ಬಾಲ್ಯ ವಿವಾಹ ಪ್ರಕರಣ : ತಪ್ಪಿತಸ್ಥರಿಗೆ ಎರಡು ವರ್ಷ ಜೈಲು ಶಿಕ್ಷೆ: ಉಮಾಶ್ರೀ
ಬೆಂಗಳೂರು, ನ.14: ಬಾಲ್ಯ ವಿವಾಹ ಪ್ರಕರಣಗಳಲ್ಲಿ ಸಿಕ್ಕಿ ಬೀಳುವ ತಪ್ಪಿತಸ್ಥರಿಗೆ ಒಂದರಿಂದ ಎರಡು ವರ್ಷ ಜೈಲು ಶಿಕ್ಷೆ ವಿಧಿಸುವಂತಹ ಕಾನೂನು ಜಾರಿಗೆ ಬರಲಿದೆ ಎಂದು ಮಹಿಳಾ ಮತ್ತು ಮ್ಕಕಳ ಕಲ್ಯಾಣ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.
ಸೋಮವಾರ ನಗರದ ಬಾಲಭವನದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಸಾಧಾರಣ ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ದುಡಿದ ವ್ಯಕ್ತಿಗಳು ಮತ್ತು ಸಂಘ ಸಂಸ್ಥೆಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಬಾಲ್ಯ ವಿವಾಹ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಇಂತಹದೊಂದು ದಿಟ್ಟ ಹೆಜ್ಜೆ ಇಟ್ಟಿದೆ. ಬಾಲ್ಯ ವಿವಾಹ ಪ್ರಕರಣಗಳು ಪತ್ತೆ ಆದಲ್ಲಿ ತಪ್ಪಿತಸ್ಥರನ್ನು ಜೈಲಿಗಟ್ಟಾಗುವುದು. ಈ ಕುರಿತು ಕೂಡಲೆ ಪ್ರತ್ಯೇಕವಾದ ಕಾನೂನು ತರಲು ಸರಕಾರ ಮುಂದಾಗಿದೆ ಎಂದರು.
ಮಕ್ಕಳಲ್ಲಿ ಅಪೌಷ್ಠಿಕತೆಯನ್ನು ದೂರ ಮಾಡಲು ಸರಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ.2013ರಲ್ಲಿ 29 ಸಾವಿರದಷ್ಟು ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದರು. ಈಗ ಅದರ ಸಂಖ್ಯೆಯನ್ನು 15 ಸಾವಿರಕ್ಕೆೆ ಇಳಿಸಲಾಗಿದೆ. 2018ರ ವೇಳೆಗೆ ಈ ಸಂಖ್ಯೆಯನ್ನು ಇನ್ನಷ್ಟು ಕಡಿಮೆಗೊಳಿಸಲು ಶ್ರಮಿಸಲಾಗುವುದು ಎಂದು ತಿಳಿಸಿದರು.
ಡಿ.15ರಿಂದ ಗರ್ಭೀಣಿಯರಿಗೆ ಪೌಷ್ಠಿಕ: ರಾಜ್ಯದಲ್ಲಿ 32 ಸಾವಿರ ಗರ್ಭಿಣಿ ಮಹಿಳೆಯರು ಅಪೌಷ್ಠಿಕತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪೌಷ್ಠಿಕ ಆಹಾರಗಳನ್ನು ಪ್ರಯೋಗಿಕವಾಗಿ ಜಾರಿಗೊಳಿಸಿದ ಯೋಜನೆ ಮಧುಗಿರಿ, ಜಮಖಂಡಿ, ಹೆಚ್.ಡಿ.ಕೋಟೆ ಹಾಗೂ ಮಾನ್ವಿ ತಾಲ್ಲೂಕುಗಳಲ್ಲಿ ಯಶಸ್ವಿ ಆಗಿದೆ. ಗರ್ಭೀಣಿಯರಿಗೆ ಪೌಷ್ಠಿಕ ಆಹಾರ ನೀಡುವ ಯೋಜನೆಗೆ ಅಧಿಕೃತವಾಗಿ ಡಿ. 15 ರಿಂದ ಚಾಲನೆ ನೀಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರ ಸಂಸದೀಯ ಕಾರ್ಯದರ್ಶಿ ಶಂಕುತಲಾಶೆಟ್ಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಮಹದೇವನ್, ಬಾಲ ಭವನ ಅಧ್ಯಕ್ಷೆ ಡಾ. ಅಂಜನಿ ನಿಂಬಾಳ್ಕರ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.