×
Ad

ತನ್ನ ರೋಲ್ ಮಾಡೆಲ್ ಸಚಿನ್ ಜೊತೆ ಪ್ರಪ್ರಥಮ ಭೇಟಿಯ ವಿವರ ಬಹಿರಂಗಪಡಿಸಿದ ವಿರಾಟ್ !

Update: 2016-11-27 12:16 IST

ನವದೆಹಲಿ: ಟೀಮ್ ಇಂಡಿಯಾದ ಟೆಸ್ಟ್ ಕಪ್ತಾನ ಮತ್ತು ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಆಡುತ್ತಿರುವುದನ್ನು ನೋಡುತ್ತಾ ಬೆಳೆದವರು. ಈ ಬಗ್ಗೆ ಅವರು ಬಹಳ ಕಡೆ ಹೇಳಿದ್ದಾರೆ. ಇಂಗ್ಲೆಂಡಿನ ಮಾಜಿ ಕಪ್ತಾನ ಮೈಖಲ್ ವಾ ಅವರಿಗೆ ನೀಡಿದ ಸಂದರ್ಶನದಲ್ಲಿ ವಿರಾಟ್ ಮೊದಲ ಬಾರಿಗೆ ಸಚಿನ್ ಜೊತೆಗಿನ ಪ್ರಥಮಭೇಟಿಯ ಬಗ್ಗೆ ಮಾತನಾಡಿದ್ದಾರೆ. ತಾನು ಉತ್ತಮ ಬ್ಯಾಟ್ಸಮನ್ ಆಗುವಲ್ಲಿ ಮಾಸ್ಟರ್ ಬ್ಲಾಸ್ಟರ್ ನೀಡಿದ ನೆರವು ಮತ್ತು ಡ್ರಿಂಕ್ಸ್ ವಿಚಾರವಾಗಿ ತೆಂಡೂಲ್ಕರ್‌ಗೆ ಸುಳ್ಳು ಹೇಳಿದ್ದ ಬಗ್ಗೆಯೂ ವಿಸ್ತಾರವಾಗಿ ಈ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಈ ಸಂದರ್ಶನ ಬ್ರಿಟನ್ ದಿನಪತ್ರಿಕೆ ಟೆಲಿಗ್ರಾಫ್‌ನಲ್ಲಿ ಪ್ರಕಟವಾಗಿದೆ.

ವಿರಾಟ್ ಅವರು ವಾ ಗೆ ಹೇಳಿರುವ ಪ್ರಕಾರ, 12ರ ವಯಸ್ಸಿನಲ್ಲಿ ತಮ್ಮ ಆದರ್ಶ ಕ್ರಿಕೆಟರ್ ಆಗಿದ್ದ ತೆಂಡೂಲ್ಕರ್‌ನ್ನು ಅವರು ಹೊಟೇಲಿನಲ್ಲಿ ನೋಡಿದ್ದರು. ಆದರೆ ಆಗ ಸಚಿನ್ ಜೊತೆ ಮಾತನಾಡಲೂ ಭಯಪಟ್ಟಿದ್ದರು. ನಂತರ 19ರೊಳಗಿನ ತಂಡದ ನ್ಯೂಝಿಲ್ಯಾಂಡ್ ಪ್ರವಾಸದ ಮೊದಲು ವಿರಾಟ್ ಸಮೇತ ಇತರ ಆಟಗಾರರ ಜೊತೆಗೆ ಮಾತನಾಡಲು ಸಚಿನ್‌ರನ್ನು ಕರೆಸಲಾಗಿತ್ತು."ಸಚಿನ್ ಆ ಸಂದರ್ಭದಲ್ಲಿ ಏನು ಹೇಳಿದ್ದರು ಎನ್ನುವ ಒಂದು ಶಬ್ದವೂ ನನಗೆ ನೆನಪಿಲ್ಲ. ಏಕೆಂದರೆ ನಾನು ರೋಮಾಂಚನದಲ್ಲಿ ಅವರನ್ನೇ ನೋಡುತ್ತಿದ್ದೆ. ಯಾರ ಕಾರಣದಿಂದ ನೀವು ಕ್ರಿಕೆಟ್ ಆಡಲು ಆರಂಭಿಸಿದ್ದೀರೋ ಮತ್ತು ಯಾರ ಹಾಗೆ ಆಗಲು ಬಯಸಿದ್ದೀರೋ, ಅವರು ಎದುರಿಗೆ ಇದ್ದರೆ ಒಂದು ಮಾತೂ ಬಾಯಿಂದ ಹೊರಡುವುದಿಲ್ಲ" ಎಂದಿದ್ದಾರೆ ವಿರಾಟ್. ಕೆಲವು ನಿಮಿಷಗಳ ಕಾಲ ಮಾತನಾಡಿದ ಮೇಲೆ ಸಚಿನ್ ಹೊರಟು ಹೋಗಿದ್ದರು. ಆದರೆ ಆ ಸಂದರ್ಭದಲ್ಲಿ ಪೂರ್ಣ ಮೌನವಾಗಿದ್ದುದನ್ನು ಈಗಲೂ ಅತೀ ಕೆಟ್ಟ ಅನುಭವ ಎಂದು ತಿಳಿದಿದ್ದೇನೆ ಎನ್ನುವುದು ವಿರಾಟ್ ಅಭಿಪ್ರಾಯ.

ಕೆಲವು ವರ್ಷಗಳ ನಂತರ ಟೀಮ್ ಇಂಡಿಯಾದ ಸದಸ್ಯನಾದ ಮೇಲೆ ವಿರಾಟ್‌ಗೆ ಸಚಿನ್ ಮುಂದೆ ಹೇಳಲು ಬಹಳ ಕಷ್ಟವಾದ ವಿಷಯವೆಂದರೆ ತಮಗೆ ಕುಡಿತದ ಅಭ್ಯಾಸವಿದೆ ಎಂದು ಒಪ್ಪಿಕೊಳ್ಳುವುದು. "ಭಾರತದಲ್ಲಿ ಕುಡಿತ ಎನ್ನುವುದು ಸಂಸ್ಕಾರ ಮತ್ತು ಅಭ್ಯಾಸದ ಪ್ರಶ್ನೆ. ಕುಡಿತ ಅಥವಾ ಪಾರ್ಟಿಗೆ ಹೋಗುವ ಅಭ್ಯಾಸವಿದೆ ಎಂದು ಹಿರಿಯರ ಮುಂದೆ ಹೇಳಿಕೊಳ್ಳುವುದಿಲ್ಲ. ಸಚಿನ್ ಒಮ್ಮೆ ಡ್ರಿಂಕ್ಸ್ ಆಫರ್ ಮಾಡಿದಾಗ, "ನಾನು ಕುಡಿಯುವುದಿಲ್ಲ" ಎಂದು ಉತ್ತರಿಸಿದ್ದೆ. ಅವರು ಒತ್ತಾಯ ಮಾಡಿದಾಗಲೂ ಕುಡಿಯುವುದಿಲ್ಲ ಎಂದೇ ಹೇಳಿದ್ದೆ. ಕೊನೆಗೆ ನಾಲ್ಕು ಐಸ್ ಕ್ಯೂಬ್ ಜೊತೆಗೆ ಲೈಟ್ ಡ್ರಿಂಕ್ಸ್ ಮಾಡುವೆ ಎಂದೆ. ಆ ನಂತರ ಎಲ್ಲವೂ ಸುಲಭವಾಯಿತು" ಎಂದು ವಿರಾಟ್ ಹೇಳಿದ್ದಾರೆ.

2014ರ ಇಂಗ್ಲೆಂಡ್ ಪ್ರವಾಸದ ನಂತರ ವಿರಾಟ್ ಕೊಹ್ಲಿ ಫಾರ್ಮ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಸಚಿನ್ ಬಹಳ ನೆರವಾಗಿದ್ದರು. ಇಂಗ್ಲೆಂಡ್ ಸರಣಿಯಲ್ಲಿ ಅವರ ಸರಾಸರಿ 13.40 ಆಗಿತ್ತು. ಸ್ವಿಂಗ್ ಬಾಲುಗಳಿಗೆ ವಿರಾಟ್ ಬಳಿ ಉತ್ತರವೇ ಇರಲಿಲ್ಲ. ಭಾರತಕ್ಕೆ ಮರಳಿ ಹತ್ತು ದಿನ ಮುಂಬೈಗೆ ಹೋಗಿ ಸಚಿನ್ ಜೊತೆಗೆ ಮಾತನಾಡಿದೆ. ಅವರ ಜೊತೆಗೆ ಸಮಯ ಕಳೆದೆ. ಇಂಗ್ಲೆಂಡ್ ಪ್ರವಾಸದ ನನ್ನ ಬ್ಯಾಟಿಂಗ್ ಸಚಿನ್ ನೋಡಿದ್ದರು. ಕೆಲವು ತಾಂತ್ರಿಕ ಅಂಶಗಳಲ್ಲಿ ಸುಧಾರಣೆಗಳನ್ನು ಸೂಚಿಸುವುದಾಗಿ ಹೇಳಿದರು. ಅವರು ಆಗ ಹೇಳಿದ ವಿವರಗಳು ಈಗ ನನಗೆ ನೆರವಾಗಿದೆ. ಕ್ರೀಜ್‌ನಲ್ಲಿ ನಿಂತು ಆಡುವಾಗ ಅನಿಶ್ಚಿತತೆ ಕಾಡಬಾರದು ಎಂದು ಸಚಿನ್ ಸೂಚಿಸಿದ್ದರು ಎಂದಿದ್ದಾರೆ ಕೊಹ್ಲಿ.

"ಹತ್ತು ದಿನಗಳಲ್ಲಿ ನಮ್ಮ ನಡುವೆ ಸಾಕಷ್ಟು ಮಾತುಕತೆಗಳಾಗಿದ್ದವು. ಅದು ಈಗ ನನಗೆ ನೆರವಾಗಿದೆ. ಪಂದ್ಯಕ್ಕೆ ಸಿದ್ಧವಾಗುವಾಗ ಮಾನಸಿಕವಾಗಿ ಶಾಂತವಾಗಿರಬೇಕು" ಎಂದು ಅವರು ಹೇಳಿದ್ದರು. ಅದೂ ನನಗೆ ಸಾಕಷ್ಟು ನೆರವಾಗಿದೆ ಎಂದು ಕೊಹ್ಲಿ ಹೇಳಿದ್ದಾರೆ.

"ರಾಜ್‌ಕೋಟ್‌ನಲ್ಲಿ ನಡೆದ ಮೊದಲ ಟೆಸ್ಟ್ ನಮಗೆ ಎಚ್ಚರಿಕೆ ಗಂಟೆಯಾಗಿತ್ತು. ಇಂಗ್ಲೆಂಡ್ ತಂಡದ ಸಾಮರ್ಥ್ಯದ ಅರಿವು ನಮಗಿದೆ. ಸರಣಿಯ ಮೊದಲ ಪಂದ್ಯದಲ್ಲೇ ಈ ಎಚ್ಚರಿಕೆ ಸಿಕ್ಕಿದ್ದು ಒಳ್ಳೆಯದಾಯಿತು. ಇಂಗ್ಲೆಂಡನ್ನು ಸರಳವಾಗಿ ಎದುರಿಸುವ ಅಪಾಯಕ್ಕೆ ಕೈ ಹಾಕುವಂತಿಲ್ಲ. ಅವಕಾಶವನ್ನು ಬಿಡದೆ ಬಳಸಿಕೊಳ್ಳಬೇಕು. ವಿಶಾಖಪಟ್ಟಣದ ಎರಡನೇ ಟೆಸ್ಟ್‌ನಲ್ಲಿ ನಾವು ಇದನ್ನೇ ಮಾಡಿದೆವು. ಸಿಕ್ಕ ಅವಕಾಶದ ಲಾಭ ಪಡೆದೆವು. ಮುಂದಿನ ಪಂದ್ಯಗಳಲ್ಲೂ ಹೀಗೆ ಇರಲು ಬಯಸಿದ್ದೇವೆ" ಎಂದಿದ್ದಾರೆ ಕೊಹ್ಲಿ.

ಕೃಪೆ: khabar.ndtv.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News