×
Ad

" ದೇಹದ 85% ರಕ್ತ ತೆಗೆದು 5% ವಾಪಸ್ ಹಾಕಿದರೆ ವ್ಯಕ್ತಿ ಸಾಯುತ್ತಾನೆ. ಹಾಗೇ ಇದು "

Update: 2016-11-29 15:55 IST

ಅರ್ಥಶಾಸ್ತ್ರ ಪ್ರೊಫೆಸರ್ ಅರುಣ್ ಕುಮಾರ್ ಅವರು ಕಪ್ಪುಹಣ ಕುರಿತಂತೆ ಪ್ರಮುಖ ಲೇಖಕರಲ್ಲೊಬ್ಬರು. ದಿ ಬ್ಲಾಕ್ ಇಕಾನಮಿ ಇನ್ ಇಂಡಿಯಾ ಮತ್ತು ಇಂಡಿಯನ್ ಇಕಾನಮಿ ಸಿನ್ಸ್ ಇಂಡಿಪೆಂಡೆಂನ್ಸ್:ಪರ್ಸಿಸ್ಟಿಂಗ್ ಕೊಲೊನಿಯಲ್ ಡಿಸ್ರಪ್ಷನ್ ಇವು ಕಪ್ಪುಹಣ ಕುರಿತಂತೆ ಅವರ ಎರಡು ಪ್ರಸಿದ್ಧ ಕೃತಿಗಳು. ಇಂಡಿಯಾ ಲೀಗಲ್‌ಗೆ ನೀಡಿದ ಸಂದರ್ಶನದಲ್ಲಿ ಪ್ರೊ.ಅರುಣ್ ಕುಮಾರ್ ಅವರು ಕೇಂದ್ರದ ನೋಟು ನಿಷೇಧದ ಅವಸರದ ಕ್ರಮವು ಬೇಡಿಕೆ,ಉದ್ಯೋಗ ಮತ್ತು ಹೂಡಿಕೆಗಳ ಮೇಲೆ ಹೇಗೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ ಎನ್ನುವುದನ್ನು ಬಣ್ಣಿಸಿದ್ದಾರೆ. ಈ ಸಂದರ್ಶನದ ಆಯ್ದ ಭಾಗಗಳು ನಿಮಗಾಗಿ ಇಲ್ಲಿವೆ. ಓದಿಕೊಳ್ಳಿ...............

ಸಂದರ್ಶಕ: ಯಾವಾಗ ಮತ್ತು ಎಂತಹ ಪರಿಸ್ಥಿತಿಗಳಲ್ಲಿ ನೋಟು ನಿಷೇಧವನ್ನು ಆರ್ಥಿಕ ಸಾಧನವಾಗಿ ಬಳಸಲಾಗುತ್ತದೆ ಮತ್ತು ವಿಶ್ವಾದ್ಯಂತ ಇಂತಹ ಪರಿಪಾಠ ಎಷ್ಟು ಸಾಮಾನ್ಯವಾಗಿದೆ?

ಪ್ರೊ.ಅರುಣ್ ಕುಮಾರ್: ಆರ್ಥಿಕ ಶಸ್ತ್ರಚಿಕಿತ್ಸೆಯ ಸಾಧನವಾಗಿ ನೋಟು ನಿಷೇಧವನ್ನು ಎಲ್ಲೆಡೆ ಬಳಸಲಾಗುತ್ತದೆ, ಆದರೆ ಭಾರತವು ಈ ಅಸ್ತ್ರವನ್ನು ಬಳಕೆ ಮಾಡಿಕೊಂಡಿ ರುವಂತಹ ಸಂದರ್ಭದಲ್ಲಲ್ಲ. ಕರೆನ್ಸಿ ತನ್ನ ಬೆಲೆಯನ್ನು ತೀವ್ರವಾಗಿ ಕಳೆದುಕೊಂಡಾಗ ಈ ಕ್ರಮವನ್ನು ಕೈಗೊಳ್ಳಲಾಗುತ್ತದೆ. ಆದರೆ ಭಾರತದಲ್ಲಿ ಅಂತಹ ಸ್ಥಿತಿಯಿಲ್ಲ.

ಇಂತಹ ತರಾತುರಿಯ, ಭಾರೀ ‘ಸರ್ಜಿಕಲ್’ದಾಳಿಯನ್ನು ಕೈಗೊಳ್ಳಬೇಕಾಗಿದ್ದ ಬಿಕ್ಕಟ್ಟಿನ ಸ್ಥಿತಿಯನ್ನು ಭಾರತವು ಎದುರಿಸುತ್ತಿದೆಯೇ?

 ಸುತರಾಂ ಇಲ್ಲ. ನಮ್ಮ ಆರ್ಥಿಕತೆಯ ಸೂಚಕಗಳು ಸಾಕಷ್ಟು ಉತ್ತಮವಾಗಿಯೇ ಇವೆ. ಆದರೆ ನೋಟು ನಿಷೇಧ ಕ್ರಮವು ಏನನ್ನು ಸಾಧಿಸಲಿದೆ ಎನ್ನುವುದು ವಾಸ್ತವಿಕ ಪ್ರಶ್ನೆಯಾಗಿದೆ. ಈ ಕ್ರಮವು ಎರಡು ಗುರಿಗಳನ್ನು ಹೊಂದಿದೆಯೆಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳುತ್ತಿದ್ದಾರೆ. ಭಯೋತ್ಪಾದನೆಗೆ ಆರ್ಥಿಕ ನೆರವು ಮತ್ತು ಖೋಟಾ ನೋಟುಗಳಿಗೆ ಅಂತ್ಯ ಹಾಡುವುದು ಹಾಗೂ ದೇಶಕ್ಕೆ ದೊಡ್ಡ ಪಿಡುಗಾಗಿರುವ ,ಬಡತನಕ್ಕೆ ಮತ್ತು ಭಾರತದ ಎಲ್ಲ ಸಮಸ್ಯೆಗಳಿಗೆ ಮೂಲವಾಗಿರುವ ಕಪ್ಪುಹಣವನ್ನು ನಿರ್ಮೂಲನ ಮಾಡುವುದು ಇವು ಅವರು ಹೇಳುತ್ತಿರುವ ಎರಡು ಗುರಿಗಳಾಗಿವೆ.

ನೋಟು ನಿಷೇಧವು ಈ ಸಮಸ್ಯೆಗಳನ್ನು ಬಗೆಹರಿಸುತ್ತದೆಯೇ ಎನ್ನುವುದು ಪ್ರಶ್ನೆ. ಖೋಟಾನೋಟುಗಳ ಬಗ್ಗೆ ಹೇಳುವುದಾದರೆ ದೇಶದಲ್ಲಿ ಕೇವಲ 400 ಮಿಲಿಯನ್ ಖೋಟಾನೋಟುಗಳಿದ್ದು, ಇದು ತೀರ ಗೌಣ ಪ್ರಮಾಣವಾಗಿದೆ ಮತ್ತು ಆರ್‌ಬಿಐ ಹೇಳುವಂತೆ ಕೇವಲ 500 ಕೋ.ರೂ.ವೌಲ್ಯದ ಖೋಟಾನೋಟುಗಳಿವೆ. ಈ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವೇ ಇಲ್ಲ.

ಭಯೋತ್ಪಾದಕರಿಗೆ ಹಣದ ಅಗತ್ಯವಿರುತ್ತದೆ. ಹೀಗಾಗಿ ಅವರು ಖೋಟಾನೋಟು ಗಳನ್ನು ಮುದ್ರಿಸಿ ಚಲಾವಣೆಗೆ ಬಿಡುತ್ತಾರೆ. ಆದರೆ ಅವರು ಒಮ್ಮೆ ಇನ್ನೊಬ್ಬ ವ್ಯಕ್ತಿಗೆ ಖೋಟಾನೋಟುಗಳನ್ನು ನೀಡಿದರೆಂದರೆ ಅದು ಆರ್ಥಿಕತೆಯೊಳಗೇ ಓಡಾಡುತ್ತಿರುತ್ತದೆ. ಹೀಗಾಗಿ ಭಯೋತ್ಪಾದಕರು ಹೆಚ್ಚೆಚ್ಚು ನೋಟುಗಳನ್ನು ಮುದ್ರಿಸಬೇಕಾಗುತ್ತದೆ. ಅದನ್ನು ನಿಲ್ಲಿಸಬೇಕು. ಅದನ್ನು ಹೇಗೆ ನಿಲ್ಲಿಸುತ್ತೀರಿ? ನೋಟು ನಿಷೇಧ ಇದಕ್ಕೆ ಔಷಧವಲ್ಲ. ಏಕೆಂದರೆ ಖೋಟಾನೋಟು ಮುದ್ರಣದಲ್ಲಿ ಸರಕಾರಗಳೂ ಭಾಗಿಯಾಗಿವೆ. ಅವರು ಹೊಸ ಕರೆನ್ಸಿ ನೋಟುಗಳ ನಕಲಿಯನ್ನು ಸಹ ಮುದ್ರಿಸುತ್ತಾರೆ.

ಭಾರತದ ಪ್ರಗತಿದರ,ವ್ಯಾಪಾರ,ಜಿಡಿಪಿ ಮತ್ತು ವಿದೇಶಿ ವಿನಿಮಯ ಸಂಗ್ರಹ ತುಲನಾತ್ಮಕವಾಗಿ ಸ್ಥಿರವಾಗಿವೆ. ನಿರೀಕ್ಷಿತ ಫಲಿತಾಂಶಗಳನ್ನು ನೀಡಬಲ್ಲ ವ್ಯವಸ್ಥೆಯನ್ನೇ ಹಾಳು ಮಾಡುವಂತಹ ಹಸ್ತಕ್ಷೇಪವೇಕೆ?

 ನೋಟು ನಿಷೇಧ ಕ್ರಮದಿಂದ ಕಪ್ಪು ಆರ್ಥಿಕತೆಯನ್ನು ತಡೆಯಬಹುದು ಎನ್ನುವುದೇ ಸಂಪೂರ್ಣ ತಪ್ಪು ಲೆಕ್ಕಾಚಾರ. ವ್ಯಕ್ತಿಯ ಸಂಪತ್ತಿನಲ್ಲಿ ನಗದು ಹಣ ಒಂದು ಭಾಗ ಮಾತ್ರವಾಗಿದೆ,ಬಹುಶಃ ಶೇ.1ರಷ್ಟು.ಆತನ ಗಳಿಕೆ ರಿಯಲ್ ಎಸ್ಟೇಟ್ ,ಚಿನ್ನ,ಶೇರು ಇತ್ಯಾದಿಗಳಲ್ಲಿಯೂ ಇರುತ್ತದೆ. ನನ್ನ ಅಂದಾಜಿನಂತೆ ಜಿಡಿಪಿಯ ಶೇ.62ರಷ್ಟು ಕಪ್ಪು ಆರ್ಥಿಕತೆಯಾಗಿದೆ. ಪ್ರಸಕ್ತ 150 ಲಕ್ಷ ಕೋಟಿ ರೂ.ಜಿಡಿಪಿಯಲ್ಲಿ ಈ ವರ್ಷ ಸುಮಾರು 93 ಲಕ್ಷ ಕೋಟಿ ಅಕ್ರಮ ಆದಾಯವಾಗಿರುತ್ತದೆ. ಅಕ್ರಮ ಸಂಪತ್ತು ಮೂರು ಪಟ್ಟು ಹೆಚ್ಚು, ಸುಮಾರು 300 ಲಕ್ಷ ಕೋಟಿ ರೂ.ಗಳಾಗಬಹುದು.

ಅಂದರೆ ಕಪ್ಪುಹಣ ಮತ್ತು ಅಕ್ರಮ ಸಂಪತ್ತಿನ ನಡುವೆ ವ್ಯತ್ಯಾಸವಿದೆ?

 ಹೌದು. ಅಕ್ರಮ ಆದಾಯ, ಕಪ್ಪುಹಣ ಮತ್ತು ಅಕ್ರಮ ಸಂಪತ್ತು ಇವೂ ಮೂರೂ ಬೇರೆಬೇರೆಯಾಗಿವೆ. ಇವು ಮೂರೂ ಒಂದೇ ಎಂದು ಭಾವಿಸುವುದು ಜನರು ಮಾಡುತ್ತಿರುವ ಸಾಮಾನ್ಯ ತಪ್ಪು ಆಗಿದೆ. ಕಪ್ಪುಹಣ ಅಕ್ರಮ ಸಂಪತ್ತಿನ ಶೇ.1 ಮಾತ್ರ ಆಗಿದೆ. ಇದನ್ನು ಸಂಪೂರ್ಣವಾಗಿ ನಿರ್ಮೂಲಿಸುವಲ್ಲಿ ಯಶಸ್ವಿಯಾದರೆ ಅಕ್ರಮ ಸಂಪತ್ತಿನ ಶೇ.1 ಮತ್ತು ಅಕ್ರಮ ಆದಾಯದ ಶೇ.3ರಷ್ಟನ್ನು ಮಾತ್ರ ನಿರ್ಮೂಲಿಸಿದಂತೆ ಆಗುತ್ತದೆ. ಆದರೆ ಮೂರು ಲಕ್ಷ ಕೋಟಿ ರೂ.ಕಪ್ಪುಹಣವನ್ನಾದರೂ ನಿರ್ಮೂಲಿಸಲು ಸಾಧ್ಯವೇ? ಅದನ್ನು ಪುನರ್‌ಬಳಕೆ ಮಾಡುವ ಮಾರ್ಗಗಳನ್ನು ಜನರು ಕಂಡುಕೊಂಡಿದ್ದಾರೆ. ಚಿನ್ನ ಖರೀದಿ,ನೌಕರರಿಗೆ ಮುಂಗಡ ವೇತನ,ಜನಧನ್ ಖಾತೆ ಇತ್ಯಾದಿಗಳು. ಹೀಗಾಗಿ ಹೆಚ್ಚೆಂದರೆ 50,000-70000 ಕೋ.ರೂ ಕಪ್ಪುಹಣವನ್ನು ನೀವು ನಿವಾರಿಸಬಹುದು. ಹೀಗಾಗಿ ಪ್ರಧಾನಿಯವರ ಎರಡೂ ಗುರಿಗಳು ಸಾಧಿಸಲ್ಪಡುವುದಿಲ್ಲ. ಕಪ್ಪುಹಣವಂತೂ ಪ್ರತಿವರ್ಷ ಸೃಷ್ಟಿಯಾಗುತ್ತಲೇ ಇರುತ್ತದೆ.

ನೋಟು ನಿಷೇಧವು ಜನಪರ ಕ್ರಮವೆಂದು ನೀವು ಭಾವಿಸುತ್ತೀರಾ?

    ವ್ಯಕ್ತಿಯ ದೇಹದಿಂದ ಶೇ.85ರಷ್ಟು ರಕ್ತವನ್ನು ಹೊರಗೆ ತೆಗೆದು ಬಳಿಕ ಶೇ.5ರಷ್ಟನ್ನು ಮರುಪೂರಣಗೊಳಿಸಿದರೆ ಏನಾಗುತ್ತದೆ? ಆ ವ್ಯಕ್ತಿ ಸಾಯುತ್ತಾನೆ. ಅದೇ ರೀತಿ ಆರ್ಥಿಕತೆಯಲ್ಲಿನ ಶೇ.85ರಷ್ಟು ನಗದುಹಣವನ್ನು ಹಿಂದೆಗೆದುಕೊಂಡು ನಿಧಾನವಾಗಿ ಶೇ.5ರಷ್ಟನ್ನು ಸೇರ್ಪಡೆಗೊಳಿಸಿದರೆ ಆರ್ಥಿಕತೆಯ ಚಲಾವಣೆಯೂ ಸಾಯುವ ಸ್ಥಿತಿಗೆ ಜಾರುತ್ತದೆ. ಜನರ ಕೈಯಲ್ಲಿ ನಗದು ಹಣವೇ ಇಲ್ಲದಿದ್ದಾಗ ಚಲಾವಣೆ ಎಲ್ಲಿಂದ ಬಂತು?

15 ವರ್ಷಗಳಿಂದ ಚಲಾವಣೆಯಲ್ಲಿದ್ದ 14.5 ಲಕ್ಷ ಕೋಟಿ ರೂ.ವೌಲ್ಯದ ನೋಟುಗಳನ್ನು ರದ್ದುಗೊಳಿಸಲಾಗಿದೆ. ಅಷ್ಟೇ ಪ್ರಮಾಣದಲ್ಲಿ ಹೊಸ ನೋಟುಗಳನ್ನು ಪೂರೈಸಲು ಕನಿಷ್ಠ 4-5 ತಿಂಗಳುಗಳಾದರೂ ಬೇಕು. ನೋಟು ನಿಷೇಧದಿಂದ ಅತ್ಯಂತ ಹೆಚ್ಚಿನ ತೊಂದರೆಗೊಳಗಾಗಿರುವವರು ಕೃಷಿ ಸೇರಿದಂತೆ ಅಸಂಘಟಿತ ಕ್ಷೇತ್ರದಲ್ಲಿ ದುಡಿಯುತ್ತಿರುವವರು. ಇದು ಖಂಡಿತ ಜನಪರ ಕ್ರಮವಲ್ಲ.

ಮುಂಬರುವ ದಿನಗಳಲ್ಲಿ ಜನಸಂಖ್ಯೆಯ ದೊಡ್ಡ ಭಾಗ ‘ಆರ್ಥಿಕ ವೈಕಲ್ಯ’ಕ್ಕೆ ಸಿಲುಕುವ ಅಪಾಯವಿದೆಯೇ?

 ಈಗ ನಡೆಯುತ್ತಿರುವುದು ಅದೇ. ಜನರ ಕೈಯಲ್ಲಿ ಹಣವಿಲ್ಲ. ಹಣದ ಚಲಾವಣೆಯು ಕ್ಷೀಣಿಸಿದಾಗ ಸಣ್ಣ ವ್ಯಾಪಾರಿಗಳಂತಹ ಜನರ ಆದಾಯಕ್ಕೂ ತತ್ವಾರವಾಗುತ್ತದೆ. ಹಣವಿರುವುದೇ ಚಲಾವಣೆಗಾಗಿ. ಅದು ಪ್ರತಿಯೊಂದನ್ನೂ ಸುಸೂತ್ರವಾಗಿರಿಸುವ ದೇಹದಲ್ಲಿನ ರಕ್ತ ಸಂಚಾರದಂತೆ. ಹಣದ ಕೊರತೆಯಾದರೆ ಸಮಸ್ಯೆಗಳು ಸೃಷ್ಟಿಯಾಗುತ್ತವೆ.

ಈಗ ನಾವು ಅನಾನುಕೂಲವವನ್ನಷ್ಟೇ ಎದುರಿಸುತ್ತಿದ್ದೇವೆ. ನಿಜವಾದ ಸಂಕಷ್ಟ ಎಂದು ಆರಂಭವಾಗುತ್ತದೆ ಎಂದು ನೀವು ಭಾವಿಸಿದ್ದೀರಿ?

  ಬಡವರಿಗೆ ನಿಜವಾದ ಸಂಕಷ್ಟ ಈಗಾಗಲೇ ಆರಂಭಗೊಂಡಿದೆ. ಮಧ್ಯಮ ವರ್ಗದವರಿಗೆ ನಿಜವಾದ ಸಂಕಷ್ಟಗಳು ಕಡಿಮೆ, ಏಕೆಂದರೆ ನಾವು ಕ್ರೆಡಿಟ್ ಕಾರ್ಡ್ ಇತ್ಯಾದಿಗಳನ್ನು ಬಳಸಬಹುದು. ಆದಾಯಕ್ಕೇ ಹೊಡೆತ ಬಿದ್ದಾಗಲೇ ನಿಜವಾದ ಸಂಕಷ್ಟ ಆರಂಭಗೊಳ್ಳುವುದು. ಸರಕಾರವು ಸರಿಯಾದ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡು ಯೋಜನೆಯನ್ನು ಜಾರಿಗೊಳಿಸಿದ್ದರೆ ಬಹುಶಃ ಸಂಕಷ್ಟಗಳು ಕಡಿಮೆಯಾಗಿರುತ್ತಿದ್ದವು.

ಕಪ್ಪುಹಣ ನಿರ್ಮೂಲನೆಗೆ ಪರ್ಯಾಯ ಮಾರ್ಗಗಳಿದ್ದವು ಎಂದು ನೀವು ಭಾವಿಸಿದ್ದೀರಾ?

ಕಪ್ಪುಹಣ ನಿವಾರಣೆಗೆ ಯಾವುದೇ ಕ್ರಮವಾದರೂ ಅದು ಇಡೀ ಆರ್ಥಿಕತೆಗೆ ಸಮಸ್ಯೆಯನ್ನು ಸೃಷ್ಟಿಸುತ್ತದೆ. ಕಪ್ಪುಹಣ ಇಂದು ನಿನ್ನೆ ಸೃಷ್ಟಿಯಾಗಿದ್ದಲ್ಲ. ಅದು ಕಳೆದ 70 ವರ್ಷಗಳಿಂದಲೂ ಬೆಳೆಯುತ್ತಲೇ ಇದೆ. ಹೀಗಾಗಿ ರಾತ್ರಿ ಬೆಳಗಾಗುವುದರಲ್ಲಿ ಸಮಸ್ಯೆಯ ಪರಿಹಾರ ಸಾಧ್ಯವಿಲ್ಲ. ಅದಕ್ಕೆ ಯಾವುದೇ ಮಾಯಾದಂಡವಿಲ್ಲ.

ನೋಟು ನಿಷೇಧ ಕ್ರಮ ಬಿಲಿಯನ್ ಡಾಲರ್ ರಾಜಕೀಯ ಪ್ರಮಾದವೇ?

ವ್ಯಾಪಾರಿಗಳು ಮತ್ತು ಕೃಷಿಕರ ಸಮುದಾಯ ಮೋದಿಯವರ ಕೈ ಬಿಡುತ್ತಾರೆ ಎಂದು ನಾನು ಹೇಳಬಲ್ಲೆ. ಕಾರ್ಮಿಕ ವರ್ಗವು ಅಸಂತುಷ್ಟಗೊಂಡಿದೆ.

ಇನ್ನು ಅವರು ಲಾಕರ್‌ಗಳ ಹಿಂದೆ ಬೀಳುತ್ತಾರೆ?

ಇಲ್ಲ, ಅದು ಮಧ್ಯಮ ವರ್ಗದವರನ್ನು ಮಾತ್ರ ಬಾಧಿಸುತ್ತದೆ. ಬಡವರು ಲಾಕರ್‌ಗಳನ್ನು ಹೊಂದಿರುವುದಿಲ್ಲ.

ಇದು ಕೇವಲ ಒಬ್ಬ ವ್ಯಕ್ತಿಯ ಕಾರ್ಯಯೋಜನೆ?

ಮೋದಿ ಯಾರೊಂದಿಗೂ ಸಮಾಲೋಚನೆ ನಡೆಸಲಿಲ್ಲ. ಸರಕಾರದ ಇಲಾಖೆಗಳು ಮತ್ತು ಬ್ಯಾಂಕರ್‌ಗಳು ಇದೇ ಮೊದಲ ಬಾರಿಗೆ ನೋೀಟು ನಿಷೇಧದ ಬಗ್ಗೆ ಕೇಳುತ್ತಿದ್ದಾರೆ ಎಂದು ಅವರು ತನ್ನ ಭಾಷಣದಲ್ಲಿ ಹೇಳಿದ್ದರು.

ಪ್ರಜೆಗಳಿಗೆ ಆಸ್ತಿ ಹಕ್ಕು ನೀಡಿರುವ ಸಂವಿಧಾನದ ವಿಧಿ 21ರ ಉಲ್ಲಂಘನೆಯಾಗಿದೆಯೇ?

ಮೋದಿಯವರು ಅದನ್ನು ಮಾಡುತ್ತಿಲ್ಲ. ಅವರು ಹಳೆಯ ನೋಟುಗಳ ಬದಲು ಹೊಸನೋಟುಗಳನ್ನು ತರುತ್ತಿದ್ದಾರೆ. ಅವರು ನಿಮ್ಮ ಆಸ್ತಿಯಿಂದ ನಿಮ್ಮನ್ನು ವಂಚಿಸುತ್ತಿಲ್ಲ.

ಆದರೆ ಅವರು ಜೀವನೋಪಾಯವನ್ನೇ ಕಸಿದುಕೊಳ್ಳುತ್ತಿದ್ದಾರೆ?

ಅದು ನೋಟು ನಿಷೇಧ ಕ್ರಮದ ಪರಿಣಾಮವಾಗಿದೆ. ಅದು ಆರ್ಥಿಕ ಹಿಂಜರಿಕೆಗೆ ಕಾರಣವಾಗುತ್ತದೆ. ಅದೊಂದು ಮೂರ್ಖ ಹೆಜ್ಜೆ. ಯಾವುದೇ ನೀತಿಯು ತಪ್ಪಾಗಬಹುದು.

ಓರ್ವ ವ್ಯಕ್ತಿ ಯಾರೊಬ್ಬರ ಸಲಹೆಯನ್ನೂ ಕೇಳದೆ ಸಾಧಿಸಲಾಗದ್ದನ್ನು ಸಾಧಿಸಲು ಯತ್ನಿಸುತ್ತಿದ್ದಾರೆ?

ಭಾರತದಂತಹ ಸಂಕೀರ್ಣ ದೇಶವನ್ನು ಆಳುವ ವಿಧಾನ ಇದಲ್ಲ. ನಾನಾಗಿದ್ದರೆ ಕನಿಷ್ಠ 100 ಜನರ ಅಭಿಪ್ರಾಯ ಕೇಳುತ್ತಿದ್ದೆ. ಅವರು ತನ್ನ ಸಂಪುಟ ಸಚಿವರನ್ನೂ ನಂಬಲಿಲ್ಲ. ಅವರ ಮೊಬೈಲ್ ಫೋನ್‌ಗಳನ್ನು ಕಿತ್ತುಕೊಂಡು ರಾತ್ರಿ ಎಂಟು ಗಂಟೆಯವರೆಗೆ ಹಾಲ್‌ವೊಂದರಲ್ಲಿ ಅವರನ್ನು ಕೂಡಿಹಾಕಿದ್ದರು. ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ಎಲ್ಲ ಬ್ಯಾಂಕರ್‌ಗಳಿಗೆ ಫೋನ್ ಮಾಡಿ ಮಹತ್ವದ ಪ್ರಕಟಣೆಗಾಗಿ ಕಾಯುವಂತೆ ತಿಳಿಸಿದ್ದರು. ಇದು ಭಾರತದಂತಹ ಸಂಕೀರ್ಣ ದೇಶದಲ್ಲಿ ಇಂತಹ ಸಂಕೀರ್ಣ ನೀತಿಯನು ತರುವ ಮಾರ್ಗವಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News