ನೋಟು ನಿಷೇಧ: ಲೆಕ್ಕರಹಿತ ಬ್ಯಾಂಕ್ ಠೇವಣಿಗಳಿಗೆ ಶೇ.50ತೆರಿಗೆ, ನಾಲ್ಕು ವರ್ಷಗಳ ಅವಧಿಗೆ ಸ್ತಂಭನ ಸಾಧ್ಯತೆ

Update: 2016-11-25 13:05 GMT

ಹೊಸದಿಲ್ಲಿ,ನ.26: ಗ್ರಾಹಕರು ಡಿ.30ರವರೆಗೆ ಹಳೆಯ ನೋಟುಗಳ ಮೂಲಕ ತಮ್ಮ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುವ, ಲೆಕ್ಕರಹಿತ ಅಥವಾ ಮೂಲವನ್ನು ವಿವರಿಸದ ಠೇವಣಿಯನ್ನು ತೆರಿಗೆ ಅಧಿಕಾರಿಗಳ ಮುಂದೆ ಘೋಷಿಸಿದರೆ ಅಂತಹ ಠೇವಣಿಗಳ ಮೇಲೆ ಶೇ.50 ತೆರಿಗೆ ವಿಧಿಸಲಾಗುವುದು ಮತ್ತು ನಾಲ್ಕು ವರ್ಷಗಳ ಅವಧಿಗೆ ಅಂತಹ ಖಾತೆಗಳನ್ನು ಸ್ತಂಭನಗೊಳಿಸಲಾಗುವುದು ಎಂದು ಮೂಲಗಳು ಇಂದಿಲ್ಲಿ ತಿಳಿಸಿದವು.
 ಆದರೆ ಠೇವಣಿದಾರರು ಯಾವುದೇ ಘೋಷಣೆಯನ್ನು ಮಾಡದಿದ್ದರೆ ಮತ್ತು ಲೆಕ್ಕರಹಿತ ಹಣವನ್ನು ತೆರಿಗೆ ಅಧಿಕಾರಿಗಳು ಪತ್ತೆ ಹಚ್ಚಿದರೆ ಶೇ.60 ತೆರಿಗೆಯನ್ನು ವಿಧಿಸಲಾಗುವುದು ಮತ್ತು ಅಂತಹ ಖಾತೆಗಳನ್ನು ಹೆಚ್ಚಿನ ಅವಧಿಗೆ ಸ್ತಂಭನಗೊಳಿಸಲಾಗುವುದು ಎಂದೂ ಮೂಲಗಳು ಹೇಳಿದವು.
  ಗುರುವಾರ ರಾತ್ರಿ ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯು ಈ ಪ್ರಸ್ತಾವನೆಯನ್ನು ಪರಿಗಣಿಸಿದೆ. ನ.8ರ ನೋಟು ನಿಷೇಧದ ಬಳಿಕ ಬ್ಯಾಂಕುಗಳಲ್ಲಿ ಜಮೆಯಾಗಿರುವ ಲೆಕ್ಕಪತ್ರವಿಲ್ಲದ ಅಥವಾ ಮೂಲವನ್ನು ವಿವರಿಸದ ಠೇವಣಿಗಳ ಮೇಲೆ ತೆರಿಗೆಯನ್ನು ವಿಧಿಸಲು ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿಗಳನ್ನೂ ಅದು ಒಪ್ಪಿಕೊಂಡಿದೆ ಎಂದು ಹೇಳಲಾಗಿದೆ.
ಸಂಸತ್ತಿನ ಹಾಲಿ ಅಧಿವೇಶನದಲ್ಲಿಯೇ ಈ ತಿದ್ದುಪಡಿಗಳನ್ನು ತರಲು ಸರಕಾರವು ಉದ್ದೇಶಿಸಿದೆ ಎಂದು ಮೂಲಗಳು ತಿಳಿಸಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News