾಳುಗೆಡವಿದ್ದಾರೆ.

ಅ.4ರಂದು ಮುಂದಿನ ನವೆಂಬರ್‌ನಲ್ಲಿ ನಿಗದಿಯಾಗಿರುವಂತೆ ಪರೀಕ್ಷೆಗಳನ್ನು ನಡೆಸುವುದಾಗಿ ಅಧಿಕಾರಗಳು ಘೋಷಿಸಿದ್ದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಬೆಮಿನಾದಲ್ಲಿರುವ ಶಾಲಾ ಶಿಕ್ಷಣ ಮಂಡಳಿಯ ಕಚೇರಿಯ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆಸಿದ್ದರು. ಆಗಸ್ಟ್‌ನಲ್ಲಿ ಬಂಡಿಪೋರಾದಲ್ಲಿನ ಶಾಲೆಯನ್ನು ತೆರೆಯಲು ಪ್ರಯತ್ನಿಸಿದ್ದ ಮುಖ್ಯೋಪಾಧ್ಯಾಯ ಅಬ್ದುಲ್ ರಶೀದ್‌ರನ್ನು ಕಲ್ಲು ತೂರಾಟಗಾರರು ಬರ್ಬರವಾಗಿ ಥಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News