ಬ್ಯಾಂಕ್ ಗೆ ಹಣ ಠೇವಣಿ ಮೇಲೆ ನಿಗಾ : ಜೇಟ್ಲಿ ಹೇಳಿದ್ದೇ ಬೇರೆ , ಅಮಿತ್ ಷಾ ಹೇಳಿದ್ದೆ ಬೇರೆ !
ಹೊಸದಿಲ್ಲಿ, ನ. 12 : ಶನಿವಾರ ನಡೆದ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಪತ್ರಿಕಾ ಗೋಷ್ಠಿ ಜನರಲ್ಲಿ ಈಗಾಗಲೇ ಭಾರೀ ನಿರಾಶೆ ಮೂಡಿಸಿದೆ. ಹೊಸ ನೋಟುಗಳನ್ನು ಸಮರ್ಪಕವಾಗಿ ನೀಡುವಂತೆ ದೇಶಾದ್ಯಂತ ಇರುವ ಎರಡು ಲಕ್ಷ ಎಟಿಎಂ ಯಂತ್ರಗಳಲ್ಲಿ ಸೂಕ್ತ ಬದಲಾವಣೆ ಮಾಡಲು ಕನಿಷ್ಠ ೩ ವಾರಗಳ ಸಮಯಾವಕಾಶ ಬೇಕು ಎಂದು ಜೇಟ್ಲಿ ಹೇಳಿರುವುದು ಜನರಿಗೆ ನಿರಾಸೆ ಹಾಗು ಅಸಮಾಧಾನ ತಂದಿದೆ.
ಆದರೆ ಅವರ ಇನ್ನೊಂದು ಹೇಳಿಕೆ ಈಗ ಅದಕ್ಕಿಂತಲೂ ಹೆಚ್ಚು ವಿವಾದಕ್ಕೆ ಈಡಾಗುತ್ತಿದೆ. ಜನರು ಬ್ಯಾಂಕ್ ಗಳಲ್ಲಿ ಠೇವಣಿ ಇಡುತ್ತಿರುವ ಹಣದ ಮೇಲೆ ಆದಾಯ ತೆರಿಗೆ ಹಾಗು ಜಾರಿ ನಿರ್ದೇಶನಾಲಯ ಕಣ್ಣಿಟ್ಟಿದೆ ಎಂದು ಜೇಟ್ಲಿ ಹೇಳಿದ್ದಾರೆ. ಜನಧನ್ ಖಾತೆಗಳಲ್ಲಿ ಇದ್ದಕ್ಕಿದ್ದಂತೆ ಹಣ ಬಂದರೆ ಅದರ ಮೇಲೆ ನಿಗಾ ಇಡಲಾಗುವುದು ಎಂದು ಜೇಟ್ಲಿ ಸ್ಪಷ್ಟಪಡಿಸಿದ್ದಾರೆ.
ಆದರೆ ಇದು ಶುಕ್ರವಾರ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆಸಿದ ವಿಶೇಷ ಪತ್ರಿಕಾಗೋಷ್ಠಿಯಲ್ಲಿ ನೀಡಿರುವ ಹೇಳಿಕೆಗೆ ತದ್ವಿರುದ್ಧವಾಗಿದೆ. ಹಳೆಯ 500, 1000 ರೂ. ನೋಟುಗಳಲ್ಲಿ 2.5 ಲಕ್ಷದೊಳಗೆ ಹಣ ಇರುವವರು ಅದನ್ನು ಬ್ಯಾಂಕ್ ಖಾತೆಗೆ ಹಾಕಲು ಯಾವುದೇ ಸಮಸ್ಯೆ ಇಲ್ಲ . ಅವರಿಗೆ ಯಾವುದೇ ತನಿಖೆ ಎದುರಿಸುವ ಪರಿಸ್ಥಿತಿ ಬರುವುದಿಲ್ಲ ಎಂದು ಅಮಿತ್ ಷಾ ಭರವಸೆ ನೀಡಿದ್ದರು.
ಇಂತಹ ತದ್ವಿರುದ್ಧ ಹೇಳಿಕೆಗಳು ಸ್ವತಃ ಬಿಜೆಪಿ ಬೆಂಬಲಿಗರ ನಡುವೆಯೇ ಗೊಂದಲ ಸೃಷ್ಟಿಸಿವೆ. ತಮ್ಮ ಅಲ್ಪ ಸ್ವಲ್ಪ ಉಳಿತಾಯದ ಹಣ ಬ್ಯಾಂಕ್ ಗೆ ಹಾಕಿದಕ್ಕೆ ಸರಕಾರೀ ಇಲಾಖೆಗಳು ತಮಗೆ ಕಿರುಕುಳ ನೀಡಲು ಬಂದರೆ ಜನರು ಪಕ್ಷದ ವಿರುದ್ಧ ತಿರುಗಿ ಬೀಳುವ ಸಾಧ್ಯತೆ ಇಲ್ಲದಿಲ್ಲ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.