ರೊಹಿಂಗ್ಯ ವಿರುದ್ಧದ ದೌರ್ಜನ್ಯ ಪ್ರಕರಣಗಳ ತನಿಖೆ: ಸೂ ಕಿ
ಟೋಕಿಯೊ, ನ. 4: ಅಲ್ಪಸಂಖ್ಯಾತ ರೊಹಿಂಗ್ಯ ಮುಸ್ಲಿಮರ ವಿರುದ್ಧದ ದೌರ್ಜನ್ಯ ಆರೋಪಗಳ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಮ್ಯಾನ್ಮಾರ್‌ನ ನಾಯಕಿ ಆಂಗ್ ಸಾನ್ ಸೂ ಕಿ ಶುಕ್ರವಾರ ಹೇಳಿದ್ದಾರೆ.
ರೊಹಿಂಗ್ಯ ಮುಸ್ಲಿಮರ ಬಿಕ್ಕಟ್ಟನ್ನು ತಾನು ನಿಭಾಯಿಸಿರುವ ರೀತಿಗೆ ಭಾರೀ ಟೀಕೆಗಳು ವ್ಯಕ್ತವಾಗಿರುವಂತೆಯೇ ಜಪಾನ್ ಪ್ರವಾಸದಲ್ಲಿರುವ ಶಾಂತಿ ನೊಬೆಲ್ ಪ್ರಶಸ್ತಿ ವಿಜೇತೆ ಪತ್ರಿಕಾಗೋಷ್ಠಿಯೊಂದರಲ್ಲಿ ಹೇಳಿದ್ದಾರೆ.
ಸೇನೆ ನಡೆಸಿರುವ ದೌರ್ಜನ್ಯಗಳ ಆರೋಪಗಳನ್ನು ಮುಚ್ಚಿಹಾಕಲು ಸರಕಾರ ಪ್ರಯತ್ನಿಸಿಲ್ಲ ಎಂದು ಹೇಳಿದ ಅವರು, ಕಾನೂನು ಪ್ರಕಾರ ಸಮಗ್ರ ವಿಚಾರಣೆ ನಡೆಯಲಿದೆ ಎಂದರು.
ಹಿಂಸಾಪೀಡಿತ ಉತ್ತರ ರಖೈನ್ ರಾಜ್ಯದಲ್ಲಿ ಸೈನಿಕರು ಗ್ರಾಮಸ್ಥರ ಮೇಲೆ ಅತ್ಯಾಚಾರ ನಡೆಸಿದ್ದಾರೆ, ಪಟ್ಟಣಗಳನ್ನು ಸೂರೆಗೈದಿದ್ದಾರೆ ಹಾಗೂ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ ಎಂಬುದಾಗಿ ಅಲ್ಲಿನ ನಿವಾಸಿಗಳು ಹಾಗೂ ಮಾನವಹಕ್ಕುಗಳ ಕಾರ್ಯಕರ್ತರು ಆರೋಪಿಸಿದ್ದಾರೆ. ಇದು ಆರು ತಿಂಗಳ ಅವಧಿಯ ಸೂ ಕಿ ಸರಕಾರಕ್ಕೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ.