ಕೇಂದ್ರ ನೌಕರರಿಗೆ ಶೇ.2 ತುಟ್ಟಿಭತ್ತೆ ಹೆಚ್ಚಳ
ಹೊಸದಿಲ್ಲಿ,ಆ.27: ಕೇಂದ್ರ ಸರಕಾರವು ತನ್ನ 50.68 ಲಕ್ಷ ನೌಕರರಿಗೆ ಹಾಗೂ 54.24 ಲಕ್ಷ ಪಿಂಚಣಿದಾರರಿಗೆ ಶೇ.2ರಷ್ಟು ತುಟ್ಟಿಭತ್ತೆ ಏರಿಕೆ ಮಾಡಿದೆ.
ಇಂದು ನಡೆದ ಕೇಂದ್ರ ಸಂಪುಟದ ಸಭೆಯಲ್ಲಿ ಮೂಲವೇತನದ ಶೇ.2ರಷ್ಟು ತುಟ್ಟಿಭತ್ತೆಯನ್ನು ನೀಡುವ ನಿರ್ಧಾರವನ್ನು ಕೈಗೊಳ್ಳಲಾಯಿತು. 2016ರ ಜುಲೈ1ರಿಂದ ಅನ್ವಯವಾಗುವಂತೆ ತುಟ್ಟಿಭತ್ತೆಯಲ್ಲಿ ಏರಿಕೆ ಮಾಡಲಾಗಿದೆ.
ತುಟ್ಟಿಭತ್ತೆ ಏರಿಕೆಯಿಂದ ಕೇಂದ್ರ ಸರಕಾರದ ಬೊಕ್ಕಸಕ್ಕೆ 5622.10 ಕೋಟಿ ರೂ. ವಾರ್ಷಿಕ ಹೊರೆಬೀಳಲಿದೆ. ಕೇಂದ್ರ ಸರಕಾರವು ಇದಕ್ಕೂ ಮೊದಲು 2015ರ ಮಾರ್ಚ್‌ನಲ್ಲಿ ಮೂಲ ವೇತನದ ಶೇ.119ರಷ್ಟಿದ್ದ ತುಟ್ಟಿಭತ್ತೆಯನ್ನು ಶೇ. 125ಕ್ಕೆ ಏರಿಸಿತ್ತು (ಶೇ.6ರಷ್ಟು ಹೆಚ್ಚಳ). ಆದರೆ 7ನೆ ವೇತನ ಆಯೋಗದ ಜಾರಿಯ ಹಿನ್ನೆಲೆಯಲ್ಲಿ ಮೂಲವೇತನದೊಂದಿಗೆ ತುಟ್ಟಿಭತ್ತೆಯನ್ನು ವಿಲೀನಗೊಳಿಸಲಾಗಿತ್ತು.
ಬೆಲೆಯೇರಿಕೆಯ ಹಿನ್ನೆಲೆಯಲ್ಲಿ ತುಟ್ಟಿಭತ್ತೆಯಲ್ಲಿ ಏರಿಕೆ ಮಾಡಲಾಗಿದೆಯೆಂದು ಕೇಂದ್ರ ಸರಕಾರದ ಪತ್ರಿಕಾ ಹೇಳಿಕೆಯೊಂದು ತಿಳಿಸಿದೆ. ಏಳನೆ ವೇತನ ಆಯೋಗದ ಶಿಫಾರಸುಗಳನ್ನು ಆಧರಿಸಿ ತುಟ್ಟಿಭತ್ತೆಯಲ್ಲಿ ಏರಿಕೆ ಮಾಡಲಾಗಿದೆಯೆಂದು ಅದು ಹೇಳಿದೆ.