ಮನಮೋಹನ್‌ಗೆ ತಿರುಗೇಟು ನೀಡಿದ ಅರುಣ್ ಜೇಟ್ಲಿ
ಹೊಸದಿಲ್ಲಿ, ನ.24: ನೋಟು ರದ್ದತಿಯ ಬಗ್ಗೆ ಚರ್ಚೆಯಿಂದ ಪಲಾಯನ ಮಾಡುವುದಕ್ಕಾಗಿ ವಿರೋಧ ಪಕ್ಷವು ಕಾರಣಗಳನ್ನು ಸಂಶೋಧಿಸುತ್ತಿದೆಯೆಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಇಮದು ಆರೋಪಿಸಿದ್ದಾರೆ.
ಈ ಬಗ್ಗೆ ಟೀಕೆಯನ್ನು ಮಾಡಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ರಿಗೆ ತಿರುಗೇಟು ನೀಡಿದ ಅವರು, ಸಿಂಗ್‌ರ ಆಡಳಿತದಲ್ಲಿ ಗರಿಷ್ಠ ಕಪ್ಪು ಹಣ ಸೃಷ್ಟಿಯಾಗಿರುವುದರಿಂದ ಅವರು ಅಸಂತುಷ್ಟರಾದುದರಲ್ಲಿ ಆಶ್ಚರ್ಯವಿಲ್ಲ ಎಂದಿದ್ದಾರೆ.
ಜಿಡಿಪಿ ಬೆಳವಣಿಗೆ ಶೇ.2ರಷ್ಟು ಕುಸಿಯಲಿದೆಯೆಂಬ ಸಿಂಗ್‌ರ ಪ್ರತಿಪಾದಬೆಯನ್ನು ತಳ್ಳಿ ಹಾಕಿದ ಜೇಟ್ಲಿ, ಛಾಯಾ ಆರ್ಥಿಕತೆಯು ಪ್ರಧಾನ ವಾಹಿನಿಗೆ ಬರುವುದರಿಂದ ನೋಟು ರದ್ದತಿಯ ಧನಾತ್ಮಕ ಪರಿಣಾಮವು ಮಧ್ಯದಿಂದ ದೀರ್ಘಾವಧಿಯ ತನಕ ಬೀಳಲಿದೆ ಎಂದವರು ಹೇಳಿದರು.
ಇಷ್ಟೊಂದು ಕಾಳ ಧನದ ಉತ್ಪಾದನೆಯನ್ನು ಹಾಗೂ ಭ್ರಷ್ಟಾಚಾರವನ್ನು ಯಾರೂ ಪರಿಗಣಿಸಿರಲಿಲ್ಲವೋ ಅವರು ಆಡಳಿತದಲ್ಲಿ ಪ್ರಮಾದ ಎಸಗಿದ್ದರು. ಅಂತಹವರೀಗ ಕಪ್ಪು ಹಣದ ವಿರುದ್ಧ ಧರ್ಮ ಯುದ್ಧವನ್ನು ಪ್ರಮಾದವೆನ್ನುತ್ತಿದ್ದಾರೆಂದು ಜೇಟ್ಲಿ ವಾಗ್ದಾಳಿ ನಡೆಸಿದರು.
ನೋಟು ರದ್ದತಿಯ ಅನುಷ್ಠಾನವು ಒಂದು ‘ಭವ್ಯ ಆಡಳಿತ ವೈಫಲ್ಯ’ ಹಾಗೂ ‘ಸಂಘಟಿತ ಲೂಟಿ ಮತ್ತು ಕಾನೂನುಬದ್ಧಗೊಳಿಸಿದ ಸುಲಿಗೆಯಾಗಿದೆ’ ಎಂದು ರಾಜ್ಯಸಭೆಯಲ್ಲಿ ಚರ್ಚೆಯ ವೇಳೆ ಮನಮೋಹನ್ ಸರಕಾರ ಹಾಗೂ ಪ್ರಧಾನಿಯ ವಿರುದ್ಧ ಮಾಡಿದ ಆರೋಪಕ್ಕೆ ಜೇಟ್ಲಿ ಪ್ರತಿಕ್ರಿಯಿಸುತ್ತಿದ್ದರು.
ಸಂಪೂರ್ಣ ಚರ್ಚೆಯ ವೇಳೆ ಪ್ರಧಾನಿ ಸದನದಲ್ಲಿ ಹಾಜರಿರಬೇಕೆಂದು ಆಗ್ರಹಿಸಿ ವಿಪಕ್ಷ ಕೋಲಾಹಲ ಎಬ್ಬಿಸಿದುದರಿಂದ ರಾಜ್ಯಸಭೆ ಮತ್ತೆ ಮತ್ತೆ ಮುಂದೂಡಲ್ಪಟ್ಟಾಗ ಜೇಟ್ಲಿ, ವಿಪಕ್ಷವು ಚರ್ಚೆಯಲ್ಲಿ ಆಸಕ್ತವಾಗಿರದೆ, ಕಲಾಪ ಭಂಗದಲ್ಲೇ ಆಸಕ್ತವಾಗಿದೆಯೆಂದು ಹರಿಹಾಯ್ದರು.
ಸರಕಾರವು ಚರ್ಚೆಗೆ ಸಿದ್ಧವಿದೆಯೆಂದು ಮೊದಲ ದಿನದಿಂದಲೇ ಸ್ಪಷ್ಟಪಡಿಸುತ್ತ ಬಂದಿದ್ದೇವೆ. ವಿಪಕ್ಷವು ಚರ್ಚೆಯಿಂದ ಪಾರಾಗಲು ನೆಪಗಳನ್ನು ಹುಡುಕುತ್ತಿದೆ. ಪ್ರಧಾನಿ ಚರ್ಚೆಯಲ್ಲಿ ಪಾಲ್ಗೊಳ್ಳುವರೆಂದು ತಾವು ಇಂದು ಮುಂಜಾನೆ ತಿಳಿಸಿದಾಗ ಅವರಿಗೆ ಅಚ್ಚರಿಯಾಯಿತು. ಈಗ ವಿಪಕ್ಷದವರು ಚರ್ಚೆಯಿಂದ ಪಲಾಯನ ಮಾಡಲು ಕಾರಣಗಳನ್ನು ಹುಡುಕುತ್ತಿದ್ದಾರೆ ಹಾಗೂ ತಯಾರಿಸುತ್ತಿದ್ದಾರೆಂದು ಅವರು ಕಿಡಿಗಾರಿದರು.