×
Ad

ಜೆಎನ್‌ಯು ವಿದ್ಯಾರ್ಥಿ ನಾಪತ್ತೆ ಪ್ರಕರಣ : ಇಂಡಿಯಾ ಗೇಟ್ ಬಳಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

Update: 2016-11-06 20:44 IST

ಹೊಸದಿಲ್ಲಿ, ನ.6: ಇಲ್ಲಿನ ಜವಾಹರಲಾಲ್ ನೆಹರೂ ವಿವಿಯ ವಿದ್ಯಾರ್ಥಿ ನಜೀಬ್ ಅಹ್ಮದ್ ಎಂಬಾತ ಕಾಣೆಯಾಗಿರುವ ವಿಷಯದಲ್ಲಿ ವಿವಿಯ ವಿದ್ಯಾರ್ಥಿಗಳು ರವಿವಾರ ಇಂಡಿಯಾ ಗೇಟ್ ಬಳಿ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಇನ್ನೊಂದೆಡೆ, ವಿದ್ಯಾರ್ಥಿಗಳ ಪ್ರತಿಭಟನೆಯ ಹಿನ್ನೆಲೆಯಲ್ಲಿ ಪೊಲೀಸರು ಸೆ.144ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.

ಮೂರು ವಾರಗಳಿಂದ ವಿದ್ಯಾರ್ಥಿಯು ಕಾಣೆಯಾಗಿರುವ ಸಂಬಂಧ ಕೇಂದ್ರ ಗೃಹ ಸಚಿವಾಲಯದಿಂದ ವರದಿಯೊಂದನ್ನು ಕೇಳುವ ಭರವಸೆಯನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿ ನೀಡಿದ್ದಾರೆಂದು ಇದೇ ವೇಳೆ ದಿಲ್ಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಇಂದು ಹೇಳಿದ್ದಾರೆ.

ತಾನು ರಾಷ್ಟ್ರಪತಿಯವರನ್ನು ಭೇಟಿಯಾದ ವೇಳೆ ಅವರು ಈ ಭರವಸೆ ನೀಡಿದರೆಂದು ಕೇಜ್ರಿವಾಲ್ ಟ್ವೀಟಿಸಿದ್ದಾರೆ.

ಬಿಜೆಪಿ ಬೆಂಬಲಿತ ಎಬಿವಿಪಿಯ ಸದಸ್ಯರ ಜೊತೆ ಜಗಳ ನಡೆದ ಬಳಿಕ, ಅ.15ರಂದು ವಿವಿಯಿಂದ ಕಾಣೆಯಾಗಿರುವ ಅಹ್ಮದ್‌ನ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ತಾನು ಮುಖರ್ಜಿಯವರನ್ನು ವಿನಂತಿಸಿದೆನೆಂದು ಅವರು ತಿಳಿಸಿದ್ದಾರೆ.

ವಿದ್ಯಾರ್ಥಿಯ ನಾಪತ್ತೆ ಪ್ರಕರಣದಲ್ಲಿ ತನ್ನ ಕೈವಾಡವಿಲ್ಲವೆಂದು ಎಬಿವಿಪಿ ಹೇಳಿದೆ.

ರಾಷ್ಟ್ರಪತಿ ಎಲ್ಲ ನೆರವಿನ ಭರವಸೆ ನೀಡಿದ್ದಾರೆ ಹಾಗೂ ಗೃಹ ಸಚಿವಾಲಯ ಹಾಗೂ ಜೆಎನ್‌ಯುಗಳಿಂದ ವರದಿ ಕೇಳುವೆನೆಂದು ತಿಳಿಸಿದ್ದಾರೆಂದು ಕೇಜ್ರಿವಾಲ್ ಟ್ವೀಟಿಸಿದ್ದಾರೆ.

ನ.4ರಂದು ದಿಲ್ಲಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ವರ್ಮ, ಕಾಣೆಯಾಗಿರುವ ವಿದ್ಯಾರ್ಥಿಯ ಕುರಿತು ಸುಳಿವು ನೀಡುವವರಿಗೆ ನೀಡಲಾಗುವ ಬಹುಮಾನವನ್ನು ಇಮ್ಮಡಿಗೊಳಿಸಿ ರೂ. 2 ಲಕ್ಷಗಳಿಗೇರಿಸಿದ್ದಾರೆ.

ಈ ಆದೇಶವು ತಕ್ಷಣದಿಂದ ಅನ್ವಯವಾಗಲಿದ್ದು, ಪ್ರಕರಣ ಇತ್ಯರ್ಥವಾಗುವವರೆಗೆ ಅಥವಾ ವಿದ್ಯಾರ್ಥಿ ಪತ್ತೆಯಾಗುವವರೆಗೆ ಅಸ್ತಿತ್ವದಲ್ಲಿರುತ್ತದೆ.

ಕಾಣೆಯಾದ ವಿದ್ಯಾರ್ಥಿಯ ಪತ್ತೆಗೆ ಸರ್ವ ಪ್ರಯತ್ನ ನಡೆಸಲಾಗುವುದೆಂದು ಪೊಲೀಸ್ ಆಯುಕ್ತರ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News