×
Ad

ನೋಟು ರದ್ದು ಕಾನೂನು ಪ್ರಕಾರ ನಡೆದಿಲ್ಲ

Update: 2016-11-21 23:37 IST

ಹೊಸದಿಲ್ಲಿ, ನ.21: 500 ಮತ್ತು 1,000 ರೂ. ನೋಟುಗಳನ್ನು ರದ್ದುಪಡಿಸುವ ಪ್ರಧಾನಿ ನರೇಂದ್ರ ಮೋದಿಯವರ ನಿರ್ಧಾರಕ್ಕೆ ಕಾನೂನಿನ ಬೆಂಬಲವಿಲ್ಲ ಎನ್ನುವುದು ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಹಾಗೂ ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್ ಅವರ ಖಚಿತ ಅಭಿಪ್ರಾಯ. ಪ್ರಧಾನಿ ನಿರ್ಧಾರದ ಕಾನೂನು ಸಿಂಧುತ್ವವನ್ನು ಪ್ರಶ್ನಿಸಿರುವ ಅವರು ತನ್ನ ವಾದಕ್ಕೆ ಆಧಾರವಾಗಿ ಈ ಕೆಳಗಿನ ಮೂರು ಅಂಶಗಳನ್ನು ಬೆಟ್ಟು ಮಾಡಿದ್ದಾರೆ.

* ಆರ್‌ಬಿಐ ಕಾಯ್ದೆಯು ನಿರ್ದಿಷ್ಟ ಮುಖಬೆಲೆಯ ನೋಟಿನ ‘ಯಾವುದೇ ಸರಣಿ’ಯೊಂದನ್ನು ಹಿಂದೆಗೆದುಕೊಳ್ಳಲು ಸರಕಾರಕ್ಕೆ ಅಧಿಕಾರ ವನ್ನು ನೀಡುತ್ತದೆಯೇ ಹೊರತು ಸಂಪೂರ್ಣ ನೋಟು ನಿಷೇಧಕ್ಕಲ್ಲ.
* ಸರಕಾರವು ಸುಗ್ರೀವಾಜ್ಞೆಯನ್ನು ಹೊರಡಿಸಿಲ್ಲ ಅಥವಾ ಸಂಸತ್ತಿನಲ್ಲಿ ಕಾನೂನನ್ನು ಅಂಗೀಕರಿಸಿಲ್ಲ. ತನ್ಮೂಲಕ ಅದು ಈ ಪ್ರಕರಣದಲ್ಲಿ 500 ಮತ್ತು 1,000 ರೂ. ನೋಟುಗಳಾಗಿರುವ, ನಾಗರಿಕರಿಗೆ ಸೇರಿದ ‘ಚರಾಸ್ತಿ’ಯ ರದ್ದತಿಯನ್ನು ಸಮರ್ಥಿಸಿಕೊಳ್ಳುವಲ್ಲಿ ವಿಫಲಗೊಂಡಿದೆ.
* ಭಾರತೀಯ ಪ್ರಜೆಯೋರ್ವ ತೆರಿಗೆ ಪಾವತಿಸಿರುವ ತನ್ನ ಹಣವನ್ನು ಪಡೆದುಕೊಳ್ಳುವುದನ್ನು ನಿರ್ಬಂಧಿಸುವ ಯಾವುದೇ ಕಾನೂನು ಅಥವಾ ಆರ್‌ಬಿಐ ಕಾಯ್ದೆಯಡಿ ಯಾವುದೇ ನಿಯಮವಿಲ್ಲ (ಹಣ ಹಿಂಪಡೆಯುವುದರ ಮೇಲೆ ಮಿತಿ ಹೇರಿಕೆಯನ್ನು ಪ್ರಸ್ತಾಪಿಸಿ).
ಆರ್‌ಬಿಐ ಕಾಯ್ದೆಯನ್ನು ರೂಪಿಸಿರುವ ಶಾಸಕಾಂಗವು ಸದ್ಯ ಮಾಡಿರುವಂತೆ ನಿರ್ದಿಷ್ಟ ಮುಖಬೆಲೆಯ ಎಲ್ಲ ನೋಟುಗಳನ್ನು ನಿಷೇಧಿಸುವ ಅಧಿಕಾರವು ಸರಕಾರಕ್ಕಿರಬೇಕು ಎಂದು ಉದ್ದೇಶಿಸಿದ್ದರೆ ‘ಯಾವುದೇ ಸರಣಿ’ ಎಂಬ ಶಬ್ದ ಅನಗತ್ಯವಾಗಿರುತ್ತಿತ್ತು ಎಂದು ಜೈಸಿಂಗ್ ಹೇಳಿದ್ದಾರೆ.
ಕಾನೂನಿನ ಮೂಲಕ ಮಾತ್ರ ಒಬ್ಬನನ್ನು ಆತನ ಆಸ್ತಿಯಿಂದ ವಂಚಿತನಾಗಿಸಬಹುದು ಎಂದಿರುವ ಅವರು, 300ಎ ವಿಧಿಯ ಮೂಲಕ ನೋಟು ನಿಷೇಧ ಕ್ರಮದ ಕಾನೂನು ಸಿಂಧುತ್ವವನ್ನು ಪ್ರಶ್ನಿಸಿದ್ದಾರೆ. ಕಾನೂನಿನ ಮೂಲಕ ಹೊರತುಪಡಿಸಿ ಯಾವುದೇ ವ್ಯಕ್ತಿಯನ್ನು ಆತನ ಆಸ್ತಿಯಿಂದ ವಂಚಿತನಾಗಿಸುವಂತಿಲ್ಲ ಎಂದು ಈ ವಿಧಿಯು ಸ್ಪಷ್ಟಪಡಿಸಿದೆ.
1978ರ ನೋಟು ನಿಷೇಧವನ್ನು ಉಲ್ಲೇಖಿಸಿರುವ ಅವರು, ಈಗಿನ ಸರಕಾರವು ಸುಗ್ರೀವಾಜ್ಞೆಯ ಮೂಲಕ ನೋಟು ನಿಷೇಧವನ್ನೇಕೆ ಜಾರಿಗೊಳಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ. ಈ ವಿಷಯದಲ್ಲಿ ಸಂಸತ್ತಿನಲ್ಲಿ ಚರ್ಚೆಗೆ ಹಿಂಜರಿಕೆ ಇದಕ್ಕೆ ಒಂದು ಸಂಭಾವ್ಯ ಕಾರಣವಾಗಿರಬಹುದು ಎಂದು ಅವರು ಪ್ರತಿಪಾದಿಸಿದ್ದಾರೆ.
(2016,ನ.18ರಂದು ನ್ಯಾಷನಲ್ ಹೆರಾಲ್ಡ್‌ನಲ್ಲಿ ಪ್ರಕಟಗೊಂಡ ಜೈಸಿಂಗ್ ಅವರ ಅಂಕಣ ಬರಹದ ಉದ್ಧತ ಭಾಗ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News