ಟ್ವಿಟ್ಟರ್‌ನಲ್ಲಿ ಪ್ರಧಾನಿ ಮೋದಿ ಕಳಕೊಂಡಿದ್ದು ಎಷ್ಟು ಅಭಿಮಾನಿಗಳನ್ನು ಗೊತ್ತೇ?

Update: 2016-11-11 05:25 GMT

ಹೊಸದಿಲ್ಲಿ, ನ.11: ದೇಶದಲ್ಲಿ 500 ಹಾಗೂ 1000 ರೂಪಾಯಿ ನೋಟುಗಳನ್ನು ತಕ್ಷಣ ಚಲಾವಣೆಯಿಂದ ಹಿಂತೆಗೆಯುವ ನಿರ್ಧಾರವನ್ನು ಮಂಗಳವಾರ ಪ್ರಕಟಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ನಿರ್ಧಾರ ಸೆರಗಿನ ಕೆಂಡದಂತಾಗಿದೆ. ಈ ನಿರ್ಧಾರವನ್ನು ಮೋದಿ ಪ್ರಕಟಿಸಿದ ಒಂದೇ ದಿನದಲ್ಲಿ ಮೂರು ಲಕ್ಷ ಮಂದಿ ಟ್ವಿಟ್ಟರ್ ಫಾಲೋವರ್‌ಗಳನ್ನು ಮೋದಿ ಕಳೆದುಕೊಂಡಿರುವುದು ಜನಾಕ್ರೋಶಕ್ಕೆ ಹಿಡಿದ ಕನ್ನಡಿಯಾಗಿದೆ.

ಈ ನಿರ್ಧಾರ ಪ್ರಕಟಿಸಿದ ಮರುದಿನ ಅಂದರೆ ನವೆಂಬರ್ 9ರಂದು ಮೋದಿ 3.13 ಲಕ್ಷ ಟ್ವಿಟ್ಟರ್ ಫಾಲೋವರ್‌ಗಳನ್ನು ಕಳೆದುಕೊಂಡಿದ್ದಾರೆ ಎಂದು ಟ್ವಿಟ್ಟರ್ ವಿಶ್ಲೇಷಣಾ ಸೇವಾ ವಿಭಾಗದ ಅಂಕಿ ಅಂಶಗಳಿಂದ ತಿಳಿದುಬಂದಿದೆ.

ಮತ್ತೊಂದು ಸಾಮಾಜಿಕ ಜಾಲತಾಣಗಳ ವಿಶ್ಲೇಷಣಾ ಸಂಸ್ಥೆಯಾದ ಟ್ರ್ಯಾಕಲಿಟಿಕ್ಸ್ ಅಂಕಿ ಅಂಶಗಳ ಪ್ರಕಾರ ಮೋದಿ 3.18 ಲಕ್ಷ ಟ್ವಿಟ್ಟರ್ ಅನುಯಾಯಿಗಳನ್ನು ಕಳೆದುಕೊಂಡಿದ್ದಾರೆ.

ಒಟ್ಟು 23.8 ದಶಲಕ್ಷ ಟ್ವಿಟ್ಟರ್ ಅನುಯಾಯಿಗಳನ್ನು ಹೊಂದಿರುವ ಮೋದಿ ದೇಶದಲ್ಲೇ ಅತ್ಯಧಿಕ ಟ್ವಿಟ್ಟರ್ ಅಭಿಮಾನಿಗಳನ್ನು ಹೊಂದಿದ್ದಾರೆ. 23.3 ದಶಲಕ್ಷ ಅನುಯಾಯಿಗಳನ್ನು ಹೊಂದಿರುವ ಅಮಿತಾಬ್ ಬಚ್ಚನ್ 2ನೇ ಸ್ಥಾನದಲ್ಲಿದ್ದಾರೆ. ಏರುಹಾದಿಯಲ್ಲೇ ಸಾಗಿರುವ ಮೋದಿ ಅಭಿಮಾನಿಗಳ ಸಂಖ್ಯೆ ನವೆಂಬರ್‌ನಲ್ಲಿ ದಿನಕ್ಕೆ 25 ಸಾವಿರದಂತೆ ಹೆಚ್ಚುತ್ತಿತ್ತು. ಮೋದಿ ಹೊಸ ಘೋಷಣೆ ಮಾಡಿದ ನವೆಂಬರ್ 8ರಂದು ಇದು 50 ಸಾವಿರ ತಲುಪಿತ್ತು. ಆದರೆ ಮರುದಿನ ದಿಢೀರ್ ಕುಸಿತ ಕಂಡಿದೆ.

ಸಾಮಾನ್ಯವಾಗಿ ಟ್ವಿಟ್ಟರ್ ನಕಲಿ ಖಾತೆಗಳನ್ನು ರದ್ದುಮಾಡುವ ಸಂದರ್ಭದಲ್ಲಷ್ಟೇ ಇಂಥ ದಿಢೀರ್ ಕುಸಿತ ಕಾಣುತ್ತದೆ. ಆದರೆ ಇದೇ ಅವಧಿಯಲ್ಲಿ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿಯವರ ಅನುಯಾಯಿಗಳ ಸಂಖ್ಯೆ ಹೆಚ್ಚುತ್ತಿದೆ.

courtesy : catchnews.com 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News