ಊರ್ಜಿತ್ ಪಟೇಲ್ - ಅಂಬಾನಿ ಸಂಬಂಧಿಕರು !

Update: 2016-11-29 09:31 GMT

ನೋಟು ರದ್ದತಿಯ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ರೀತಿಯ ಸುದ್ದಿಗಳು ಹರಡಿವೆ. ಹೀಗೆ ಹರಡಿದ ಅತೀ ದೊಡ್ಡ ಗುಸುಗುಸು ಎಂದರೆ ಮುಖೇಶ್ ಅಂಬಾನಿ ತಮ್ಮ ಲಾಭಕ್ಕಾಗಿ ಊರ್ಜಿತ್ ಪಟೇಲ್‌ರನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಮಾಡಿದ್ದಾರೆ ಎನ್ನುವುದು ಆಗಿದೆ.

8 ನವೆಂಬರ್‌ಗೆ ನೋಟು ರದ್ದತಿ ಸಂದೇಶದ ನಂತರ ಫೇಸ್‌ಬುಕ್ ಮತ್ತು ವಾಟ್ಸಪ್‌ನಲ್ಲಿ ಒಂದು ವಿಷಯ ಪ್ರಸರಣಗೊಳ್ಳುತ್ತಿದೆ. ನಿಜವಾಗಿಯೂ ಮುಖೇಶ್ ಅಂಬಾನಿ ಮತ್ತು ಊರ್ಜಿತ್ ಪಟೇಲ್ ನಡುವೆ ಸಂಬಂಧವಿದೆಯೇ ಎಂದು ಹಲವು ಗುಂಪುಗಳಲ್ಲಿ ಚರ್ಚೆಯಾಗುತ್ತಿದೆ. ದೇಶವೇ ಈ ಸಂದೇಶದ ಸತ್ಯವೇನು ಎಂದು ತಿಳಿಯಲು ಬಯಸಿತ್ತು. ಏಕೆಂದರೆ ಇದು ದೇಶದ ಅತೀ ದೊಡ್ಡ ಉದ್ಯಮಿಗೆ ಸಂಬಂಧಿಸಿದ್ದು ಮಾತ್ರವಾಗಿರಲಿಲ್ಲ, ದೇಶದ ಅತ್ಯುನ್ನತ ಬ್ಯಾಂಕಿನ ಮುಖ್ಯಸ್ಥರ ಬಗ್ಗೆಯೂ ಆಗಿದೆ.

ಮುಖ್ಯವಾಗಿ ಈ ಸಂದೇಶದ ವಿವರ ಹೀಗಿದೆ, "ನಿಮಗೆ ಬಾಗಶಃ ನೆನಪಿರಲಾರದು. ರಿಲೆಯನ್ಸ್ ಸಂಸ್ಥೆ ಕೇಳಿದ್ದ ಬ್ಯಾಂಕಿಂಗ್ ಪರವಾನಗಿಯನ್ನು ರಘುರಾಮ್ ರಾಜನ್ ಕೊಟ್ಟಿರಲಿಲ್ಲ. ಹೀಗಾಗಿ ರಘುರಾಮ್ ರಾಜನ್‌ರನ್ನು ಹೊರ ಹಾಕಿ ಅಂಬಾನಿಯ ಅಳಿಯ ಊರ್ಜಿತ್ ಪಟೇಲ್‌ರನ್ನು ಬ್ಯಾಂಕುಗಳ ಬ್ಯಾಂಕ್ ಆಗಿರುವ ರಿಜರ್ವ್ ಬ್ಯಾಂಕಿನ ನೇತೃತ್ವ ವಹಿಸಿದರು. ಇದೇ ಸಂದರ್ಭದಲ್ಲಿ ಜಿಯೋ ಕೂಡ ಆರಂಭವಾಯಿತು. ಉಚಿತ ಇಂಟರ್ನೆಟ್‌ಗಾಗಿ ಜನರು ತಮ್ಮ ಆಧಾರ್ ಕಾರ್ಡ್‌ಗಳನ್ನು ರಿಲೆಯನ್ಸ್‌ಗೆ ಕೊಟ್ಟರು. ಈಗ ಇಷ್ಟೊಂದು ಐಡಿ ಇದೆಯೆಂದರೆ ಎಲ್ಲಾ ಐಡಿಗಳಲ್ಲೂ ನಾಲ್ಕು ಸಾವಿರದಂತೆ ಲಕ್ಷ ಕೋಟಿಗಟ್ಟಲೆ ನೋಟನ್ನು ಬದಲಿಸಬಹುದು. ಹೀಗಾಗಿ ಹಳೇ ನೋಟು ರದ್ದು ಮಾಡಲಾಗಿದೆ. ಈ ಸಂದೇಶವು 30 ಡಿಸೆಂಬರ್‌ಗೆ ನೋಟು ಬದಲಾವಣೆ ನಿಂತು ಹೋಗುತ್ತಿದ್ದಂತೆಯೇ ಉಚಿತ ಜಿಯೋ ಕೂಡ ಬಂದ್ ಆಗಲಿದೆ. ಜನರೇ ಬುದ್ಧಿ ಉಪಯೋಗಿಸಿ."

ಸಂದೇಶದಲ್ಲಿ ಮುಂದುವರಿದು ಬರೆಯಲಾಗಿದೆ, ಹೊಸ ನೋಟುಗಳನ್ನು 6 ತಿಂಗಳಿನಿಂದ ಗೌಪ್ಯವಾಗಿ ಮುದ್ರಿಸಲಾಗುತ್ತಿದೆ. ಹಿಂದಿನ 6 ತಿಂಗಳಿನಿಂದ ಆರ್‌ಬಿಐ ಗವರ್ನರ್ ಯಾರು ಆಗುತ್ತಾರೆ ಎಂದು ಚರ್ಚೆಯಾಗುತ್ತಿತ್ತು. ಸೆಪ್ಟೆಂಬರ್ 16ರಂದು ಆರ್‌ಬಿಐ ಗವರ್ನರ್ ಆಗಿ ಊರ್ಜಿತ್ ಪಟೇಲ್ ಆಯ್ಕೆಯಾದರು. ಆದರೆ 6 ತಿಂಗಳ ಹಿಂದೆಯೇ ಗವರ್ನರ್ ಆಗದೆಯೇ ಅವರು ನೋಟಿನ ಮೇಲೆ ಸಹಿ ಹಾಕಲು ಆರಂಭಿಸಿದ್ದಾರೆ. ಮೋದಿಯವರು ಹೊಸ ನೋಟು ಆರು ತಿಂಗಳಿನಿಂದ ಮುದ್ರಿಸಲಾಗುತ್ತಿತ್ತು ಎಂದು ಹೇಳಿದ್ದು ನಿಜವಾದಲ್ಲಿ ಸೆಪ್ಟೆಂಬರ್ 4ರಂದು ಆರ್‌ಬಿಐ ಗವರ್ನರ್ ಆಗಿರುವ ಊರ್ಜಿತ್ ಪಟೇಲ್ ಸಹಿ ಅದರಲ್ಲಿ ಹೇಗೆ ಬಂತು? ಇದು ಭಾರತೀಯ ಇತಿಹಾಸದ ಅತೀ ದೊಡ್ಡ ಹಗರಣದತ್ತ ಬೊಟ್ಟುಮಾಡಿದೆ ಎಂದು ವಿವರವಿದೆ.

ವೈರಲ್ ಸಂದೇಶದ ಮೂಲಕ ಮುಖೇಶ್ ಅಂಬಾನಿಯವರು ತಮ್ಮ ಕಂಪೆನಿಯ ಲಾಭಕ್ಕಾಗಿ ಊರ್ಜಿತ್ ಪಟೇಲ್‌ರನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಕುರ್ಚಿಯಲ್ಲಿ ಕೂರಿಸಿದ್ದಾರೆ. ಈ ಆರೋಪದಲ್ಲಿ ಹುರುಳಿದೆಯೇ ಎಂದು ಮಾಧ್ಯಮವೊಂದು ತನಿಖೆ ಮಾಡಿದೆ. ರಿಲೆಯನ್ಸ್ ಕಂಪೆನಿ ಬ್ಯಾಂಕಿಂಗ್ ಪರವಾನಿಗೆ ಕೇಳಿದೆ ಎನ್ನುವ ಆರೋಪವನ್ನು ತನಿಖೆ ಮಾಡುವುದಾದರೆ, ರಿಲೆಯನ್ಸ್‌ನಂತಹ ಕಂಪನಿಗೆ ಬ್ಯಾಂಕಿಂಗ್ ಪರವಾನಿಗೆ ಪಡೆಯುವ ಅರ್ಹತೆ ಇಲ್ಲ. ಜಿಯೋ ಒಂದು ಟೆಲಿಕಾಂ ಸೇವೆಯಾಗಿದ್ದು, ಅದರ ಪರವಾನಿಗೆಯನ್ನು ಟೆಲಿಕಾಂ ಇಲಾಖೆ ಕೊಡುತ್ತದೆ. ಇದಕ್ಕೂ ಭಾರತೀಯ ರಿಸರ್ವ್ ಬ್ಯಾಂಕಿಗೂ ಸಂಬಂಧವಿಲ್ಲ.

ಇನ್ನೊಂದು ಆರೋಪದ ಪ್ರಕಾರ ಮುಖೇಶ್ ಅಂಬಾನಿ ಮತ್ತು ಊರ್ಜಿತ್ ಪಟೇಲ್ ಸಂಬಂಧಿಕರೆ?

ಮುಖೇಶ್ ಮತ್ತು ನೀತಾ ಅಂಬಾನಿಗೆ ಮೂವರು ಮಕ್ಕಳು. ಇಶಾ, ಆಕಾಶ್ ಮತ್ತು ಅನಂತ್. 25 ವರ್ಷದ ಇಶಾರ ಮದುವೆ ಇನ್ನೂ ಆಗಿಲ್ಲ. ಅನಿಲ್ ಅಂಬಾನಿಗೆ ಜಯ್ ಮತ್ತು ಅನ್‌ಮೋಲ್ ಎನ್ನುವ ಇಬ್ಬರು ಮಕ್ಕಳಿದ್ದಾರೆ. ಹೀಗಾಗಿ 53 ವರ್ಷದ ಊರ್ಜಿತ್ ಪಟೇಲ್ ಅಂಬಾನಿ ಕುಟುಂಬದ ಅಳಿಯನಲ್ಲ. ಪಟೇಲ್ ಮತ್ತು ಅಂಬಾನಿಯ ನಡುವೆ ಇರುವ ಸಂಬಂಧವೆಂದರೆ, ಅವರಿಬ್ಬರು ರಿಲೆಯನ್ಸ್ ಉದ್ಯಮ ಸಮೂಹದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದರು. ಊರ್ಜಿತ್ ಪಟೇಲ್ ಮದುವೆಯಾಗಿದ್ದರೂ, ತಮ್ಮ ಪತ್ನಿಗೆ ವಿಚ್ಛೇದನೆ ನೀಡಿದ್ದಾರೆ. ಊರ್ಜಿತ್ ಪಟೇಲ್ ಈಗ ಏಕಾಂಗಿಯಾಗಿ ತಮ್ಮ ತಾಯಿಯ ಜೊತೆಗೆ ಮುಂಬೈನಲ್ಲಿ ನೆಲೆಸಿದ್ದಾರೆ.

ಮೋದಿ ತಮ್ಮ ಭಾಷಣದಲ್ಲಿ ಎಲ್ಲೂ ಹೊಸ ನೋಟುಗಳ ಮುದ್ರಣ 6 ತಿಂಗಳ ಹಿಂದೆ ಶುರುವಾಗಿದೆ ಎಂದು ಹೇಳಿಲ್ಲ. ಒಟ್ಟಾರೆ ಪ್ರಸ್ತಾಪದ ಬಗ್ಗೆ ಆರು ತಿಂಗಳ ಹಿಂದೆಯೇ ಕೆಲಸ ಶುರುವಾಗಿದೆ ಎಂದಷ್ಟೇ ಸರ್ಕಾರದ ಮೂಲಗಳು ಹೇಳಿವೆ. ಆದರೆ ನೋಟುಗಳ ಮುದ್ರಣ ಸೆಪ್ಟೆಂಬರ್‌ನಲ್ಲಿ ಆರಂಭವಾಗಿದೆ. ಸೆಪ್ಟೆಂಬರ್‌ನಲ್ಲಿ ಊರ್ಜಿತ್ ಪಟೇಲ್ ಅಧಿಕಾರವಹಿಸಿಕೊಂಡ ಕಾರಣ ಹೊ ನೋಟಿನ ಮೇಲೆ ಅವರ ಸಹಿ ಇದೆ.

ಹೀಗಾಗಿ ಮಾಧ್ಯಮದ ತನಿಖೆಯಲ್ಲಿ ವೈರಲ್ ಸಂದೇಶ ಸುಳ್ಳು ಎಂದು ಸಾಬೀತಾಗಿದೆ.

ಕೃಪೆ: abpnews.abplive.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News