ಸಿಂಧು ಸೆಮಿ ಫೈನಲ್‌ಗೆ, ಜಯರಾಮ್‌ಗೆ ಸೋಲು
ಹೊಸದಿಲ್ಲಿ, ನ.18: ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಶಟ್ಲರ್ ಪಿ.ವಿ.ಸಿಂಧು ಚೀನಾ ಓಪನ್ ಸೂಪರ್ ಸರಣಿ ಟೂರ್ನಮೆಂಟ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದಾರೆ.
ಶುಕ್ರವಾರ ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸಿಂಧು ಕೇವಲ 30 ನಿಮಿಷಗಳಲ್ಲಿ ಚೀನಾದ ಬಿಂಗ್‌ಜಿಯಾವೊರನ್ನು 22-20, 21-10 ಗೇಮ್‌ಗಳ ಅಂತರದಿಂದ ಮಣಿಸಿದರು.
ಹೈದರಾಬಾದ್ ಆಟಗಾರ್ತಿ ಮುಂದಿನ ಸುತ್ತಿನಲ್ಲಿ ಜಪಾನ್‌ನ ಅಕಾನ್ ಯಮಗುಚಿ ಅಥವಾ ಚೈನೀಸ್ ತೈಪೆಯ ಜಿ ಹ್ಯೂನ್ ಸಂಗ್‌ರನ್ನು ಎದುರಿಸಲಿದ್ದಾರೆ.
ಮೊದಲ ಗೇಮ್‌ನಲ್ಲಿ ಉಭಯ ಆಟಗಾರ್ತಿಯರಿಂದ ತೀವ್ರ ಪೈಪೋಟಿ ಕಂಡು ಬಂದಿತ್ತು. ಚೀನಾದ ಶಟ್ಲರ್ ಪ್ರತಿಬಾರಿಯೂ ಹಿನ್ನಡೆಯಿಂದ ಚೇತರಿಸಿಕೊಳ್ಳುತ್ತಾ ಬಂದಿದ್ದರು. ಆದರೆ ಕಠಿಣ ಶ್ರಮ ಹಾಕಿದ ಸಿಂಧು ಮೊದಲ ಸೆಟ್‌ನ್ನು 22-20ರಿಂದ ಗೆದ್ದುಕೊಂಡರು. ಎರಡನೆ ಗೇಮ್‌ನ್ನು ಕೇವಲ 18 ನಿಮಿಷದಲ್ಲಿ ಗೆದ್ದುಕೊಂಡ ಸಿಂಧು ಚೀನಾದ ಆಟಗಾರ್ತಿಯ ವಿರುದ್ಧ ಮೇಲುಗೈ ಸಾಧಿಸಿದರು.
ಇದೇ ವೇಳೆ, ಪುರುಷರ ಸಿಂಗಲ್ಸ್‌ನಲ್ಲಿ ಅಜಯ್ ಜಯರಾಮ್ ಹೋರಾಟಕ್ಕೆ ತೆರೆ ಬಿದ್ದಿದೆ. ಜಯರಾಮ್ ಪುರುಷರ ಸಿಂಗಲ್ಸ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ಹಾಲಿ ಒಲಿಂಪಿಕ್ಸ್ ಚಾಂಪಿಯನ್ ಚೀನಾದ ಚೆನ್ ಲಾಂಗ್ ವಿರುದ್ಧ 15-21, 14-21ಗೇಮ್‌ಗಳ ಅಂತರದಿಂದ ಶರಣಾದರು.