ಕೇಂದ್ರ- ನ್ಯಾಯಾಂಗದ ನಡುವೆ ಬಿಗ್ ಫೈಟ್‌ಗೆ ವೇದಿಕೆ ಸಜ್ಜು!
ಹೊಸದಿಲ್ಲಿ, ನ.19: ಕೇಂದ್ರ ಸರ್ಕಾರ ಹಾಗೂ ನ್ಯಾಯಾಂಗದ ನಡುವಿನ ಮುಸುಕಿನ ಗುದ್ದಾಟ ಇದೀಗ ಬಹಿರಂಗವಾಗಿ ತೀವ್ರ ಸ್ವರೂಪ ಪಡೆದಿದೆ. ಸುಪ್ರೀಂಕೋರ್ಟ್‌ನ ಕೊಲಾಜಿಯಂ ಸಮಿತಿ ಶಿಫಾರಸು ಮಾಡಿದ 43 ನ್ಯಾಯಾಧೀಶರ ಹೆಸರುಗಳನ್ನು ತಿರಸ್ಕರಿಸಿರುವ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೆಡ್ಡುಹೊಡೆದಿದ್ದು, ಈ ಹೆಸರುಗಳನ್ನು ಮರು ಶಿಫಾರಸು ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಹೈಕೋರ್ಟ್‌ಗಳಿಗೆ ಶಿಫಾರಸು ಮಾಡಿರುವ ನ್ಯಾಯಮೂರ್ತಿಗಳ ಹೆಸರನ್ನು ಮರುಪರಿಶೀಲನೆ ಮಾಡುವಂತೆ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಕೋರಿತ್ತು. 43 ನ್ಯಾಯಮೂರ್ತಿಗಳ ಆಯ್ಕೆಯಲ್ಲಿ ಏಕರೂಪದ ಮಾನದಂಡವನ್ನು ಅನುಸರಿಸಿಲ್ಲ ಎನ್ನುವುದು ಕೇಂದ್ರ ಸರ್ಕಾರದ ವಾದವಾಗಿದೆ.
ನ್ಯಾಯಾಧೀಶರ ನೇಮಕಾತಿ ಬಗ್ಗೆ ಶಿಫಾರಸು ಮಾಡುವ ಸುಪ್ರೀಂಕೋರ್ಟ್ ಹಿರಿಯ ನ್ಯಾಯಮೂರ್ತಿಗಳನ್ನು ಒಳಗೊಂಡ ಕೊಲಾಜಿಯಂ ಸಮಿತಿ ಮತ್ತೆ ಸಭೆ ಸೇರಿ ಹಿಂದೆ ಶಿಫಾರಸು ಮಾಡಿದ್ದ ಹೆಸರುಗಳನ್ನೇ ಮರು ಶಿಫಾರಸು ಮಾಡದಲು ನಿರ್ಧರಿಸಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಅವರು ಭಾರತದ ಅಟಾರ್ಜಿ ಜನರಲ್ ಮುಕುಲ್ ರೋಹಟ್ಗಿ ಅವರಿಗೆ ಸ್ಪಷ್ಟಪಡಿಸಿದ್ದಾರೆ. ಪ್ರಕರಣದ ವಿಚಾರಣೆಯನ್ನು ಜನವರಿಗೆ ಮುಂದೂಡಲಾಗಿದೆ.
ನ್ಯಾಯಾಧೀಶರ ನೇಮಕಾತಿ ನಿರ್ಧಾರ ಕೈಗೊಳ್ಳಲು ವಿಧಿವಿಧಾನಗಳ ಚೌಕಟ್ಟನ್ನು ಅಂತಿಮ ಪಡಿಸುವಂತೆ ಸುಪ್ರೀಂಕೋರ್ಟ್‌ನ ಐವರು ನ್ಯಾಯಾಧೀಶರ ಪೀಠ ನೀಡಿದ್ದ ಸಲಹೆಯನ್ನೇ ಉಲ್ಲೇಖಿಸಿ, ಕೇಂದ್ರ ಸರ್ಕಾರ ಹೆಸರುಗಳನ್ನು ವಾಪಸ್ ಕಳುಹಿಸಿದೆ. ಸುಪ್ರೀಂಕೋರ್ಟ್ ನ್ಯಾಯಪೀಠ ತೀರ್ಪು ನೀಡಿ ಒಂದು ವರ್ಷವಾದರೂ, ವಿಧಿವಿಧಾನಗಳ ಚೌಕಟ್ಟು ಇನ್ನೂ ಅಂತಿಮವಾಗಿಲ್ಲ.