ಬಾಲಮುರಳಿ ಎಂಬ ಸಂಗೀತ ವಿಸ್ಮಯ

Update: 2016-11-26 18:14 GMT

ಮಗು ಅಳಲಿಲ್ಲ, ಚೀರಲಿಲ್ಲ.

ಅಳುವ ವಯಸ್ಸಿನಲ್ಲಿ ಗುನುಗುನು ಗುಂಯ್‌ಗುಡುತ್ತಿತ್ತು. ರಾಗಾಲಾಪನೆ ಮಾಡುತ್ತಿತ್ತು.ತೊದಲ್ನುಡಿಗಳನ್ನು ಆಡುವುದಕ್ಕೂ ಮೊದಲೇ ಸ್ವರಗಳನ್ನು ಪಲುಕುತ್ತಿತ್ತು.

ನಾಲ್ಕು ವರ್ಷಕ್ಕೇ ವರ್ಣಗಳನ್ನು ಹಾಡಲಾರಂಭಿಸಿತು.ಏಳು ವರ್ಷಕ್ಕೇ ಸಣ್ಣಪುಟ್ಟ ಬೈಠಕ್‌ಗಳಲ್ಲಿ ಹಾಡುಗಳನ್ನು ಹಾಡುತ್ತಿತ್ತು. ಒಂಬತ್ತು ವರ್ಷಕ್ಕೇ ಸಂಗೀತ ಕಛೇರಿ ಮಾಡಿ, ಪಲ್ಲವಿ ಹಾಡಿ ರಸಿಕರಿಂದ ‘ಬಾಲ ಗಂಧರ್ವ’ ಎಂದು ಶಹಭಾಸ್‌ಗಿರಿ ಗಿಟ್ಟಿಸಿಕೊಂಡಿತು. ಹತ್ತನೆ ವಯಸ್ಸಿಗೇ ಹಾಡುಗಳ ರಚನೆ, ರಾಗಸಂಯೋಜನೆಗಳ ಪ್ರಯೋಗದಲ್ಲಿ ತೊಡಗಿಕೊಂಡು ಸಂಗೀತ ವಿದ್ವಾಂಸರನ್ನು ವಿಸ್ಮಯಗೊಳಿಸಿತು.

ಆ ಮಗು, ಇದೇ 22ರಂದು ನಮ್ಮನ್ನಗಲಿ ತುಂಬುರುನಾರದರನ್ನು ಸೇರಿಕೊಂಡ ಮರ್ತ್ಯಲೋಕದ ಗಾನ ಗಂಧರ್ವ ಮಂಗಳಂಪಲ್ಲಿ ಬಾಲಮುರಳಿ ಕೃಷ್ಣ.
ಬಾಲಮುರಳಿ ಕೃಷ್ಣ ಪ್ರತಿಭಾವಂತ ಗಾಯಕರಷ್ಟೇ ಆಗಿರಲಿಲ್ಲ. ಅವರು ಪ್ರಯೋಗಶೀಲತೆಯನ್ನು ಮೈಗೂಡಿಸಿಕೊಂಡಿದ್ದ ಸೃಜನಶೀಲ ಕಲಾವಿದ ರಾಗಿದ್ದರು. ಸುಶ್ರಾವ್ಯ ಗಾಯನ ಪ್ರತಿಭೆಯೊಂದಿಗೆ ಸಂಗೀತ ಶಾಸ್ತ್ರದ ವಿದ್ವತ್ತು, ಶಾಸ್ತ್ರ-ಸಂಪ್ರದಾಯಗಳನ್ನು ಮೀರುವ ಬಂಡಾಯ ಪ್ರವೃತ್ತಿ ಮತ್ತು ಹೊಸ ಕೃತಿಗಳ ರಚನೆ, ಹೊಸ ರಾಗಗಳ ಅನ್ವೇಷಣೆಯ ಸೃಜನಾತ್ಮಕ ತುಡಿತ-ಅವರೊಳಗಿನ ಕಲಾವಿದ ಇಂಥ ಒಂದು ಅದ್ಭುತ ಸಂಯೋಗ. ಬಂಡಾಯ ಪ್ರವೃತ್ತಿ ಅವರ ವಂಶವಾಹಿಯಲ್ಲೇ ಇದೆ. ಬಾಲ ಮುರಳಿಯವರ ತಂದೆ ಪಟ್ಟಾಭಿರಾಮಯ್ಯ, ತ್ಯಾಗರಾಜರ ಶಿಷ್ಯ ಪರಂಪರೆಗೆ ಸೇರಿದ ದಕ್ಷಿಣಾ ಮೂರ್ತಿ ಶಾಸ್ತ್ರಿಗಳ ಶಿಷ್ಯರು. ಈ ತಂದೆ ಮನೆಯಿಂದ ಬಹಿಷ್ಕೃತರಾಗಿದ್ದರು.ಕಾರಣ: ಅಂದಿನ ಸಮಾಜ ನಿಕೃಷ್ಟವೆಂದು ಭಾವಿಸಿದ್ದ ಸಂಗೀತವನ್ನು ಕಲಿತು ಮನೆತನದ ಗೌರವಮರ್ಯಾದೆಗಳನ್ನು ಹಾಳುಗೆಡವಿದ್ದಕ್ಕಾಗಿ. ತಾಯಿ ಸೂರ್ಯಕಾಂತಂ, ವೀಣಾವಾದಕಿ, ಖ್ಯಾತ ವಾಗ್ಗೇಯಕಾರ ಪ್ರಯಾಗ ರಂಗದಾಸ ಶರ್ಮರ ಶಿಷ್ಯೆ. ಮಹಿಳೆಯೊಬ್ಬಳು ಸಾರ್ವಜನಿಕ ವೇದಿಕೆಯಿಂದ ಕಛೇರಿ ಮಾಡುವುದು ನಿಷಿದ್ಧವಿದ್ದ ಆ ಕಾಲದಲಿ ಈ ತಾಯಿ ಸನಾತನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.

ಬಾಲಮುರಳಿಯವರ ಜೀವನಗಾಥೆ ಒಂದು ರೋಚಕ ಕಾಲ್ಪನಿಕ ಕಥೆಯಿದ್ದಂತೆ. ಹುಟ್ಟಿದ ಹದಿನೈದು ದಿನಗಳಲ್ಲೇ ತಾಯಿಯನ್ನು ಕಳೆದುಕೊಂಡು ತಬ್ಬಲಿಯಾದರು. ಕುಟುಂಬದಿಂದ ಬಹಿಷ್ಕೃತರಾದ ತಂದೆಯೇ ‘ತಾಯಿ’ಯಾದರು. ಪೌಗಂಡ ವಯಸ್ಸಿನಲ್ಲೇ ಗಾಯನ ಪ್ರಪಂಚದ ಮೇರು ಎಂಬ ಕೀರ್ತಿಗೆ ಪಾತ್ರರಾದರು. ಧನಕನಕ ಗಳಿಸಿದರು. ಪ್ರಾಯದ ದಿನಗಳಲ್ಲೇ ಅದೆಲ್ಲವನ್ನೂ ಕಳೆದುಕೊಂಡರು. ಹಣದ ಜೊತೆಗೆ ಪ್ರಕೃತಿಯ ವರವಾಗಿದ್ದ ಕಂಠ ಸಿರಿಯನ್ನು ಕಳೆದುಕೊಂಡರು. ಧ್ವನಿಪೆಟ್ಟಿಗೆ ನಿಷಕ್ರೆಿಯವಾದಾಗ, ಸಂಗೀತ ಕೃತಿಗಳ ರಚನೆಯಲ್ಲಿ, ರಾಗ ಸಂಯೋಜನೆಯಲ್ಲಿ ನಿರತರಾದರು. ಎಪ್ಪತ್ತೆರಡು ಮೂಲ ಮೇಳಕರ್ತ ರಾಗಗಳನ್ನು ಆಧಾರವಾಗಿಟ್ಟುಕೊಂಡು ಹೊಸ ರಾಗಗಳನ್ನು ಸೃಷ್ಟಿಸಿದರು.

‘ಲವಂಗಿ’,‘ಮಹತಿ’, ‘ಸರ್ವಶ್ರೀ’, ‘ಸುಮುಖಂ’ ಮತ್ತು ತಾಯಿಯ ಹೆಸರಿನ ‘ಸೂರ್ಯಕಾಂತೀ’-ಇತ್ಯಾದಿ ಅವರು ಸೃಷ್ಟಿಸಿರುವ ಹೊಸ ರಾಗಗಳು. ಕೀರ್ತನೆ-ಹಾಡುಗಳಿಗೆ ಹೊಸ ರಾಗಗಳ ಸಂಯೋಜನೆ ಮಾಡಿದರು. ಆಗಿನ್ನೂ ಬಾಲಮುರಳಿ ಹದೆನೆಂಟರ ಕುಡಿಮೀಸೆಯ ತರುಣ. ಹೋದ ಕಂಠಸಿರಿ ಮತ್ತೆ ಬಂತು. ಮತ್ತೆ ಬಾಲಮುರಳಿ ಕೃಷ್ಣ ಸಂಗೀತ ಕಛೇರಿಗಳಲ್ಲಿ, ಆಕಾಶವಾಣಿಯಲ್ಲಿ ವಿಜೃಂಭಿಸಿದರು. ಆಕಾಶವಾಣಿ ಶಾಸ್ತ್ರೀಯ ಸಂಗೀತಕ್ಕೆ ಬಾಲಮುರಳಿಯ ಛಾಪನ್ನು ಒತ್ತಿದರು. ವಿಜಯವಾಡ ಮ್ಯೂಸಿಕ್ ಕಾಲೇಜಿನ ಪ್ರಾಂಶುಪಾಲರಾದರು. ಆ ಬಂಧನ ಬೇಡವೆನಿಸಿ ಅದನ್ನು ತೊರೆದು ಹೊರಬಂದರು. ಈ ಎಲ್ಲ ಏರಿಳಿತಗಳು ಸಂಭವಿಸಿದ್ದು ಮುವತ್ತರ ಪ್ರಾಯದೊಳಗೇ. ಬಾಲಮುರಳಿ ಕೃಷ್ಣ ಅವರ ಸಂಗೀತದ ಬದುಕಿನ ಮೇಲೆ ಗಾಢ ಪ್ರಭಾವ ಬೀರಿದವರು ತಂದೆ ಮತ್ತು ಗುರುಗಳು. ಪಾರುಪಳ್ಳಿ ರಾಮಕೃಷ್ಣ ಪಂತುಲು ಗುರುಗಳು. ತಂದೆ ಅಕ್ಕರೆ ಆದರಗಳಿಂದ ಬೆಳೆಸಿದರು, ಮಗನ ಆಸಕ್ತಿಗೆ ನೀರೆರೆದು ಪೋಷಿಸದರು. ಗುರುಗಳು ಸಂಗೀತ ಕಲಿಸಿದರು, ಅರಳುತ್ತಿದ್ದ ಪ್ರತಿಭೆಗೊಂದು ಗುರಿ, ದಿಕ್ಕುದಿಶೆ ತೋರಿಸಿದರು, ಶಿಸ್ತನ್ನು ಕಲಿಸಿದರು. ಸಂದರ್ಭ ಸಿಕ್ಕಾಗಲೆಲ್ಲ ಪಂತುಲು ಗುರುಗಳು ಶಿಷ್ಯನನ್ನು ರಸಿಕರ ಮುಂದೆ ಕೂಡಿಸಿ, ಹಾಡಿಸಿ ಭವ್ಯ ಭವಿಷ್ಯಕ್ಕೆ ಬುನಾದಿ ಹಾಕಿದರು.

ಕನ್ನಡದ ಖ್ಯಾತ ಸಂಗೀತ ಶಾಸ್ತ್ರಜ್ಞರಾದ ಬಿ.ವಿ.ಕೆ.ಶಾಸ್ತ್ರಿಗಳು, ಒಮ್ಮೆ, ಬಾಲಮುರಳಿಯವರನ್ನು ಕೇಳಿದರಂತೆ, ‘ಅರೇಬಿಯನ್ ನೈಟ್ಸ್‌ನ’ ಅಬು ಹಸನ್ನನಂತೆ ನಿಮಗೆ ದಿವ್ಯ ಶಕ್ತಿ ಒದಗಿದಲ್ಲಿ ನೀವೇನು ಮಾಡುವಿರಿ? ‘‘ನಾನು ಮಾಡುವ ಮೊದಲ ಕೆಲಸವೆಂದರೆ ಸಂಗೀತಕ್ಕೆ ಅಭಿವ್ಯಕ್ತಿ ಕೊಡಲಾಗದ ಎಲ್ಲ ಮುದಿ ಕಂಠಗಳನ್ನು ನಿವೃತ್ತಿಗೊಳಿಸುವೆ.-ಸಂಗೀತದ ಹಿತದೃಷ್ಟಿಯಿಂದ, ಗಾಯನದ ಗುಣಮಟ್ಟ ಕಾಪಾಡುವ ದೃಷ್ಟಿಯಿಂದ. ಇಂದು ಇದು ಅತ್ಯಗತ್ಯವಾಗಿದೆ’’ ಎಂಬುದು ಬಾಲಮುರಳಿಯವರ ಉತ್ತರವಾಗಿತ್ತು. ಅಂದ ಮಾತ್ರಕ್ಕೆ ಬಾಲಮುರಳಿಯವರು ಪರಂಪರೆ ಮತ್ತು ಸಂಪ್ರದಾಯಗಳ ವಿರೋಧಿಯಾಗಿರಲಿಲ್ಲ. ಈ ಮಾತನ್ನು ಅವರು ಆಡಿದ್ದು 1960ರ ದಶಕದಲ್ಲಿ. ಆಗ ಕರ್ನಾಟಕ ಸಂಗೀತ ನಿಂತ ನೀರಾಗಿದ್ದುದೂ ಇದಕ್ಕೆ ಕಾರಣವಿದ್ದೀತು. ಅವರಿಗೆ ಸಂಪ್ರದಾಯದಲ್ಲಿ ಗೌರವವಿರಲಿಲ್ಲ ಎಂದಲ್ಲ. ಆದರೆ, ಅದರ ಬಾಹ್ಯ ಬೆಡಗುಬಿನ್ನಾಣಗಳ ಬಗ್ಗೆ ಅಷ್ಟೇ ತಾತ್ಸಾರವಿತ್ತು.ಸಂಗೀತದ ಹೆಸರಿನಲ್ಲಿ ಪಲುಕಿದ್ದೆಲ್ಲವನ್ನೂ ಪರಮ ವೇದವೆಂದು ಅವರು ನಂಬುತ್ತಿರಲಿಲ್ಲ.ಇದರಿಂದಾಗಿ ಅವರನ್ನು ಪಾಷಂಡವಾದಿಯೆಂದು ಕರೆಯಲಾಗುತ್ತಿತ್ತು. ವಿಮರ್ಶಕರ ಪ್ರಕಾರ, ಬಾಲಮುರಳಿ ಬಂಡಾಯಗಾರರೇನಲ್ಲ, ಆದರೆ ಅವರು ರೂಢಿವಿರೋಧಿಯಾಗಿದ್ದರು. ಅಂಗೀಕೃತ ಮೌಲ್ಯಮಾನದಂಡಗಳನ್ನು ಮೀರುವುದರಲ್ಲಿ ಅವರದು ನಿರ್ಭೀತ ಮನೋವೃತ್ತಿ. ಪಾರಂಪರಿಕ ನಿಯಮವಾದ ಪಂಚಮ ಶ್ರುತಿ ಬದಲು ತ್ರಿಶ್ರುತಿಯಲ್ಲಿ ಹೊಸ ರಾಗಗಳನ್ನು ಸೃಷ್ಟಿಸಿದಾಗ ಅವರು ಸಂಪ್ರದಾಯನಿಷ್ಠ ಸಂಗೀತ ಪ್ರಪಂಚದ ತೀವ್ರ ವಿರೋಧವನ್ನು ಎದುರಿಸಬೇಕಾಯಿತು. ಅವರ ಪ್ರಯೋಗಶೀಲತೆಯನ್ನು ವಿಲಕ್ಷಣ, ವಿಚಿತ್ರ ಖಯಾಲಿ ಎಂದು ಟೀಕಿಸಲಾಯಿತು. ಆದರೆ ಇದಾವುದೂ ಅವರ ಪ್ರಯೋಗಶೀಲತೆಯ ಉತ್ಸಾಹವನ್ನು ಕುಗ್ಗಿಸಲಿಲ್ಲ.

ಟೀಕಾಕಾರರಿಗೆ ಅವರು ಪ್ರತಿ ಏಟು ಕೊಡಲಿಲ್ಲ. ಬದಲು, ‘‘ಸಂಪ್ರದಾಯದ ಹೆಸರಿನಲ್ಲಿ ಹೊಸ ಕಲ್ಪನೆಗಳ, ನಾವೀನ್ಯತೆಗಳ ಕೊರಳು ಹಿಚುಕ ಬೇಡಿ’’ ಎಂದು ಪ್ರತಿಕ್ರಿಯಿಸಿದ್ದರು. ಎಪ್ಪತ್ತರಡು ಮೇಳಕರ್ತ ರಾಗಗಳಲ್ಲಿ ಮೂಲೆಗುಂಪಾಗಿದ್ದ ರಾಗಗಳನ್ನು ಅಳವಡಿಸಿಕೊಂಡು ರಚಿಸಿರುವ ಅವರ ಸಂಗೀತ ಕೃತಿಗಳು ‘ಜನಕರಾಗ ಕೃತಿಮಂಜರಿ’ ಸಂಪುಟದಲ್ಲಿ ಪ್ರಕಟವಾಗಿದೆ. ‘‘ಈ ಹಾಡುಗಳು ಸ್ಫೂರ್ತಿಮೂಲ ದಿಂದ ಹುಟ್ಟಿದವಲ್ಲ. ಸಾಮಾನ್ಯವಾಗಿ ವಿದ್ವಾಂಸರು ದೂರವಿರಿಸಿದ್ದ ಈ ರಾಗಗಳ ಸಾಧ್ಯತೆಗಳನ್ನು ಕಂಡುಕೊಳ್ಳುವ ಸಲುವಾಗಿ, ಉದ್ದೇಶಪೂರ್ವಕವಾಗಿ ಈ ಕೃತಿಗಳನ್ನು ರಚಿಸಿದ್ದೇನೆ’’ ಎಂದು ಬಾಲಮುರಳಿಯವರು ಹೇಳಿರುವುದುಂಟು.ಜೊತೆಗೆ ಪ್ರಸಿದ್ಧ ದೇವಾಲಯಗಳಿಗೆ ಭೇಟಿಕೊಟ್ಟಾಗ ಅಲ್ಲಿನ ವಾತಾವರಣದಿಂದ ಸ್ಫೂರ್ತಿಗೊಂಡು ‘ಮೀನಾಕ್ಷಿ’, ‘ಕನ್ಯಾಕುಮಾರಿ’ಯಂಥ ಕೃತಿಗಳನ್ನು ಅವರು ರಚಿಸಿರುವುದೂ ಉಂಟು. ಬಾಲಮುರಳಿಯವರ ಹೆಚ್ಚು ಕೃತಿಗಳು ತೆಲುಗು ಮತ್ತು ಸಂಸ್ಕೃತದಲ್ಲಿವೆ. ಈ ರಚನೆಗಳು ತ್ಯಾಗರಾಜರ ಕೃತಿಗಳ ಮಾದರಿಯಲ್ಲಿವೆ ಎನ್ನುತ್ತಾರೆ ವಿಮರ್ಶಕರು. ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು ಮತ್ತು ಶ್ಯಾಮಾ ಶಾಸ್ತ್ರಿಗಳು ಕರ್ನಾಟಕ ಸಂಗೀತದ ಮಹಾನ್ ವಾಗ್ಗೇಯಕಾರ ತ್ರಿಮೂರ್ತಿಗಳು.ಕರ್ನಾಟಕ ಸಂಗೀತಕ್ಕೆ ಗುಣಮಟ್ಟ, ಘನಮಟ್ಟಗಳನ್ನು ರೂಪಿಸಿದ ಮಹಾನುಭಾವರು. ತಾವು ಈ ತ್ರಿಮೂರ್ತಿ ವಾಗ್ಗೇಯಕಾರರಿಗೆ ಸಮ ಎಂದು ಬಾಲ ಮುರಳಿಯವರು ಭಾವಿಸಿದ್ದರು. ಬಾಲಮುರಳಿಯವರ ಈ ಸ್ವಮೋಹ, ತಮ್ಮ ರಚನೆಗಳನ್ನು ತಾವೇ ಹಾಡುವುದರಲ್ಲಿ ತಾರಕಕ್ಕೇರಿದೆ ಎಂದು ವಿಮರ್ಶಕರ ಅಂಬೋಣ. ಪ್ರಾಚೀನವೂ ಹೆಚ್ಚು ಜನಪ್ರಿಯವೂ ಆಗಿರುವ ಮಹಾನ್ ಕೃತಿಗಳಿರುವಾಗ ನಿಮ್ಮ ಕೃತಿಗಳನ್ನು ನೀವೇ ಹಾಡುವ ಹಟವೇಕೆ ಎಂದು ವಿಮರ್ಶಕರು, ಸಂಪ್ರದಾಯಬದ್ಧ ಸಂಗೀತಜ್ಞರು ಪ್ರಶ್ನಿಸಿರುವುದೂ ಉಂಟು. ‘‘ಸಂಗೀತಗಾರನೊಬ್ಬ ಸ್ವಂತ ರಚನೆಗಳನ್ನು ಹಾಡುವುದು ಸಂಪ್ರದಾಯ ವಿರೋಧಿ ಎಂದು ಎಲ್ಲಿ ಹೇಳಿದೆ? ಮೈಸೂರು ವಾಸುದೇವಾಚಾರ್ಯರು ನನ್ನ ಕೃತಿಗಳನ್ನು ಮತ್ತು ಅವುಗಳನ್ನು ನಾನೇ ಹಾಡುವುದನ್ನು ಮೆಚ್ಚಿಕೊಂಡಿದ್ದಾರೆ’’ ಎಂದು ಅಗ ಟೀಕಾಕಾರರ ಬಾಯಿಮುಚ್ಚಿಸಿದ್ದರು.

ಬಾಲಮುರಳಿ ಕೃಷ್ಣ ಗಾಯನ ಗಾರುಡಿಗರಾಗಿದ್ದರು. ಅವರ ಗಾಯನದಲ್ಲಿ ಸಮ್ಮೋಹಕತೆ ಇತ್ತು. ಹೃದಯಗಳನ್ನು ಬೆಸೆಯುವ ರಾಗಪರವಶತೆ, ಅಂತ:ಕರಣ ತಟ್ಟುವ ಮಾರ್ದವತೆ, ಮಾಧುರ್ಯಗಳು ಅವರ ಗಾಯನದಲ್ಲಿದ್ದವು. ಕಂಠಸಿರಿಯ ಜೊತೆಗೆ ಮೋಹಕ ವ್ಯಕ್ತಿತ್ವದ ವರ್ಚಸ್ಸು ಅವರನ್ನು ಆಕರ್ಷಣೀಯ ಗಾಯನಪಟುವನ್ನಾಗಿಸಿತ್ತು. ಅವರ ಕಛೇರಿಗಳಿಗೆ ರಸಿಕ ಸಹೃದಯರು ಮುಗಿಬೀಳುತ್ತಿದ್ದರು. ರಾಗ, ತಾಳಗಳಂತೆ ಸಾಹಿತ್ಯ ಮತ್ತು ಭಾವಗಳಿಗೆ ಬಾಲಮುರಳಿ ಗಾಯನದಲ್ಲಿ ಸಮಾನ ಪ್ರಾಶಸ್ತ್ಯ ನೀಡುತ್ತಿದ್ದರು. ಇದರಿಂದಾಗಿ ಸಂಪ್ರದಾಯವಾದಿಗಳು ಬಾಲಮುರಳಿಯವರ ಗಾಯನಕ್ಕೆ, ಲಘುಧಾಟಿ, ರಂಜನೀಯ, ಭಾವ, ಲಾಲಿತ್ಯಗಳ ವಿಜೃಂಭಣೆ ಎಂದೆಲ್ಲ ಹಣೆಪಟ್ಟಿಯನ್ನು ಹಚ್ಚಿದ್ದೂ ಉಂಟು. ಬಾಲ ಮುರಳಿಯವರ ಗಾಯನದ ಉತ್ಕೃಷ್ಟತೆ ಇರುವುದೇ ಈ ಭಾವ-ರಾಗ-ಲಾಲಿತ್ಯಗಳ ತ್ರಿವೇಣಿ ಸಂಗಮ ವೈಶಿಷ್ಟ್ಯದಲ್ಲಿ. ಸಾಂಪ್ರದಾಯಿಕ ಕೀರ್ತನೆಗಳ ಹಾಡುವಿಕೆಯಲ್ಲಿ ರಾಮ, ಕೃಷ್ಣ, ಲಕ್ಷ್ಮೀ, ಪಾರ್ವತಿಯರನ್ನು ಭಕ್ತಿಭಾವಗಳ ಸಮರ್ಪಣ ಮನೋಭಾವದಿಂದ ಅನಾವರಣಗೊಳಿಸಿದಂತೆಯೇ, ಶೃಂಗಾರ-ವಿರಹಗಳನ್ನು ಅದರೆಲ್ಲ ಭಾವ-ರಸ-ಲಾಲಿತ್ಯ-ಸುಕುಮಾರತೆಗಳಿಂದ ಹೃದಯಂಗಮವಾಗಿ ನಿರೂಪಿಸುವಲ್ಲಿ ಬಾಲಮುರಳಿಯವರ ಗಾಯನ ಕೇವಲ ಇಂಪಾದ ರಸ ಸಂಗೀತವಷ್ಟೇ ಆಗಿರದೆ ಜೀವಭಾವದ ಸಹಯೋಗಾನುಭವವೇ ಸರಿ. ಈ ಮಾತಿಗೆ ನಿದರ್ಶನವಾಗಿ ಜಯದೇವ ಕವಿಯ ‘‘ಗೀತ ಗೋವಿಂದ’ದ ಅಷ್ಟಪದಿಗಳ ಗಾಯನ, ಭದ್ರಾಚಲ ರಾಮದಾಸರ ಕೃತಿಗಳ ಗಾಯನವನ್ನು ಗಮನಿಸಬಹುದು. ಅಂತೆಯೇ ಪುರಂದರಕನಕರಾದಿಯಾಗಿ ಬಾಲಮುರಳಿ ಹಾಡಿರುವ ದಾಸರ ಪದಗಳು ಈ ಗುಣಗಳಿಂದಾಗಿಯೇ ಕನ್ನಡಿಗರ ಹೃನ್ಮನ ಸೆಳೆದಿವೆ.

ವಿಜಯವಾಡ, ಹೈದರಾಬಾದ್ ಆಕಾಶವಾಣಿ ಕೇಂದ್ರಗಳ ಸಂಗೀತ ವಿಭಾಗಗಳಲ್ಲಿ ಸ್ವಲ್ಪಕಾಲ ಸೇವೆ ಸಲ್ಲಿಸಿದ ನಂತರ ಬಾಲಮರಳಿಯವರು ಮದ್ರಾಸ್ ಆಕಾಶವಾಣಿಗೆ ವರ್ಗ ಪಡೆದು ಅಲ್ಲೇ ನೆಲಸಿದರು. ತೆಲುಗು ಮಾತೃ ಭಾಷೆಯಾದರೂ ಅವರು ಸಂಸ್ಕೃತ, ಕನ್ನಡ, ತಮಿಳು, ಮಲೆಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಲೀಲಾಜಾಲವಾಗಿ ಹಾಡುತ್ತಿದ್ದರು. ಚಲನಚಿತ್ರ ರಂಗದಲ್ಲೂ ಸಂಗೀತ ನಿರ್ದೇಶಕರಾಗಿ, ಹಿನ್ನೆಲೆ ಗಾಯಕರಾಗಿ, ನಟರಾಗಿ ಅವರು ತಮ್ಮ ಹೆಜ್ಜೆ ಗುರುತುಗಳನ್ನು ಸ್ಪಷ್ಟವಾಗಿ ಮೂಡಿಸಿದ್ದಾರೆ. 1967ರಲ್ಲಿ ‘ಭಕ್ತ ಪ್ರಹ್ಲಾದ ತೆಲುಗು ಚಿತ್ರದಲ್ಲ್ಲಿ ನಟಸುವುದರೊಂದಿಗೆ ಚಿತ್ರೋದ್ಯಮದೊಂದಿಗೆ ಅವರ ನಂಟು ಶುರುವಾಯಿತು. ಕನ್ನಡ ಚಿತ್ರೋದ್ಯಮದೊಂದಿಗೆ ಆರು ದಶಕಗಳಿಗೂ ಹೆಚ್ಚಿನ ಅವಿನಾಭಾವ ಬಾಂಧವ್ಯ. ಸಂಧ್ಯಾ ರಾಗ (ನಂಬಿದೆ ನಿನ್ನ ನಾದ ದೇವತೆಯೆ) ‘ಹಂಸಗೀತೆ’, ‘ಮುತ್ತಿನಹಾರ ಮೊದಲಾದ ಚಿತ್ರಗಳು, ಬಾಲಮುರಳಿಯವರ ಗಾಯನ ಸಂಗೀತಗಳಿಂದಾಗಿಯೇ ಇಂದಿಗೂ ನಮ್ಮ ನೆನಪಿನಲ್ಲಿ ಹಸಿರಾಗಿವೆ.
ಬಾಲಮುರಳಿಯವರ ಸಂಗೀತ ಪ್ರಪಂಚದಲ್ಲಿ ಗಡಿಗಳು ಇದ್ದಂತಿರಲಿಲ್ಲ. ಭಾರತೀಯ ಸಂಗೀತದ ಪರಿಕಲ್ಪನೆಯೊಂದು ಅವರಲ್ಲಿತ್ತು. ಇಂಥದೊಂದು ಪರಿಕಲ್ಪನೆಯಿಂದಲೇ ಅವರು ಆಖಿಲ ಭಾರತ ಮಟ್ಟದಲ್ಲಿ ‘ಜುಗಳ್ಬಂದಿ’ ಮೂಲಕ ಹೊಸದೊಂದು ಆಯಾಮ ಕಲ್ಪಿಸಿದರು. -ಬಾಲಮುರಳಿ-ಭೀಮಸೇನ ಜೋಶಿ ಜುಗಳ್ಬಂದಿ ಗಾಯನ ಭವಿಷ್ಯದಲ್ಲಿ ಸುಪ್ರಸಿದ್ಧ ಗಾಯಕರನೇಕರ ಇಂಥ ಕಛೇರಿಗಳಿಗೆ ಪೂರ್ವನಿದರ್ಶನವಾಯಿತು. ಕಿಶೋರಿ ಅಮೋನ್ಕರ್, ಹರಿಪ್ರಸಾದ್ ಚೌರಾಸಿಯಾ, ಪಂಡಿತ್ ಜಸರಾಜ್, ಝಾಕಿರ್ ಹುಸೇನ್‌ರಂಥ ಸಂಗೀತದ ಅಪ್ರತಿಮ ಪ್ರತಿಭೆಗಳೊಡಗೂಡಿ ಬಾಲಮುರಳಿಯವರು ನೀಡಿರುವ ಜುಗಳ್ಬಂದಿ ಕಾರ್ಯಕ್ರಮಗಳು ಉತ್ತರಾದಿ-ದಕ್ಷಿಣಾದಿ, ಕರ್ನಾಟಕ-ಹಿಂದೂಸ್ತಾನಿ ಎಂಬೆಲ್ಲ ಗಡಿಪ್ರಬೇಧಗಳನ್ನು ಅಳಿಸಿಹಾಕಿ ಭಾರತೀಯ ಸಂಗೀತದ ಬಹುತ್ವದಲ್ಲಿನ ಏಕತೆಯನ್ನು ಎತ್ತಿಹಿಡಿದಿವೆ.
ಸಂಗೀತ ವಲಯಗಳಲ್ಲಿ ದೇಶದ ಪರಮೋಚ್ಛ ಗೌರವಪುರಸ್ಕಾರ ಎಂದು ಭಾವಿಸಲಾದ ಮದ್ರಾಸ್ ಮ್ಯೂಸಿಕ್ ಅಕಾಡಮಿಯ ಪ್ರಶಸ್ತಿಗೆ ಕಿರಿಯ ವಯಸ್ಸಿನಲ್ಲೇ ಪಾತ್ರರಾದ ಬಾಲಮುರಳಿಯವರು 1991ರಲ್ಲಿ ಪದ್ಮವಿಭೂಷಣರಾದರು.
ಚೆನ್ನೈನ ಸ್ವಗೃಹದಲ್ಲಿ ದೇಹಾವಸಾನವಾದಾಗ, ಸಂಗೀತವೇ ಬಾಳಿನುಸಿರಾಗಿ ತುಂಬು ಜೀವನ ನಡೆಸಿದ ಬಾಲಮುರಳಿಯವರಿಗೆ ಎಂಬತ್ತಾರರ ಇಳಿ ವಯಸ್ಸು. ಅವರೀಗ ಸಂಗೀತದಲ್ಲಿ ಚಿರಾಯು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News