ಪ್ರಧಾನಿಯ ಸಮೀಕ್ಷೆ ನಕಲಿ: ಮಾಯಾವತಿ
Update: 2016-11-24 22:38 IST
ಹೊಸದಿಲ್ಲಿ, ನ.24: ನೋಟು ರದ್ದತಿಯ ಕುರಿತು ಕೇಂದ್ರ ಸರಕಾರ ನಡೆಸಿದ ಆ್ಯಪ್ ಆಧಾರಿತ ಸಮೀಕ್ಷೆಯೊಂದನ್ನು ನಕಲಿ ಹಾಗೂ ಪ್ರಾಯೋಜಿತವೆಂದು ಆರೋಪಿಸಿರುವ ಬಿಎಸ್ಪಿ ವರಿಷ್ಠೆ ಮಾಯಾವತಿ ಧೈರ್ಯವಿದ್ದರೆ ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯನ್ನು ವಿಸರ್ಜಿಸಿ ಚುನಾವಣೆ ಎದುರಿಸಲಿ ಎಂದು ಸವಾಲು ಹಾಕಿದ್ದಾರೆ.
ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಶೇ.93ಕ್ಕೂ ಹೆಚ್ಚು ಜನರು ನೋಟು ರದ್ದತಿಯನ್ನು ಬೆಂಬಲಿಸಿದ್ದಾರೆಂದು ಬುಧವಾರ ಸರಕಾರ ಹೇಳಿದ ಬಳಿಕ ಅವರ ಈ ವಾಗ್ದಾಳಿ ಹೊರಟಿದೆ.
ಮೋದಿಜಿಯವರ ಸಮೀಕ್ಷೆ ನಕಲಿ ಹಾಗೂ ಪ್ರಾಯೋಜಿತ. ಅವರಿಗೆ ಧೈರ್ಯವಿದ್ದರೆ ಲೋಕಸಭೆ ವಿಸರ್ಜಿಸಿ ಚುನಾವಣೆ ಎದುರಿಸಲಿ. ಆಗ ಮಾತ್ರ ನಿಜವಾದ ಸಮೀಕ್ಷೆ ನಡೆಸಲು ಸಾಧ್ಯವಾಗುತ್ತದೆಂದು ಮಾಯಾವತಿ ಸಂಸತ್ತಿನ ಹೊರಗೆ ಮಾಧ್ಯಮಗಳೊಂದಿಗೆ ಹೇಳಿದರು.
ರೂ. 500 ಹಾಗೂ 1000ದ ನೋಟು ರದ್ದತಿಯ ಕೇಂದ್ರದ ಕ್ರಮದ ಕುರಿತು ಪ್ರಧಾನಿಯ ಅಧಿಕೃತ ಆ್ಯಪ್‌ನಲ್ಲಿ ಅಭಿಪ್ರಾಯ ಸೂಚಿಸುವಂತೆ ಮಂಗಳವಾರ ಅವರು ಜನರಿಗೆ ಮನವಿ ಮಾಡಿದ್ದರು.