ಅಹ್ಮದಾಬಾದ್‌ನಲ್ಲಿ 2000 ರೂ. ನೋಟುಗಳ 12.4 ಲಕ್ಷ ಪತ್ತೆ!
ಅಹ್ಮದಾಬಾದ್, ಘೆ.24: ಅಹ್ಮದಾಬಾದ್ ನಗರದಲ್ಲಿ ಮಾರುತಿ ಸ್ವಿಫ್ಟ್ ಕಾರೊಂದನ್ನು ತಪಾಸಣೆಯ ನೆಪದಲ್ಲಿ ನಿಲ್ಲಿಸಿದ ಪೊಲೀಸರಿಗೆ ಆಶ್ಚರ್ಯ ಕಾದಿತ್ತು. ಆ ಕಾರಿನಲ್ಲಿ ಬರೋಬ್ಬರಿ 12.4 ಲಕ್ಷ ರೂ. ನಗದು ಇತ್ತು. ಅವೆಲ್ಲವೂ ಗರಿಗರಿ 2000 ರೂ. ನೋಟುಗಳಾಗಿದ್ದವು.
ಕಾರಿನಲ್ಲಿದ್ದ ಮೂವರ ಪ್ರಕಾರ ಅವರು ವಿವಿಧ ಬ್ಯಾಂಕುಗಳ ಖಾತೆಗಳಿಂದ ಮದುವೆ ಸಮಾರಂಭವೊಂದಕ್ಕಾಗಿ ಆ ಹಣವನ್ನು ಹಿಂಪಡೆದಿದ್ದರು. ಆದರೆ ಪೊಲೀಸರು ಅವರನ್ನು ನಂಬುವ ಸ್ಥಿತಿಯಲ್ಲಿರಲಿಲ್ಲ. ಅದಕ್ಕೆ ಕಾರಣವೂ ಇತ್ತು. ಅವರ ಬಳಿ ಮದುವೆ ಇದೆ ಎಂದು ಹೇಳುವುದಕ್ಕಾಗಿ ಆಮಂತ್ರಣ ಪತ್ರಿಕೆ ಸಹಿತ ಯಾವುದೇ ಪುರಾವೆಯಿರಲಿಲ್ಲ. ಅವರಲ್ಲಿದ್ದ ಹಣದಲ್ಲಿ ಸುಮಾರು 500ರಷ್ಟು 2000 ರೂ. ಮುಖಬೆಲೆಯ ನೋಟುಗಳಾಗಿದ್ದವು. ಹಣವನ್ನು ತೆರಿಗೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.
ವಿವಾಹ ಸಮಾರಂಭಗಳಿಗಾಗಿ ವಧು ಅಥವಾ ವರನ ಕಡೆಯವರಿಗೆ ರೂ. 2.5 ಲಕ್ಷ ತನಕ ಹಣವನ್ನು ತಮ್ಮ ಬ್ಯಾಂಕು ಖಾತೆಯಿಂದ ಹಿಂದಕ್ಕೆ ಪಡೆಯಲು ಅನುಮತಿಸಲಾಗಿದೆಯಾದರೂ ಅವರು ಹಣ ನೀಡಬೇಕಾದವರು, ಉದಾ: ಕ್ಯಾಟರರ್ಸ್ ಬಳಿ ಯಾವುದೇ ಬ್ಯಾಂಕ್ ಖಾತೆಯಿಲ್ಲ ಎಂಬುದನ್ನು ದೃಢೀಕರಿಸಬೇಕಿದೆ. ಇತರರಿಗೆ ಒಂದು ವಾರದ ಅವಧಿಯಲ್ಲಿ ರೂ. 24,000 ಹಿಂಪಡೆಯಲು ಅನುಮತಿಯಿದೆ.