×
Ad

ಸಿನೆಮಾ ನಿರ್ಮಾಣದ ಹೆಸರಿನಲ್ಲಿ ವಂಚಿಸಿದ್ದ ಆರೋಪಿ ಬಂಧನ

Update: 2016-11-16 16:41 IST

ರಾಜಕುಮಾರಿ(ಇಡುಕ್ಕಿ) ನ. 16: ಸಿನೆಮಾ ನಿರ್ಮಾಣ ಮತ್ತು ರಿಯಲ್ ಎಸ್ಟೇಟ್ ವ್ಯವಹಾರದ ನೆಪದಲ್ಲಿ ಸುಮಾರು ಮೂರು ಕೋಟಿರೂಪಾಯಿಯಷ್ಟು ಹಣವನ್ನು ವಂಚಿಸಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆಂದು ವರದಿಯಾಗಿದೆ. ಪುದುಪಳ್ಳಿಯ ಜಿಜೊ ಮ್ಯಾಥ್ಯು(37)ವನ್ನು ಪಾಂಚಾಲಿಮೇಟ್ ಸಿನೆಮಾ ಲೋಕೇಶನ್‌ನಿಂದ ಅಡಿಮಾಲಿ ಪೊಲೀಸರು ಬಂಧಿಸಿ ಕರೆತಂದಿದ್ದಾರೆ. ಬುಧವಾರ ಕೋರ್ಟಿಗೆ ಹಾಜರುಪಡಿಸಲಾಗುವುದು. ಒಂದು ವರ್ಷದಲ್ಲಿ ಮೂವತ್ತು ಮಂದಿಯಿಂದ ಸುಮಾರು ಮೂರುಕೋಟಿ ರೂಪಾಯಿಗೂ ಅಧಿಕ ಹಣವನ್ನು ಪಡೆದು ಈತ ವಂಚಿಸಿದ್ದಾನೆ ಎಂದು ಹತ್ತೊಂಬತ್ತು ಮಂದಿ ರಾಜಕ್ಕಾಟ್ ಪೊಲೀಸರಿಗೆ ದೂರು ನೀಡಿದ್ದರು. ಸಿನೆಮಾ ತಾರೆಗಳು ಮತ್ತು ಸಿನೆಮಾಕ್ಕೆ ಸಂಬಂಧಿಸಿದವರ ಜೊತೆ ತಾನಿರುವ ಫೋಟೊ ತೋರಿಸಿ ಸಿನೆಮಾ ನಿರ್ಮಾಣದಲ್ಲಿ ಪಾಲುದಾರರನ್ನಾಗಿ ಮಾಡುತ್ತೇನೆ ಎಂದು ಹೇಳಿ ಹಲವರಿಂದ ಹಣವನ್ನು ಪಡೆದುಕೊಂಡಿದ್ದ. ನಂಬಿಕೆಗಾಗಿ ಹೆಂಡತಿಯ ಹೆಸರಿನ ಠಸೆ ಪೇಪರ್ ಮತ್ತು ಚೆಕ್‌ನ್ನು ನೀಡುತ್ತಿದ್ದ. ಕ್ಯಾನ್ಸರ್‌ರೋಗಿ ರಾಜಕ್ಕಾಟ್‌ನ ವೆಳ್ಳಾಪಿಳ್ಳಿಯ ಅನೂಪ್ ಚಿಕಿತ್ಸೆಗಾಗಿ ಜಮೀನು ಮಾರಿ ಸಂಗ್ರಹಿಸಿದ್ದ 20 ಲಕ್ಷರೂಪಾಯಿಯನ್ನು ಈತ ಪಡೆದು ವಂಚಿಸಿದ್ದಾನೆ ಎಂದು ದೂರಲಾಗಿದೆ.

ಅನೂಪ್‌ನಿಂದ ಸಾಲವಾಗಿ ಪಡೆದ ಮೊತ್ತಕ್ಕೆ ಬ್ಯಾಂಕ್ ಚೆಕ್‌ನ್ನು ಈತ ನೀಡಿದ್ದ. ಹಣವಾಪಸು ಸಿಗದಿರುವ ಹಿನ್ನೆಲೆಯಲ್ಲಿ ಅನೂಪ್ ಚೆಕ್‌ನ್ನು ಬ್ಯಾಂಕ್‌ಗೆ ಹಾಕಿದ್ದ. ಆದರೆ ಹಣ ಇಲ್ಲದೆ ಚೆಕ್‌ವಾಪಸಾಗಿತ್ತು. ಕಟ್ಟಪ್ಪನ ಎಂಬಲ್ಲಿನ ವ್ಯಕ್ತಿಗೆ ಖಾಸಗಿ ಆಸ್ಪತ್ರೆಯ ಶೇರು ನೀಡುವುದಾಗಿ ಹೇಳಿ ಹದಿಮೂರು ಲಕ್ಷರೂಪಾಯಿಯನ್ನು ಈತ ಗುಳುಂ ಮಾಡಿದ್ದ. ಜಮೀನು ಕೊಡಿಸುವೆ ಎಂದು ಈತ ಹಲವರಿಂದ ಹಣಪಡೆದು ವಂಚಿಸಿದ್ದಾನೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News