ಹವ್ಯಾಸಿ ರಂಗಭೂಮಿಯ ‘ರತ್ನ’

Update: 2016-11-19 18:23 GMT

ಕಳೆದ ವಾರ ರವೀಂದ್ರ ಕಲಾಕ್ಷೇತ್ರದ ಮೆಟ್ಟಿಲ ಮೇಲೆ ರಂಗಭೂಮಿ, ದೂರದರ್ಶನ ಇತ್ಯಾದಿ ಪ್ರದರ್ಶನ ಕಲೆಗಳಲ್ಲಿ ಕ್ರಿಯಾಶೀಲರಾಗಿರುವ ತರುಣ ಮಿತ್ರರೊಬ್ಬರ ಭೇಟಿಯಾಯಿತು. ಮುಖ ಕಂಡವರೇ ಏಕಾಏಕಿ ಅವರೊಂದು ಪ್ರಶ್ನೆಯನ್ನು ಮುಂದಿಟ್ಟರು:
‘‘ಸರ, ಯಾರ್ರೀ ಈ ರತ್ನ?’’
‘‘ಅಂದರೆ...’’
‘‘ಅದೇರಿ ಸರ, ಕಾರಂತ ಪ್ರಶಸ್ತಿ ...’’
‘‘ರತ್ನ ಗೊತ್ತಿಲ್ವೇನ್ರೀ...’’
‘‘ಮುತ್ತು ರತ್ನ ಗೊತ್ತು ಸರ.... ಯೆಂಡ್ಕುಕ ರತ್ನ ಗೊತ್ತು ಸರ’’
ಮೆಟ್ಟಲು ಮಹಿಮೆಯೇ ಹೀಗೆ...

  ಹೌದು, ಕನ್ನಡ ಹವ್ಯಾಸಿ ರಂಗಭೂಮಿ ಮತ್ತು ವಾಕ್‌ಶ್ರವಣ ವಿಜ್ಞ್ಞಾನದ ಕ್ಷೇತ್ರದಲ್ಲಿ ರತ್ನಪ್ರಾಯರಾದ ನ.ರತ್ನ ಅಲಿಯಾಸ್ ನಟೇಶ ರತ್ನ ಅವರಿಗೆ ಇದೇ ತಿಂಗಳು, 15ರಂದು ಕರ್ನಾಟಕ ಸರಕಾರ ಬಿ.ವಿ.ಕಾರಂತ ಪ್ರಶಸ್ತಿಯನ್ನು ಪ್ರದಾನ ಮಾಡಿತು. ಪಾತ್ರಗಳನ್ನು ಮಾಡುತ್ತಲೇ-ಮಾಡಿಸುತ್ತಲೇ, ಪಾತ್ರಗಳನ್ನು ಬರೆಯುತ್ತಲೇ ಪ್ರಶಸ್ತಿಗೆ ‘ಪಾತ’್ರರಾದವರು ನ.ರತ್ನ. ನ.ರತ್ನ ಇವತ್ತಿನ ತಲೆಮಾರಿನವರಿಗೆ ಅಪರಿಚಿತರಾಗಿ ಕಂಡರೆ ಅದಕ್ಕೆ, ಅವರು ಪ್ರಚಾರಪ್ರಿಯರಲ್ಲ ಇತ್ಯಾದಿ ಹಲವಾರು ಕಾರಣಗಳಿರಬಹುದು, ಆಶ್ಚರ್ಯವೇನಿಲ್ಲ. ನನ್ನಂಥವರಿಗೆ ರತ್ನ ಎಂದರೆ ಆಕಾಶವಾಣಿ, ವಾಕ್‌ಶ್ರವಣ ಶಿಕ್ಷಣ ವಿಜ್ಞಾನ, ಕನ್ನಡ ಹವ್ಯಾಸಿ ರಂಗಭೂಮಿ ಇವೆಲ್ಲ ನೆನಪಿನ ಪುಟಗಳಿಂದ ಎದ್ದುಬಂದು ಕಣ್ಮುಂದೆ ನಿಲ್ಲುತ್ತವೆ. ರತ್ನ ಹುಟ್ಟಿದ್ದು ತಮಿಳುನಾಡಿನ ಚಿದಂಬರಂನಲ್ಲಿ, ಬೆಳೆದದ್ದು, ಓದಿದ್ದು ಮೈಸೂರಿನಲ್ಲಿ, ಅಮೆರಿಕದಲ್ಲಿ. ಅವರ ಸೇವಾ ವ್ಯಾಪ್ತಿ ಕರ್ನಾಟಕದ ಎಲ್ಲೆ ಮೀರಿ ಭಾರತದ ಈಶಾನ್ಯ ತುದಿಯವರೆಗೆ ಚಾಚಿಕೊಂಡಿದೆ. ವೃತ್ತಿಯಿಂದ ವಾಕ್‌ಶ್ರವಣ ಶಿಕ್ಷಣ/ಚಿಕಿತ್ಸಾ ತಜ್ಞರೂ ಪ್ರವೃತ್ತಿಯಿಂದ ನಟರೂ ನಾಟಕಕಾರರೂ ಆಗಿರುವ ರತ್ನ ಬುದ್ಧಿಮತ್ತೆ ಮತ್ತು ಹೃದಯಗಳ ಒಂದು ಹದವಾದ ಸಂಯೋಗ. ವಾಕ್‌ಶ್ರವಣ ಶಿಕ್ಷಣ ತಜ್ಞರಾಗಿ ಸಮಾಜದ ದೈಹಿಕ ನ್ಯೂನತೆಗಳ ಚಿಕಿತ್ಸಕರಾದರೆ, ಕಲಾವಿದರಾಗಿ ಸಮಾಜದ ಬುದ್ಧಿ-ಭಾವಗಳಿಗೆ ಸಾಣೆಹಿಡಿಯುವ ಇನ್ನೊಂದು ತೆರೆನ ಡಾಕ್ಟರು. ರತ್ನ ಅವರಿಗೆ ಈ ವೃತ್ತಿಪ್ರವೃತ್ತಿಗಳೆರಡೂ ತಂದೆಯಿಂದ ಬಂದ ಬಳುವಳಿಯಂತೆ ಕಾಣುತ್ತದೆ. ತಂದೆ, ರಂಗಭೂಮಿಯ ಅಧಿದೈವದ ಅಭಿಧಾನರಾದ ಎಂ.ನಟೇಶನ್. ನಟೇಶನ್ ಕನ್ನಡಿಗರು ಮರೆಯಲಾಗದಂಥ ಹೆಸರು. ಅವರು, ಮೈಸೂರಿನಲ್ಲಿ ಎಂ.ವಿ.ಗೋಪಾಲಸ್ವಾಮಿಯವರು ಹುಟ್ಟಿಸಿದ ಆಕಾಶವಾಣಿಯನ್ನು ಸ್ವಾತಂತ್ರ್ಯಾನಂತರ ಬೆಂಗಳೂರು ಆಕಾಶವಾಣಿಯಾಗಿ ಕಟ್ಟಿಬೆಳೆಸಿದವರು. ವೈವಿಧ್ಯಮಯ ಕಾರ್ಯಕ್ರಮಗಳು, ನಾವೀನ್ಯತೆ ಮತ್ತು ದಕ್ಷ ಆಡಳಿತಗಳಿಂದ ಬೆಂಗಳೂರು ಆಕಾಶವಾಣಿಗೆ ಭದ್ರವಾದ ಸಾಂಸ್ಕೃತಿಕ ಬುನಾದಿ ನಿರ್ಮಿಸಿದ ಕೀರ್ತಿ ನಟೇಶನ್ ಅವರದು. ಆಕಾಶವಾಣಿ ಸೇರುವುದಕ್ಕೆ ಮುನ್ನ ನಟೇಶನ್ ಮೈಸೂರಿನ ಅಂಧ ಮತ್ತು ಕಿವುಡರ ಸರಕಾರಿ ಶಾಲೆಯಲ್ಲಿ ಮಖ್ಯೋಪಾಧ್ಯಾಯರಾಗಿದ್ದರು. ಮೈಸೂರಿನ ಹವ್ಯಾಸಿ ರಂಭೂಮಿಯಲ್ಲಿ ಅಭಿನಯ ಮೊದಲಾದವುಗಳಿಂದ ಕ್ರಿಯಾಶಾಲಿಯಾಗಿ ತೊಡಗಿಕೊಂಡಿದ್ದವರು. ಇಂಥ ಸಂಸ್ಕಾರಜನ್ಯ ಜೀವಿ ನ.ರತ್ನ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಮುಗಿಸಿದರು. ಅಲ್ಲೇ ಬಿ.ಎಡ್. ಪಾಸುಮಾಡಿದರು. ನಂತರ ಅಮೆರಿಕದಲ್ಲಿ ಉನ್ನತ ವ್ಯಾಸಂಗ. ವಾಕ್ ಶ್ರವಣ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ-ಅಂಧರು ಮತ್ತು ಶ್ರವಣ ನ್ಯೂನತೆಯುಳ್ಳವರಿಗೆ ಶಿಕ್ಷಣ ನೀಡುವುದರಲ್ಲಿ ಪರಿಣತಿ ಪಡೆದರು. ಇಂಡಿಯಾನ ಸ್ಟೇಟ್ ಕಿವುಡರ ಶಾಲೆಯಲ್ಲಿ ಬೋಧಕರಾಗಿ ವೃತ್ತಿ ಜೀವನ ಶುರುಮಾಡಿದರು. ಸ್ವಲ್ಪಕಾಲ ಇಂಡಿಯಾನ ವಿಶ್ವವಿದ್ಯಾನಿಲಯದಲ್ಲಿ ವಾಕ್‌ಚಿಕಿತ್ಸಾ ತಜ್ಞರಾಗಿ(ಸ್ಪೀಚ್ ಥೆರಪಿಸ್ಟ್) ಸೇವೆಸಲ್ಲಿಸಿದರು. 1960ರಲ್ಲಿ ಮರಳಿ ಮೈಸೂರಿಗೆ. ಅಲ್ಲಿನ ಇನ್‌ಸ್ಟಿಟ್ಯೂಟ್ ಆಫ್ ಲೋಗೋಪೆಡಿಕ್ಸ್ಸ್‌ನಲ್ಲಿ ಉದ್ಯೋಗ. ಮುಂದೆ ಇದು, ರತ್ನ ಅವರ ಅವಿರತ ಹೋರಾಟದ ಫಲವಾಗಿ ವಾಕ್ ಶ್ರವಣ ಸಂಸ್ಥೆಯಾಯಿತು(ಇನ್ಸ್ಟಿಟ್ಯೂಟ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್). ರತ್ನ ಇದರ ಸಂಸ್ಥಾಪಕ ನಿರ್ದೇಶಕರಾದರು. ರತ್ನ ವಾಕ್ ಶ್ರವಣ ಶಾಸ್ತ್ರಜ್ಞರಷ್ಟೇ ಅಲ್ಲ, ಅವರೊಬ್ಬ ಶಿಕ್ಷಣವೇತ್ತರೂ ಹೌದು. ವಾಕ್ ಶ್ರವಣ ನ್ಯೂನತೆಗಳನ್ನು ವಿಶ್ವವಿದ್ಯಾನಿಲಯಗಳ ಮಟ್ಟದಲ್ಲಿ ಆಧ್ಯಯನಕ್ಕೆ ಅಕಾಡಮಿಕ್ ಮಂದಿಯ ಅಂಗೀಕಾರ ಪಡೆಯುವುದರಲ್ಲಿ ರತ್ನರ ಪಾತ್ರ ಸ್ಮರಣೀಯವಾದದ್ದು.
  
  ರತ್ನ ಅವರದು ಬಹುಮುಖ ಸಾಮರ್ಥ್ಯದ ವ್ಯಕ್ತಿತ್ವ. ಮೈಸೂರಿನಲ್ಲಿ ವಾಕ್‌ಶ್ರವಣ ಸಂಸ್ಥೆಯನ್ನು ಬೆಳೆಸುತ್ತಲೇ ರಾಜಸ್ತಾನ, ಈಶಾನ್ಯ ರಾಜ್ಯಗಳು ಮುಂತಾಡೆಗಳಲ್ಲೆಲ್ಲ ಸುತ್ತಿ ವಾಕ್ ಶ್ರವಣ ನ್ಯೂನತೆಯುಳ್ಳವರ ಶಿಕ್ಷಣಕ್ಕಾಗಿ ಶಾಲೆಗಳನ್ನು ಅಭಿವೃದ್ಧಿಪಡಿಸುವುದರಲ್ಲಿ ಶ್ರಮಿಸಿದರು. ಹೀಗೆ ಅವರ ವೃತ್ತಿಯ ಸಾಧನೆಗಳ ಯಾದಿ ಬೆಳೆಯುತ್ತದೆ. ರತ್ನರ ಬಹುಮುಖ ಪ್ರತಿಭೆ ಸಾಮರ್ಥ್ಯಗಳ ಇನ್ನೊಂದು ಆಯಾಮವನ್ನು ಅವರ ಪ್ರವೃತ್ತಿಯಲ್ಲಿ ಕಾಣಬಹುದು. ಸಾಹಿತ್ಯ ಮತ್ತು ರಂಗಭೂಮಿಯಲ್ಲಿ ಅವರಿಗೆ ವಿಶೇಷ ಒಲವು. ಅವರು ಮೈಸೂರಿಗೆ ಹಿಂದಿರುಗಿದಾಗ ಕನ್ನಡ ಸಾಹಿತ್ಯದಲ್ಲಿ ನವ್ಯದ ಶಕೆ ಶುರುವಾಗಿತ್ತು. ಇದರ ಪ್ರಭಾವ ಹವ್ಯಾಸಿ ರಂಗಭೂಮಿಯನ್ನೂ ವ್ಯಾಪಿಸಿತ್ತು. ಹೊಸ ನಾಟಕಗಳ ರಂಗಪ್ರಯೋಗಗಳು ಬೆಂಗಳೂರಿನಲ್ಲಿ ಸುದ್ದಿಮಾಡಲಾರಂಭಿಸಿದ್ದವು. 1966ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಸುವರ್ಣ ಮಹೋತ್ಸವ ಸಂದರ್ಭ ಮೈಸೂರಿನ ರಂಗಹವ್ಯಾಸಿಗಳಲ್ಲೂ ನವ್ಯನಾಟಕಗಳ ಪ್ರಯೋಗಕ್ಕೆ ಪ್ರೇರಣೆ ಪ್ರಚೋದನೆಗಳನ್ನು ಒದಗಿಸಿತು. ‘ಸಮೆತೆಂತೋ’ (ಸರಸ್ವತೀಪುರಂನ ತೆಂಗಿನತೋಟದ ಹವ್ಯಾಸಿ ಕಲಾವಿದರ ಹ್ರಸ್ವ ರೂಪ) ಹವ್ಯಾಸಿ ರಂಗ ತಂಡ, ಹೀಗೆ, ರತ್ನ, ಸಿಂಧುವಳ್ಳಿ ಅನಂತ ಮೂರ್ತಿ ಮತ್ತು ಎಚ್.ಎಂ.ಚನ್ನಯ್ಯನವರ ಅಧ್ವರ್ಯುತನದಲ್ಲಿ ಹುಟ್ಟಿತು. ಈ ತಂಡದ ಮೊದಲ ರಂಗಪ್ರಯೋಗ ಪೂರ್ಣಚಂದ್ರ ತೇಜಸ್ವಿಯವರ ‘ಯಮಳಪ್ರಶ್ನೆ’. ಮೈಸೂರಿನ ಹವ್ಯಾಸಿ ರಂಗಭೂಮಿ ಕುರಿತು ಮಾತನಾಡುವಾಗ ಇತಿಹಾಸದತ್ತ ಒಂದು ಇಣುಕು ನೋಟ ಹರಿಸುವುದು ಅಗತ್ಯವೆನಿಸುತ್ತದೆ. ಕನ್ನಡ ಹವ್ಯಾಸಿ ರಂಗಭೂಮಿಯ ಇತಿಹಾಸ 1909ರಲ್ಲಿ ಬೆಂಗಳೂರಿನಲ್ಲಿ ಅಸ್ತಿತ್ವಕ್ಕೆ ಬಂದ ಅಮೆಚೂರ್ ಡ್ರಮ್ಯಾಟಿಕ್ ಅಸೋಸಿಯೇಷನ್ನಿನಿಂದ ಶುರುವಾಗುತ್ತದೆ.ಇದರ ಸ್ಫೂರ್ತಿಯಿಂದಲೋ ಎಂಬಂತೆ 1919ರಲ್ಲಿ ಮೈಸೂರಿನ ಪ್ರಥಮ ಹವ್ಯಾಸಿ ತಂಡ ‘ದಿ ಲಿಟರರಿ ಅಂಡ್ ಡ್ರಮ್ಯಾಟಿಕ್ ಅಸೋಸಿಯೇಷನ್’ ಜನ್ಮತಾಳಿತು. ಡಿ.ಲಕ್ಷ್ಮಯ್ಯ ಎಂಬ ನಟರು ಇದರ ಆತ್ಮವಾಗಿದ್ದರು ಎಂದು ಎಚ್.ಕೆ.ರಂಗನಾಥ್ ಬರೆಯುತ್ತಾರೆ. ಮುಂದೆ ಇದು ಮೈಸೂರು ನಾಟಕ ಸಂಘವಾಯಿತು. ನಂತರ ಮೈಸೂರಿನಲ್ಲಿ ಹಲವಾರು ಹವ್ಯಾಸಿ ತಂಡಗಳು ಹುಟ್ಟಿಕೊಂಡವು. ಅವುಗಳೊಂದಿಗೇ ನಂಜನಗೂಡು ಶ್ರೀಕಂಠ ಶಾಸ್ತ್ರಿ, ಆನಂದ ರಾವ್, ಗುರುರಾಜಾ ರಾವ್, ಸಂಪತ್, ಸಿ.ಬಿ.ಜಯರಾವ್, ಎ.ಎಂ.ನಟೇಶ್, ಬಿ.ಕೃಷ್ಣ ಮೊದಲಾದ ಪ್ರತಿಭಾವಂತ ಕಲಾವಿದರೂ ಹುಟ್ಟಿಕೊಂಡರು. ಕೈಲಾಸಂ, ಮಾಸ್ತಿ, ಕುವೆಂಪು, ಪರ್ವತವಾಣಿಯವರ ನಾಟಕಗಳು ಹವ್ಯಾಸಿಗಳ ಪ್ರಯೋಗಗಳಿಗೆ ಅನುಕೂಲಕರವಾಗಿ ಒದಗಿ ಬಂದಿದ್ದ ಕಾಲವದು. ಆದರೆ ಹೊಸ ದಿಕ್ಕುದಿಶೆ ತೋರುವಂಥ ರಂಗಪ್ರಯೋಗಗಳಿಗಾಗಿ ಮೈಸೂರಿನ ಹವ್ಯಾಸಿ ರಂಗಭೂಮಿ ‘ಸಮೆತೆಂತೋ’ ಹುಟ್ಟುವವರೆಗೆ ಕಾಯಬೇಕಾಯಿತು. ಸಮೆತೆಂತೋ ನಾವೀನ್ಯತೆ ಮತ್ತು ಪ್ರಯೋಗಶೀಲತೆಗಳು ‘ಯಮಳಪ್ರಶ್ನೆ’ಯಿಂದಲೇ ಶುರುವಾಯಿತು. ಮುಂದಿನ ಪ್ರಯೋಗಗಳಲ್ಲಿ ಈ ಗುಣವಿಶೇಷಗಳು ಹೆಚ್ಚು ಸ್ಫುಟವಾದ ಅಭಿವ್ಯಕ್ತಿ ಪಡೆದವು. ‘ಎಲ್ಲಿಗೆ?’, ‘ಬೊಂತೆ’, ‘ಗೋಡೆ ಬೇಕೆ ಗೋಡೆ’, ‘ಇಲಿ ಬೋನು’, ‘ಕಾಡು ಪ್ರಾಣಿ’,‘ಆವಾಹನೆ’, ‘ಸತ್ತವರ ನೆರಳು’, ‘ಕದಡಿದ ನೀರು’, ‘ಘಾಶಿರಾಂ ಕೊತ್ವಾಲ್’, ‘ತಲೆ ದಂಡ’, ಮೊದಲಾದ ನಾಟಕಗಳನ್ನು ಮೇಲಿನ ಮಾತಿಗೆ ನಿದರ್ಶನವಾಗಿ ಗಮನಿಸಬಹುದು. ಹೀಗೆ, ಮೈಸೂರಿನ ಹವ್ಯಾಸಿ ರಂಗಭೂಮಿಗೆ ನವ್ಯದ ಆಯಾಮವನ್ನು ನಿರ್ಮಿಸಿದ ಕೀರ್ತಿ ಸಮೆತೆಂತೋಗೆ ಸಲ್ಲುತ್ತದೆ. ಇದರಲ್ಲಿ ನಟರಾಗಿ, ನಾಟಕಕಾರರಾಗಿ ನ.ರತ್ನ ಅವರ ಪಾಲು ದೊಡ್ಡದು.


ನಾಟಕಕಾರರಾಗಿ ನ.ರತ್ನ ಅವರ ಕೊಡುಗೆ ಇರುವುದು ಅವರ ಅಸಂಗತ ನಾಟಕಗಳಲ್ಲಿ. ಅರವತ್ತರ ದಶಕದಲ್ಲಿ ಕನ್ನಡದಲ್ಲಿ ಶ್ರೀರಂಗ, ಪರ್ವತವಾಣಿ, ಎ.ಎಸ್.ಮೂರ್ತಿ, ದಾಶರಥಿ ದೀಕ್ಷಿತ್, ಗುಂಡಣ್ಣ, ನವರತ್ನ ರಾಂ ಜನಪ್ರಿಯ ನಾಟಕಕಾರರು. ಇವರ ಹೊರತು ಹೊಸ ಸಂವೇದನೆಯ ನಾಟಕಗಳು ಬರುತ್ತಿಲ್ಲ ಎನ್ನುವಂಥ ಅಭಾವ ಪರಿಸ್ಥಿತಿ ಸೃಷ್ಟಿಯಾದಾಗ ಕನ್ನಡದಲ್ಲಿ ಅಸಂಗತ ನಾಟಕಗಳ ಅಲೆ ಶುರುವಾಯಿತು, ‘ಬೊಕ್ಕತಲೆ ನರ್ತಕಿ’ ಮುಖೇನ. ಕನ್ನಡದಲ್ಲಿ ಸ್ವೋಪಜ್ಞ ಅಸಂಗತ ನಾಟಕಗಳನ್ನು ಮೊದಲು ಬರೆದವರಲ್ಲಿ ನ.ರತ್ನ ಪ್ರಮುಖರು. ಸುಮಾರ ಒಂಭತ್ತಕ್ಕೂ ಹೆಚ್ಚು ನಾಟಕಗಳನ್ನು ರಚಿಸಿರುವ ರತ್ನ ಅವರ ನಾಟಕ ಸಾಹಿತ್ಯದಲ್ಲಿ ಅಸಂಗತ ನಾಟಕಗಳು ಎದ್ದು ಕಾಣುತ್ತವೆ. ‘ಎಲ್ಲಿಗೆ’?, ‘ಗೋಡೆ ಬೇಕೆ ಗೋಡೆ’, ‘ಬೊಂತೆ’ ರತ್ನ ಅವರ ಅಸಂಗತ ನಾಟಕಗಳ ಮಾದರಿ ಕೃತಿಗಳಾಗಿದ್ದು ಇವು ಅಸಂಗತ ರಂಗಭೂಮಿಯ ವೈಚಾರಿಕತೆ ಮತ್ತು ಪ್ರಯೋಗಶೀಲತೆಗಳನ್ನು ಮೈಗೂಡಿಸಿಕೊಂಡಿವೆ. ಅಸಂಗತ ಕ್ರಿಯೆಗಳ ಮೂಲಕ ಮಾನವ ಸಂಬಂಧಗಳ, ಬದುಕಿನ ವ್ಯಂಗ್ಯ-ವಿರಾಡ್ರೂಪಗಳ ಅಭಿವ್ಯಕ್ತಿಯನ್ನು ರತ್ನರ ಅಸಂಗತ ನಾಟಕಗಳಲ್ಲಿ ನಾವು ಕಾಣುತ್ತೇವೆ. ಕನ್ನಡದಲ್ಲಿ ಸ್ವಲ್ಪಕಾಲ ಮೆರೆದ ಅಸಂಗತ ರಂಗಭೂಮಿಯಲ್ಲಿ ತಮ್ಮ ಛಾಪನ್ನು ಸ್ಪಷ್ಟವಾಗಿ ಮೂಡಿಸಿರುವ ರತ್ನ, ‘ಭಿನ್ನ ಬೆನಕ’. ‘ಬೋಳಾಚಾರಿಗೆ ನಮನ’, ‘ಒಬ್ಬ ಮನುಷ್ಯನಿಗೆ ಎಷ್ಟು ಜಮೀನು ಬೇಕು?’(ಮೂಲ:ಟಾಲ್‌ಸ್ಟಾಯ್) ಮೊದಲಾದ ರೇಡಿಯೋ ನಾಟಕಗಳ ಕರ್ತೃವೂ ಹೌದು. ನಾಟಕ ರಚನೆ, ಅಭಿನಯಗಳ ಜೊತೆಗೆ ರಂಗ ನಿರ್ದೇಶಕರಾಗಿಯೂ ರತ್ನ ಆ ದಿನಗಳಲ್ಲಿ ಮಿಂಚಿದ್ದುಂಟು, ರಂಗಭೂಮಿ ವಿಮರ್ಶಕರ ಗಮನ ಸೆಳೆದಿದ್ದುಂಟು. ‘ಸ್ವಪ್ನ ವಾಸವದತ್ತ’, ‘ಹೆದ್ದಾರಿಯಲ್ಲಿ’, ‘ಭಗವದಜ್ಜುಕೀಯ’ ‘ಆಷಾಢದ ಒಂದು ದಿನ’ ಮೊದಲಾದ ನಾಟಕಗಳನ್ನು ನಿರ್ದೇಶಿಸಿ, ಕೆ.ಮರುಳುಸಿದ್ದಪ್ಪನವರು ಹೇಳಿರುವಂತೆ, ಪ್ರಾಯೋಗಿಕ ರಂಗಭೂಮಿಯ ಪ್ರತಿಭಾವಂತ ನಿರ್ದೇಶಕರೆಂಬ ಅಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೆಲವು ಚಲನಚಿತ್ರಗಳಲ್ಲೂ ಅಭಿನಯಿಸಿರುವ ರತ್ನ ‘ಋಷ್ಯಶೃಂಗ’ದಲ್ಲಿನ ಅಭಿನಯಕ್ಕಾಗಿ ಕರ್ನಾಟಕ ಸರಕಾರದ ಶ್ರೇಷ್ಠ ಪೋಷಕ ನಟ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಪ್ರಶಸ್ತಿ-ಪುರಸ್ಕಾರಗಳು ರತ್ನರಿಗೆ ಅಪರೂಪವೇನಲ್ಲ. ಅವರು ಹಲವಾರು ರಾಷ್ಟ್ರೀಯ-ಅಂತಾರಾಷ್ಟ್ರೀಯ ಪ್ರಶಸ್ತಿಗಳಿಂದ ಅಲಂಕೃತರು. ಹೆಲೆನ್ ಕೆಲರ್ ಸ್ಮಾರಕ ಪ್ರಶಸ್ತಿ, ಎಂ.ಎನ್.ರಾಯ್ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ ಇತ್ಯಾದಿ. ಈಗ ಕರ್ನಾಟಕ ಸರಕಾರದ ಮತ್ತೊಂದು ಪ್ರಶಸ್ತಿ-ಅದೂ ಬಿ.ವಿ.ಕಾರಂತರ ಹೆಸರಿನಲ್ಲಿ.
ವೃತ್ತಿ ರಂಗಭೂಮಿಯ ಹಾಡು, ಸಂಗೀತ, ನೃತ್ಯ ಮೊದಲಾದ ಮೌಲಿಕ ಗುಣಗಳನ್ನೆಲ್ಲ ಕಸಿಮಾಡಿ ಅಖಿಲ ಭರತ ಮಟ್ಟದಲ್ಲಿ ಆಧುನಿಕ ರಂಗಭೂಮಿಯನ್ನು ಕಟ್ಟಿದ ಧೀಮಂತರು ಬಿ.ವಿ.ಕಾರಂತರು. ಹೊಸ ಉಸಿರಾಗಿ, ತಂಬೆಲರಾಗಿ, ಕುಳಿರ್ಗಾಳಿಯಾಗಿ, ಕೆಲವೊಮ್ಮೆ ಬಿರುಗಾಳಿಯಾಗಿ ಭಾರತದ ಉದ್ದಗಲ ಸುತ್ತಾಡಿ ಆಧುನಿಕ ರಂಗಭೂಮಿಯನ್ನು ಕಟ್ಟಿದರು, ವಿದೇಶಗಳಿಗೆ ಹಾರಿ ಭಾರತೀಯ ರಂಗಭೂಮಿಯ ನವಚೈತನ್ಯವನ್ನು ಪರಿಚಯಿಸಿದರು, ಕೊನೆಗೆ ತಾವೇ ಸೃಷ್ಟಿಸಿದ ಭೋಪಾಲ ರಂಗಭೂಮಿಯ ಚಂಡಮಾರುತದಲ್ಲಿ ಸಿಲುಕಿ ಜರ್ಝರಿತರಾದರೂ ಮುಕ್ತರಾಗಿ ಮೈಸೂರಿಗೆ ಬಂದು, ತಮ್ಮ ಆಶೋತ್ತರಗಳಿಗೆ ಭಾಷ್ಯ ಬರೆದಂತೆ ರಂಗಾಯಣ ಕಟ್ಟಿದರು. ಕನ್ನಡ ರಂಗಭೂಮಿ ಇತಿಹಾಸದಲ್ಲಿ ಮತ್ತೆ ಮೈಸೂರು ಮಿಂಚಿತು. ಹೀಗೆ ರಂಗಭೂಮಿ ಕಟ್ಟುವ ಕಾಯಕದಲ್ಲಿ ತೇದು ಗಂಧವಾದ ಕಾರಂತರ ಹೆಸರಿ ನಲ್ಲಿ ಕರ್ನಾಟಕ ಸರಕಾರ ನೀಡುತ್ತಿರುವ ರಂಗಭೂಮಿ ಪ್ರಶಸ್ತಿ ನ.ರತ್ನ ಅವರಿಗೆ ಸಂದಿರುವುದು, ನಾಟಕ ಸಾಹಿತ್ಯ-ರಂಗಭೂಮಿಯ ಸೃಜನಶೀಲ ಕಾಯಕಕ್ಕೆ ಸಂದಿರುವ ಗೌರವಪುರಸ್ಕಾರ. ರತ್ನ ಸ್ನೇಹಿತರೊಡಗೂಡಿ ಕಟ್ಟಿದ ‘ಸಮೆತೆಂತೋ’ಗೂ ಸಂದಿರುವ ಗೌರವ. ಸಿಧುವಳ್ಳ ಅನಂತ ಮೂರ್ತಿ, ಚನ್ನಯ್ಯ, ವಿಶ್ವನಾಥ ಮಿರ್ಲೆ ನೇಪಥ್ಯದಲ್ಲೇ ಹಿಗ್ಗುತ್ತಿರಬಹುದು.

Writer - ಜಿ.ಎನ್. ರಂಗನಾಥ್ ರಾವ್

contributor

Editor - ಜಿ.ಎನ್. ರಂಗನಾಥ್ ರಾವ್

contributor

Similar News