ಮಕ್ಕಳ ಶಾಂತಿ ಪ್ರಶಸ್ತಿ ಸ್ಪರ್ಧೆಯಲ್ಲಿ ಯುಎಇಯ ಭಾರತೀಯ ಬಾಲಕಿ
ದುಬೈ, ನ. 19: ಈ ಬಾರಿಯ ಅಂತಾರಾಷ್ಟ್ರೀಯ ಮಕ್ಕಳ ಶಾಂತಿ ಪ್ರಶಸ್ತಿಗಾಗಿ ಆಯ್ಕೆಯಾದ ಅಂತಿಮ ಸುತ್ತಿನ ಸ್ಪರ್ಧಿಗಳಲ್ಲಿ ಯುಎಇಯಲ್ಲಿ ನೆಲೆಸಿರುವ 16 ವರ್ಷದ ಭಾರತೀಯ ಬಾಲಕಿಯೊಬ್ಬರು ಸೇರಿದ್ದಾರೆ. ಬಾಲಕಿಯು ಮಕ್ಕಳ ಹಕ್ಕುಗಳು ಮತ್ತು ಸ್ಥಿತಿಗತಿ ಸುಧಾರಣೆಯಲ್ಲಿ ವಹಿಸಿದ ವಿಶಿಷ್ಟ ಪಾತ್ರವನ್ನು ಗಮನದಲ್ಲಿರಿಸಿ ಈ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಗಾಗಿ ಬಂದ ದಾಖಲೆಯ 120 ಅಂತಾರಾಷ್ಟ್ರೀಯ ಪ್ರವೇಶಪತ್ರಗಳ ಪೈಕಿ, ಪರಿಣತ ಸಮಿತಿಯು ಯುಎಇಯ ಕೆಹ್‌ಕಶನ್ ಬಸು, ಕ್ಯಾಮರೂನ್‌ನ ದಿವೀನಾ ಮಲೂಮ್ ಮತ್ತು ಸಿರಿಯದ ಮುಝೂನ್ ಅಲ್ಮೆಲಹನ್‌ರನ್ನು ಅಂತಿಮ ಸುತ್ತಿಗೆ ಆರಿಸಿದೆ.
ನಾಳೆ ಆಚರಿಸಲಾಗುವ ‘ಜಾಗತಿಕ ಮಕ್ಕಳ ದಿನ’ಕ್ಕೆ ಪೂರ್ವಭಾವಿಯಾಗಿ ಅಂತಾರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂಘಟನೆ ‘ಕಿಡ್ಸ್‌ರೈಟ್ಸ್’ ಈ ಘೋಷಣೆಯನ್ನು ಮಾಡಿದೆ.
ಈ ಎಲ್ಲ ಮೂವರು ಮಕ್ಕಳ ಹಕ್ಕುಗಳು ಮತ್ತು ಸ್ಥಿತಿಗತಿಯನ್ನು ಸುಧಾರಿಸಲು ತಮ್ಮದೇ ಆದ ರೀತಿಯಲ್ಲಿ ದೇಣಿಗೆಗಳನ್ನು ನೀಡಿದ್ದಾರೆ ಎಂದು ಸಂಘಟನೆ ಹೇಳೀದೆ.
ಈ ಬಾರಿಯ ಪ್ರಶಸ್ತಿಯನ್ನು ಡಿಸೆಂಬರ್ 2ರಂದು ಹೇಗ್‌ನ ಹಾಲ್ ಆಫ್ ನೈಟ್ಸ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ 2006ರ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ನೀಡಲಿದ್ದಾರೆ.
ಕೆಹ್‌ಕಶನ್ ಎಳೆಯ ಪ್ರಾಯದಲ್ಲಿಯೇ ಪರಿಸರ ರಕ್ಷಣೆಯ ಪ್ರಚಾರದಲ್ಲಿ ತನ್ನನ್ನು ತೊಡಗಿಸಿಕೊಂಡರು ಹಾಗೂ ಕೇವಲ ಎಂಟರ ಹರಯದಲ್ಲಿ, ತ್ಯಾಜ್ಯ ಮರುಬಳಕೆ ಕುರಿತಂತೆ ದುಬೈಯಲ್ಲಿ ಜಾಗೃತಿ ಅಭಿಯಾನವೊಂದನ್ನು ಸಂಘಟಿಸಿದರು.