ಅಮೆಝಾನ್ ದೀಪಾವಳಿಗೆ ಮಾರಿದ ಲಿಪ್ ಸ್ಟಿಕ್ ಎಷ್ಟು ಗೊತ್ತೇ ?

Update: 2016-11-01 08:38 GMT

ಮುಂಬೈ, ನ.1: ಅಕ್ಟೋಬರ್ ತಿಂಗಳಲ್ಲಿ ಆನ್ ಲೈನ್ ಮಾರಾಟ ಸಂಸ್ಥೆ ಅಮೆಝಾನ್ ಇಂಡಿಯಾ ಮಾರಾಟ ಮಾಡಿದ ವಸ್ತುಗಳೆಷ್ಟು ಎಂದು ಹೇಳಿದರೆ ಎಂಥವರಿಗೂ ಆಶ್ಚರ್ಯವಾಗಬಹುದು. ಈ ಹಬ್ಬದ ಸೀಸನ್ ನಲ್ಲಿ ಭಾರತದ ಶೇ. 97 ರಷ್ಟು ಪಿನ್ ಕೋಡ್ ಪ್ರದೇಶಗಳಿಂದ ಆರ್ಡರುಗಳ ಮಹಾಪೂರವೇ ಸಂಸ್ಥೆಗೆ ಹರಿದು ಬಂದಿದೆ.

ಅಮೆಝಾನ್ ಮಾರಾಟ ಮಾಡಿದ ಸೀರೆಗಳನ್ನು ಪರಿಗಣನೆಗೆ ತೆಗೆದುಕೊಂಡಿದ್ದೇ ಆದಲ್ಲಿ ಅದು 15 ಕ್ಕೂ ಹೆಚ್ಚು ಕ್ರಿಕೆಟ್ ಸ್ಟೇಡಿಯಂಗಳನ್ನು ಸುತ್ತಬಹುದಾದರೆ, ಕಂಪೆನಿ ಮಾರಾಟ ಮಾಡಿದ ಲಿಪ್ ಸ್ಟಿಕ್ ಗಳು 25 ಮಿಲಿಯಕ್ಕೂ ಅಧಿಕ ವಧುಗಳನ್ನು ಸಿಂಗರಿಸಲು ಸಾಕಾಗಬಹುದಂತೆ.

ಈ ಅಕ್ಟೋಬರ್ ತಿಂಗಳಿನಲ್ಲಿ ಸಂಸ್ಥೆಯ ಹೊಸ 236 ಮಾರಾಟಗಾರರು ಕೋಟಿಪತಿ ಕ್ಲಬ್ ಗೆ ಸೇರ್ಪಡೆಗೊಂಡಿದ್ದಾರೆ. ಈ ಮಾರಾಟಗಾರರು ಪ್ರಪ್ರಥಮ ಬಾರಿಗೆ ದೇಶದ 1,300 ಕ್ಕೂ ಹೆಚ್ಚು ಪಿನ್ ಕೋಡ್ ಪ್ರದೇಶಗಳಿಂದ ಆರ್ಡರ್ ಪಡೆದಿದ್ದಾರೆ.

ಸಣ್ಣ ನಗರಗಳಿಂದ ಹೆಚ್ಚಿನ ಆರ್ಡರುಗಳು ಬರುತ್ತಿದ್ದು ಇಲ್ಲಿಂದ ಬರುವ ಆರ್ಡರುಗಳ ಪ್ರಮಾಣ ಶೇ. 65 ರಷ್ಟು ಎಂದು ಅಮೆಝಾನ್ ಹೇಳಿಕೊಂಡಿದೆ. ದಿನಬಳಕೆಯ ವಸ್ತುಗಳು, ದಿನಸಿ ಸಾಮಗ್ರಿಗಳು, ಪೀಠೋಪಕರಣಗಳು ಹಾಗೂ ಚಿನ್ನದ ಆಭರಣಗಳನ್ನು ಸಂಸ್ಥೆ ಹೆಚ್ಚಾಗಿ ಮಾರಾಟ ಮಾಡಿದೆಯೆನ್ನಲಾಗಿದೆ.

ಅತ್ತ ಸ್ನ್ಯಾಪ್ ಡೀಲ್ ಹೇಳುವಂತೆ ಕಳೆದ ವಾರವೊಂದರಲ್ಲೇ 6.25 ಲಕ್ಷ ಹೊಸ ಗ್ರಾಹಕರು ತಲಾ ಐದು ಉತ್ಪನ್ನಗಳನ್ನು ಆರ್ಡರ್ ಮಾಡಿದ್ದರೆ, ಸುಮಾರು 1.1 ಲಕ್ಷ ಮಂದಿ ಹತ್ತಕ್ಕೂ ಹೆಚ್ಚು ಉತ್ಪನ್ನಗಳನ್ನು ‘ಅನ್ ಬಾಕ್ಸ್ ದಿವಾಲಿ ಸೇಲ್’ ನಲ್ಲಿ ಕೊಂಡುಕೊಂಡಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News