×
Ad

ನೋಟು ರದ್ದು ‘ಮಹತ್ವದ ಹೆಜ್ಜೆ’ ಎಂದಿದ್ದ ಬಿಲ್ ಗೇಟ್ಸ್ ತಿಪ್ಪರಲಾಗ

Update: 2016-11-19 12:01 IST

ಹೊಸದಿಲ್ಲಿ, ನ.19: ಮೋದಿ ಸರಕಾರ 500 ಹಾಗೂ 1000 ರೂ. ನೋಟುಗಳನ್ನು ರದ್ದುಪಡಿಸಿದ ಕ್ರಮವನ್ನು 'ದಿಟ್ಟಕ್ರಮ'ವೆಂದು ಮೈಕ್ರೋಸಾಫ್ಟ್ ಸ್ಥಾಪಕ ಬಿಲ್ ಗೇಟ್ಸ್ ಬುಧವಾರದಂದು ಪ್ರಶಂಸಿಸಿದ್ದರೆ ಮರುದಿನವೇ ತಿಪ್ಪರಲಾಗ ಹಾಕಿದ್ದು ‘‘ಈ ವಿಚಾರದಲ್ಲಿ ನನ್ನ ಯಾವುದೇ ಅಭಿಪ್ರಾಯವಿಲ್ಲ’’ ಎಂದಿದ್ದಾರೆ. ಸರಕಾರದ ಕ್ರಮದ ಬಗ್ಗೆ ಹಲವು ಪ್ರಶ್ನೆಗಳ ಹೊರತಾಗಿಯೂ ಪ್ರತಿಕ್ರಿಯಿಸಲು ಅವರು ನಿರಾಕರಿಸಿದ್ದಾರೆ.

ಬುಧವಾರದಂದು ನೀತಿ ಆಯೋಗ ಆಯೋಜಿಸಿದ್ದ ಭಾಷಣ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಬಿಲ್‌ ಗೇಟ್ಸ್ ಸರಕಾರದ ಕ್ರಮವನ್ನು ಸ್ವಾಗತಿಸುತ್ತಾ ಡಿಜಿಟಲ್ ವ್ಯವಹಾರಗಳು ಇಲ್ಲಿ ಹೆಚ್ಚಾಗುವವು ಎಂದಿದ್ದರು.
ಆದರೆ ಗುರುವಾರ ಕೆಲ ಆಯ್ದ ಪತ್ರಕರ್ತರೊಂದಿಗೆ ಮಾತನಾಡುವಾಗ ‘‘ಜನರು ಹಣ ಪಡೆಯುವ ಸಲುವಾಗಿ ಸರತಿ ಸಾಲು ನಿಲ್ಲುವುದು ಉತ್ತಮ ಆಡಳಿತದ ಲಕ್ಷಣವೇ?’’ ಎಂಬ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸುತ್ತಾ ‘‘ನನಗೆ ಈ ಕ್ರಮದಿಂದ ಏನೂ ಮಾಡಲು ಇಲ್ಲ. ಯಾರೂ ನನ್ನ ಪ್ರತಿಕ್ರಿಯೆ ಕೇಳಿಲ್ಲ’’ ಎಂದರು. ನಿಖರ ಉತ್ತರಕ್ಕಾಗಿ ಆಗ್ರಹಿಸಿದಾಗ ‘‘ಈ ವಿಚಾರವಾಗಿ ಯಾರೂ ನಮ್ಮೊಡನೆ ಹಿಂದೆಯೂ ನಂತರವೂ ಸಲಹೆ ಕೇಳಿಲ್ಲ. ಪತ್ರಿಕೆಗಳ ಮೂಲಕ ಇದರ ಬಗ್ಗೆ ತಿಳಿದುಕೊಂಡೆ. ನಾನು ವಿಮಾನ ನಿಲ್ದಾಣದಲ್ಲಿದ್ದಾಗ ಅಲ್ಲಿ ದೊಡ್ಡ ಕ್ಯೂ ಇತ್ತು. ಸರಕಾರದ ನೋಟು ರದ್ದತಿ ಕ್ರಮದಿಂದ ಹೀಗಾಗಿದೆ ಎಂದು ಯಾರೋ ಹೇಳಿದರು. ನೋಟು ರದ್ದತಿಯ ವಿಚಾರವನ್ನು ಬದಿಗಿಟ್ಟು ಮಾತನಾಡುವುದಾದರೆ ಡಿಜಿಟಲ್ ವ್ಯವಹಾರಗಳು ಉತ್ತಮ’’ ಎಂದರು.
‘‘ನೋಟು ಅಮಾನ್ಯದ ಬಗ್ಗೆ ನನ್ನ ಯಾವುದೇ ಅಭಿಪ್ರಾಯವಿಲ್ಲ. ಅದೇನೆಂದು ನನಗಿಂತ ನಿಮಗೆ ಚೆನ್ನಾಗಿ ಗೊತ್ತು’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News