×
Ad

ಪ್ರಧಾನಿ ನಿವಾಸದೆದುರು ಪ್ರತಿಭಟನೆ:ಮಮತಾ ಬೆದರಿಕೆ

Update: 2016-11-28 18:54 IST

ಕೋಲ್ಕತಾ,ನ.28: ನೋಟು ನಿಷೇಧವನ್ನು ವಿರೋಧಿಸಿ ಪ್ರಧಾನಿ ನರೇಂದ್ರ ಮೋದಿ ಯವರ ನಿವಾಸದ ಎದುರು ಪ್ರತಿಭಟನೆಯನ್ನು ನಡೆಸುವುದಾಗಿ ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೋಮವಾರ ಇಲ್ಲಿ ಬೆದರಿಕೆ ಯನ್ನೊಡ್ಡಿದರು. ಇದೇ ವೇಳೆ ನೋಟು ನಿಷೇಧವನ್ನು ಹಿಂದೆಗೆದುಕೊಳ್ಳದಿದ್ದರೆ ಮೋದಿ ಯವರನ್ನು ಹುದ್ದೆಯಿಂದ ಕೆಳಗಿಳಿಸುವುದಾಗಿ ಅವರು ಪಣ ತೊಟ್ಟರು.

ಪ್ರತಿಪಕ್ಷಗಳು ಕರೆ ನೀಡಿದ್ದ ಆಕ್ರೋಶ ದಿವಸ್ ಅಂಗವಾಗಿ ಬೃಹತ್ ಪ್ರತಿಭಟನಾ ಜಾಥಾದ ಬಳಿಕ ಇಲ್ಲಿಯ ಎಸ್ಪ್ಲ್‌ನೇಡ್‌ನಲ್ಲಿ ರ್ಯಾಲಿಯೊಂದನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು,ಇಡೀ ದೇಶವೇ ಸಂಕಷ್ಟಕ್ಕೆ ಸಿಲುಕಿದೆ. ಬ್ಯಾಂಕುಗಳಲ್ಲಿ, ಎಟಿಎಂಗಳಲ್ಲಿ ಹಣವಿಲ್ಲ. ನೋಟು ನಿಷೇಧ ಈವರೆಗೆ 80 ಜನರನ್ನು ಬಲಿ ತೆಗೆದುಕೊಂಡಿದೆ. ಆದರೆ ಮೋದಿಯವರು ಸುಖನಿದ್ರೆ ಮಾಡುತ್ತಿದ್ದಾರೆ ಮತ್ತು ದೇಶವನ್ನು ನಗದುರಹಿತ ಆರ್ಥಿಕತೆಯತ್ತ ಒಯ್ಯುವ ಕುರಿತು ಭಾಷಣಗಳನ್ನು ಬಿಗಿಯುತ್ತಿದ್ದಾರೆ ಎಂದು ಹೇಳಿದರು.

ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಜನರು ಬ್ಯಾಂಕ್ ಖಾತೆಗಳನ್ನು ಹೊಂದಿಲ್ಲ. ಅಂಥವರು ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಾರೆ ಎಂದು ಅವರು ಪ್ರಶ್ನಿಸಿದರು.

ಮೋದಿ ವಿರುದ್ಧ ತನ್ನ ದಾಳಿಯನ್ನು ಮುಂದುವರಿಸಿದ ಮಮತಾ, ನೋಟು ನಿಷೇಧ ನಿರ್ಧಾರದ ವಿರುದ್ಧ ಕೊನೆಯವರೆಗೂ ಹೋರಾಡುವುದಾಗಿ ತಿಳಿಸಿದರು.
ಮೋದಿ ತನ್ನನ್ನು ವಿರೋಧಿಸುವವರ ಧ್ವನಿಯನ್ನಡಗಿಸಲು ಸಿಬಿಐ,ಇಡಿ,ಆದಾಯ ತೆರಿಗೆ ಅಧಿಕಾರಿಗಳನ್ನು ಛೂ ಬಿಡುತ್ತಾರೆ. ಆದರೆ ಅವರು ತನ್ನ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ. ತಾನು ಮತ್ತೆ ದಿಲ್ಲಿಗೆ ಹೋಗಿ ಧ್ವನಿಯನ್ನೆತ್ತುತ್ತೇನೆ, ಪ್ರತಿಭಟನಾ ಜಾಥಾ ನಡೆಸುತ್ತೇನೆ ಮತ್ತು ಅಗತ್ಯವಾದರೆ ಮೋದಿಯವರ ನಿವಾಸದ ಎದುರು ಪ್ರತಿಭಟನೆ ಯನ್ನೂ ನಡೆಸುತ್ತೇನೆ. ಅವರು ಅಧಿಕಾರದಿಂದ ಕೆಳಗಿಳಿಯುವರೆಗೂ ತಾನು ವಿರಮಿಸುವು ದಿಲ್ಲ ಎಂದರು.
ನೋಟು ನಿಷೇಧದ ಕೇಂದ್ರ ಸರಕಾರದ ಜನವಿರೋಧಿ ನಿರ್ಧಾರದ ವಿರುದ್ಧ ಪ್ರತಿಭಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ ಬುದ್ಧಿಜೀವಿಗಳನ್ನು ಅವರು ಪ್ರಶಂಸಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News