ರೋಹಿತ್ ಸಾಲಿಗೆ ನಜೀಬ್?
ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ದಲಿತ ವಿದ್ಯಾರ್ಥಿಯೋರ್ವ ಸಂಘಪರಿವಾರದ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ, ಅಂದಿನ ಕೇಂದ್ರ ಸಚಿವೆ ಸ್ಮತಿ ಇರಾನಿ ಮಾಡಿರುವ ಭಾಷಣ ಇನ್ನೂ ತನ್ನ ತಾಜಾತನವನ್ನು ಕಳೆದುಕೊಂಡಿಲ್ಲ. ರೋಹಿತ್ ವೇಮುಲಾನನ್ನು ‘‘ಮೇರಾ ಬಚ್ಚಾ’’ ಎಂದು ಕರೆದು ಮೊಸಳೆ ಕಣ್ಣೀರು ಸುರಿಸಿದರು. ಆತನದು ಆತ್ಮಹತ್ಯೆ ಎನ್ನುವುದನ್ನು ಪರೋಕ್ಷವಾಗಿ ಒತ್ತಿ ಹೇಳಿ, ಆತನ ಪರವಾಗಿ ಮಾತನಾಡುವವರನ್ನು ಬಾಯಿ ಮುಚ್ಚಿಸಲು ಯತ್ನಿಸಿದರು. ಆತನ ಶವದ ಹೆಸರಿನಲ್ಲಿ ವಿರೋಧ ಪಕ್ಷಗಳು ರಾಜಕೀಯ ಮಾಡುತ್ತಿದೆ ಎಂದು ಗರ್ಜಿಸಿದರು. ಅವರು ಅಂದು ಸದನದಲ್ಲಿ ಯಾವ ಮಾತುಗಳನ್ನಾಡಿದರೋ ಅದೇ ಮಾತುಗಳು ಮುಂದೆ ತನಿಖಾ ಸಮಿತಿಯ ವರದಿಯಾಗಿ ಹೊರ ಬಿತ್ತು. ರೋಹಿತ್ ವೇಮುಲಾ ಹತಾಶೆಯಿಂದ ಆತ್ಮಹತ್ಯೆ ಮಾಡಿಕೊಂಡ ಎಂದು ಬರೆದು ಎಲ್ಲ ರಾಜಕಾರಣಿಗಳನ್ನು ನಿರ್ದೋಷಿಗಳೆಂದು ಘೋಷಿಸಿತು. ಆದರೆ ಆತನನ್ನು ಹತಾಶೆಗೆ ತಳ್ಳಿದವರು ಯಾರು ಎನ್ನುವುದನ್ನು ಮರೆ ಮಾಚಿತು. ಒಟ್ಟಿನಲ್ಲಿ, ಸರಕಾರದ ಯಾವ ಪಾತ್ರವೂ ಇಲ್ಲ, ಒಂದು ವೇಳೆ ಆತನದು ಕೊಲೆಯಾಗಿದ್ದಿದ್ದರೆ ಅಪರಾಧಿಗಳನ್ನು ಬಂಧಿಸಿ ನ್ಯಾಯ ನೀಡಬಹುದಿತ್ತು ಎಂಬರ್ಥದಲ್ಲಿ ಮಾತನಾಡಿತು. ಒಬ್ಬ ಪ್ರತಿಭಾವಂತ ವಿದ್ಯಾರ್ಥಿಯ ಬದುಕನ್ನು ನರಕ ಮಾಡಿ, ಆತನನ್ನು ಆತ್ಮಹತ್ಯೆಗೆ ತಳ್ಳುವುದು ಕೊಲೆ ಎನ್ನುವುದನ್ನು ಅರಿತುಕೊಳ್ಳಲಾಗದಷ್ಟು ಸಂವೇದನೆಗಳನ್ನು ಕಳೆದು ಕೊಂಡ ಜನರು ನೀಡಿದ ತನಿಖಾವರದಿ ಅದಾಗಿತ್ತು. ಇರಲಿ. ರೋಹಿತ್ ವೇಮುಲಾ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಆರೋಪಿಗಳನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ಆದುದರಿಂದ ಅವರಿಗೆ ಶಿಕ್ಷೆ ನೀಡುವುದಕ್ಕೂ ಸರಕಾರಕ್ಕೆ ಸಾಧ್ಯವಾಗಿಲ್ಲ. ಎಬಿವಿಪಿ ಸಂಘಟನೆಗಳು, ಅಲ್ಲಿನ ಸಂಸದ, ಕೇಂದ್ರ ಸಚಿವ, ಕುಲಪತಿ ಮೊದಲಾದವರೆಲ್ಲ ಮುಗ್ಧರು. ರೋಹಿತ್ ವೇಮುಲಾ ಬದುಕಿನ ಮೇಲೆ ವಿರಕ್ತಿ ಮೂಡಿ ಆತ್ಮಹತ್ಯೆ ಮಾಡಿಕೊಂಡ ಎಂದೇ ಭಾವಿಸೋಣ. ಆದರೆ ಇದೀಗ ಹೊಸದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಿಂದ ಓರ್ವ ವಿದ್ಯಾರ್ಥಿ ನಿಗೂಢವಾಗಿ ನಾಪತ್ತೆಯಾಗಿ 25 ದಿನಗಳಾಗಿವೆ. ಆತನ ತಾಯಿ, ‘ನನ್ನ ಮಗನನ್ನು ಒಮ್ಮೆ ನನಗೆ ಜೀವಂತ ತೋರಿಸಿ’ ಎಂದು ಕಂಡಕಂಡವರಲ್ಲಿ ಬೇಡಿಕೊಳ್ಳುತ್ತಿದ್ದಾರೆ. ಅಂತಿಮವಾಗಿ ಆಕೆ ಗೃಹ ಸಚಿವರನ್ನೂ ಭೇಟಿ ಮಾಡಿದ್ದಾರೆ. ‘‘ರೋಹಿತ್ ನನ್ನ ಮಗನಂತೆ’’ ಎಂದು ಸಂಸತ್ತಿನಲ್ಲಿ ನಾಟಕವಾಡಿದ ಸ್ಮತಿ ಇರಾನಿ ಈವರೆಗೆ ತಾಯಿಗೆ ಯಾವುದೇ ಭರವಸೆಯನ್ನು ನೀಡಿಲ್ಲ. ಒಬ್ಬ ವಿದ್ಯಾರ್ಥಿ ಏಕಾಏಕಿ ವಿಶ್ವವಿದ್ಯಾನಿಲಯದಿಂದ ನಾಪತ್ತೆಯಾಗಿದ್ದಾನೆ, ಸರಕಾರಕ್ಕೆ ಅದು ಗಂಭೀರ ವಿಷಯವೆನಿಸಿಲ್ಲ. ಅದರ ಕುರಿತಂತೆ ಜಾಣ ಕಿವುಡು ಮತ್ತು ಕುರುಡುತನವನ್ನು ನಟಿಸುತ್ತಾ ಬಂದಿದೆ. ಈ ವಿದ್ಯಾರ್ಥಿ ಇದ್ದಕ್ಕಿದ್ದಂತೆಯೇ ನಾಪತ್ತೆಯಾಗಿದ್ದರೆ ಆತ ಐಸಿಸ್ ಉಗ್ರ ಸಂಘಟನೆಗೆ ಸೇರಿದ್ದಾನೆ ಎಂದಾದರೂ ಹೇಳಿ ಪ್ರಕರಣವನ್ನು ಮುಚ್ಚಿ ಬಿಡುವ ಅವಕಾಶ ಸರಕಾರಕ್ಕಿತ್ತು. ಯಾಕೆಂದರೆ ಹುಡುಗ ಮುಸ್ಲಿಮ್ ಸಮುದಾಯಕ್ಕೆ ಸೇರಿದವನಾಗಿದ್ದಾನೆ. ಆದರೆ ಈ ಮಧ್ಯೆ ವಿಶ್ವವಿದ್ಯಾನಿಲಯದಲ್ಲಿ ಒಂದು ಘಟನೆ ನಡೆದಿದೆ. ನಜೀಬ್ ಎನ್ನುವ ಹುಡುಗನಿಗೆ ಅಲ್ಲಿರುವ ಎಬಿವಿಪಿ ಸಂಘಟನೆಯ ಕಾರ್ಯಕರ್ತರು ಬರ್ಬರವಾಗಿ ಥಳಿಸಿರುವುದು, ಗಾಯಗೊಂಡು ಅವನ ಮೂಗಿನಿಂದ ರಕ್ತ ಸುರಿಯುತ್ತಿರುವುದನ್ನು ಅಲ್ಲಿನ ವಿದ್ಯಾರ್ಥಿಯೊಬ್ಬ ನೋಡಿದ್ದಾನೆ. ಎಬಿವಿಪಿ ವಿದ್ಯಾರ್ಥಿಗಳು ಮತ್ತು ಈ ನಜೀಬ್ ಎಂಬ ವಿದ್ಯಾರ್ಥಿನಡುವೆ ಸಂಘರ್ಷ ನಡೆದಿರುವುದಕ್ಕೆ ಸಾಕ್ಷಿಯೊಬ್ಬನಿದ್ದಾನೆ. ಇದಾದ ದಿನದಿಂದ ವಿದ್ಯಾರ್ಥಿ ನಾಪತ್ತೆಯಾಗಿದ್ದಾನೆ. ಈ ಕಾರಣದಿಂದಲೇ ನಜೀಬ್‌ನ ಕೊಲೆ ನಡೆದಿದೆ ಎಂದು ಅನುಮಾನಿಸಲಾಗಿದೆ. ನಜೀಬ್ ಎಲ್ಲಾದರೂ ಪರಾರಿಯಾಗಿದ್ದರೆ, ಆತ್ಮಹತ್ಯೆಮಾಡಿಕೊಂಡಿದ್ದರೆ ಇಷ್ಟು ಹೊತ್ತಿಗೆ ಅದರ ಸುಳಿವು ಸಿಗಲೇಬೇಕಾಗಿತ್ತು. ಆತ ನಾಪತ್ತೆಯಾಗುವಂತಹ ಯಾವ ಕಾರಣವೂ ಇದ್ದಿರಲಿಲ್ಲ ಎನ್ನುವುದು ಆತನ ಕುಟುಂಬದ ಅನಿಸಿಕೆಯಾಗಿದೆ. ಹೀಗಿರುವಾಗ ನಜೀಬ್‌ಗೆ ಅದೇನೋ ಸಂಭವಿಸಿದೆ ಎನ್ನುವುದು ಸ್ಪಷ್ಟ. ಆದರೆ ಏನು ಸಂಭವಿಸಿದೆ ಎನ್ನುವುದು ಪೊಲೀಸರಿಗಾಗಲಿ ಅಥವಾ ಇನ್ನಿತರ ಯಾವುದೇ ತನಿಖಾ ಸಂಸ್ಥೆಗಳಿಗಾಗಲಿ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಯಾಕೆ ಸಾಧ್ಯವಾಗಿಲ್ಲ ಎನ್ನುವುದನ್ನು ನಾವು ಸುಲಭವಾಗಿಯೇ ಗ್ರಹಿಸಬಹುದಾಗಿದೆ. ತನಿಖಾ ಸಂಸ್ಥೆಗಳು ಅನುಮಾನಿಸಬಹುದಾದ ಆರೋಪಿಗಳ ಪಟ್ಟಿಯಲ್ಲಿ ಮೊದಲ ಸಾಲಲ್ಲಿರುವವರು ಎಬಿವಿಪಿ ಮುಖಂಡರು. ಈ ಎಬಿವಿಪಿ ಮುಖಂಡರಿಗೂ ರಾಜಕೀಯಕ್ಕೂ ಇರುವ ಸದ್ಯದ ಸಂಬಂಧ ಎಷ್ಟು ಆಪ್ತವಾದುದು ಎನ್ನುವುದನ್ನು ನಾವು ರೋಹಿತ್ ಪ್ರಕರಣ ಮತ್ತು ಕನ್ಹಯ್ಯಿ ಪ್ರಕರಣದಲ್ಲಿ ಕಂಡಿದ್ದೇವೆ, ಉಂಡಿದ್ದೇವೆ. ರೋಹಿತ್ ಬಲಿಪಶುವಾಗುವುದಕ್ಕೆ ಮುಖ್ಯ ಕಾರಣ ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿರುವ ಎಬಿವಿಪಿ ಸಂಘಟನೆಯ ನಡುವಿನ ತಿಕ್ಕಾಟವೇ ಆಗಿತ್ತು. ಕನ್ಹಯ್ಯಾ ಪ್ರಕರಣದಲ್ಲಿ ಆತನ ಮೇಲೆ ದೇಶದ್ರೋಹದ ಪ್ರಕರಣವನ್ನು ದಾಖಲಿಸಿದ್ದರ ಹಿಂದೆಯೇ ಆ ವಿಶ್ವವಿದ್ಯಾನಿಲಯದ ಎಬಿವಿಪಿ ಮುಖಂಡರ ಕೈವಾಡವಿದೆ. ಮತ್ತು ಕನ್ಹಯ್ಯಾ ವಿರುದ್ಧ ಇಡೀ ಸರಕಾರವೇ ನಿಂತು ಕೆಲಸ ಮಾಡಿತ್ತು. ಎಬಿವಿಪಿಯನ್ನು ದೇಶಪ್ರೇಮಿಗಳು ಎಂದು ಬಿಂಬಿಸಲು ಸಕಲ ಪ್ರಯತ್ನವೂ ನಡೆಯಿತು. ನ್ಯಾಯಾಲಯದ ಆವರಣದಲ್ಲಿ ಕನ್ಹಯ್ಯಾನನ್ನು ಕೊಲ್ಲುವ ಯತ್ನವೂ ನಡೆಯಿತು. ಹೀಗಿರುವಾಗ, ನಜೀಬ್ ಪ್ರಕರಣದಲ್ಲಿ ಪೊಲೀಸರು ಎಬಿವಿಪಿ ಮುಖಂಡರನ್ನು ಬಂಧಿಸಿ ತನಿಖೆಗೊಳಪಡಿಸುವುದಾದರೂ ಹೇಗೆ?
ಈಗಾಗಲೇ ನಜೀಬ್ ನಾಪತ್ತೆಗೆ ಸಂಬಂಧಿಸಿದಂತೆ ಜೆಎನ್‌ಯು ಮತ್ತೆ ದೇಶಾದ್ಯಂತ ಸುದ್ದಿಯಾಗುತ್ತಿದೆ. ವಿದ್ಯಾರ್ಥಿಗಳು ಮತ್ತೆ ದಂಗೆಯೆದ್ದಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಒಬ್ಬ ತಾಯಿ, ತನ್ನ ಮಗ ಜೀವಿಸಿದ್ದಾನೆಯೋ ಇಲ್ಲವೋ ಎನ್ನುವುದು ತಿಳಿಯಲಾಗದೆ ಒದ್ದಾಡುತ್ತಿದ್ದಾಳೆ. ಕಂಡ ಕಂಡ ಅಧಿಕಾರಿಗಳ ಮನೆ ಬಾಗಿಲು ತಟ್ಟಿ ಕಣ್ಣೀರು ಹಾಕುತ್ತಿದ್ದಾಳೆ. ವಿಶ್ವವಿದ್ಯಾನಿಲಯದಲ್ಲಿ ರಾಜಕೀಯವೇನೋ ಸರಿ. ಆದರೆ ವಿದ್ಯಾರ್ಥಿಗಳ ಹೆಸರಿನಲ್ಲಿ ಕೊಲೆಗಾರರು ವಿಶ್ವವಿದ್ಯಾನಿಲಯದೊಳಗೆ ಓಡಾಡುತ್ತಿರುವುದು ಆತಂಕಕಾರಿ ವಿಷಯವಾಗಿದೆ. ರೋಹಿತ್ ವೇಮುಲಾನನ್ನು ಪರೋಕ್ಷವಾಗಿ ಕೊಲೆ ಮಾಡಿದವರು, ಇದೀಗ ನಜೀಬ್ ಎನ್ನುವ ಅಲ್ಪಸಂಖ್ಯಾತ ವಿದ್ಯಾರ್ಥಿಯನ್ನು ನೇರವಾಗಿಯೇ ಮುಗಿಸಿದ್ದಾರೆ. ಆದರೆ ಸರಕಾರ ಮಾತ್ರ ಏನೂ ನಡೆದಿಲ್ಲ ಎಂಬಂತೆ ವರ್ತಿಸುತ್ತಿದೆ. ನಜೀಬ್‌ನ ಕೊಲೆಗಾರರನ್ನು ಪತ್ತೆ ಮಾಡದೇ ಇದ್ದರೂ ಬೇಡ, ಕನಿಷ್ಠ ಆತ ಬದುಕಿದ್ದಾನೆಯೋ ಇಲ್ಲವೋ ಎನ್ನುವುದನ್ನಾದರೂ ಆತನ ತಾಯಿಗೆ ಸ್ಪಷ್ಟ ಪಡಿಸುವುದು ಸರಕಾರದ ಕರ್ತವ್ಯವಾಗಿದೆ.