×
Ad

ನೋಟು ರದ್ದು : ಎಟಿಎಂಗಳು ಖಾಲಿ; ತಾಳ್ಮೆಗೆಟ್ಟ ದಿಲ್ಲಿಗರು

Update: 2016-11-13 19:52 IST

ಹೊಸದಿಲ್ಲಿ, ನ.13: ಅಮಾನ್ಯಗೊಳಿಸಿರುವ ನೋಟುಗಳ ಬದಲಾವಣೆ ಹಾಗೂ ಹಣ ಪಡೆಯಲು ರವಿವಾರವೂ ತೊಂದರೆ ಅನುಭವಿಸಿದ ರಾಷ್ಟ್ರ ರಾಜಧಾನಿಯ ಜನರ ಮನದಲ್ಲಿ ತಾಳ್ಮೆ ತಪ್ಪುವಿಕೆ, ನಿರಾಸೆ ಹಾಗೂ ಆಕ್ರೋಶ ಮನೆ ಮಾಡಿದೆ. ದೈನಂದಿನ ಅಗತ್ಯಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಲೂ ಹೆಣಗಾಡುವಂತಾಗಿದೆ.
ನಗದು ಪಡೆಯಲು ಜನರು ಬ್ಯಾಂಕ್ ಹಾಗೂ ಎಟಿಎಂಗಳೆದುರು ಭಾರೀ ಸಂಖ್ಯೆಯ ಜನ ಸಾಲುಗಟ್ಟಿ ನಿಂತಿದ್ದರು. ದಿನಾಂತ್ಯದ ವೇಳೆ ಬ್ಯಾಂಕ್ ಹಾಗೂ ಎಟಿಎಂಗಳಲ್ಲಿ ಹನ ಖಾಲಿಯಾಯಿತು. ಇದರಿಂದಾಗಿ ಸಾರ್ವಜನಿಕರ ತಾಳ್ಮೆಯೂ ಬರಿದಾಯಿತು. ಕೆಲವು ಕಡೆ ಬಿಸಿ ಬಿಸಿ ವಾಗ್ವಾದವೂ ನಡೆಯಿತು.
ಕಾಲ್ತುಳಿದ ವದಂತಿ ಹಬ್ಬಿದ ಬಳಿಕ ಬ್ಯಾಂಕ್ ಶಾಖೆಗಳ ಹೊರಗೆ ಭದ್ರತೆಯನ್ನು ಹೆಚ್ಚಿಸಲಾಯಿತು.
ಇಂದು ರವಿವಾರವಾದ ಕಾರಣ ಬ್ಯಾಂಕ್ ಹಾಗೂ ಎಟಿಎಂಗಳ ಹೊರಗೆ ಭಾರೀ ಜನ ಸಂದಣಿಯನ್ನು ನಿರೀಕ್ಷಿಸಿದ್ದವು. ಅನಪೇಕ್ಷಿತ ಘಟನೆಗಳನ್ನು ತಪ್ಪಿಸುವುದಕ್ಕಾಗಿ ಸಾಕಷ್ಟು ಭದ್ರತಾ ವ್ಯವಸ್ಥೆಯನ್ನು ಮಾಡಿದ್ದೇವೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾತರಿತ ಗುಂಪನ್ನು ನಿಭಾಯಿಸಲು ಎಟಿಎಂ ಹಾಗೂ ಬ್ಯಾಂಕ್‌ಗಳ ಬಳಿ ಸುಮಾರು 3,400 ಅರೆಸೇನೆ ಹಾಗೂ ದಿಲ್ಲಿ ಪೊಲೀಸ್ ಸಿಬ್ಬಂದಿ ಮತ್ತು 200 ಕ್ಷಿಪ್ರ ಕಾರ್ಯಾಚರಣೆ ತಂಡಗಳನ್ನು ನಿಯೋಜಿಸಲಾಗಿದೆ.
ಇಂದು ತನಗೆ ರಜಾದಿನವಾಗಿದ್ದರೂ ನಿಷೇಧಿತ ರೂ. 500 ಹಾಗೂ 1000ದ ನೋಟುಗಳನ್ನು ಬದಲಾಯಿಸಲು ಸಾಧ್ಯವಾಗಲಿಲ್ಲ. ತಾನು ಮಧ್ಯಾಹ್ನ 2:30ರ ವೇಳೆ ಬ್ಯಾಂಕ್‌ಗೆ ತಲುಪಿದ್ದೆನು. ಅಲ್ಲಿ ಸುದೀರ್ಘ ಸರತಿಯ ಸಾಲಿತ್ತು. ತಾನು 4:20ರವರೆಗೆ ಕಾದೆನು. ಬಳಿಕ ಬರಿಗೈಯಲ್ಲಿ ಮರಳಿದೆನೆಂದು ನಿರಾಶೆಗೊಂಡವರಂತೆ ತೋರುತ್ತಿದ್ದ ಲಜಪತ್ ನಗರದ ನಿವಾಸಿ ರಣಜಿತ್ ಮಲಿಕ್ ಎಂಬವರು ವಿವರಿಸಿದ್ದಾರೆ.
ಕೆಲವು ಕಡೆಗಳಲ್ಲಿ ಹಣಕ್ಕಾಗಿ ಜನರು ಎಟಿಎಂನಿಂದ ಎಟಿಎಂಗೆ ಓಡುತ್ತಿದ್ದರು.
ತನ್ನಲ್ಲಿ ಹಣವೆಲ್ಲ ಮುಗಿದಿತ್ತು. ನೆರೆ ಮನೆಯವರಿಂದ ಸಾಲ ಪಡೆಯಬೇಕಾಗಿಬಂತೆಂದು 68ರ ಹರೆಯದ ಮನೋಜ್ ಸಿಂಗ್ ಎಂಬವರು ಅಸಹನೆಯನ್ನು ಹೊರ ಹಾಕಿದ್ದಾರೆ.
ಇಂದು ಕೂಡ ಬಿಡುಗಡೆ ದೊರೆತಿಲ್ಲ. ತಾನು ಬ್ಯಾಂಕ್‌ಗೆ ಹೋಗಿ ಕೆಲ ಹೊತ್ತು ಸರತಿಯ ಸಾಲಿನಲ್ಲಿ ನಿಂತಿದ್ದೆ. ಕಾಲು ನೋವು ಆರಂಭವಾದೊಡನೆ ಹಿಂದಿರುಗಿ ಬಂದೆನೆಂದು ಅವರು ಹೇಳಿದ್ದಾರೆ.
ಸಾಕಷ್ಟು ರೂ. 100 ನೋಟುಗಳು ಇರದಿದ್ದುದರಿಂದ ಹಲವರಿಗೆ ಹಾಲು, ತರಕಾರಿ, ಔಷಧಗಳನ್ನು ಖರೀದಿಸಲಾಗಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News