×
Ad

ಜಗತ್ತಿನ ಗಮನ ಸೆಳೆದ ಜಪಾನ್

Update: 2016-11-15 21:38 IST

ಟೋಕಿಯೋ , ನ. 15  : ಭಾರೀ ಕುಳಿ ಬಿದ್ದು ಸಂಪೂರ್ಣ ಹಾನಿಗೊಂಡಿದ್ದ ಫುಕುವೋಕಾದ ಅತ್ಯಂತ ಜನನಿಬಿಡ ರಸ್ತೆಯೊಂದು ಕೇವಲ ಒಂದೇ ವಾರದಲ್ಲಿ ಸಂಪೂರ್ಣ ದುರಸ್ತಿಗೊಂಡು, ಮೊದಲಿನಂತಾಗಿ ವಾಹನ ಸಂಚಾರಕ್ಕೆ ಮುಕ್ತವಾಗಿದೆ. ಐದು ಲೇನ್ ಗಳ ಈ ರಸ್ತೆಯಲ್ಲಿ ಉಂಟಾಗಿದ್ದ  30 ಮೀಟರ್ (98 ಅಡಿಗಳು) ಅಗಲ ಹಾಗು 15 ಮೀಟರ್ ಆಳದ ಈ ಭಾರೀ ಹೊಂಡವನ್ನು ಮುಚ್ಚಲು ಕಾರ್ಮಿಕರು ಸಮರೋಪಾದಿಯಲ್ಲಿ ಕೆಲಸ ಮಾಡಿ ಮುಗಿಸಿದ್ದಾರೆ. 

ನವೆಂಬರ್ ೮ ರಂದು (ಮಂಗಳವಾರ ) ಮೊದಲು ಬಿದ್ದ ಈ ರಸ್ತೆ ಹೊಂಡದಿಂದ ಯಾವುದೇ ಜೀವಹಾನಿ ಆಗಿರದಿದ್ದರೂ ರಸ್ತೆ ಸಂಪೂರ್ಣ ಹಾನಿಗೊಂಡಿದ್ದು ಮಾತ್ರವಲ್ಲದೆ ವಿದ್ಯುತ್ , ಗ್ಯಾಸ್ ಹಾಗು ನೀರಿನ ಸಂಪರ್ಕಗಳೂ ಅಸ್ತವ್ಯಸ್ತಗೊಂಡಿದ್ದವು. ಆದರೆ ಸರಕಾರದ ಇಚ್ಛಾಶಕ್ತಿ ಹಾಗು ಕಾರ್ಮಿಕರ ದಕ್ಷತೆಯಿಂದ ಒಂದೇ ವಾರದೊಳಗೆ ಅಂದರೆ ಮುಂದಿನ ಮಂಗಳವಾರ ಈ ರಸ್ತೆ ಮತ್ತೆ ಮೊದಲಿನಂತಾಗಿ ಸಂಚಾರಕ್ಕೆ ಮುಕ್ತವಾಗಿದೆ. 

ಸಾಲದ್ದಕ್ಕೆ, ಒಂದು ವಾರ ಜನರಿಗಾದ 'ಭಾರಿ ತೊಂದರೆ' ಗೆ ನಗರದ ಮೇಯರ್ ಸೋಯಿಚಿರೊ ತಕಾಶಿಮ ಅವರು ಕ್ಷಮೆ ಕೋರಿ ಕೆಲಸ ಮಾಡಿದ ಕಾರ್ಮಿಕರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಹಾಗು ರಸ್ತೆ ಹಾನಿಗೆ ಕಾರಣ ಹುಡುಕಲು ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ. 

ಜಪಾನ್ ನ ಈ ಕ್ಷಿಪ್ರ ಕಾರ್ಯಾಚರಣೆ ಇಡೀ ವಿಶ್ವದ ಗಮನ ಸೆಳೆದಿದೆ. ಇಷ್ಟೊಂದು ದಕ್ಷತೆ ಹಾಗು ಚುರುಕಿನಿಂದ ಇಂತಹ ಜನನಿಬಿಡ ರಸ್ತೆಯೊಂದರ ಸಂಕೀರ್ಣ ನಿರ್ಮಾಣ ಕೆಲಸ ಮಾಡಿ ಮುಗಿಸಿರುವುದು ಯಾವುದೇ ಮಾನದಂಡದಲ್ಲೂ ಅತ್ಯಂತ ಅಸಾಮಾನ್ಯವಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ಪ್ರಶಂಸಿಸಿವೆ. 

ಇದೇ ಸಂದರ್ಭದಲ್ಲಿ ಇಂತಹದ್ದೊಂದು ಸಮಸ್ಯೆ ಭಾರತದ ಪ್ರಮುಖ ನಗರವೊಂದರ ಜನನಿಬಿಡ ಪ್ರದೇಶದಲ್ಲಿ ಆಗಿದ್ದರೆ ಅದು ಮತ್ತೆ ಮೊದಲಿನಂತಾಗಲು ಎಷ್ಟು ಸಮಯ ತಗುಲುತ್ತಿತ್ತು ಎಂದು ಭಾರತೀಯರು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಿಸುತ್ತಿದ್ದಾರೆ. 


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News