×
Ad

ಹಳೆ ನೋಟು ಪಡೆಯಲು ಡಯಾಲಿಸಿಸ್ ಕೇಂದ್ರ ನಕಾರ

Update: 2016-11-24 22:36 IST

ಪಾಟ್ನಾ, ನ.24: ದೊಡ್ಡ ನೋಟು ರದ್ದತಿಗೆ ಬಲಿಯಾಗುತ್ತಿರು ವವರ ಸರದಿ ಮುಂದುವರಿದಿದೆ. ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ಮಹಿಳೆಯೊಬ್ಬರಿಗೆ ಹಳೆಯ ನೋಟು ಪಡೆದು ಡಯಾಲಿಸಿಸ್ ಚಿಕಿತ್ಸೆ ನೀಡಲು ಬಿಹಾರದ ಸರಕಾರಿ ಆಸ್ಪತ್ರೆಯೊಂದು ನಿರಾಕರಿಸಿದ ಕಾರಣ ಬುಧವಾರ ಆಕೆ ಕೊನೆಯುಸಿರೆಳೆದಿದ್ದಾರೆ.

ಸರಕಾರಿ ಆಸ್ಪತ್ರೆಗಳು ಹಾಗೂ ಅವುಗಳ ಔಷಧದಂಗಡಿಗಳು ನ.24ರವರೆಗೆ ಹಳೆಯ ನೋಟುಗಳನ್ನು ಸ್ವೀಕರಿಸುತ್ತವೆಯೆಂದು ಸರಕಾರ ಹೇಳಿತ್ತು.
ಗೋರಾ ಮಾಂಝಿ ಎಂಬ ದಿನಗೂಲಿ ನೌಕರನ ಪತ್ನಿ ಮಂಜು ದೇವಿ ಎಂಬಾಕೆಯನ್ನು ಬಸಿರಿನ ತೊಡಕಿಗೆ ಸಂಬಂಧಿಸಿ ವಾರದ ಹಿಂದೆ ಗಯಾದ ಅನುಗ್ರಹ ನಾರಾಯಣ ಮಗಧ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ (ಎಎನ್‌ಎಂಎಂಸಿಎಚ್) ತರಲಾಗಿತ್ತು. ಆಕೆಗೆ ಗರ್ಭಪಾತವಾಯಿತು ಹಾಗೂ ಆಕೆಯ ಮೂತ್ರಪಿಂಡ ವಿಫಲಗೊಂಡಿದ್ದುದನ್ನು ವೈದ್ಯರು ಪತ್ತೆ ಮಾಡಿದ್ದರೆಂದು ಆಸ್ಪತ್ರೆಯ ಅಧೀಕ್ಷಕ ಡಾ.ಸುಧೀರ್ ಕುಮಾರ್ ಸಿನ್ಹಾ ತಿಳಿಸಿದ್ದಾರೆ.
ಮಂಜು ದೇವಿಗೆ ವೈದ್ಯರು ಬುಧವಾರ ಡಯಾಲಿಸಿಸ್ ಚಿಕಿತ್ಸೆಗೆ ಬರೆದುಕೊಟ್ಟಿದ್ದರು. ತಮ್ಮ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರಕ್ಕೆ ಬುಕಿಂಗ್‌ಗಾಗಿ ಆಕೆಯೊಂದಿಗಿದ್ದವರು ಹೋದಾಗ, ಅದು ಹಳೇಯ ನೋಟುಗಳನ್ನು ಪಡೆಯಲು ನಿರಾಕರಿಸಿತೆಂದು ಅವರು ಹೇಳಿದ್ದಾರೆ.
ಡಯಾಲಿಸಿಸ್ ಕೇಂದ್ರವು ಮುಂಬೈಯ ಬಹುರಾಷ್ಟ್ರೀಯ ಕಂಪೆನಿ ಬಿ ಬ್ರೌನ್ ಮೆಡಿಕಲ್ ಇಂಡಿಯಾ ಪ್ರೈ.ಲಿ.ನ ಭಾಗಿದಾರಿಕೆಯಲ್ಲಿ ನಡೆಯುತ್ತಿದೆ. ಮಹಿಳೆಯ ಕಡೆಯವರು ಈ ವಿಷಯ ತನ್ನ ಗಮನಕ್ಕೆ ತಂದಾಗ, ಸರಕಾರಿ ಸೌಲಭ್ಯಕ್ಕೆ ನೋಟು ನಿಷೇಧದಿಂದ ವಿನಾಯಿತಿಯಿದೆಯೆಂಬ ಪತ್ರದೊಂದಿಗೆ ತನ್ನ ಸಿಬ್ಬಂದಿಯೊಬ್ಬನನ್ನು ಡಯಾಲಿಸಿಸ್ ಕೇಂದ್ರಕ್ಕೆ ಕಳುಹಿಸಿದೆನು. ಆದರೂ, ಅಲ್ಲಿನ ಸಿಬ್ಬಂದಿ ಹಳೆ ನೋಟು ಪಡೆಯಲು ನಿರಾಕರಿಸಿದರು. ಅವರು ತಮ್ಮ ಮುಖ್ಯಾಲಯದ ಸೂಚನೆಗಾಗಿ ಕಾದಿರುವಂತೆಯೇ ಮಂಜು ದೇವಿ ಕೊನೆಯುಸಿರೆಳೆದಳೆಂದು ಸಿನ್ಹಾ ವಿವರಿಸಿದ್ದಾರೆ.
ಸಂಸ್ಥೆಗೆ ಶೋಕಾಸ್ ನೋಟಿಸ್ ಕಳುಹಿಸಲಾಗಿದೆ ಎಂದ ಅವರು, ನೋಟು ನಿರಾಕರಿಸಿದ ಸಿಬ್ಬಂದಿಯನ್ನು ವಜಾ ಮಾಡುವಂತೆಯೂ ಆಗ್ರಹಿಸಿದ್ದಾರೆ.
ಮಂಜು ದೇವಿಯನ್ನು ಡಯಾಲಿಸಿಸ್ ಕೇಂದ್ರಕ್ಕೆ ತಂದಿರಲಿಲ್ಲ. ಕೇವಲ ಆಕೆಯ ಸಹಾಯಕನೊಬ್ಬ ಕೆಲವು ಮಾಹಿತಿಗಾಗಿ ಬಂದಿದ್ದನು. ಆದುದರಿಂದ ಆಕೆಯ ಸಾವಿಗೂ ತಮ್ಮ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲವೆಂದು ಪಾಟ್ನಾದಲ್ಲಿ ಬ್ರೌನ್ ಮೆಡಿಕಲ್ ಇಂಡಿಯಾದ ಸಹಾಯಕ ಪ್ರಬಂಧಕ ಅಭಿಷೇಕ್ ಕುಮಾರ್ ಪ್ರತಿಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News