ಚೀನಾದ ವಿರೋಧ ಧಿಕ್ಕರಿಸಿ ದಲಾಯಿ ಲಾಮಾ ಮಂಗೋಲಿಯ ಭೇಟಿ
ಉಲಾನ್ ಬಾಟರ್ (ಮಂಗೋಲಿಯ), ನ. 19: ಟಿಬೆಟ್‌ನ ಆಧ್ಯಾತ್ಮಿಕ ಗುರು ದಲಾಯಿ ಲಾಮಾರನ್ನು ದೇಶದೊಳಗೆ ಪ್ರವೇಶಿಸಲು ಬಿಡಬಾರದು ಎಂಬ ಚೀನಾದ ಪ್ರಬಲ ಒತ್ತಾಯದ ಹೊರತಾಗಿಯೂ, ದಲಾಯಿ ಲಾಮಾ ಶನಿವಾರ ತನ್ನ ಮಂಗೋಲಿಯದ ನಾಲ್ಕು ದಿನಗಳ ಪ್ರವಾಸವನ್ನು ಆರಂಭಿಸಿದ್ದಾರೆ.
‘‘ದಲಾಯಿ ಲಾಮಾ ಯಾವುದೇ ದೇಶದಲ್ಲಿ, ಯಾವುದೇ ಹೆಸರಿನಲ್ಲಿ ಮತ್ತು ಯಾವುದೇ ನೆಲೆಯಲ್ಲಿ ನಡೆಸುವ ಚೀನಾ ವಿರೋಧಿ ಪ್ರತ್ಯೇಕತಾವಾದಿ ಚಟುವಟಿಕೆಗಳನ್ನು ಚೀನಾ ದೃಢವಾಗಿ ವಿರೋಧಿಸುವುದು’’ ಎಂಬುದಾಗಿ ಚೀನಾದ ವಿದೇಶ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್ ಶುಕ್ರವಾರ ಸುದ್ದಿಗಾರರಿಗೆ ಹೇಳಿದ್ದರು.
ಅದೇ ವೇಳೆ, ದಲಾಯಿ ಲಾಮಾ ಭೇಟಿಗೆ ಮಂಗೋಲಿಯ ಅನುಮತಿ ನೀಡಬಾರದು ಹಾಗೂ ದಲಾಯಿ ಗುಂಪು ನಡೆಸುವ ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂಬುದಾಗಿಯೂ ಚೀನಾ ಆಗ್ರಹಿಸಿತ್ತು.
ಸಂಪ್ರದಾಯಬದ್ಧ ಬೌದ್ಧರ ನೆಲೆಯಾಗಿರುವ ಮಂಗೋಲಿಯ ಚೀನಾದ ಜೊತೆಗಿನ ವ್ಯಾಪಾರವನ್ನು ಹೆಚ್ಚಾಗಿ ನೆಚ್ಚಿಕೊಂಡಿದೆ.
ಆದಾಗ್ಯೂ, ದಲಾಯಿ ಲಾಮಾ ಟಿಬೆಟ್‌ನ ಸ್ವಾತಂತ್ರಕ್ಕಾಗಿ ಆಗ್ರಹಿಸುವುದನ್ನು ಬಿಟ್ಟು ಹೆಚ್ಚಿನ ಸ್ವಾಯತ್ತೆಗಾಗಿ ಬೇಡಿಕೆಯಿಟ್ಟಿದ್ದಾರೆ.
ಅವರು ಶನಿವಾರ ಬೌದ್ಧ ಅನುಯಾಯಿಗಳನ್ನು ಭೇಟಿಯಾಗಿದ್ದಾರೆ.
ಶುಕ್ರವಾರ ಹೇಳಿಕೆಯೊಂದನ್ನು ನೀಡಿರುವ ಮಂಗೋಲಿಯದ ವಿದೇಶ ವ್ಯವಹಾರಗಳ ಸಚಿವ ಸೆಂಡಿಯಿನ್ ಮುನ್‌ಖ್-ಒರ್ಗಿಲ್, ದಲಾಯಿ ಲಾಮಾ ಭೇಟಿಗೂ ಸರಕಾರಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.