ಬ್ರೆಝಿಲ್‌ಗೆ ಜಯ, ನೇಮರ್ 50ನೆ ಗೋಲು

Update: 2016-11-11 17:57 GMT

 ರಿಯೋ ಡಿಜನೈರೊ, ನ.11: 2018ರ ಫುಟ್ಬಾಲ್ ವಿಶ್ವಕಪ್‌ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಬ್ರೆಝಿಲ್ ತಂಡ ಸಾಂಪ್ರದಾಯಿಕ ಎದುರಾಳಿ ಅರ್ಜೆಂಟೀನ ವಿರುದ್ಧ 3-0 ಗೋಲುಗಳ ಅಂತರದಿಂದ ಜಯ ಸಾಧಿಸಿದ್ದು, ನೇಮರ್ 50ನೆ ಅಂತಾರಾಷ್ಟ್ರೀಯ ಗೋಲು ಬಾರಿಸಿದರು.

ಬಾರ್ಸಿಲೋನ ಕ್ಲಬ್‌ನ ಸೂಪರ್‌ಸ್ಟಾರ್ ನೇಮರ್ 74ನೆ ಪಂದ್ಯದಲ್ಲಿ 50ನೆ ಗೋಲು ಬಾರಿಸಿದರು. ಬ್ರೆಝಿಲ್ ನೂತನ ಕೋಚ್ ಟೇಟ್ ಮಾರ್ಗದರ್ಶನದಲ್ಲಿ ಸತತ ಐದನೆ ಜಯ ದಾಖಲಿಸಿದೆೆ. ಈ ಗೆಲುವಿನ ಮೂಲಕ ಬ್ರೆಝಿಲ್ ದಕ್ಷಿಣ ಅಮೆರಿಕ ತಂಡಗಳ ಅರ್ಹತಾ ಸುತ್ತಿನ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. 10 ತಂಡಗಳ ಪೈಕಿ 11 ರೌಂಡ್ ರಾಬಿನ್ ಸ್ಪರ್ಧೆಗಳಲ್ಲಿ ಭಾಗವಹಿಸಿರುವ ಬ್ರೆಝಿಲ್ 24 ಅಂಕ ಗಳಿಸಿದ್ದಾರೆ.

 ಬ್ರೆಝಿಲ್‌ಗೆ ಶರಣಾಗಿರುವ ಅರ್ಜೆಂಟೀನ ತೀವ್ರ ಸಂಕಷ್ಟದಲ್ಲಿದೆ. ಅದು ಕಳೆದ ನಾಲ್ಕು ಪಂದ್ಯಗಳಲ್ಲಿ ಕೇವಲ 2 ಅಂಕ ಗಳಿಸಿದೆ. ಒಟ್ಟಾರೆ 6ನೆ ಸ್ಥಾನದಲ್ಲಿರುವ ಅರ್ಜೆಂಟೀನ ರಶ್ಯದಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಅರ್ಹತೆ ಕಳೆದುಕೊಳ್ಳುವ ಭೀತಿಯಲ್ಲಿದೆ.

 ಫಿಲಿಪ್ ಕುಟಿನ್ಹೊ, ಪೌಲಿನ್ಹೊ ಹಾಗೂ ನೇಮರ್ ತಲಾ ಒಂದು ಗೋಲು ಬಾರಿಸಿ ಬ್ರೆಝಿಲ್‌ಗೆ ಗೆಲುವು ತಂದುಕೊಟ್ಟರು. ಕುಟಿನ್ಹೊ ಹಾಗೂ ನೇಮರ್ ಅದ್ಭುತ ಗೋಲು ಬಾರಿಸಿ ಬ್ರೆಝಿಲ್‌ಗೆ ಮೊದಲಾರ್ಧದಲ್ಲಿ 2-0 ಮುನ್ನಡೆ ಒದಗಿಸಿಕೊಟ್ಟರು. ಅಂತಿಮ ಕ್ಷಣದಲ್ಲಿ ಗೋಲು ಬಾರಿಸಿದ ಪೌಲಿನ್ಹೊ ತಂಡಕ್ಕೆ 3-0 ಗೆಲುವು ಸಾಧಿಸಲು ನೆರವಾದರು.

24ರ ಪ್ರಾಯದ ನೇಮರ್ ಗೋಲು ಸ್ಕೋರ್‌ನಲ್ಲಿ ಅರ್ಧಶತಕ ಪೂರೈಸಿದರು. ರೊಮಾರಿಯೊ(55 ಗೋಲು) ದಾಖಲೆ ಮುರಿಯುವತ್ತ ಹೆಜ್ಜೆ ಇಟ್ಟಿದ್ದಾರೆ. ಪೀಲೆ ಅವರ ಸಾರ್ವಕಾಲಿಕ ಶ್ರೇಷ್ಠ ಗೋಲು ದಾಖಲೆ(91 ಪಂದ್ಯಗಳು, 77 ಗೋಲು)ಯನ್ನು ಮುರಿಯುವ ಅವಕಾಶವೂ ನೇಮರ್ ಮುಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News