ನೋಟು ನಿಷೇಧ ಎಫೆಕ್ಟ್:ಏಳು ದಿನಗಳಲ್ಲಿ ಸತ್ತವರ ಸಂಖ್ಯೆ 33ಕ್ಕೇರಿಕೆ
ಹೊಸದಿಲ್ಲಿ,ನ.16: ತನ್ನ ನೋಟು ನಿಷೇಧ ಕ್ರಮವನ್ನು ಜನತೆ ಬೆಂಬಲಿಸಿದೆ ಎಂದು ಸರಕಾರವು ಪರಿಗಣಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ತನ್ನ ಪಕ್ಷ ಹಾಗೂ ಮಿತ್ರಪಕ್ಷಗಳಿಗೆ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ತನ್ನ ನಿರ್ಧಾರವನ್ನು ಹಿಂದೆಗೆದುಕೊಳ್ಳಲು ಸರಕಾರವು ನಿರಾಕರಿಸಿದ್ದು, ದೇಶದಲ್ಲಿಯ ಕರೆನ್ಸಿ ವ್ಯವಸ್ಥೆ ಸಹಜ ಸ್ಥಿತಿಗೆ ಮರಳಲು ಕನಿಷ್ಠ ನಾಲ್ಕು ತಿಂಗಳುಗಳಾದರೂ ಬೇಕು, ಸರಕಾರವು ಹೇಳಿಕೊಂಡಿರುವಂತೆ 50ದಿನಗಳಲ್ಲ ಎಂದು ವರದಿಯೊಂದು ಸ್ಪಷ್ಟಪಡಿಸಿದೆ.
ನೋಟು ನಿಷೇಧ ಜಾರಿಗೆ ಬಂದ ಏಳೇ ದಿನಗಳಲ್ಲಿ 33 ಅಮಾಯಕ ಜೀವಗಳು ಬಲಿಯಾಗಿರುವುದನ್ನು ಗಮನಿಸಿದರೆ ಸರಕಾರದ ಈ ಕ್ರಮ ಮುಂದಿನ ದಿನಗಳಲ್ಲಿ ಇನ್ನಷ್ಟು ಜೀವಗಳನ್ನು ಬಲಿ ತೆಗೆದುಕೊಳ್ಳಬಹುದು. ಇವು ರಾಷ್ಟ್ರೀಯ ಮಟ್ಟದಲ್ಲಿ ಅಧಿಕೃತವಾಗಿ ವರದಿಯಾಗಿರುವ ಸಾವುಗಳು,ನಿಜವಾದ ಸಾವಿನ ಸಂಖ್ಯೆ ಎಷ್ಟೋ ಹೆಚ್ಚಿರಬಹುದು. ಗೃಹಿಣಿಯರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಖಾಸಗಿ ಆಸ್ಪತ್ರೆಗಳಲ್ಲಿ ಎಳೆಯ ಶಿಶುಗಳಿಗೆ ಚಿಕಿತ್ಸೆಯನ್ನು ನಿರಾಕರಿಸಲಾಗುತ್ತಿದೆ, ವೃದ್ಧರು ಬ್ಯಾಂಕುಗಳಲ್ಲಿ ಸರದಿ ಸಾಲುಗಳಲ್ಲಿ ಕಾಯುತ್ತಿರುವಾಗಲೇ ಕುಸಿದುಬಿದ್ದು ಸಾಯುತ್ತಿದ್ದಾರೆ......
ಪಂಜಾಬಿನ ತರಣ್ ತರಣ್ ನಿವಾಸಿ ಸುಖದೇವ ಸಿಂಗ್ ತನ್ನ ಮಗಳ ಮದುವೆಗೆ ಕೇವಲ ನಾಲ್ಕೇ ದಿನಗಳು ಬಾಕಿಯಿರುವಾಗ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ‘‘ಮಗಳ ಮದುವೆಗಾಗಿ ನಾವು ಕೂಡಿಟ್ಟಿದ್ದ ನೋಟುಗಳನ್ನು ಸ್ವೀಕರಿಸಲು ಯಾರೂ ಒಪ್ಪುತ್ತಿರಲಿಲ್ಲ. ಹೀಗಾಗಿ ನನ್ನ ಪತಿ ಉದ್ವಿಗ್ನರಾಗಿದ್ದರು. ಎದೆನೋವು ಎಂದು ದೂರಿಕೊಂಡ ಅವರು ಬದುಕುಳಿಯಲಿಲ್ಲ ’’ ಎಂದು ಸಿಂಗ್ ಪತ್ನಿ ಸುರ್ಜಿತ್ ಕೌರ್ ಗೋಳಿಟ್ಟರು.
ಉತ್ತರ ಪ್ರದೇಶದ ಬುಲಂದ್ ಶಹರ್‌ನಲ್ಲಿ ತನ್ನ ತಾಯಿ ತನಗೆ ಸಣ್ಣ ಮುಖಬೆಲೆಯ ನೋಟುಗಳನ್ನು ನೀಡಲಿಲ್ಲವೆಂದು ಬೇಸರಿಸಿಕೊಂಡಿದ್ದ ಬಿಎಸ್‌ಎಫ್ ಯೋಧನೋರ್ವನ ಪುತ್ರ ಸುಮಿತ್(17) ಆತ್ಮಹತ್ಯೆಗೆ ಶರಣಾಗಿದ್ದಾನೆ.
ಒಡಿಶಾದ ಸಂಬಲ್‌ಪುರದಲ್ಲಿ ಬಾಡಿಗೆ ನೀಡಲು ಚಿಲ್ಲರೆ ಹಣವಿಲ್ಲವೆಂಬ ಕಾರಣಕ್ಕೆ ರಿಕ್ಷಾ ಚಾಲಕರು ಎರಡು ವರ್ಷ ಪ್ರಾಯದ ಅನಾರೋಗ್ಯ ಪೀಡಿತ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲು ನಿರಾಕರಿಸಿದ್ದರಿಂದ ಮಗು ತಾಯಿಯ ಮಡಿಲಿನಲ್ಲಿಯೇ ಕೊನೆಯುಸಿ ರೆಳೆದಿದೆ. ಮಗುವಿನ ಹೆತ್ತವರ ಬಳಿ ಹಳೆಯ 500 ರೂ.ನೋಟುಗಳು ಮಾತ್ರ ಇದ್ದವು.
ತೆಲಂಗಾಣದ ಸಿಕಂದರಾಬಾದ್‌ನಲ್ಲಿ ಆಂಧ್ರ ಬ್ಯಾಂಕ್ ಶಾಖೆಯಲ್ಲಿ ತನ್ನ ಬಳಿಯಿದ್ದ 1.7 ಲ.ರೂ.ಗಳನ್ನು ಜಮಾ ಮಾಡಲು ಎರಡು ಗಂಟೆಗೂ ಅಧಿಕ ಸಮಯ ಸರದಿ ಸಾಲಿನಲ್ಲಿ ಕಾದು ನಿಂತಿದ್ದ ಲಕ್ಷ್ಮೀನಾರಾಯಣ(75) ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಬ್ಯಾಂಕಿನಲ್ಲಿ ಹಿರಿಯ ನಾಗರಿಕರಿಗಾಗಿ ಪ್ರತ್ಯೇಕ ಸರದಿಯ ವ್ಯವಸ್ಥೆಯಿರಲಿಲ್ಲ.
ಬಿಹಾರದ ಔರಂಗಾಬಾದ್‌ನ ಬ್ಯಾಂಕೊಂದರಲ್ಲಿ ಸರದಿ ಸಾಲಿನಲ್ಲಿ ನಿಂತಿದ್ದ ವೃದ್ಧ ಸುರೇಂದ್ರ ಶರ್ಮಾ ಮೃತರಾಗಿದ್ದಾರೆ.
ಮಧ್ಯಪ್ರದೇಶದ ಛತರ್‌ಪುರ ಜಿಲ್ಲೆಯಲ್ಲಿ ಬ್ಯಾಂಕಿನಲ್ಲಿ ಹಳೆಯ ನೋಟುಗಳಿಗೆ ವಿನಿಮಯ ಸಿಗದೇ ಸಕಾಲದಲ್ಲಿ ರಸಗೊಬ್ಬರ ಮತ್ತು ಬೀಜಗಳ ಖರೀದಿಗೆ ಕೈಯಲ್ಲಿ ಹಣವಿಲ್ಲದೆ ರೈತ ಹಲ್ಕೆ ಲೋಧಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೀರತ್‌ನಲ್ಲಿ ಕರೆನ್ಸಿ ನೋಟುಗಳ ವಿನಿಮಯಕ್ಕಾಗಿ ಸತತ ಎರಡು ದಿನಗಳ ವಿಫಲ ಪ್ರಯತ್ನದ ಬಳಿಕ ಮೂರನೇ ದಿನ ಇನ್ನೊಂದು ಪ್ರಯತ್ನಕ್ಕಾಗಿ ಬ್ಯಾಂಕಿನಲ್ಲಿ ಸಾಲಿನಲ್ಲಿ ನಿಂತಿದ್ದ ಅಝೀಝ್ ಅನ್ಸಾರಿ(60) ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಉ.ಪ್ರದೇಶದ ಜಲೌನ್‌ನಲ್ಲಿ ಬ್ಯಾಂಕ್‌ನಲ್ಲಿ ಸರದಿ ಸಾಲಿನಲ್ಲಿ ನಿಂತಿದ್ದ ನಿವೃತ್ತ ಶಿಕ್ಷಕ ರಘುನಾಥ ವರ್ಮಾ(70) ಕೂಡ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಮನೆಯಲ್ಲಿ ಮದುವೆ ಇಟ್ಟುಕೊಂಡಿದ್ದ ಅವರಿಗೆ ಎರಡು ಲಕ್ಷ ರೂ.ಗಳ ಅಗತ್ಯವಿತ್ತು. ಮೂರುದಿನಗಳಿಂದಲೂ ಬ್ಯಾಂಕಿಗೆ ತೆರಳುತ್ತಿದ್ದ ಅವರು ತನ್ನ ಖಾತೆಯಿಂದ ಹಣವನ್ನು ಹಿಂಪಡೆಯಲು ಮತ್ತು ಹಳೆಯ ನೋಟುಗಳನ್ನು ವಿನಿಮಯಿಸಿಕೊಳ್ಳಲು ನೆರವಾಗುವಂತೆ ಮ್ಯಾನೇಜರ್‌ನನ್ನು ಹಲವು ಬಾರಿ ಕೋರಿಕೊಂಡಿದ್ದರು. ಆದರೆ ಮ್ಯಾನೇಜರ್ ಅದನ್ನು ಕಿವಿಗೇ ಹಾಕಿಕೊಂಡಿ ರಲಿಲ್ಲ. ಶನಿವಾರ ವಯೋವೃದ್ಧ ಶರ್ಮಾ ಆತನ ಕಾಲಿಗೂ ಬಿದ್ದಿದ್ದರು!
ಉ.ಪ್ರದೇಶದ ಬುಲಂದ್ ಶಹರ್‌ನಲ್ಲಿರುವ ಕೇಂದ್ರ ಸಚಿವ ಮಹೇಶ ಶರ್ಮಾ ಅವರ ಒಡೆತನದ ಕೈಲಾಶ್ ಆಸ್ಪತ್ರೆಯಲ್ಲಿ ಹಳೆಯ ನೋಟುಗಳನ್ನು ಸ್ವೀಕರಿಸಲು ನಿರಾಕರಿಸಿದ್ದರಿಂದ ಮಗುವೊಂದು ಚಿಕಿತ್ಸೆ ದೊರೆಯದೆ ಮೃತಪಟ್ಟಿದೆ. ಮಗುವನ್ನು ದಾಖಲಿಸುವ ಮುನ್ನ 10,000 ರೂ.ಅಡ್ವಾನ್ಸ್ ತುಂಬುವಂತೆ ಆಸ್ಪತ್ರೆ ಸೂಚಿಸಿತ್ತು. ಆದರೆ ಹೆತ್ತವರ ಬಳಿ ಹಳೆಯ 500 ಮತ್ತು 1,000 ರೂ ನೋಟುಗಳು ಮಾತ್ರ ಇದ್ದವು.
ಮೂರು ದಿನಗಳಿಂದಲೂ ನೋಟು ಗಳನ್ನು ವಿನಿಮಯಿಸಿಕೊಳ್ಳಲು ವಿಫಲ ಪ್ರಯತ್ನ ನಡೆಸಿದ್ದ ದಿಲ್ಲಿಯ ರಿಝ್ವನಾ(24) ನೇಣಿಗೆ ಶರಣಾಗಿದ್ದಾಳೆ.
ಗುಜರಾತಿನ ಸೂರತ್‌ನಲ್ಲಿ ಕುಟುಂಬದ ಹೊಟ್ಟೆ ತುಂಬಿಸಲು ರೇಷನ್ ಖರೀದಿಗೆ ಹಣವಿಲ್ಲದೆ 50ರ ಹರೆಯದ,ಇಬ್ಬರು ಮಕ್ಕಳ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಂಗಡಿಯವರು ಆಕೆಯ ಬಳಿಯಿದ್ದ ಹಳೆಯ ನೋಟುಗಳನ್ನು ಸ್ವೀಕರಿಸಲು ನಿರಾಕರಿಸಿದ್ದರು.
ಉ.ಪ್ರದೇಶದ ಶಾಮ್ಲಿಯಲ್ಲಿ ಶಬಾನಾ(20) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯ ಸೋದರ ಬ್ಯಾಂಕಿನಲ್ಲಿ ಹಳೆಯ ನೋಟುಗಳನ್ನು ವಿನಿಮಯಿಸಿಕೊಳ್ಳಲು ವಿಫಲನಾಗಿದ್ದ. ಈ ಮಾಹಿತಿಯನ್ನು ಶಬಾನಾಗೆ ಮೊಬೈಲ್ ಮೂಲಕ ನೀಡಿದ್ದ. ಆತ ಮನೆಗೆ ವಾಪಸಾಗುವಷ್ಟರಲ್ಲಿ ಆಕೆ ನೇಣಿಗೆ ಶರಣಾಗಿದ್ದಳು.
ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 40ರ ಹರೆಯದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತನ್ನ ಕುಡುಕ ಗಂಡನಿಂದ ಬಚ್ಚಿಟ್ಟಿದ್ದ 15,000 ರೂ.ಗಳ ಹಳೆಯ ನೋಟುಗಳನ್ನು ಬ್ಯಾಂಕಿಗೆ ಒಯ್ದಿದ್ದಾಗ ಅವು ಕಳೆದು ಹೋಗಿದ್ದವು ಅಥವಾ ಯಾರೋ ಅವನ್ನು ಕದ್ದಿದ್ದರು.
ಛತ್ತೀಸಗಡದ ರಾಯಗಡದಲ್ಲಿ 45ರ ಹರೆಯದ ಕೃಷಿಕನೋರ್ವ ಮೂರು ದಿನಗಳ ಕಾಲ 3000 ರೂ.ಗಳ ವಿನಿಮಯಕ್ಕಾಗಿ ಬ್ಯಾಂಕಿನಲ್ಲಿ ವಿಫಲ ಯತ್ನ ನಡೆಸಿದ ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ ಕೈಯಲ್ಲಿ ದುಡ್ಡಿಲ್ಲದೆ ತಮಿಳುನಾಡಿನಲ್ಲಿ ಸಿಕ್ಕಿಹಾಕಿಕೊಂಡಿರುವ ಮಕ್ಕಳಿಗೆ ದುಡ್ಡನ್ನು ಕಳುಹಿಸಬೇಕಾಗಿತ್ತು.
ಗುಜರಾತಿನ ಲಿಂಬ್ಡಿ ಪಟ್ಟಣದಲ್ಲಿ ನೋಟು ಬದಲಿಸಿಕೊಳ್ಳಲು ಬ್ಯಾಂಕಿನಲ್ಲಿ ಸರದಿ ಸಾಲಿನಲ್ಲಿ ನಿಂತಿದ್ದ 69ರ ಹರೆಯದ ವ್ಯಕ್ತಿ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಕಾನಪುರದಲ್ಲಿ ತಾನು ಕೂಡಿಟ್ಟಿದ್ದ ನೋಟುಗಳನ್ನು ಎಣಿಸುತ್ತಿದ್ದ ವೃದ್ಧೆ ಮೃತಪಟ್ಟಿದ್ದಾಳೆ. ಪೊಲೀಸರು ಸ್ಥಳಕ್ಕೆ ತಲುಪಿದಾಗ ಒಂಟಿಯಾಗಿ ವಾಸವಿದ್ದ ಆಕೆಯ ಶವದ ಪಕ್ಕದಲ್ಲಿ 2.69 ಲ.ರೂ.ಗಳ ಹಳೆಯ ನೋಟುಗಳಿದ್ದವು.
ಕಾನಪುರದಲ್ಲಿಯೇ ಪ್ರಧಾನಿ ನರೇಂದ್ರ ಮೋದಿಯವರು ನೋಟು ನಿಷೇಧ ಕ್ರಮವನ್ನು ಪ್ರಕಟಿಸಿದ್ದನ್ನು ಟಿವಿಯಲ್ಲಿ ನೋಡುತ್ತಿದ್ದ ಯುವಕನೋರ್ವ ಹೃದಯಾಘಾತದಿಂದ ಸತ್ತಿದ್ದಾನೆ. ಮುನ್ನಾದಿನವಷ್ಟೇ ಆತ ತನ್ನ ಜಾಗದ ಮಾರಾಟಕ್ಕೆ ಮುಂಗಡವಾಗಿ ಗಿರಾಕಿಯಿಂದ 70 ಲ.ರೂ.ಪಡೆದುಕೊಂಡಿದ್ದ. ಹಲವಾರು ತಿಂಗಳುಗಳಿಂದಲೂ ಜಾಗ ಮಾರಲು ಆತ ಪ್ರಯತ್ನಿಸುತ್ತಿದ್ದ.
ಮುಂಬೈಯಲ್ಲಿ ಹೆತ್ತವರ ಬಳಿ ಹಳೆಯ ನೋಟುಗಳು ಮಾತ್ರ ಇದ್ದಿದ್ದರಿಂದ ಅಸ್ವಸ್ಥ ನವಜಾತ ಶಿಶುವನ್ನು ದಾಖಲಿಸಿಕೊಳ್ಳಲು ಖಾಸಗಿ ಆಸ್ಪತ್ರೆಯು ನಿರಾಕರಿಸಿದ್ದರಿಂದ ಅದು ಮೃತಪಟ್ಟಿದೆ.
ಇದೇ ಕಾರಣದಿಂದ ಆಂಧ್ರ ಪ್ರದೇಶದ ವೈಜಾಗ್‌ನಲ್ಲಿ 18 ತಿಂಗಳ ಮಗು ಕೋಮಲಿ ಸಾವಿನ ಮಡಿಲು ಸೇರಿದೆ.
ಉ.ಪ್ರದೇಶದ ಮೈನ್‌ಪುರಿಯಲ್ಲಿ ಒಂದರ ಹರೆಯದ ಕುಶ್‌ನ ಹೆತ್ತವರ ಬಳಿ 100 ರೂ.ನೋಟುಗಳು ಮುಗಿದುಹೋಗಿದ್ದವು. ಹೀಗಾಗಿ ವಿಪರೀತ ಜ್ವರದಿಂದ ನರಳುತ್ತಿದ್ದ ಮಗುವಿಗೆ ಚಿಕಿತ್ಸೆ ನೀಡಲು ವೈದ್ಯರು ನಿರಾಕರಿಸಿದ್ದರು. ಮಗುವನ್ನು ಮನೆಗೆ ವಾಪಸ್ ಕರೆತಂದ ಕೆಲವೇ ಕ್ಷಣಗಳಲ್ಲಿ ಅದು ಅಸು ನೀಗಿದೆ. ತಂದೆಯ ಬಳಿಯಿರುವ 500 ರೂ.ನೋಟುಗಳು ಈಗ ರದ್ದಿ ಕಾಗದಗಳಷ್ಟೇ.
ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ಹಳೆಯ ನೋಟುಗಳನ್ನು ಪಡೆಯಲು ಆ್ಯಂಬುಲನ್ಸ್ ಚಾಲಕ ನಿರಾಕರಿಸಿದ್ದರಿಂದ ನವಜಾತ ಶಿಶುವನ್ನು ಆಸ್ಪತ್ರೆಗೆ ಸಾಗಿಸಲು ಸಾಧ್ಯವಾಗದೆ ಅಸು ನೀಗಿದೆ.
ಉ.ಪ್ರದೇಶದ ಖುಷಿನಗರ ಜಿಲ್ಲೆಯಲ್ಲಿ ತಾನು ಉಳಿಸಿದ್ದ 1,000 ರೂ.ಗಳ ಎರಡು ನೋಟುಗಳೊಂದಿಗೆ ಬ್ಯಾಂಕಿಗೆ ತೆರಳಿದ್ದ,ನೋಟು ನಿಷೇಧದ ಮಾಹಿತಿಯಿಲ್ಲದಿದ್ದ ಧೋಬಿ ಮಹಿಳೆಯೋರ್ವಳು ಅವು ನಡೆಯುವುದಿಲ್ಲ ಎಂಬ ಸುದ್ದಿ ಕೇಳಿಯೇ ಹೃದಯಾಘಾತಕ್ಕೆ ಬಲಿಯಾಗಿದ್ದಾಳೆ.
ತೆಲಂಗಾಣದ ಮೆಹಬೂಬಾಬಾದ್ ಜಿಲ್ಲೆಯಲ್ಲಿ ಕೆಲ ದಿನಗಳ ಹಿಂದಷ್ಟೇ ಗಂಡನ ಚಿಕಿತ್ಸೆ ಮತ್ತು ಮಗಳ ಮದುವೆಗಾಗಿ ಭೂಮಿ ಮಾರಿ 54 ಲ.ರೂ.ಗಳನ್ನು ಮನೆಯಲ್ಲಿಟ್ಟುಕೊಂಡಿದ್ದ ಕಂದುಕುರು ವಿನೋದಾ(55) ನೋಟು ನಿಷೇಧದ ವಿಷಯ ಗೊತ್ತಾದ ಬಳಿಕ ತನ್ನಲ್ಲಿರುವ ಹಣಕ್ಕೆ ಯಾವುದೇ ಬೆಲೆಯಿಲ್ಲವೆಂದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ.ಬಂಗಲದ ಹೌರಾದಲ್ಲಿ ನೋಟು ನಿಷೇಧದಿಂದಾಗಿ ಉದ್ವಿಗ್ನತೆಗೊಳಗಾಗಿದ್ದ ವ್ಯಕ್ತಿ ಎಟಿಎಂನಿಂದ ಖಾಲಿ ಕೈಯಿಂದ ವಾಪಸಾಗಿದ್ದ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಆಕೆ ಇನ್ನಷ್ಟು ಹೊತ್ತು ಸರದಿಯಲ್ಲಿ ನಿಲ್ಲಬೇಕಾಗಿತ್ತು ಎಂದು ಆತ ವಾದಿಸಿದ್ದ.
ಬಿಹಾರದ ಕೈಮೂರ್ ಜಿಲ್ಲೆಯಲಿ ರಾಮ ಅವಧ್ ಶಾ(45) ತನ್ನ ಮಗಳ ಭಾವಿ ಅತ್ತೆ-ಮಾವ ವರದಕ್ಷಿಣೆಯಾಗಿ ತನ್ನಲ್ಲಿದ್ದ ಹಳೆಯ ನೋಟುಗಳನ್ನು ಸ್ವೀಕರಿಸದಿರಬಹುದು ಎಂಬ ಭೀತಿಯಿಂದ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಆತ ಸುಮಾರು 35,000 ರೂ.ಗಳನ್ನು ಉಳಿಸಿದ್ದ. ಕೇರಳದ ತಲಚ್ಚೇರಿಯಲ್ಲಿ ಮುನ್ನಾದಿನವಷ್ಟೇ ಸಾಲವಾಗಿ ಪಡೆದಿದ್ದ ಐದು ಲ.ರೂ.ಗಳನ್ನು ಬ್ಯಾಂಕ್‌ನಲ್ಲಿ ಜಮಾ ಮಾಡಲು ಸಾಧ್ಯವಾಗದೆ ಮರುದಿನ ಮತ್ತೆ ಬ್ಯಾಂಕಿಗೆ ತೆರಳಿದ್ದ ಕೆ.ಕೆ.ಉಣ್ಣಿ(45) ಡಿಪಾಸಿಟ್ ಸ್ಲಿಪ್ ತುಂಬುವಾಗ ಎರಡನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ.
ಮುಂಬೈನ ಬ್ಯಾಂಕೊಂದರಲ್ಲಿ ಹಳೆಯ ನೋಟುಗಳನ್ನು ಜಮಾ ಮಾಡಲು ಕಾಯುತ್ತಿದ್ದ ವಿಶ್ವಾಸ ವರ್ತಕ್(72) ಮತ್ತು ಗುಜರಾತ್‌ನ ತಾರಾಪುರದಲ್ಲಿ ಬ್ಯಾಂಕಿನಲ್ಲಿ ಕೃಷಿಕ ಬರ್ಕತ್ ಶೇಖ್(47) ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಕೇರಳದ ಅಲಪ್ಪುಳದಲ್ಲಿ ಬ್ಯಾಂಕಿನ ಹೊರಗೆ ಸರದಿ ಸಾಲಿನಲ್ಲಿ ಕಾಯುತ್ತಿದ್ದ ಕಾರ್ತಿಕೇಯನ್(75) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿ ಗೋಪಾಲ ಶೆಟ್ಟಿ(96) ಬ್ಯಾಂಕಿನಲ್ಲಿ ನೋಟು ವಿನಿಮಯಕ್ಕಾಗಿ ಸಾಲಿನಲ್ಲಿ ನಿಂತಿದ್ದಾಗ ಕುಸಿದು ಬಿದ್ದು ಮೃತರಾಗಿದ್ದಾರೆ.
ಮಧ್ಯಪ್ರದೇಶದ ಸಾಗರ ನಗರದಲ್ಲಿ ವಿನಯ ಕುಮಾರ ಪಾಂಡೆ(69) ಬ್ಯಾಂಕಿನಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದರೆ. ಭೋಪಾಲದಲ್ಲಿ ಎಸ್‌ಬಿಐ ಕ್ಯಾಷಿಯರ್ ಕೆಲಸದ ಒತ್ತಡದಿಂದಾಗಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಫೈಝಾಬಾದ್‌ನಲ್ಲಿ ನ.8ರಂದು ರಾತ್ರಿ ಮೋದಿಯವರ ಟಿವಿ ಭಾಷಣ ನೊಡುತ್ತಿದ್ದ ವ್ಯಾಪಾರಿ ಎದೆನೋವೆಂದು ದೂರಿಕೊಂಡು ವೈದ್ಯರು ಬರುವ ಮುನ್ನವೇ ಇಹಲೋಕ ತ್ಯಜಿಸಿದ್ದರು.