ಸೋವಿಯತ್ ಕ್ರಾಂತಿ ಈಗ ನೆನಪು ಮಾತ್ರ

Update: 2016-11-06 18:43 GMT

ಕೇವಲ 30 ವರ್ಷಗಳ ಹಿಂದೆ, ಇಂತಹದೊಂದು ದೇಶವಿತ್ತೆಂದು ಈಗ ಊಹಿಸಲು ಸಾಧ್ಯವಿಲ್ಲ. ಈ ದೇಶದಲ್ಲಿ ಮೇಲುಕೀಳು ಇಲ್ಲದ ಹೊಸ ಸಮಾಜವೊಂದು ಸೃಷ್ಟಿಯಾಗಿತ್ತು. ಅಲ್ಲಿ ಬಡತನ, ಬೆಲೆ ಏರಿಕೆ, ನಿರುದ್ಯೋಗ, ಅಸಮಾನತೆ, ಅಶಾಂತಿ ಇರಲಿಲ್ಲವೆಂದು ಹೇಳಿದರೆ ಅದನ್ನು ಈಗ ಯಾರೂ ನಂಬುವುದಿಲ್ಲ. ಕಳೆದ ಮೂರು ದಶಕಗಳ ಕಾಲಾವಧಿಯಲ್ಲಿ ಜನಿಸಿದವರಿಗೆ, ಈ ದೇಶದ ಈ ವ್ಯವಸ್ಥೆಯ ಕಲ್ಪನೆಯಿಲ್ಲ. ಯಾಕೆಂದರೆ, ಅಂತಹ ವ್ಯವಸ್ಥೆಯೊಂದು ಅರಳಿ ನಿಂತಿದ್ದ ರಶ್ಯದ ಚಹರೆ ಈಗ ಸಂಪೂರ್ಣ ಬದಲಾಗಿದೆ.
ಹಿಂದೆ ಸೋವಿಯತ್ ರಶ್ಯ ಆಗಿದ್ದದ್ದು ಈಗ ಬರೀ ರಶ್ಯ ಆಗಿದೆ. ಹಿಂದೆ ಕೊಲೆ, ಸುಲಿಗೆ, ದರೋಡೆ, ವೇಶ್ಯಾವಾಟಿಕೆ ಇಲ್ಲದ ಈ ದೇಶದಲ್ಲಿ ಈಗ ಅವೆಲ್ಲವೂ ತಾಂಡವವಾಡುತ್ತಿದೆ. ಆದರೆ ಮನುಕುಲದ ಮುನ್ನಡೆಯ ದಿಕ್ಕಿನಲ್ಲಿ ಸೋವಿಯತ್ ರಶ್ಯದಲ್ಲಿ ನಡೆದ ಸಮಾಜವಾದಿ ಕ್ರಾಂತಿಯನ್ನು ಮರೆಯಲು ಸಾಧ್ಯವಿಲ್ಲ. ಸಮಾನತೆಯ ಈ ಪ್ರಯೋಗ ವಿಫಲವಾಗಿರಬಹುದು. ಆದರೆ, ಇಂತಹದೊಂದು ಸಮಾಜ ನಿರ್ಮಿಸಲು ಸಾಧ್ಯವಿದೆ ಎಂಬುದನ್ನು ಈ ಜಗತ್ತು ಕಣ್ಣಾರೆ ಕಂಡಿತು.
 ಜಗತ್ತಿನ ಎಲ್ಲಾ ಜನ ಹಣೆಬರಹದ ಮೇಲೆ ಭಾರ ಹಾಕಿ, ಗೂಟಕ್ಕೆ ಕಟ್ಟಿದ ದನಗಳಂತೆ ಇದ್ದರು. ಸಂಪತ್ತಿನ ಒಡೆತನ ಹೊಂದಿದವರು ಇಲ್ಲದವರನ್ನು ಶೋಷಣೆ ಮಾಡುವುದು ಸಾಮಾನ್ಯ ಸಂಗತಿಯಾಗಿತ್ತು. ಆದರೆ 1917ರಲ್ಲಿ ರಶ್ಯದಲ್ಲಿ ನಡೆದ ಕ್ರಾಂತಿ ಕಾರ್ಲ್‌ಮಾರ್ಕ್ಸ್ ಕಂಡ ಸಮಾಜ ಸ್ಥಾಪನೆಗೆ ನಾಂದಿ ಹಾಡಿತು. 1917ರ ನವೆಂಬರ್ 7ನೆ ತಾರೀಕು ಜಗತ್ತಿನ ಇತಿಹಾಸಕ್ಕೆ ಹೊಸ ಅಧ್ಯಾಯವೊಂದು ಸೇರ್ಪಡೆ ಆಯಿತು. ಮುಂದಿನ 70 ವರ್ಷ ಕಾಲ ಸಮಾನತೆಯ ಈ ರಥ ಅಬಾಧಿತವಾಗಿ ಚಲಿಸಿತು. ಆದರೆ 90ರ ದಶಕದ ಆರಂಭದಲ್ಲಿ ಈ ರಥದ ಗಾಲಿಗಳು ಕಳಚಿಬಿದ್ದು, ಈ ವ್ಯವಸ್ಥೆಯ ಬುಡಭದ್ರವಿಲ್ಲದ ಕಟ್ಟಡದಂತೆ ಕುಸಿಯಿತು.
ಮನುಷ್ಯರಿಂದ ಮನುಷ್ಯರ ಶೋಷಣೆಯಿಲ್ಲದ, ಮನುಷ್ಯ ಮನುಷ್ಯನನ್ನು ಪ್ರೀತಿಸುವ ಸಮಾಜದ ನಿರ್ಮಾಣ ಜಗತ್ತಿನ ಮಹಾಪುರುಷರೆಲ್ಲರ, ಕನಸಾಗಿದೆ. ಆದರೆ ಕನಸು ಕಾಣುವುದರಿಂದ ಮಾತ್ರ ಇಂತಹ ಸಮಾಜದ ನಿರ್ಮಾಣ ಆಗುವುದಿಲ್ಲ. ಅದಕ್ಕೆ ಜನ ಸಮೂಹದ ಕ್ರಾಂತಿಕಾರಿ ಪ್ರಯತ್ನ ಅಗತ್ಯವಿದೆಯೆಂದು ಸೋವಿಯತ್ ರಶ್ಯ ತೋರಿಸಿಕೊಟ್ಟಿತು. ಸೋವಿಯತ್ ಸಮಾಜವಾದಿ ಕ್ರಾಂತಿ ಒಂದು ದೇಶಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಇಡೀ ಜಗತ್ತಿನ ಮೇಲೆ ಪರಿಣಾಮ ಬೀರಿತು. ವಸಾಹಾತುಶಾಹಿಯ ಬಂಧನದ ಬೇಡಿಯನ್ನು ಕಳಚಿ ಸ್ವಾತಂತ್ರ್ಯಕ್ಕಾಗಿ ಹಂಬಲಿಸುತ್ತಿದ್ದ ಆಫ್ರಿಕಾ, ಏಶ್ಯ, ಅಮೆರಿಕ ಖಂಡಗಳ ಅನೇಕ ದೇಶಗಳ ಜನತೆಗೆ ಈ ಕ್ರಾಂತಿ ಸ್ಫೂರ್ತಿಯ ಸೆಲೆಯಾಯಿತು. ಮಾಸ್ಕೋದಲ್ಲಿ ಕೆಂಬಾವುಟ ಹಾರುತ್ತಿದ್ದಂತೆ ಪೂರ್ವ ಯುರೋಪ್‌ನ ದೇಶಗಳೆಲ್ಲ ಅದೇ ದಾರಿಯಲ್ಲಿ ಸಾಗಿದವು.
ಸಮಾಜವಾದಿ ಸೋವಿಯತ್ ರಶ್ಯದಲ್ಲಿ ಹೊಲಗಳು, ಕಾರ್ಖಾನೆಗಳು, ಅಂಗಡಿಗಳು ಸರಕಾರಿ ಒಡೆತನಕ್ಕೆ ಅಂದ್ರೆ ಸಾರ್ವಜನಿಕ ಒಡೆತನಕ್ಕೆ ಒಳಪಟ್ಟಿದ್ದವು. ಅಲ್ಲಿ ವಸ್ತುಗಳ ಉತ್ಪಾದನೆ ಲಾಭಕ್ಕಾಗಿ ಆಗುತ್ತಿರಲಿಲ್ಲ. ಜನರ ಅಗತ್ಯಗಳಿಗಾಗಿ, ಅಗತ್ಯ ಇರುವಷ್ಟು ಉತ್ಪಾದನೆಯಾಗುತಿತ್ತು. ಅಂತಲೇ ಪ್ರತಿ ಮಗುವಿನ ಹೊಣೆಯನ್ನು ಸರಕಾರವೇ ಹೊರುತಿತ್ತು. ತೊಟ್ಟಿಲಿನಿಂದ ಚಟ್ಟದವರೆಗೆ ವ್ಯಕ್ತಿಯೊಬ್ಬನ ಬದುಕಿಗೆ ಅಲ್ಲಿನ ಸರಕಾರ ಖಾತ್ರಿ ನೀಡುತಿತ್ತು. ಊಟ, ಬಟ್ಟೆಗೆ, ಭವಿಷ್ಯದ ಬದುಕಿಗೆ ಜನರು ಚಿಂತೆ ಮಾಡಬೇಕಿರಲಿಲ್ಲ. ಅಂತಲೇ ಅನೇಕ ದೇಶಗಳು ತಮ್ಮ ದೇಶದಲ್ಲೂ ಇದೇ ಮಾದರಿಯ ಕ್ರಾಂತಿಯನ್ನು ಮಾಡಿ, ಯಶಸ್ವಿಯಾದರು. ಸೋವಿಯತ್ ಕ್ರಾಂತಿಯ ಪರಿಣಾಮವಾಗಿ ಜಗತ್ತಿನಲ್ಲಿ ದುಡಿಯುವ ಜನರ ದನಿಗೆ ಬೆಲೆ ಬಂತು. ಕಾರ್ಮಿಕರಿಗಾಗಿ ಕಾನೂನುಗಳು ರಚನೆಗೊಂಡವು. ಬಂಡವಾಳಶಾಹಿ ಸರಕಾರಗಳು ಕೂಡ ಜನಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿದವು.
ಜಗತ್ತಿನ ಬಡ ದೇಶಗಳನ್ನು ಕೊಳ್ಳೆ ಹೊಡೆದು ಕೊಬ್ಬಿದ್ದ ಸಾಮ್ರಾಜ್ಯಶಾಹಿಗಳಿಗೆ ಸೋವಿಯತ್ ರಶ್ಯ ಸಿಂಹಸ್ವಪ್ನವಾಗಿತ್ತು. ಬಡ ರಾಷ್ಟ್ರಗಳ ಸ್ವಾತಂತ್ರ್ಯಕ್ಕೆ ಎಲ್ಲೇ ಗಂಡಾಂತರ ಬಂದರೂ ರಶ್ಯ ಅಲ್ಲಿ ರಕ್ಷಣೆಗೆ ಧಾವಿಸುತ್ತಿತ್ತು. ಅಮೆರಿಕದಿಂದ ಕೇವಲ 70 ಕಿ.ಮೀ. ಅಂತರದಲ್ಲಿ ಸಮಾಜವಾದಿ ಕ್ಯೂಬಾ ಸಾಮ್ರಾಜ್ಯಶಾಹಿಗೆ ಎದೆ ಸೆಟೆಸಿ ನಿಂತಿದ್ದರೆ, ಅದಕ್ಕೆ ಸೋವಿಯತ್ ರಶ್ಯ ಕಾರಣ. ಜರ್ಮನಿಯಲ್ಲಿ ನಾಝಿ ಸರ್ವಾಧಿಕಾರಿ ಹಿಟ್ಲರ್ ಯಹೂದಿಗಳನ್ನೆಲ್ಲ ಗ್ಯಾಸ್ ಚೇಂಬರ್‌ಗೆ ಹಾಕಿಸಿ ಕೊಲ್ಲುತ್ತಿರುವಾಗ ಬರ್ಲಿನ್‌ಗೆ ನುಗ್ಗಿದ ಸೋವಿಯತ್ ರಶ್ಯದ ಕೆಂಪು ಸೇನೆ ಫ್ಯಾಶಿಸ್ಟರ ಹುಟ್ಟಡಗಿಸಿತು. ಜಗತ್ತಿನ ಸರ್ವಾಧಿಕಾರಿಯಾಗುವ ಕನಸು ಕಾಣುತ್ತಿದ್ದ ಹಿಟ್ಲರ್ ಆತ್ಮಹತ್ಯೆ ಮಾಡಿಕೊಂಡು ಸತ್ತ. ಆಗ ಮಹಾತ್ಮಾ ಗಾಂಧಿ ಕೂಡ ರಶ್ಯವನ್ನು ಶ್ಲಾಘಿಸಿದ್ದರು.
 ಅಂತಹ ರಶ್ಯ ಈಗ ಇದ್ದಿದರೆ, ಜಗತ್ತು ಈಗ ಇರುವುದಕ್ಕಿಂತ ಭಿನ್ನವಾಗಿ ಇರುತಿತ್ತು. ತೈಲ ಸಂಪತ್ತಿನ ಲೂಟಿಗಾಗಿ ಇರಾಕ್, ಲಿಬಿಯಾಗಳಲ್ಲಿ ಅರಾಜಕತೆ ಉಂಟು ಮಾಡಲು ಅಮೆರಿಕಗೆ ಸಾಧ್ಯವಾಗುತ್ತಿರಲಿಲ್ಲ. ಭಾರತಕ್ಕೂ ಕೂಡ ತುಂಬಾ ಕಷ್ಟದ ಕಾಲದಲ್ಲಿ ರಶ್ಯ ನೆರವಿಗೆ ಬಂದಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದಾಗ, ಇಲ್ಲಿನ ಆರ್ಥಿಕತೆಯ ಅಡಿಪಾಯವಾದ ಸಾರ್ವಜನಿಕ ಉದ್ಯಮ ರಂಗವನ್ನು ಬಲಪಡಿಸಲು ಆಶ್ರಯವಾಗಿ ನಿಂತಿದ್ದು ರಶ್ಯ. ಅಂತಲೇ ಗಾಂಧಿ, ನೆಹರೂ, ಸುಬಾಶ್, ರವೀಂದ್ರನಾಥ ಟ್ಯಾಗೂರ್, ಭಗತ್ ಸಿಂಗ್, ಅಂಬೇಡ್ಕರ್ ಮುಂತಾದವರು ಒಂದಿಲ್ಲೊಂದು ಸಂದಭರ್ದಲ್ಲಿ ಸೋವಿಯತ್ ರಶ್ಯದ ಸಾಧನೆಯನ್ನು ಶ್ಲಾಘಿಸಿದ್ದಾರೆ. ಕಳೆದ ಶತಮಾನದ ಮೂರು ಮತ್ತು ನಾಲ್ಕನೆ ದಶಕದಲ್ಲಿ ಬಂಡವಾಳಶಾಹಿ ದೇಶಗಳಲ್ಲಿ ಅಸ್ಥಿರತೆ ತಾಂಡವವಾಡುತ್ತಿದ್ದರೆ, ಸಮಾಜವಾದಿ ಸೋವಿಯತ್ ರಶ್ಯದಲ್ಲಿ ಸಾಂಪತ್ತಿಕ ಸ್ಥಿತಿ ಸ್ಥಿರವಾಗಿತ್ತು. ಅಲ್ಲಿ ಹಸಿವಿನಿಂದ ಜನರು ನರಳುತ್ತಿರಲಿಲ್ಲ. ಬೆಲೆ ಏರಿಕೆ ಗೊತ್ತಿರಲಿಲ್ಲ. ಹೊಟ್ಟೆಗಾಗಿ ಮಹಿಳೆಯರು ಮೈಮಾರಿಕೊಳ್ಳುತ್ತಿರಲಿಲ್ಲ. ಅಂತಲೇ ಅನೇಕರು ರಶ್ಯವನ್ನು ಭೂಲೋಕದ ಸ್ವರ್ಗವೆಂದು ವರ್ಣಿಸಿದರೆ, ರಶ್ಯಗೆ ಹೋಗಿ ಬಂದ ಸಾಹಿತಿ ಬೀಚಿ, ರಶ್ಯ ಸ್ವರ್ಗವಲ್ಲ, ಯಾಕೆಂದರೆ ಅಲ್ಲಿ ರಂಬೆಯರು ಇಲ್ಲ ಎನ್ನುತ್ತಿದ್ದರು.

 
ಕನ್ನಡ ಸಾಹಿತಿಗಳಾದ ಕುವೆಂಪು, ಬೇಂದ್ರೆ, ಅಡಿಗ, ಅನಕೃ, ನಿರಂಜನ ಮತ್ತು ಕಟ್ಟೀಮನಿಯವರು ಸೋವಿಯತ್ ಕ್ರಾಂತಿಯಿಂದ ಪ್ರಭಾವಿತರಾಗಿದ್ದರು. ರಶ್ಯ ಪ್ರವಾಸ ಮಾಡಿ ಬಂದ ಕಟ್ಟೀಮನಿ, ಜಿ.ಎಸ್.ಶಿವರುದ್ರಪ್ಪ, ಬೀಚಿ, ಪಾಟೀಲ ಪುಟ್ಟಪ್ಪ, ಕು.ಸಿ.ಹರಿದಾಸ ಭಟ್ಟ ಹೀಗೆ ಅನೇಕ ಕನ್ನಡ ಲೇಖಕರು ತಾವು ಕಣ್ಣಾರೆ ಕಂಡ ಸುಂದರ ಸಮಾಜದ ಬಗ್ಗೆ ವರ್ಣಿಸಿದ್ದಾರೆ. ಅಲ್ಲಿ ಭಿಕ್ಷುಕರು ಇರದಿರುವುದನ್ನು ಕಂಡು ಅಚ್ಚರಿಯಾಯಿತು ಎಂದು ಕಟ್ಟೀಮನಿ ಬರೆದಿದ್ದಾರೆ. ಇಂತಹ ಸೋವಿಯತ್ ರಶ್ಯ ಒಮ್ಮಿಂದೊಮ್ಮೆಲೇ 90ರ ದಶಕದಲ್ಲಿ ಯಾಕೆ ಕುಸಿದು ಬಿತ್ತು. ನಮ್ಮಂತಹ ಒಂದು ತಲೆಮಾರಿನ ಯುವಕರಿಗೆ ಸ್ಫೂತಿಯಾಗಿದ್ದ ಸಿದ್ಧಾಂತವನ್ನು ಆಶ್ರಯಿಸಿದ್ದ ವ್ಯವಸ್ಥೆ ಹೀಗೇಕೆ ಛಿದ್ರವಾಯಿತು. ಇಂತಹ ವ್ಯವಸ್ಥೆಯ ಕನಸು ಕಾಣುತ್ತಿದ್ದ ಅನೇಕರಿಗೆ ಯಾಕೆ ಭ್ರಮನಿರಸನ ಉಂಟು ಮಾಡಿತು. ಪೊಲೀಸರಿಲ್ಲದ, ನ್ಯಾಯಾಲಯಗಳಿಲ್ಲದ, ಮಿಟಲಿಟರಿಯಿಲ್ಲದ ಮಾನವ ಸಮಾಜದ ನಿರ್ಮಾಣದ ದಿಕ್ಕಿನತ್ತ ಜಗತ್ತನ್ನು ಮುನ್ನಡೆಸಬೇಕಿದ್ದ ರಶ್ಯದ ಈ ಪ್ರಯೋಗ ಯಾಕೆ ವಿಫಲಗೊಂಡಿತು ಎಂದು ಇಂದಿಗೂ ಅರ್ಥವಾಗಿಲ್ಲ. ಈ ಅವಸಾನದ ಬಗ್ಗೆ ಬಂಡವಾಳಶಾಹಿ ಪರಿಣಿತರು ಏನೇ ಹೇಳಲಿ, ಆದರೆ ಈ ಬಗ್ಗೆ ನಮ್ಮ ಎಡಪಂಥೀಯ ಪಕ್ಷಗಳು ಯಾಕೆ ಸರಿಯಾಗಿ ವಿಶ್ಲೇಷಣೆ ಮಾಡಲಿಲ್ಲ. ಈ ವೈಫಲ್ಯದ ಬಗ್ಗೆ ಆಳವಾದ ಅಧ್ಯಯನ ನಡೆದಿಲ್ಲ ಎಂಬ ಪ್ರಶ್ನೆಗಳಿಗೆ ಇಂದಿಗೂ ಉತ್ತರ ದೊರೆತಿಲ್ಲ.ಜಗತ್ತಿನ ಮನುಷ್ಯರಿಗೆಲ್ಲ ಸೇರಬೇಕಾದ ಸಂಪತ್ತು, ನೆಲ, ಜಲ, ಅರಣ್ಯ ಮತ್ತು ಕೆಲವೇ ಬಂಡವಾಳಗಾರರ ಒಡಲಾಳವನ್ನು ಸೇರುತ್ತಿದೆ. ಅಭಿವೃದ್ಧಿ ಹೆಸರಿನಲ್ಲಿ ಅಮಾನವೀಯ ಶೋಷಣೆ ಮುಂದುವರಿದಿದೆ. ಬಂಡವಾಳಶಾಹಿ ಲಾಭಕೋರತನದಿಂದ ಪ್ರಕೃತಿಯ ಸಮತೋಲನವೂ ತಪ್ಪುತ್ತಿದೆ. ಉಳ್ಳವರು ತಮ್ಮ ಸಂಪತ್ತಿನ ರಕ್ಷಣೆಗಾಗಿ ಖಾಸಗಿ ಸೇನೆ ಕಟ್ಟಿಕೊಳ್ಳುತ್ತಿದ್ದಾರೆ. ನಿತ್ಯವೂ ಅಸ್ತಿತ್ವದಲ್ಲಿರುವ ಕಾನೂನಿನ ಉಲ್ಲಂಘನೆಯಾಗುತ್ತಿದೆ. ಪ್ರಜಾಪ್ರಭುತ್ವ ಲೊಳಲೊಟ್ಟೆಯಾಗಿದೆ. ಪ್ರತೀ ದೇಶದಲ್ಲೂ ಸರ್ವಾಧಿಕಾರಿಗಳು ಹುಟ್ಟಿಕೊಳ್ಳುತ್ತಿದ್ದಾರೆ. ಎಲ್ಲೆಡೆ ಸೇನೆಯ ವೈಭವೀಕರಣ ನಡೆದಿದೆ. ಜನ ಜಾತಿಮತದ ಹೆಸರಿನಲ್ಲಿ ಒಡೆದು ಹೋಗಿದ್ದಾರೆ. ಸಮತಾ ಸಮಾಜದ ನಿರ್ಮಾಣ ಮೃಗಜಲವಾಗಿದೆ. ಇಂತಹ ಪ್ರಕ್ಷುಬ್ಧ ಸನ್ನಿವೇಶದಲ್ಲಿ ಭಾರತ ಸೇರಿದಂತೆ ಜಗತ್ತಿನ ಎಲ್ಲಾ ಕಮ್ಯುನಿಸ್ಟ್ ಪಕ್ಷಗಳು ಸೋವಿಯತ್ ಕ್ರಾಂತಿಯ ಶತಮಾನೋತ್ಸವ ಆಚರಿಸುತ್ತಿವೆ. ಇದು ಬರೀ ಕಾಟಾಚಾರದ ಆಚರಣೆಯಾಗದೇ ಆತ್ಮಾವಲೋಕನದ ಗಂಭೀರ ಪ್ರಯತ್ನವಾದರೆ ಈ ಘೋರ ಅಂಧಕಾರದಲ್ಲಿ ಒಂದಿಷ್ಟು ಬೆಳಕಿನ ಕಿರಣಗಳು ಗೋಚರಿಸಬಹುದು.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News