ಪ್ಲೂಟೊದಲ್ಲಿ ಭೂಗತ ಸಾಗರ ಪತ್ತೆ, ಜೀವಿಗಳ ಅಸ್ತಿತ್ವ ಕಷ್ಟ: ಸಂಶೋಧಕರು
ಹೂಸ್ಟನ್, ನ. 17: ದೂರದ ಸಣ್ಣ ಗ್ರಹ ಪ್ಲೂಟೊದ ಮಧ್ಯ ಭಾಗದ ಬಯಲು ಪ್ರದೇಶದ ಶೀತಲೀಕೃತ ಮೇಲ್ಮೈಯ ತಳದಲ್ಲಿ ಹುದುಗಿರುವ ಸಾಗರವಿದೆ ಹಾಗೂ ಈ ಸಾಗರದಲ್ಲಿ ಭೂಮಿಯ ಎಲ್ಲ ಸಮುದ್ರಗಳಲ್ಲಿರುವಷ್ಟೇ ನೀರು ತುಂಬಿದೆ ಎಂಬುದಕ್ಕೆ ಪುರಾವೆಯನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.
‘ನೇಚರ್’ ಪತ್ರಿಕೆಯಲ್ಲಿ ಪ್ರಕಟಗೊಂಡಿರುವ ಈ ಸಂಶೋಧನೆಯ ಹಿನ್ನೆಲೆಯಲ್ಲಿ, ಭೂಗತ ಸಾಗರಗಳಿರುವ ಗ್ರಹಗಳ ಪಟ್ಟಿಗೆ ಈಗ ಪ್ಲೂಟೊ ಕೂಡ ಸೇರಿದಂತಾಗಿದೆ. ಇಂಥ ಗ್ರಹಗಳ ಕೆಲವು ಸಾಗರಗಳಲ್ಲಿ ಜೀವಿಗಳು ಇರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಪ್ಲೂಟೊದ ಮಂಜಿನಿಂದ ಆವೃತವಾಗಿರುವ ಸಾಗರ ಶೀತಲೀಕೃತ ಮೇಲ್ಮೈಯಿಂದ 150ರಿಂದ 200 ಕಿಲೋಮೀಟರ್ ಕೆಳಗಿದೆ ಹಾಗೂ ಸಮುದ್ರ ಸುಮಾರು 100 ಕಿಲೋಮೀಟರ್ ಆಳವಾಗಿದೆ ಎಂದು ಕ್ಯಾಲಿಫೋರ್ನಿಯ ವಿಶ್ವವಿದ್ಯಾನಿಲಯದ ಗ್ರಹ ವಿಜ್ಞಾನಿ ಫ್ರಾನ್ಸಿಸ್ ನಿಮ್ಮಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಪ್ಲೂಟೊದ ಸಾಗರದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಮಂಜು ತುಂಬಿರುವುದರಿಂದ ಅಲ್ಲಿ ಜೀವವಿರುವ ಸಾಧ್ಯತೆ ಕಡಿಮೆ ಎಂದು ಇನ್ನೋರ್ವ ಸಂಶೋಧಕ ಹಾಗೂ ಮ್ಯಾಸಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಗ್ರಹ ವಿಜ್ಞಾನಿ ರಿಚರ್ಡ್ ಬಿಂಝೆಲ್ ಹೇಳುತ್ತಾರೆ.
ದ್ರವ ರೂಪದ ನೀರು ಜೀವಿಗಳ ಅಸ್ತಿತ್ವಕ್ಕೆ ಅತ್ಯಗತ್ಯ ಅಂಶಗಳ ಪೈಕಿ ಒಂದು.