ಸಿರಿಯಾದ ಅಲೆಪ್ಪೊದಿಂದ ಸಾವಿರಾರು ಮಂದಿ ಪಲಾಯನ

Update: 2016-11-30 16:17 GMT

ಜಿನೇವ, ನ. 30: ಸಿರಿಯದಲ್ಲಿ ಬಂಡುಕೋರರ ನಿಯಂತ್ರಣದಲ್ಲಿರುವ ಪೂರ್ವ ಅಲೆಪ್ಪೊದ ಪ್ರದೇಶಗಳ ಮೇಲಿನ ದಾಳಿಯನ್ನು ಸರಕಾರಿ ಸೈನಿಕರು ತೀವ್ರಗೊಳಿಸಿದ ಬಳಿಕ, ರವಿವಾರದಿಂದೀಚೆಗೆ ಸುಮಾರು 20,000 ಮಂದಿ ಅಲ್ಲಿಂದ ಪಲಾಯನಗೈದಿದ್ದಾರೆ ಎಂದು ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿ (ಐಸಿಆರ್‌ಸಿ) ಹೇಳಿದೆ.

ರೋಗಪೀಡಿತರು ಮತ್ತು ಗಾಯಾಳುಗಳನ್ನು ಹೊರ ಸಾಗಿಸಲು ತಾನು ಸಿದ್ಧವಾಗಿರುವುದಾಗಿ ಅಂತಾರಾಷ್ಟ್ರೀಯ ನೆರವು ಸಂಸ್ಥೆ ಹೇಳಿದೆ. ಮುತ್ತಿಗೆಗೊಳಗಾದ ಪೂರ್ವ ಭಾಗದಿಂದ ನಾಗರಿಕರನ್ನು ಸುರಕ್ಷಿತವಾಗಿ ಹೊರಸಾಗಿಸಲು ಅವಕಾಶ ನೀಡುವಂತೆ ತಾನು ಕರೆ ನೀಡಿರುವುದಾಗಿ ಅದು ತಿಳಿಸಿದೆ.

ಪೂರ್ವ ಅಲೆಪ್ಪೊಗೆ ಹೋಗಲು ತನಗೆ ಅವಕಾಶ ನೀಡಬೇಕು ಎಂಬುದಾಗಿ ಐಸಿಆರ್‌ಸಿ ಮತ್ತೊಮ್ಮೆ ಕೋರಿಕೆ ಸಲ್ಲಿಸಿದೆ. ಅಲ್ಲಿಗೆ ಆಹಾರ, ಔಷಧಗಳು ಮತ್ತು ಇತರ ಪರಿಹಾರ ಸಾಮಗ್ರಿಗಳನ್ನು ಸಾಗಿಸಲು ಎಪ್ರಿಲ್ ಬಳಿಕ ಅದಕ್ಕೆ ಸಾಧ್ಯವಾಗಿಲ್ಲ.

ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಮುನ್ನ ಬಂಡುಕೋರರನ್ನು ಅಲೆಪ್ಪೊದ ಹೊರಗೆ ಅಟ್ಟುವ ಗುರಿಯನ್ನು ಸಿರಿಯ ಮತ್ತು ಅದರ ಮಿತ್ರಪಕ್ಷಗಳು ಹೊಂದಿವೆ ಎಂದು ಸಿರಿಯ ಸರಕಾರದ ಪರವಾಗಿರುವ ಸೇನಾ ಒಕ್ಕೂಟದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಲೆಪ್ಪೊದಲ್ಲಿ ಇತ್ತೀಚಿನ ದಿನಗಳಲ್ಲಿ ಸರಕಾರಿ ಪಡೆಗಳು ಭಾರೀ ಯಶಸ್ಸುಗಳನ್ನು ಪಡೆದುಕೊಂಡು ಮುನ್ನುಗ್ಗುತ್ತಿವೆ.

‘‘ಸಂಘರ್ಷ ಮುಗಿಯುವ ಯಾವುದೇ ಸೂಚನೆಯೂ ಇಲ್ಲದೆ, ವಾಸ್ತವಿಕ ಶಾಂತಿ ನೆಲೆಸುವ ನಿರೀಕ್ಷೆಯೂ ಇಲ್ಲದೆ, ಸಾವಿರಾರು ನಾಗರಿಕರು ಬದುಕುಳಿಯುವುದಕ್ಕಾಗಿ ಭಾರಿ ಹೋರಾಟವನ್ನೇ ಮಾಡುತ್ತಿದ್ದಾರೆ’’ ಎಂದು ಸಿರಿಯದಲ್ಲಿ ಐಸಿಆರ್‌ಸಿ ನಿಯೋಗದ ಮುಖ್ಯಸ್ಥೆ ಮರಿಯಾನ್ ಗ್ಯಾಸರ್ ಹೇಳಿದ್ದಾರೆ.

ಸರಕಾರಿ ನಿಯಂತ್ರಣದ ಪಶ್ಚಿಮ ಅಲೆಪ್ಪೊದಲ್ಲಿ ವಾಸಿಸುತ್ತಿರುವ ಹೊಸದಾಗಿ ನಿರ್ವಸಿತರಾದವರ ಶಿಬಿರಗಳಿಗೆ ಭೇಟಿ ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

‘‘ಅಗತ್ಯಗಳು ಬೆಟ್ಟದಷ್ಟಿವೆ. ಈಗ ಚಾಲ್ತಿಯಲ್ಲಿರುವ ಕಾಳಗ ಮತ್ತು ಅಭದ್ರತೆಯು ನೆರವು ಪೂರೈಕೆ ಮತ್ತು ದುರಸ್ತಿ ಕಾರ್ಯಗಳಿಗೆ ಕಂಟಕವಾಗಿದೆ’’ ಎಂದರು.

ಐಸಿಆರ್‌ಸಿ ಮತ್ತು ಸಿರಿಯನ್ ಅರಬ್ ರೆಡ್ ಕ್ರೆಸೆಂಟ್ (ಎಸ್‌ಎಆರ್‌ಸಿ)ಗಳು ನಿರಾಶ್ರಿತರಿಗೆ ನೀರು ಒದಗಿಸಲು ಬಾವಿಗಳನ್ನು ತೋಡುತ್ತಿವೆ ಎಂದು ಮರಿಯಾನ್ ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಪಶ್ಚಿಮ ಅಲೆಪ್ಪೊದಲ್ಲಿ ಸಂಘರ್ಷ ಪೀಡಿತ ಪ್ರದೇಶಗಳಿಂದ 40,000ಕ್ಕೂ ಅಧಿಕ ಮಂದಿ ಪಲಾಯನಗೈದಿದ್ದಾರೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News