ಎಟಿಎಂನಿಂದ ಹಣ ತೆಗೆಯುವ ಮಿತಿ ಏರಿಕೆ
Update: 2016-11-13 21:29 IST
ಹೊಸದಿಲ್ಲಿ,ನ.13: ಪರಿಷ್ಕೃತ ಎಟಿಎಂಗಳಿಂದ ಹಣವನ್ನು ಹಿಂಪಡೆಯುವ ಮಿತಿಯನ್ನು ದಿನಕ್ಕೆ ಈಗಿನ 2,000 ರೂ.ನಿಂದ 2,500 ರೂ.ಗಳಿಗೆ ಹೆಚ್ಚಿಸುವಂತೆ ಕೇಂದ್ರ ಸರಕಾರವು ರವಿವಾರ ಎಲ್ಲ ಬ್ಯಾಂಕುಗಳಿಗೆ ನಿರ್ದೇಶ ನೀಡಿದೆ.
ಒಂದು ವಾರದಲ್ಲಿ ಗ್ರಾಹಕರು ತಮ್ಮ ಬ್ಯಾಂಕ್ ಖಾತೆಗಳಿಂದ ಹಿಂಪಡೆಯಬಹುದಾದ ಗರಿಷ್ಠ ಮೊತ್ತವನ್ನೂ ಈಗಿನ 20,000 ರೂ.ಗಳಿಂದ 24,000 ರೂ.ಗೆ ಹೆಚ್ಚಿಸಲಾಗಿದೆ. ಹಾಲಿ ಚಾಲ್ತಿಯಲ್ಲಿದ್ದ ದಿನಕ್ಕೆ 10,000 ರೂ.ಗಳ ಮಿತಿಯನ್ನು ತೆಗೆದುಹಾಕಲಾಗಿದೆ ಎಂದು ವಿತ್ತ ಸಚಿವಾಲಯವು ತಿಳಿಸಿದೆ.
ಅಲ್ಲದೆ ಹಳೆಯ ನೋಟುಗಳ ವಿನಿಮಯ ಮತ್ತು ಖಾತೆಗಳಲ್ಲಿ ಜಮಾ ಮಾಡಲು ಹಿರಿಯ ನಾಗರಿಕರು ಮತ್ತು ದಿವ್ಯಾಂಗರಿಗೆ ಪ್ರತ್ಯೇಕ ಸರದಿ ಸಾಲುಗಳ ವ್ಯವಸ್ಥೆಯನ್ನು ಮಾಡಲಾಗುವುದು. ಹಳೆಯ ನೋಟುಗಳ ವಿನಿಮಯದ ಮೇಲಿನ ಮಿತಿಯನ್ನೂ ಹೆಚ್ಚಿಸಲಾಗಿದೆ. ಗ್ರಾಹಕರು ಈಗ 4,000 ರೂ. ಬದಲಾಗಿ 4,500 ರೂ.ಗಳ ಹಳೆಯ ನೋಟುಗಳನ್ನು ಹೊಸನೋಟುಗಳಿಗೆ ವಿನಿಮಯಿಸಿಕೊಳ್ಳಬಹುದಾಗಿದೆ ಎಂದೂ ಹೇಳಿಕೆಯು ತಿಳಿಸಿದೆ.