×
Ad

ಡಿಸಿ, ವೈದ್ಯ, ಇಂಜಿನಿಯರ್ ಉಪಸ್ಥಿತಿಯಲ್ಲಿ ನಿವೃತ್ತಿಯಾದ ಪಿಯೋನ್ ಮಹಿಳೆ

Update: 2016-11-07 13:02 IST

►ಆದರೆ ವಿಶೇಷವೇನು ಗೊತ್ತೇ ? 

ನಿವೃತ್ತಿಯ ದಿನ ಸಾಮಾನ್ಯ ಎಲ್ಲಾ ಸಿಬ್ಬಂದಿಗಳಿಗೂ ಸ್ಮರಣೀಯವಾಗಿರುತ್ತದೆ. ಆದರೆ ಜಾರ್ಖಂಡ್‌ನ ರಾಜ್ರಪ್ಪದಲ್ಲಿ ಸೆಂಟ್ರಲ್ ಕೋಲ್‌ಫೀಲ್ಡ್ ಲಿಮಿಟೆಡ್ ಟೌನ್‌ಶಿಪ್‌ನಲ್ಲಿ ಪರಿಚಾರಿಕೆಯಾಗಿದ್ದ 60 ವರ್ಷ ಪ್ರಾಯದ ಸುಮಿತ್ರಾ ದೇವಿ ಬೀಳ್ಕೊಡುಗೆ ಸಮಾರಂಭ ನಿಜಕ್ಕೂ ವಿಶೇಷವಾಗಿತ್ತು.

ಸುಮಿತ್ರಾರ ಬೀಳ್ಕೊಡುಗೆ ಸಮಾರಂಭಕ್ಕೆ ಅವರ ಸಹ ಸಿಬ್ಬಂದಿ ಮತ್ತು ಟೌನ್‌ಶಿಪ್‌ನ ನಿವಾಸಿಗಳ ಜೊತೆಗೆ ಅವರ ಮೂವರು ಯಶಸ್ವೀ ಮಕ್ಕಳೂ ಇದ್ದರು. ಅವರಲ್ಲಿ ಒಬ್ಬರು ಜಿಲ್ಲಾಧಿಕಾರಿ, ಮತ್ತೊಬ್ಬರು ವೈದ್ಯರು ಮತ್ತು ಇನ್ನೊಬ್ಬರು ರೈಲ್ವೇ ಇಂಜಿನಿಯರ್! ಅದು ಜೀವನದ ಬಹಳಷ್ಟು ಅಡಚಣೆಗಳು ಮತ್ತು ಕಷ್ಟಗಳ ನಡುವೆ ಮೂವರು ಮಕ್ಕಳನ್ನು ಬೆಳೆಸಿರುವ ಹೆಮ್ಮೆಯ ಕ್ಷಣವಾಗಿತ್ತು ಆ ತಾಯಿಗೆ. ವೀರೇಂದ್ರ ಕುಮಾರ್ ರೈಲ್ವೇ ಇಂಜಿನಿಯರ್, ಧೀರೇಂದ್ರ ಕುಮಾರ್ ವೈದ್ಯರು ಮತ್ತು ಮಹೇಂದ್ರ ಕುಮಾರ್ ಬಿಹಾರದ ಸಿವಾನ್‌ನ ಜಿಲ್ಲಾಧಿಕಾರಿಯಾಗಿದ್ದಾರೆ. ತಮ್ಮ ಮಕ್ಕಳು ಉತ್ತಮ ಉದ್ಯೋಗವನ್ನು ಪಡೆದು ಜೀವನದಲ್ಲಿ ಒಂದು ಸ್ಥಾನವನ್ನು ಪಡೆದುಕೊಂಡು ತಮ್ಮನ್ನು ನೋಡಿಕೊಳ್ಳಲು ಸಿದ್ಧರಿದ್ದರೂ ಸುಮಿತ್ರಾ ದೇವಿ ಸಿಸಿಎಲ್‌ನಲ್ಲಿ ತಮ್ಮ ನಾಲ್ಕನೇ ದರ್ಜೆಯ ಹುದ್ದೆಯನ್ನು ಮುಂದುವರಿಸಿದ್ದರು. ಸ್ವಾವಲಂಬನೆಯಿಂದ ಜೀವಿಸಲು ಬಯಸಿದ ಮಹಿಳೆಯಾಗಿ ಅವರು 30 ವರ್ಷಗಳ ಹಿಂದೆ ಸಿಸಿಎಲ್ ಟೌನ್‌ಶಿಪ್‌ನಲ್ಲಿ ರಸ್ತೆಗಳನ್ನು ಸ್ವಚ್ಛ ಮಾಡುವ ಕೆಲಸಕ್ಕೆ ಸೇರಿದ್ದರು. ಈ ಕೆಲಸವನ್ನು ಕೊನೆಯವರೆಗೂ ಮಾಡಿ ಹೆಮ್ಮೆಯ ಮಹಿಳೆಯಾಗಿ ನಿವೃತ್ತಿ ಹೊಂದಲು ಅವರು ಬಯಸಿದ್ದರು.

ಬೀಳ್ಕೊಡುಗೆ ಸಮಾರಂಭದಲ್ಲಿ ಸುಮಿತ್ರಾರ ಮಕ್ಕಳು ತಮ್ಮ ತಾಯಿಯ ಬಗ್ಗೆ ಬಹಳ ಹೆಮ್ಮೆಯಿಂದ ಮಾತನಾಡಿದ್ದಾರೆ. ಹೇಗೆ ಅವರು ಮಕ್ಕಳನ್ನು ಬೆಳೆಸಲು ತ್ಯಾಗ ಮಾಡಿದ್ದರು ಎನ್ನುವ ನೆನಪುಗಳನ್ನು ಹಂಚಿಕೊಂಡಿದ್ದಾರೆ. “ಜೀವನದಲ್ಲಿ ಯಾವ ಕೆಲಸವೂ ಕಷ್ಟವಲ್ಲ. ಪ್ರಾಮಾಣಿಕವಾಗಿ ಕಠಿಣ ಕೆಲಸ ಮಾಡಿದರೆ ಎಲ್ಲವೂ ಸಾಧ್ಯವಾಗುತ್ತದೆ. ನನ್ನ ತಾಯಿ ಮತ್ತು ನಾವು ಜೀವನದಲ್ಲಿ ಕಠಿಣ ಸಮಯವನ್ನು ಕಂಡಿದ್ದೇವೆ. ಹಾಗಿದ್ದರೂ ಆಕೆ ಎಂದೂ ನಮ್ಮನ್ನು ಹತಾಶರಾಗುವುದು ಅಥವಾ ಎದೆಗುಂದದೆ ಇರುವಂತೆ ಬೆಳೆಸಿದ್ದಾರೆ. ಅವರ ಕಠಿಣ ಶ್ರಮ ಮತ್ತು ನಿರೀಕ್ಷೆಗೆ ತಕ್ಕಂತೆ ನಾವು ಮುಂದೆ ಬಂದಿದ್ದೇವೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ” ಎಂದು ಮಹೇಂದ್ರ ಕುಮಾರ್ ಸಮಾರಂಭದಲ್ಲಿ ಹೇಳಿದ್ದಾರೆ.

ಮಕ್ಕಳ ಪ್ರೀತಿಯ ಮತ್ತು ಕೃತಜ್ಞತೆ ಹೇಳಿದ ಮಾತುಗಳನ್ನು ಕೇಳಿದ ಸುಮಿತ್ರಾ ದೇವಿಗೆ ಸಂತೋಷದ ಕಣ್ಣೀರನ್ನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಹೆಮ್ಮೆಯಿಂದ ತಾಯಿ ತಮ್ಮ ಮಕ್ಕಳನ್ನು ಟೌನ್‌ಶಿಪ್‌ನ ಹಿರಿಯ ಅಧಿಕಾರಿಗಳಿಗೆ ಪರಿಚಯಿಸಿ, “ಸಾಹೇಬರೇ, 30 ವರ್ಷಗಳಿಂದ ನಾನು ಈ ಕಾಲನಿಯ ರಸ್ತೆಗಳನ್ನು ಸ್ವಚ್ಛ ಮಾಡಿದ್ದೇನೆ. ಈಗ ನನ್ನ ಮಕ್ಕಳು ನಿಮ್ಮ ಹಾಗೇ ಸಾಹೇಬರಾಗಿದ್ದಾರೆ” ಎಂದು ಭಾವುಕರಾಗಿ ನುಡಿದಿದ್ದಾರೆ.

ಕೃಪೆ: http://www.thebetterindia.com/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News