ಕಾಮ್ರೇಡ್ ಕ್ಯಾಸ್ಟ್ರೊಗೆ ಒಂದು ಆತ್ಮೀಯ ಪತ್ರ

Update: 2016-11-27 18:54 GMT

ಆತ್ಮೀಯ ಕಾಮ್ರೇಡ್,

ವರ್ಷಗಳಿಂದ ಬರೆದು ಬರೆದು ಅರ್ಧಕ್ಕೆ ಕೈ ಬಿಡುತ್ತಿದ್ದ ಪತ್ರವನ್ನು ಪುನಃ ಪೂರ್ಣಗೊಳಿಸಲು ಕೂತಿದ್ದೇನೆ. ಯಾವಾಗಲೋ ನಿಮಗೆ ತಲುಪಬೇಕಿದ್ದ ಕಾಗದಕ್ಕೆ ಈಗ ಸ್ಪಷ್ಟ ರೂಪ ನೀಡಲು ಪ್ರಯತ್ನ ನಡೆಸಿದ್ದೇನೆ. ತುಂಬಾ ತಡವಾಯಿತು. ಈಗಲೂ ನಿಮ್ಮೆಂದಿಗೆ ಭಾವನೆಗಳನ್ನು ಹಂಚಿಕೊಳ್ಳದಿದ್ದರೆ, ನನ್ನಿಂದ ದೊಡ್ಡ ಲೋಪವಾದೀತು. ಅದಕ್ಕೆ ಎಲ್ಲಾ ಕೆಲಸಕಾರ್ಯ ಬದಿಗಿರಿಸಿ, ಕೈಯಲ್ಲಿ ಹಾಳೆ ಮತ್ತು ಪೆನ್ ಹಿಡಿದಿದ್ದೇನೆ. ಮನಸ್ಸಿಗೆ ಅನ್ನಿಸಿದ್ದೆಲ್ಲವೂ ಹರಿಬಿಡುತ್ತ, ಬರಹ ದೀರ್ಘವಾಗಬಹುದು. ದಯವಿಟ್ಟು ಸಿಟ್ಟಾಗಬೇಡಿ.
ಜಮಖಂಡಿ ಸಮೀಪದ ಸಾವಳಗಿ ಎಂಬ ಕುಗ್ರಾಮದಲ್ಲಿ ಜನಿಸಿದ ನಾನು ಸುತ್ತಮುತ್ತಲ ಗ್ರಾಮಗಳಲ್ಲಿ ಓಡಾಡುವುದರಲ್ಲೇ ಸಂತಸಪಡುತ್ತಿದ್ದೆ. ಚಿಕ್ಕಂದಿನಲ್ಲಿ ವಿಜಾಪುರ, ಬೆಂಗಳೂರು ಮುಂತಾದ ಹೆಸರು ಕೇಳುತ್ತಿದ್ದೆ. ಆದರೆ ಅಲ್ಲಿ ಸುಲಭವಾಗಿ ಹೋಗುವಂತಿರಲಿಲ್ಲ. ಅವು ದೊಡ್ಡ ನಗರಗಳು, ಅಲ್ಲಿನ ಜನಸಾಗರದಲ್ಲಿ ಕಳೆದುಹೋದವರು ಪುನಃ ಹಳ್ಳಿಗೆ ಬರುವುದಿಲ್ಲ. ಅಲ್ಲಿ ಬದುಕೋದು ಕಷ್ಟ ಎಂದು ಹಿರಿಯರು ಹೇಳುತ್ತಿದ್ದರು. ಹೀಗಾಗಿ ಆ ನಗರಗಳಿಗೆ ಹೋಗುವ ಇರಾದೆ ಬಿಟ್ಟಿದ್ದೆ. ಮನೆಯ ಹಿರಿಯರು ಸಹ ಆ ನಗರಗಳನ್ನು ನೆನಪಿಸಿಕೊಳ್ಳುತ್ತಿರಲಿಲ್ಲ.
ಈ ಸಮಯದಲ್ಲೇ ಪತ್ರಿಕೆಗಳಲ್ಲಿ ಕ್ಯೂಬಾ ಹೆಸರು ಪದೇ ಪದೇ ಪ್ರಸ್ತಾಪವಾಗುತ್ತಿತ್ತು. ಅಮೆರಿಕ ವಿರುದ್ಧದ ನಿಮ್ಮ ಹೋರಾಟದ ಕತೆಗಳು ಪ್ರಕಟವಾಗುತ್ತಿತ್ತು. ಕ್ರಾಂತಿಕಾರಿ ಸ್ನೇಹಿತ ಚೇ ಗುವೇರಾ, ಸಹೋದರ ರೌಲ್ ಮತ್ತು ಇನ್ನಿತರ ಕ್ರಾಂತಿಕಾರರ ಜೊತೆ ಸೇರಿ ನೀವು ನಡೆಸಿದ ಗೆರಿಲ್ಲಾ ಯುದ್ಧ ಮತ್ತು ವಿವಿಧ ಹಂತಗಳ ಸಂಘರ್ಷದ ಸುದ್ದಿಗಳನ್ನು ಓದುತ್ತಿದ್ದ ನಾನು ರೋಮಾಂಚಿತಗೊಳ್ಳುತ್ತಿದ್ದೆ. ನಿಮ್ಮ ವಿಷಯವನ್ನು ಸ್ನೇಹಿತರು ಮತ್ತು ಹಿರಿಯರೊಂದಿಗೆ ಹಂಚಿಕೊಂಡು ಸಂಭ್ರಮಿಸುತ್ತಿದ್ದೆ. ಆಗಲೇ ಮನಸ್ಸಿನಲ್ಲಿ ಪುಟ್ಟ ಆಸೆಯೊಂದು ಮೊಳಕೆಯೊಡೆಯಿತು: ಒಮ್ಮೆಯಾದರೂ ಕ್ಯೂಬಾಗೆ ಭೆೇಟಿ ನೀಡಬೇಕು.

ಪಕ್ಕದ ರಾಜ್ಯವನ್ನೂ ಸಹ ನೋಡಿರದ ನಾನು ಕ್ಯೂಬಾಗೆ ಭೆೇಟಿ ನೀಡುವ ಮತ್ತು ನಿಮ್ಮಂದಿಗೆ ಮಾತನಾಡುವ ಕನಸು ಕಟ್ಟಿಕೊಂಡಿದ್ದೆೆ. ಬಹುಶಃ ನಾನೊಬ್ಬನೇ ಅಲ್ಲ, ಆ ಕಾಲದಲ್ಲಿ ಪ್ರಗತಿಪರರು, ಎಡಪಂಥೀಯ ಒಲವು ಹೊಂದಿದವರು ಮತ್ತು ಜನಪರ ಹೋರಾಟದಲ್ಲಿ ತೊಡಗಿಸಿಕೊಂಡವರು ಅಂತಹದ್ದೇ ಕನಸು ಕಟ್ಟಿಕೊಂಡಿದ್ದರು. ಹೋರಾಟದ ಕಾಶಿಗೊಮ್ಮೆ ಭೆೇಟಿ ನೀಡಿ, ಸಾರ್ಥಕ ಭಾವ ಹೊಂದಬೇಕು ಎಂಬುದು ಹಲವರ ಹಂಬಲವಾಗಿತ್ತು. ವರ್ಷಗಳು ಕಳೆದಂತೆ ಕೆಲವರ ಕನಸುಗಳು ನನಸಾದವು. ಆದರೆ ನನ್ನ ಕನಸು ಕನಸಾಗಿಯೇ ಉಳಿಯಿತು. ದೂರದ ಕ್ಯೂಬಾದಲ್ಲಿದ್ದರೂ ಭಾರತದೊಂದಿಗೆ ನಿಕಟ ಸಂಪರ್ಕ ಹೊಂದಿದ್ದು ನನಗೆ ತುಂಬಾ ಖುಷಿ ಕೊಡುತ್ತಿತ್ತು. ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅಲ್ಲದೇ ಇಲ್ಲಿನ ಕಮ್ಯುನಿಸ್ಟ್ ನೇತಾರರಾದ ಜ್ಯೋತಿ ಬಸು, ಸುಬೋಧ್ ಬ್ಯಾನರ್ಜಿಯವರನ್ನು ಭೆೇಟಿಯಾದ ಸುದ್ದಿ ಮತ್ತು ಚಿತ್ರಗಳನ್ನು ನೋಡಿದಾಗ ಸಂತಸವಾಗುತ್ತಿತ್ತು. ನಮ್ಮ ದೇಶಕ್ಕೆ ನೀವು ಬಂದರೂ ಭೆೇಟಿಯಾಗಲು ಸಾಧ್ಯವಾಗಲಿಲ್ಲ ಎಂಬ ಚಡಪಡಿಕೆಯೂ ಇರುತಿತ್ತು. ನಮ್ಮ ದೇಶದಲ್ಲಿ ಭೇಟಿಯಾಗದಿದ್ದರೇನಂತೆ, ಕ್ಯೂಬಾ ದೇಶಕ್ಕೆ ಹೋಗಿ ನಿಮ್ಮನ್ನು ಭೇಟಿಯಾಗುವ ಆಶಾಭಾವನೆ ಹೊಂದಿದ್ದೆ.
ಕಾಮ್ರೇಡ್, ನಿಮ್ಮ ಹೋರಾಟದ ಕಾಲಘಟ್ಟಕ್ಕೂ ಮತ್ತು ಈಗಿನ ಪರಿಸ್ಥಿತಿಗೂ ಸಾಕಷ್ಟು ವ್ಯತ್ಯಾಸವಾಗಿದೆ. ಜಾಗತಿಕ ಸನ್ನಿವೇಶವೇ ಬದಲಾಗಿದೆ. ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣ ಸುಳಿಗೆ ಸಿಲುಕಿ ಇಡೀ ಜಗತ್ತು ಬಂಡವಾಳಶಾಹಿಗಳ ಕೈಯಲ್ಲಿ ಸಿಲುಕಿ ನಲುಗುತ್ತಿದೆ. ಆರ್ಥಿಕವಾಗಿ ಕೊಂಚ ಶಕ್ತಿಯುಳ್ಳ ಕೆಲ ದೇಶಗಳು ಉಸಿರಾಡುತ್ತಿವೆಯಾದರೂ ಆಂತರಿಕವಾಗಿ ಅವು ಕುಸಿದಿವೆ. ಇನ್ನು ಬಡ ದೇಶಗಳ ಸ್ಥಿತಿಗತಿ ಮತ್ತು ಅಲ್ಲಿ ನೆಲೆಸಿರುವ ನಿರಾಶ್ರಿತರ ಪಾಡಂತೂ ಹೇಳತೀರದು. ಯುದ್ಧಪೀಡಿತ, ಬರಪೀಡಿತ ಮತ್ತು ಹಲವು ಸೌಕರ್ಯ ವಂಚಿತ ದೇಶಗಳ ಸ್ಥಿತಿಯಂತೂ ಇನ್ನೂ ಅಧೋಗತಿಗೆ ತಲುಪಿದೆ.
ಇದೆಲ್ಲವೂ ನಿಮ್ಮ ಗಮನದಲ್ಲೂ ಇದೆ. ಇಂತಹದ್ದಕ್ಕೆಲ್ಲ ಕೊನೆ ಹಾಡಬೇಕೆಂದೇ ನೀವು, ಚೆ ಗುವೇರಾ ಮತ್ತು ಇತರ ಕ್ರಾಂತಿಕಾರಿಗಳು ಹೋರಾಟ ರೂಪಿಸಿದ್ದು. ಸಮಾಜವಾದ ಇಲ್ಲವೇ ಸಾವು ಎಂದು ಸ್ಪಷ್ಟವಾದ ನಿಲುವು ತಳೆದ ನೀವು ಕ್ಯೂಬಾ ದೇಶವನ್ನು ಅದೇ ರೀತಿ ಕಟ್ಟಿ, ಬೆಳೆಸಿದ್ದೀರಿ. ಅಲ್ಲಿ ಬಂಡವಾಳಶಾಹಿಗಳ ಗತ್ತು, ಗೈರತ್ತು ಇಲ್ಲ. ದುರ್ಬಲರ ಮೇಲೆ ಶೋಷಣೆಯಿಲ್ಲ. ಬಡವರು ಮತ್ತು ಜನಸಾಮಾನ್ಯರಿಗೆ ತಮ್ಮ ಹಕ್ಕನ್ನು ಒದಗಿಸಿಕೊಟ್ಟಿದ್ದೀರಿ. ಪ್ರಧಾನಿ ಮತ್ತು ರಾಷ್ಟ್ರದ ಅಧ್ಯಕ್ಷರಾಗಿ ದೇಶವನ್ನು ಎಚ್ಚರಿಕೆಯಿಂದ ಕಾಯ್ದುಕೊಂಡ ನೀವು ಜನರನ್ನು ಎಂದಿಗೂ ಆಪತ್ತಿಗೆ ಸಿಲುಕಿಸುವ ಕೆಲಸ ಮಾಡಲಿಲ್ಲ.
ಇತರ ದೇಶಗಳಿಗೆ ಹೋಲಿಸಿದರೆ, ಕ್ಯೂಬಾ ತುಂಬಾ ಚಿಕ್ಕ ದೇಶ. ಆದರೆ ಅಲ್ಲಿ ನೀವು ಬಡವರು ಮತ್ತು ಜನಸಾಮಾನ್ಯರ ಪರವಾಗಿ ಕೈಗೊಂಡ ಸುಧಾರಣಾ ಕಾರ್ಯಗಳು ದೊಡ್ಡ ದೇಶಗಳಿಗೆ ಮಾದರಿಯಾದವು. ‘ಸಮಾಜವಾದ, ಸಹಕಾರ, ಸಹಬಾಳ್ವೆ ಮತ್ತು ಕಮ್ಯುನಿಸ್ಟ್ ತತ್ವಗಳು ಬರೀ ಭ್ರಮೆಗಳು. ಕಾರ್ಯಸಾಧುವಲ್ಲ’ ಎಂದು ಕೆಲವರು ವ್ಯಂಗ್ಯವಾಡಿದರು. ಭ್ರಮೆಗಳು ವಾಸ್ತವ ರೂಪಕ್ಕೆ ಇಳಿಯಲು ತುಂಬಾ ಹೊತ್ತು ಹಿಡಿಯುವುದಿಲ್ಲ ಎಂದು ಅದೆಲ್ಲವನ್ನೂ ದೇಶದಲ್ಲಿ ಜಾರಿಗೊಳಿಸಿದ್ದೀರಿ. ದ್ವೇಷವನ್ನೇ ಮೈಗೂಡಿಸಿಕೊಂಡಿದ್ದ ಅಮೆರಿಕ ಕೂಡ ಪದೇ ಪದೇ ಕಣ್ಣುಜ್ಜಿಕೊಂಡು ಕ್ಯೂಬಾ ನೋಡುವಂತಾಯಿತು.
ನಿಮಗೆ ನೆನಪಿರಬಹುದು. ಆದರೂ ಮತ್ತೊಮ್ಮೆ ನೆನಪಿಸುತ್ತೇನೆ. ನೀವು ತಂದ ಸುಧಾರಣಾ ಕಾರ್ಯಗಳನ್ನು ಮಾದರಿಯಾಗಿ ಇಟ್ಟುಕೊಂಡು ಅವುಗಳನ್ನು ನಮ್ಮ ದೇಶದಲ್ಲೂ ಜಾರಿಗೊಳಿಸುವ ಅವಕಾಶ ಒದಗಿ ಬಂದಿತ್ತು. ದೇಶದ ಅತ್ಯಂತ ದೀರ್ಘಾವಧಿ ಕಮ್ಯುನಿಸ್ಟ್ ಮುಖ್ಯಮಂತ್ರಿ ಜ್ಯೋತಿ ಬಸು ದೇಶದ ಮೊದಲ ಕಮ್ಯುನಿಸ್ಟ್ ಪ್ರಧಾನಿಯಾಗುವ ಸಾಧ್ಯತೆಯಿತ್ತು. ಪ್ರಗತಿಪರರು, ಎಡಪರ ಚಿಂತಕರು ಆ ಕ್ಷಣಕ್ಕೆ ಸಂಭ್ರಮಿಸಿದ್ದರು. ಪಶ್ಚಿಮ ಬಂಗಾಲದ ಕಮ್ಯುನಿಸ್ಟ್ ನಾಯಕ ಹೊಸದಿಲ್ಲಿಯ ಕೆಂಪು ಕೋಟೆಯ ಮೆಟ್ಟಿಲು ಏರುವರು ಎಂಬ ಆಶಾಭಾವನೆ ಗಾಢವಾಗಿತ್ತು. ಆದರೆ ನೋಡುನೋಡುತ್ತಿದ್ದಂತೆ ಅದೆಲ್ಲವೂ ಹುಸಿಯಾಯಿತು. ಜ್ಯೋತಿ ಬಸು ಪ್ರಧಾನಿಯಾಗಲಿಲ್ಲ. ಕೊನೆಗೊಂದು ದಿನ ‘ಹಿಸ್ಟಾರಿಕಲ್ ಬ್ಲಂಡರ್’ ಎಂಬ ಅಭಿಪ್ರಾಯ ಹೊರಬಿತ್ತು. ಒಂದು ವೇಳೆ, ಜ್ಯೋತಿ ಬಸು ಪ್ರಧಾನಿಯಾಗಿದ್ದಿದ್ದರೆ, ನೀವು ಜಾರಿಗೊಳಿಸಿದ ಒಂದಿಷ್ಟು ಸುಧಾರಣಾ ಕಾರ್ಯಗಳು ಇಲ್ಲೂ ಜಾರಿಯಾಗುತ್ತಿದ್ದವು. ಒಂದರ್ಥದಲ್ಲಿ, ದೇಶದ ಸಮಗ್ರ ಚಿತ್ರಣವೇ ಬದಲಾಗುತಿತ್ತು.
ಇಡೀ ಜಗತ್ತು ಈಗ ಬಲಪಂಥೀಯದತ್ತ ವಾಲತೊಡಗಿದೆ. ಅನಿರೀಕ್ಷಿತ ಬದಲಾವಣೆಗಳು ಆಗುತ್ತಿವೆ. ಏಷ್ಯಾ ಖಂಡದಲ್ಲಿ ಅಲ್ಲದೇ ಅಮೆರಿಕದಲ್ಲಿನ ಪರಿಸ್ಥಿತಿಗಳು ವಿಚಿತ್ರ ತಿರುವು ಪಡೆಯುತ್ತಿವೆ. ಇವೆಲ್ಲದರ ಮುನ್ಸೂಚನೆ ನಿಮಗೆ ಇದ್ದಿರಲೂಬಹುದು. ಅಂತಹ ಬೆದರಿಕೆಗಳನ್ನು ಕಣ್ಣಾರೆ ಕಂಡ ನೀವು ದೇಶವನ್ನು ರಕ್ಷಿಸಿಕೊಳ್ಳುವಲ್ಲಿ ಅದ್ಹೇಗೆ ಯಶಸ್ವಿಯಾದ್ದೀರಿ ಎಂಬುದೇ ಸೋಜಿಗ. ಆರ್ಥಿಕ ದಿಗ್ಬಂಧನ, ನಿಷೇಧ, ಅಸಹಕಾರ, ದಾಳಿ ಎಲ್ಲವನ್ನೂ ಹೇಗೆ ನಿಭಾಯಿಸಿದಿರಿ? ದೊಡ್ಡ ದೇಶಗಳನ್ನು ಎದುರು ಹಾಕಿಕೊಂಡು ಪ್ರಾಣವನ್ನೇ ಪಣಕ್ಕಿಟ್ಟು ಅದ್ಹೇಗೆ ದೇಶವನ್ನು ಸ್ವಾವಲಂಬಿ ಮತ್ತು ಸ್ವಾಭಿಮಾನಿಯಾಗಿ ಬೆಳೆಸಿದಿರಿ?
ಬೆಲೆ ಏರಿಕೆ, ನಿರುದ್ಯೋಗ, ಅನುದಾನದ ಕೊರತೆ ಮುಂತಾದ ಪ್ರಶ್ನೆಗಳನ್ನು ಇಲ್ಲಿನ ಸರಕಾರದ ಪ್ರತಿನಿಧಿಗಳಿಗೆ ಕೇಳಿದಾಗಲೆಲ್ಲ, ಅವರೆಲ್ಲರೂ ವಿಶ್ವಬ್ಯಾಂಕ್‌ನತ್ತ ಕೈ ಮಾಡಿ ತೋರಿಸುತ್ತಾರೆ. ವಿಶ್ವಬ್ಯಾಂಕ್ ನಿರ್ದೇಶನದಂತೆ ನಾವು ನಡೆಯಬೇಕು. ಇಲ್ಲದಿದ್ದರೆ ಕಿಂಚಿತ್ತೂ ಅನುದಾನ ಸಿಗುವುದು ಕಷ್ಟ ಎಂದು ಸರಕಾರದವರು ಹೇಳುತ್ತಾರೆ. ಆದರೆ ನೀವು ವಿಶ್ವಬ್ಯಾಂಕ್ ನೆರವು ಇಲ್ಲದೆ ಮತ್ತು ಇನ್ನೊಬ್ಬರಿಗೆ ಶರಣಾಗದೆ ಅದ್ಹೇಗೆ ಸಶಕ್ತವಾಗಿ ದೇಶ ಕಟ್ಟಿದಿರಿ? ನಮ್ಮ ದೇಶದ ಪ್ರತಿನಿಧಿಗಳಿಗೂ ಸ್ವಲ್ಪಹೇಳಿಕೊಟ್ಟಿದ್ದರೆ ಪ್ರಯೋಜನವಾಗುತ್ತಿತ್ತು.

ಜಾಸ್ತಿ ಪ್ರಶ್ನೆಗಳು ಕೇಳಿದೆಯೆಂದು ಬೇಸರ ಮಾಡಿಕೊಳ್ಳಬೇಡಿ. ಕಾಮ್ರೇಡ್ ಎಂಬ ಗೌರವ ಮತ್ತು ಸಲಿಗೆಯಿಂದ ಕೇಳಿದೆನೇ ಹೊರತು ಮತ್ತೇನೂ ಇಲ್ಲ. ನಮ್ಮನ್ನೆಲ್ಲ ಬಿಟ್ಟು ನೀವು ದೈಹಿಕವಾಗಿ ಹೊರಟುಬಿಟ್ಟಿರಿ. ಆದರೆ ಮಾನಸಿಕವಾಗಿ ನಮ್ಮಿಂದಿಗೆ ಯಾವಾಗಲೂ ಇರುತ್ತೀರಿ. ನೀವು ಇದ್ದಾಗಲೇ ಕ್ಯೂಬಾಗೆ ಭೆೇಟಿ ನೀಡಬೇಕಾದ ಆಸೆ ಕೊನೆಗೂ ಈಡೇರಲಿಲ್ಲ. ಆದರೆ ಕ್ಯೂಬಾದಿಂದ ಕಲಿಯಬೇಕಾದ ಸಂಗತಿಗಳು ಹಲವಾರು ಇವೆ. ನಿಮ್ಮ ಬಗ್ಗೆ ಓದುತ್ತ, ಕ್ಯೂಬಾ ಬಗ್ಗೆ ಅರಿಯುತ್ತ, ಎಲ್ಲವನ್ನೂ ತಿಳಿದುಕೊಳ್ಳುತ್ತೇನೆ. ಬರೆಯುವುದು ಇನ್ನೂ ತುಂಬಾ ಇತ್ತು. ಅರಿತುಕೊಳ್ಳಬೇಕಾದ ವಿಚಾರಗಳು ಮತ್ತು ಕೇಳಬೇಕಾದ ಪ್ರಶ್ನೆಗಳು ಹಲವು ಇದ್ದವು. ಅವು ಮನಸ್ಸಿನಲ್ಲೇ ಹಾಗೆ ಉಳಿದಿವೆ. ನಿಮ್ಮ ಅನುಪಸ್ಥಿತಿಯಲ್ಲಿ, ಒಂದು ವೇಳೆ ಸಾಧ್ಯವಾದರೆ, ಕ್ಯೂಬಾಗೆ ಭೇಟಿ ನೀಡುತ್ತೇನೆ. ಅಲ್ಲಿ ಉತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತೇನೆ. ನೀವು ದೈಹಿಕವಾಗಿ ಇರದಿದ್ದರೇನಂತೆ, ನೀವು ಸ್ಪರ್ಶಿಸಿದ ಮತ್ತು ಹೋರಾಡಿದ ನೆಲ ಅಲ್ಲಿದೆ. ಸುಂದರ ಜಗತ್ತು ಕಟ್ಟಲು ಅವು ಸ್ಫೂರ್ತಿ ನೀಡುತ್ತವೆ. ಒಬ್ಬ ಕ್ರಾಂತಿಕಾರಿ ನೀಡುವ ಸಂದೇಶ ಇದಕ್ಕಿಂತ ಇನ್ನೇನಿದೆ.
ರೆಡ್ ಸಲ್ಯೂಟ್ ಕ್ಯಾಸ್ಟ್ರೊ.

ಇಂತಿ ತಮ್ಮ ವಿಶ್ವಾಸಿ, ಸನತ್‌ಕುಮಾರ್ ಬೆಳಗಲಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News