ಟಿಪ್ಪು ಕನಸುಗಳನ್ನು ಬಿತ್ತೋಣ
‘‘ಪೊಲೀಸ್ ವ್ಯವಸ್ಥೆ ಸಹಕರಿಸದೇ ಈ ದೇಶದಲ್ಲಿ ಒಂದೇ ಒಂದು ಗಲಭೆ ನಡೆಯಲು ಸಾಧ್ಯವಿಲ್ಲ’’ ಹಿರಿಯ ರಾಜಕೀಯ ನಾಯಕರೊಬ್ಬರು ಹೇಳಿದ ಮಾತಿದು. ಈ ದೇಶದ ಪ್ರತಿ ಕೋಮುಗಲಭೆಗಳಲ್ಲಿ ದುಷ್ಕರ್ಮಿಗಳ ಪಾತ್ರಕ್ಕಿಂತ ಕಾನೂನು ವ್ಯವಸ್ಥೆಯ ಪಾತ್ರ ದೊಡ್ಡದಿದೆ. ದುಷ್ಕರ್ಮಿಗಳ ಪುಂಡಾಟಕ್ಕಿಂತಲೂ ಪೊಲೀಸರ ವೌನ ಅತ್ಯಂತ ಹೆಚ್ಚು ಅಪಾಯಕಾರಿ ಎನ್ನುವುದನ್ನು ಇನ್ನೊಬ್ಬ ಚಿಂತಕ ಹೇಳುತ್ತಾನೆ. ಪೊಲೀಸರ ಖಾಕಿ ಮಾತನಾಡತೊಡಗಿದಾಗ, ದುಷ್ಕರ್ಮಿಗಳ ಗದ್ದಲ ತಣ್ಣಗಾಗುತ್ತದೆ. ಪೊಲೀಸರು ಕಣ್ಣಿದ್ದು ಕುರುಡರಾದಾಗ, ಕಿವಿಯಿದ್ದು ಕಿವುಡರಾದಾಗ, ದುಷ್ಕರ್ಮಿಗಳ ಕೈಗಳು ಕೆಲಸ ಮಾಡತೊಡಗುತ್ತವೆ. ಕಳೆದ ಬಾರಿ ರಾಜ್ಯ ಸರಕಾರ ಟಿಪ್ಪು ಜಯಂತಿಯ ಶಿಲುಬೆಯನ್ನು ಈ ರಾಜ್ಯದ ಮುಸ್ಲಿಮರ ಹೆಗಲ ಮೇಲಿರಿಸಿ ಅದರ ಪರಿಣಾಮವನ್ನು ದೂರ ನಿಂತು ನೋಡಿದ್ದನ್ನು ನಾವು ಅನುಭವಿಸಿದ್ದೇವೆ. ಕನ್ನಡ ಸಂಸ್ಕೃತಿ ಇಲಾಖೆ ಆಚರಿಸಬೇಕಾಗಿದ್ದ ಟಿಪ್ಪು ಜಯಂತಿಯನ್ನು ಅಲ್ಪಸಂಖ್ಯಾತ ಇಲಾಖೆಗೆ ವರ್ಗಾಯಿಸಿ, ಟಿಪ್ಪುವನ್ನು ಮೊದಲು ಅಲ್ಪಸಂಖ್ಯಾತ ಪ್ರತಿನಿಧಿಯಾಗಿಸಿದ್ದೂ ರಾಜ್ಯ ಸರಕಾರವೇ. ಬಳಿಕ ಜಯಂತಿಗೆ ಆಗಮಿಸಿದ ಪ್ರೇಕ್ಷಕರ ಮೇಲೆ ಲಾಠಿ ಬೀಸಿ, ಕೊಲೆ ಆರೋಪಗಳನ್ನು ದಾಖಲಿಸಿ ಜೈಲಿಗೆ ತಳ್ಳಿದ್ದೂ ಸರಕಾರವೇ. ತನ್ನದೇ ಕಾರ್ಯಕ್ರಮವನ್ನು ಭಂಗಗೊಳಿಸಿದ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳದ ಗೃಹ ಸಚಿವರು, ಟಿಪ್ಪು ಜಯಂತಿಯಲ್ಲಿ ಭಾಗವಹಿಸಿದ ಪ್ರೇಕ್ಷಕರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದರು. ಖಾಕಿಯೊಳಗೆ ಕೇಸರಿ ಚಡ್ಡಿ ಧರಿಸಿ ಪೊಲೀಸರು ನೀಡಿದ ವರದಿಯನ್ನು ಹಾಗೆಯೇ ಒಪ್ಪಿಸಿದ ಗೃಹ ಸಚಿವರು, ‘ಟಿಪ್ಪು ಜಯಂತಿಗೆ ಕೇರಳದಿಂದ ಅಪರಿಚಿತ ಜನರು ಭಾಗವಹಿಸಿದ್ದರು’ ಎಂದು ಘೋಷಿಸಿ, ಇಡೀ ಮುಸ್ಲಿಮರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದರು. ಸಾಧಾರಣವಾಗಿ ಜಯಂತಿಗಳನ್ನು ಸರಕಾರ ಘೋಷಿಸಿದರೆ ಅದರ ಆಚರಣೆಯ ಹೊಣೆಯನ್ನೂ ಸರಕಾರವೇ ವಹಿಸಿಕೊಳ್ಳಬೇಕು. ಟಿಪ್ಪು ಜಯಂತಿಗೆ ಹೊರಗಿನಿಂದ ಜನ ಬಂದಿದ್ದರು ಎಂದ ಮೇಲೆ, ಅವರು ಯಾರು? ಎನ್ನುವುದರ ಸ್ಪಷ್ಟ ವಿವರವನ್ನೂ ಜನರಿಗೆ ನೀಡಬೇಕು. ತನ್ನ ಜಯಂತಿಯನ್ನು ಯಶಸ್ವಿಗೊಳಿಸಲು ಸರಕಾರವೇ ಈ ಜನರನ್ನು ಆಮದು ಮಾಡಿಕೊಂಡಿತೇ? ಅಥವಾ ಮುಸ್ಲಿಮರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಗೃಹ ಸಚಿವ ಪರಮೇಶ್ವರ್ ಅವರನ್ನು ಸಂಘಪರಿವಾರ ಪರೋಕ್ಷವಾಗಿ ಬಳಸಿಕೊಂಡಿತೇ? ಈ ಪ್ರಶ್ನೆ ಕಳೆದ ಒಂದು ವರ್ಷದಿಂದ ಕೊಳೆಯುತ್ತಾ ಬಿದ್ದಿರುವ ಹೊತ್ತಿಗೇ ಮತ್ತೆ ಟಿಪ್ಪು ಜಯಂತಿ ಬಂದು, ಸದ್ದಿಲ್ಲದೇ ಹೋಗಿದೆ. ಕಳೆದ ಬಾರಿ ಮಾಡಿದ ಹಲವು ತಪ್ಪುಗಳನ್ನು ಈ ಬಾರಿ ಸರಕಾರ ತಿದ್ದಲು ಹೊರಟಿದ್ದು ಶ್ಲಾಘನೀಯವಾಗಿದೆ. ಮುಖ್ಯವಾಗಿ, ಟಿಪ್ಪು ಜಯಂತಿಯನ್ನು ಸರಕಾರವೇ ಅಧಿಕೃತವಾಗಿ ಆಚರಿಸಲು ಈ ಬಾರಿ ಕೀಳರಿಮೆ ತೋರಿಸಲಿಲ್ಲ. ಕನ್ನಡ ಸಂಸ್ಕೃತಿ ಇಲಾಖೆಯ ಮೂಲಕ ಎಲ್ಲ ಜಿಲ್ಲೆಗಳಲ್ಲಿ ಟಿಪ್ಪು ಜಯಂತಿಯನ್ನು ಆಚರಿಸಿರುವ ಮೂಲಕ ಸಂಘಪರಿವಾರದ ಬೆದರಿಕೆಗಳನ್ನು ಅಷ್ಟೇ ಪರಿಣಾಮಕಾರಿಯಾಗಿ ಎದುರಿಸಿತು. ಪೊಲೀಸರನ್ನು ಸಮರ್ಥವಾಗಿ ಬಳಸಿಕೊಂಡು ಸಂಘಪರಿವಾರದ ಸಂಚುಗಳನ್ನೆಲ್ಲ ಬಗ್ಗು ಬಡಿಯಿತು. ಕಳೆದ ಬಾರಿಯಂತೆ ಈ ಬಾರಿ ಎಲ್ಲೂ ಅನಾಹುತಗಳು ಸಂಭವಿಸಲಿಲ್ಲ. ಸಂಘಪರಿವಾರದ ಕುರಿತಂತೆ ಗೃಹ ಇಲಾಖೆ ಮೃದು ಧೋರಣೆಯನ್ನು ತಳೆಯದೇ ಇದ್ದುದೇ ಇದಕ್ಕೆ ಕಾರಣ. ಇದೇ ಸಂದರ್ಭದಲ್ಲಿ ‘ನೋಟು ನಿಷೇಧ’ದ ಕಾರಣ ಬಹುಸಂಖ್ಯೆಯ ಜನರ ಗಮನ ಬೇರೆ ಕಡೆಗೆ ಸೆಳೆದ ಪರಿಣಾಮವಾಗಿಯೂ ಟಿಪ್ಪು ಜಯಂತಿ ವಿವಾದ ಹೆಚ್ಚಿನ ಜನರಿಗೆ ವಿಷಯವಾಗಿ ಕಾಣಲಿಲ್ಲ. ಬೆಳಗ್ಗೆ ಹಾಲು, ಅಕ್ಕಿಗೆ ಏನು ಮಾಡುವುದು ಎಂಬ ಸಮಸ್ಯೆ ಮುಂದಿರುವಾಗ, ಟಿಪ್ಪು ಮತಾಂಧನೇ? ದೇಶಪ್ರೇಮಿಯೇ? ಎಂದು ಯಾರೂ ಉತ್ತರ ಹುಡುಕುತ್ತಾ ಕೂರುವುದಿಲ್ಲ. ಬಹುಶಃ ಇದರಿಂದಾಗಿ ರಾಜ್ಯ ಸರಕಾರ ಇನ್ನಷ್ಟು ಸಲೀಸಾಗಿ ಟಿಪ್ಪು ಜಯಂತಿಯನ್ನು ಕಾಟಾಚಾರಕ್ಕಾದರೂ ಯಶಸ್ವಿಯಾಗಿ ಮಾಡಿ, ಸಂಘಪರಿವಾರಕ್ಕೆ ಉತ್ತರ ನೀಡಿತು. ಒಂದು ರೀತಿಯಲ್ಲಿ ನಿರಾಳ ನಿಟ್ಟುಸಿರು ಬಿಟ್ಟಿತು.
ವರ್ಷಕ್ಕೊಮ್ಮೆ ಆಚರಿಸುವಂತಹ ಯಾವ ಸರಕಾರಿ ಜಯಂತಿಗಳೂ ದುರ್ಬಲ, ಶೋಷಿತ ಸಮುದಾಯಗಳನ್ನು ಮೇಲೆತ್ತಲಾರವು. ಅಂಬೇಡ್ಕರ್ ಜಯಂತಿಯ ಆಚರಣೆ ವರ್ಷಕ್ಕೆ ಸೀಮಿತವಾದ ಕಾರಣಕ್ಕಾಗಿಯೇ ಈ ದೇಶದಲ್ಲಿ ಮಲಗಿದ್ದ ಸಾವರ್ಕರ್, ಗೋಳ್ವಾಲ್ಕರ್‌ಗಳ ಪ್ರೇತಗಳು ಇಂದು ದೇಶಾದ್ಯಂತ ಹರಡಿಕೊಂಡಿವೆ. ಈ ಮಹನೀಯರ ಜಯಂತಿಗಳನ್ನು ಆರೆಸ್ಸೆಸ್‌ನಂತಹ ಸಂಘಟಕರು ಯಾವುದೇ ಸರಕಾರಿ ಜಯಂತಿಗೆ ಕಾಯದೆಯೇ ಪ್ರತಿ ದಿನ ತಮ್ಮ ಶಾಖೆಗಳಲ್ಲಿ ಆಚರಿಸಿದ ಪರಿಣಾಮವಾಗಿಯೇ, ಇಂದು ಶೋಷಿತ ಸಮುದಾಯದ ತರುಣರೂ ಈ ಪ್ರೇತಗಳನ್ನು ತಮ್ಮ ತಮ್ಮ ಬೆನ್ನಿಗೆ ಕಟ್ಟಿಕೊಂಡು ಓಡಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ವರ್ಷಕ್ಕೊಮ್ಮೆ ಅಂಬೇಡ್ಕರ್ ಜಯಂತಿಯನ್ನು, ಗಾಂಧಿ ಜಯಂತಿಯನ್ನು ಆಚರಿಸುವವರು ಇದೀಗ ಆ ಪ್ರೇತಗಳ ಮುಂದೆ ಅಸಹಾಯಕರಂತೆ ಕಾಣುತ್ತಿದ್ದಾರೆ. ಸರಕಾರದ ಕೆಲಸ ಜಯಂತಿಯನ್ನು ಆಚರಿಸುವುದಲ್ಲ. ವಾಲ್ಮೀಕಿ ಜಯಂತಿಯಿಂದ ಬೇಡರ ಸಮುದಾಯಕ್ಕೆ ಯಾವ ಪ್ರಯೋಜನವೂ ಇಲ್ಲ. ಇದೇ ಸಂದರ್ಭದಲ್ಲಿ ವಾಲ್ಮೀಕಿ ಸಮುದಾಯಕ್ಕೆ ಆ ಹೆಸರಿನಲ್ಲೇ ಬೇರೆ ಯೋಜನೆಗಳನ್ನು ಸರಕಾರ ಘೋಷಿಸಿದರೆ ಅದರಿಂದ ಬಹಳಷ್ಟು ಪ್ರಯೋಜನವಿದೆ. ಹಾಗೆಯೇ ಟಿಪ್ಪು ಮತ್ತು ಅಂಬೇಡ್ಕರ್ ಜಯಂತಿಗಳೂ ಕೂಡ. ಟಿಪ್ಪು ಈ ನಾಡಿನ ಅಸ್ಮಿತೆಯ ಭಾಗವಾಗಿದ್ದಾನೆ. ಟಿಪ್ಪುವನ್ನು ‘ರಾಜ ಪ್ರಭುತ್ವ’ದ ಹೆಸರಲ್ಲಿ ನಾವು ಕೊಂಡಾಡುತ್ತಿಲ್ಲ. ಅಖಂಡ ಭಾರತದ ಕನಸು ಮೊತ್ತ ಮೊದಲ ಬಾರಿ ಅರಳಿದ್ದು ಟಿಪ್ಪು ಮೂಲಕ. ಆತ ಫ್ರೆಂಚ್ ನಾಯಕರಿಗೆ ಬರೆದ ಪತ್ರದಲ್ಲಿ ತನ್ನನ್ನು ತಾನೆ ‘ಸಿಟಿಝನ್’ ಎಂದು ಘೋಷಿಸಿಕೊಳ್ಳುತ್ತಾನೆ. ಇಂದು ನಾವು ನೆನೆಯುವುದು ಆ ಟಿಪ್ಪುವನ್ನು. ಜಮೀನ್ದಾರರ ಹಿಡಿತದಿಂದ ರೈತರನ್ನು ಬಿಡಿಸಿದ ಟಿಪ್ಪು. ಜಾತೀಯತೆಯ ಹಿಡಿತದಿಂದ ನರಳುತ್ತಿದ್ದ ದಲಿತರಿಗೆ ಭೂಮಿ ಹಂಚಿದ ಟಿಪ್ಪು. ಸ್ತನ ತೆರಿಗೆಯ ನೀಚತನಕ್ಕೆ ಕತ್ತಿ ಬೀಸಿದ ಟಿಪ್ಪು. ರೈತರಿಗೆ ಬಡ್ಡಿ ರಹಿತ ಸಾಲ ನೀಡುವ ವ್ಯವಸ್ಥೆ ಮಾಡಿದ ಟಿಪ್ಪು. ಅಂತಾರಾಷ್ಟ್ರೀಯ ಮಟ್ಟದ ರಾಜತಾಂತ್ರಿಕತೆಯನ್ನು ರೂಪಿಸಿದ ಟಿಪ್ಪು. ರಾಕೆಟ್ ಬಳಸಿದ ಟಿಪ್ಪು. ಕನ್ನಂಬಾಡಿ ಅಣೆಕಟ್ಟಿನ ಕನಸು ಕಂಡ ಟಿಪ್ಪು. ಈತನನ್ನು ನೆನೆಸುವುದೆಂದರೆ, ನಾವು ನಮ್ಮ ಅಸ್ಮಿತೆಯನ್ನು ನೆನೆಸಿಕೊಳ್ಳುವುದೆಂದೇ ಅರ್ಥ. ಇಂದು ಸರಕಾರಿ ಟಿಪ್ಪು ಜಯಂತಿಯನ್ನು ಸಂಘಪರಿವಾರ ಬಹಿರಂಗವಾಗಿ ಎದುರಿಸುವ ಧೈರ್ಯವನ್ನು ಯಾಕೆ ಪ್ರದರ್ಶಿಸುತ್ತಿದೆ ಎಂದರೆ, ನಾವೆಲ್ಲರೂ ಈವರೆಗೆ ಅವನನ್ನು ಸಂಪೂರ್ಣ ಮರೆತಿದ್ದೆವು. ಆದುದರಿಂದಲೇ ಇಂದು ಟಿಪ್ಪು ದೇಶದ್ರೋಹಿಯಾಗಿದ್ದಾನೆ. ಆತನನ್ನು ಸೋಲಿಸಲು ನೆರವು ನೀಡಿದ ಮೀರ್ ಸಾಧಿಕ್‌ರಂಥವರು ದೇಶಪ್ರೇಮಿಗಳಾಗಿದ್ದಾರೆ. ಸಂಘಪರಿವಾರ ಗೋಳ್ವಾಲ್ಕರ್, ಮೀರ್‌ಸಾದಿಕ್, ಪೂರ್ಣಯ್ಯ ಮೊದಲಾದವರನ್ನು ಆದರ್ಶವಾಗಿಟ್ಟು ನಾಡೊಂದನ್ನು ಕಟ್ಟಲು ಹೊರಟಿವೆ. ಇಂತಹ ಸಂದರ್ಭದಲ್ಲಿ ಪ್ರತಿ ದಿನವೂ ನಮಗೆ ಅಂಬೇಡ್ಕರ್ ಜಯಂತಿ. ಪ್ರತಿದಿನವೂ ನಮಗೆ ಟಿಪ್ಪು ಜಯಂತಿ. ಸರಕಾರ ಜಯಂತಿ ಆಚರಿಸಲಿ, ಆಚರಿಸದಿರಲಿ, ಆದರೆ ಟಿಪ್ಪುವಿನ ಕನಸುಗಳನ್ನು ಜನರ ನಡುವೆ ಬಿತ್ತುವುದು ಶೋಷಿತ ಸಮುದಾಯದ ಮೊದಲ ಕರ್ತವ್ಯ. ಇದು ಟಿಪ್ಪುವಿಗೆ ನಾವು ಮಾಡುವ ಉಪಕಾರವಲ್ಲ. ಈ ನಾಡಿಗೆ ಮಾಡುವ ಉಪಕಾರ. ನಮಗೆ ನಾವೇ ಮಾಡಿಕೊಳ್ಳುವ ಉಪಕಾರ.